-->
ಬದಲಾಗೋಣವೇ ಪ್ಲೀಸ್ : ಸಂಚಿಕೆ - 23

ಬದಲಾಗೋಣವೇ ಪ್ಲೀಸ್ : ಸಂಚಿಕೆ - 23

ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಹಾಗೂ ತರಬೇತುದಾರರು


            ಬದಲಾಗೋಣವೇ ಪ್ಲೀಸ್ - 23
      -------------------------------------------
ಬದುಕೆಂಬ ಮನೆಯ ಕಟ್ಟುವ ಮುನ್ನ 
ಒಂದಿಷ್ಟೂ ಮಾತು .....
       ಬದುಕಿಗೊಂದು ನೆಲೆಯ ಸೆಲೆಯಾಗಿ ಸ್ವಂತ ಮನೆಯೊಂದನ್ನು ಕಟ್ಟಲು ನಿರ್ಧರಿಸಿ ಆಶೀರ್ವಾದಕ್ಕೆಂದು ಅಜ್ಜಿಯ ಬಳಿ ಹೋಗಿ ಮನೆ ಕಟ್ಟುವ ಯೋಜನೆಗಳನ್ನು ವಿವರಿಸಿದೆ. ಎಲ್ಲವನ್ನು ಆಲಿಸಿದ ಅಜ್ಜಿ ಕೊನೆಗೆ "ಮಗಾ , ಬದುಕೆಂಬ ಮನೆಯ ಕಟ್ಟುವ ಮುನ್ನ ಸದಾ ನೆನಪಿಡು... ಮನೆಯ ವಾಸ್ತುವಿಗಿಂತ ಮನದ ವಾಸ್ತು ಚೆನ್ನಾಗಿರಲಿ.. ಮನೆಯ ಸೌಲಭ್ಯಕ್ಕಿಂತ ಮನದ ಸೌಲಭ್ಯಗಳು ಚೆನ್ನಾಗಿರಲಿ... ಮನೆಯ ಶೃಂಗಾರಕ್ಕಿಂತ ಮನದ ಶೃಂಗಾರ ಚೆನ್ನಾಗಿರಲಿ... ಎಲ್ಲಕ್ಕಿಂತ ಮುಖ್ಯ ಮನೆಯ ಕಟ್ಟಡಗಿಂತ ಮನಸ್ಸುಗಳ ಕಟ್ಟಡ ಗಟ್ಟಿಯಾಗಿರಲಿ" ಎಂದರು.
        ಜೀವನಾನುಭವದ ಆಗರವಾಗಿರುವ ಅಜ್ಜಿಯ ಜತೆ ಮಾತಾಡುತ್ತಾ ಮನೆಯೆಂಬ ಜೀವನ ರಚನೆಯ ಮಂತ್ರ ಅರ್ಥೈಸಿದೆ. ಅಜ್ಜಿಯು"ಮಗಾ, ಹಿಂದೆಲ್ಲ ಮನೆ ಚಿಕ್ಕದಾಗಿತ್ತು. ಮನಸ್ಸು ದೊಡ್ಡದಾಗಿತ್ತು. ಮನೆಯಲ್ಲಿ ಕೋಣೆಗಳಿದ್ದರೂ ಮನಸ್ಸುಗಳ ನಡುವೆ ಕೋಣೆಗಳಿರಲಿಲ್ಲ. ಈಗ ಮನೆ ದೊಡ್ಡದಾಗಿದೆ ಆದರೆ ವಾಸಿಸುವವರ ಸಂಖ್ಯೆ ಬೆರಳೆಣಿಕೆಯಷ್ಟು ಆಗಿದೆ. ನೀನು ಮನೆ ಕಟ್ಟಲು ಪ್ರಾರಂಭ ಮಾಡಿದಲ್ಲಿನಿಂದ ಕೊನೆಯವರೆಗೂ ಅತಿಥಿಗಳಾಗಿ , ಸಂಬಂಧಿಕರಾಗಿ, ಕೆಲಸಗಾರರಾಗಿ , ಗೆಳೆಯರಾಗಿ , ಸ್ವಾರ್ಥಿಗಳಾಗಿ , ದೋಷಗಳನ್ನು ಹುಡುಕುವವರಾಗಿ , ಹೆದರಿಸಿ ಹಣ ಕೀಳುವವರಾಗಿ , ಸಹಾಯಕರಾಗಿ, ನಿಸ್ವಾರ್ಥಿಗಳಾಗಿ, ಮೋಸಗಾರರಾಗಿ, ಉಪಕಾರಿಗಳಾಗಿ, ವ್ಯಾಪರಿಗಳಾಗಿ ನೂರಾರು ಜನರು ಮನೆಗೆ ಆಗಾಗ ಬರಬಹುದು. ಆದರೆ ಕೊನೆಯವರೆಗೆ ಯಾರು ಉಳಿಯುವವರು ಇಲ್ಲ. ಉಳಿಯುವವರು ನಿನ್ನ ದೇಹ ಮಾತ್ರ. ಹಾಗಾಗಿ ನಿನ್ನ ಬದುಕೆಂಬ ಮನೆಗೆ ಬರುವವರನ್ನೆಲ್ಲ ಸ್ವಾಗತಿಸು. ಆದರೆ ಅವರ ಯೋಗ್ಯತೆಗೆ ತಕ್ಕಂತೆ ಬದುಕಲ್ಲಿ ಸ್ಥಾನ ನೀಡು. ದೃಷ್ಟಿಯಂತೆ ಸೃಷ್ಟಿ , ಹಾಗಾಗಿ ಅವರ ದೃಷ್ಟಿಗೆ ತಲೆಬಿಸಿ ಮಾಡದೆ ನಿನ್ನ ದೃಷ್ಟಿಯಂತೆ ಮುನ್ನಡೆ. ಸದಾ ಧನಾತ್ಮಕವಾಗಿರು. ನಿನ್ನ ನೋಟ ಎಸೆಯುವ ಕಲ್ಲಿಗಿಂತಲೂ ಮುಟ್ಟುವ ಗುರಿಯತ್ತ ಏಕಾಗ್ರವಾಗಿರಲಿ.
       ಮನೆಯ ವಾಸ್ತು ಸರಿಪಡಿಸುವ ನೆಪದಲ್ಲಿ ನಿನ್ನನ್ನು ನೀನು ಮಾರಬೇಡ. ಕೇವಲ ವೈಜ್ಞಾನಿಕ ನೆಲೆಯಲ್ಲಿನ ವಿಚಾರಗಳನ್ನು ಮಾತ್ರ ವಾಸ್ತು ಪ್ರಕಾರ ಅನುಸರಿಸು. ಹಣ ಮಾಡುವ ಹೊಸ ದಂಧೆಕೋರರ ವಾಸ್ತು ಎಂಬ ಹೆಸರಿನ ಮೋಸದ ಬಲೆಗೆ ಬಲಿಯಾಗಬೇಡ. ಮನೆಯ ವಾಸ್ತು ಗಿಂತಲೂ ಮನದ ವಾಸ್ತು ಚೆನ್ನಾಗಿರಲಿ. ನಿನ್ನ ಬದುಕೆಂಬ ಮನೆಯ ನಿರ್ಮಾಣದಲ್ಲಿ ಎಲ್ಲವೂ ಶುಭಕಾರಕ. ಶುಭ್ರ ಬದುಕಿನ ವಾಸ್ತುವಿಗೆ ಪೂರಕವಾಗಿ ಮಾರ್ಗದರ್ಶಿಸುವ ಸಕಾರತ್ಮಕ ಗುರುಹಿರಿಯರನ್ನು ಮಾತ್ರ ಅನುಸರಿಸು. ಮಾಟ ಮಂತ್ರ ಎಂದು ಹಣ ಪೀಕಿಸುವ ನಕಲಿಗಳನ್ನು ನಂಬಬೇಡ.
       ಮನೆ ಕಟ್ಟುವ ಮೊದಲು ಸಂಪೂರ್ಣ ಪೂರ್ವ ತಯಾರಿಗಾಗಿ ನೀಲನಕ್ಷೆಯನ್ನು ರಚಿಸು. ಏಕೆಂದರೆ ಉತ್ತಮ ನೀಲನಕ್ಷೆಯು ಕೆಲಸಗಾರರ ಹೆಚ್ಚಿನ ಗೊಂದಲಗಳನ್ನು ನಿವಾರಿಸುವುದರ ಜತೆಗೆ ಮನೆ ರಚನೆಯ ಅರ್ಧ ಕೆಲಸ ಮುಗಿಸುತ್ತದೆ . ಅದೇ ರೀತಿ ನಿನ್ನ ಬದುಕಿಗೊಂದು ನೀಲನಕ್ಷೆಯಿರಲಿ. ಇದರಿಂದ ಬದುಕಿನ ನಡೆನುಡಿಯ ಪಯಣದಲ್ಲಿ ಎದುರಾಗುವ ವಿವಿಧ ಗೊಂದಲಗಳನ್ನು , ಅನಗತ್ಯ ಖರ್ಚು- ವೆಚ್ಚಗಳನ್ನು , ಸಮಯದ ಪೋಲಾಗುವಿಕೆಯನ್ನು ತಡೆಯಬಹುದು.
        ಮನೆರಚನೆಗೆ ಗಟ್ಟಿಯಾದ ಅಡಿಪಾಯ (ಫೌಂಡೇಶನ್ ) ಹಾಕಲೇಬೇಕು. ಇಟ್ಟಿಗೆ ಇಟ್ಟಿಗೆಗಳು ಪರಸ್ಪರ ಒಂದಕ್ಕೊಂದು ಪೂರಕವಾಗಿ ಸಿಮೆಂಟ್ ನ ಬಂಧನದೊಂದಿಗೆ ಹಿಡಿದಿಟ್ಟರಬೇಕು. ಭವ್ಯ ಬದುಕಿಗೂ ಮಾನವೀಯ ಮೌಲ್ಯಗಳೆಂಬ ಇಟ್ಟಿಗೆಗಳ ಮಧ್ಯೆ ಪ್ರೀತಿಯ ಸಿಮೆಂಟಿನ ಬಂಧನದೊಂದಿಗೆ ಅಡಿಪಾಯ ಹಾಕಿರಬೇಕು. ಅಡಿಪಾಯ ಗಟ್ಟಿಯಾದಷ್ಟು ಬೃಹದಾಕಾರದ ಕಟ್ಟಡಗಳನ್ನು ಕಟ್ಟುವಂತೆ ಬದುಕಿನಲ್ಲಿ ಮೌಲ್ಯಗಳು ಹೆಚ್ಚಿದ್ದಷ್ಟು ಉನ್ನತ ವ್ಯಕ್ತಿತ್ವವನ್ನು ಬೆಳೆಸಬಹುದು. ಹಾಗಾಗಿ ಮನೆಯ ಕಟ್ಟಡಗಿಂತಲೂ ಮೌಲ್ಯಯುತ ಮನದ ಕಟ್ಟಡ ಚೆನ್ನಾಗಿರಲಿ
        ಛಾವಣಿಯು ವರ್ಷವಿಡೀ ಬಿಸಿಲು, ಮಳೆ , ಗಾಳಿಯಿಂದ ರಕ್ಷಿಸಿ ಮನೆಯ ಒಳಗಿರುವವರನ್ನು ಆಯಾಯ ಪರಿಸ್ಥಿತಿಗಳಲ್ಲಿ ಕಾಪಾಡುತ್ತದೆ. ಅದೇ ನಮ್ಮ ಬದುಕಿನ ಆತ್ಮವಿಶ್ವಾಸ ಹಾಗೂ ನಂಬಿಕೆಗಳೆಂಬ ಛಾವಣಿಯು ಎಲ್ಲಾ ಸಮಸ್ಯೆಗಳಿಂದ ಸದಾ ರಕ್ಷಿಸುತ್ತದೆ. ನಂಬಿಕೆಯ ಛಾವಣಿ ಸದಾ ಭದ್ರವಾಗಿರಲಿ. ಅದರಲ್ಲಿ ಸೋರುವಿಕೆ (ಲೀಕೇಜ್ ) ಬರದಂತೆ ಆಗಾಗ ಪರಿಶೀಲಿಸಬೇಕು. ಅಗತ್ಯಕ್ಕೆ ತಕ್ಕಂತೆ ದುರಸ್ತಿ ಮಾಡಬೇಕು.
        ಮನೆಯು ಸುಂದರವಾಗಿ ಕಾಣಲು ಆಗಾಗ ಸುಣ್ಣ ಬಣ್ಣಗಳನ್ನು ನೀಡುತ್ತಿರಬೇಕು. ಬಣ್ಣಗಳು ಕಳೆಗುಂದದಂತೆ ನೋಡುತ್ತಿರಬೇಕು. ಬದುಕು ಸುಂದರವಾಗಿ ಕಾಣಲು ಆಗಾಗ ಹೊಸ ಹೊಸ ಯೋಜನೆ - ಯೋಚನೆಗಳು ಕ್ರಿಯಾತ್ಮಕ ಕೆಲಸ ಕಾರ್ಯಗಳನ್ನು ಮಾಡುತ್ತಿರಬೇಕು. ಸದಾ ಆಸಕ್ತಿದಾಯಕವಾಗಿ ಬಾಳು ನಡೆಸಬೇಕು ಇದರಿಂದ ಬದುಕು ಬಣ್ಣಯುತವಾಗಿರುತ್ತದೆ. ಹಾಗಾಗಿ ಮನೆಯ ಶೃಂಗಾರಕ್ಕಿಂತಲೂ ಮನದ ಶೃಂಗಾರ ಚೆನ್ನಾಗಿರಲಿ.
         ಮನೆಯನ್ನು ನೋಡಲು ಬರುವವರಲ್ಲಿ ಮನೆಯ ರಚನೆ ಬಗ್ಗೆ ಧನಾತ್ಮಕ - ಋಣಾತ್ಮಕ ಪ್ರತಿಕ್ರಿಯೆ ನೀಡುವವರು, ಹೊಗಳಿಕೆ ತೆಗಳಿಕೆಯವರು, ಉತ್ಸಾಹಿ - ನಿರುತ್ಸಾಹಿಗಳು , ನಿರಹಂಕಾರಿ - ಅಹಂಕಾರಿಗಳು ಹೀಗೆ ತುಂಬಾ ಜನರು ಬರುತ್ತಾರೆ. ಮನೆಯ ಯಜಮಾನನಾದ ನೀನು ಈ ಎಲ್ಲವನ್ನು ಸಮಸ್ಥಿತಿಯಿಂದ ಸ್ಥಿತಪ್ರಜ್ಞನಾಗಿ ಸ್ವೀಕರಿಸಿ ನಿನ್ನದೇ ದಾರಿಯಲ್ಲಿ ಮುನ್ನಡೆಯಬೇಕು. ಇದೇ ರೀತಿ ನಿನ್ನ ಬದುಕಿನಲ್ಲಿ ಈ ಮೇಲಿನವರು ಆಗಾಗ ಬರುತ್ತಿರುತ್ತಾರೆ. ಇವರನ್ನು ಸಮಸ್ಥಿತಿಯಿಂದ ಸ್ವೀಕರಿಸಿದರೂ ನಿನ್ನದೇ ಧೃಡ ನಿರ್ಧಾರಗಳಿಂದ ಬದುಕನ್ನು ಕಟ್ಟಬೇಕು. 
        ಮನೆಯ ಸ್ವಚ್ಚತೆ ಸದಾ ಉಸಿರಿದ್ದಂತೆ. ಕಸಕಡ್ಡಿ.. ಧೂಳು.. ನಿರುಪಯುಕ್ತ ವಸ್ತುಗಳನ್ನು ರಾಶಿ ಮಾಡದೇ ಆಗಾಗ ಸ್ವಚ್ಛಗೊಳಿಸುತ್ತಿರಬೇಕು. ಇದೇ ರೀತಿ ಬದುಕಿನಲ್ಲಿ ಎದುರಾಗುವ ನಿರಾಶೆ, ಹತಾಶೆಯ ಭಾವ, ಕೀಳರಿಮೆ, ಶೂನ್ಯಭಾವ, ದುಃಖ- ದುಮ್ಮಾನ, ಮಾನಸಿಕ ಒತ್ತಡಗಳೆಂಬ ಕಸಕಡ್ಡಿ - ನಿರುಪಯುಕ್ತ ಅಂಶಗಳನ್ನು ಆಗಾಗ ಮನಸ್ಸಿನಿಂದ ಸ್ವಚ್ಛಗೊಳಿಸಬೇಕು" ಎಂದು ಅಜ್ಜಿಯು ಹೇಳಿದಳು.
       ಹೌದಲ್ಲವೇ.. ಅಜ್ಜಿಯ ಮಾತುಗಳು ಅಕ್ಷರಶಃ ಸತ್ಯ. ನೆಲೆಗಾಗಿ ಮನೆಕಟ್ಟ ಹೊರಟ ನನಗೆ ಬದುಕಿನ ಮನೆ ಕಟ್ಟಲು ಮಾರ್ಗದರ್ಶನ ನೀಡಿದರು. ನಾವು ನಮ್ಮ ಬದುಕಿನ ಮನೆಯನ್ನು ಸುಂದರವಾಗಿ ಕಟ್ಟಲು ಬದಲಾಗೋಣವೇ.... ಈ ಬದಲಾವಣೆಗೆ ಯಾರನ್ನು ಕಾಯದೇ ನಾವೇ ಬದಲಾಗೋಣ .... ಬದಲಾಗೋಣವೇ ಪ್ಲೀಸ್..! ಏನಂತೀರಿ...?
........................... ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಮತ್ತು ತರಬೇತುದಾರರು 
Mob: +91 99802 23736
*******************************************



Ads on article

Advertise in articles 1

advertising articles 2

Advertise under the article