-->
ಬದಲಾಗೋಣವೇ ಪ್ಲೀಸ್ - 22

ಬದಲಾಗೋಣವೇ ಪ್ಲೀಸ್ - 22

ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಹಾಗೂ ತರಬೇತುದಾರರು


   ಬದಲಾಗೋಣವೇ ಪ್ಲೀಸ್ : ಸಂಚಿಕೆ -22
--------------------------------------------
ಯೋಗೇನ ಚಿತ್ತಸ್ಯ ಪದೇನ ವಾಚಾಂ |
ಮಲಂ ಶರೀರಸ್ಯ ಚ ವೈದ್ಯಕೇನ |
ಯೋsಪಾಕರೋತ್ತಂ ಪ್ರವರಂ ಮುನೀನಾಂ |
ಪತಂಜಲಿಂ ಪ್ರಾಂಜಲಿರಾನ ತೋsಸ್ಮಿ II
        ಬೇರಿದ್ದರೆ ಮರವಿದೆ ; ನೀರಿದ್ದರೆ ನದಿಯಿದೆ ; ಸಂಸ್ಕಾರವಿದ್ದರೆ ಸಂಸ್ಕೃತಿಯಿದೆ ; ಯೋಗವಿದ್ದರೆ ಆರೋಗ್ಯವಿದೆ. ಭಾರತವು ಜಗತ್ತಿಗೆ ಕಾಣಿಕೆಯಾಗಿ ಕೊಟ್ಟ ಯೋಗ ಶಾಸ್ತ್ರವು ಶ್ರೇಷ್ಠರಾದ ಪತಂಜಲಿ ಮಹರ್ಷಿಗಳ ಕೊಡುಗೆಯಾಗಿದೆ. ಆರೋಗ್ಯವೇ ಭಾಗ್ಯ.....ಆ ಭಾಗ್ಯದಾತನೇ ಯೋಗ. ಯೋಗವೇ ತಾಯಿ , ತಂದೆ, ಬಂಧುಬಳಗವಾಗಿದೆ. ದೇಹ ಹಾಗೂ ಮನಸ್ಸಿನ ಸಂಯೋಜನೆಯೇ ಯೋಗವಾಗಿವೆ. ಜೀವಾತ್ಮವು (ಮನಸ್ಸು) ಅನಂತಾತೀತವಾದ ದೈವತ್ವದ (ಚೈತನ್ಯ ) ಜತೆ ಸಮ್ಮಿಳಿತಗೊಳ್ಳುವುದೇ ಯೋಗ. ದೇಹ ಮತ್ತು ಮನಸ್ಸು ಹಾಗೂ ಚೈತನ್ಯಗಳನ್ನು ಪರಸ್ಪರ ಕೂಡಿಸುವುದೇ ಯೋಗದ ಉದ್ದೇಶವಾಗಿದೆ.
        ಆರೋಗ್ಯವೇ ನಿಜವಾದ ಸಂಪತ್ತು . ಆರೋಗ್ಯಕ್ಕಾಗಿ ಯೋಗ , ಯೋಗದಿಂದ ರೋಗ ದೂರ , ಯೋಗ ಮಾಡಿರಿ - ಆರೋಗ್ಯ ಪಡೆಯಿರಿ.... ಇತ್ಯಾದಿ ಜಾಗೃತಿ ವಾಕ್ಯಗಳು ಪ್ರಸ್ತುತ ಜಾಗತಿಕ ಆರೋಗ್ಯ ಬಿಕ್ಕಟ್ಟಿನ ಸಮಸ್ಯೆಯಲ್ಲಿ ಯೋಗದ ಅಗತ್ಯತೆಯನ್ನು ವಿವರಿಸುತ್ತದೆ. ದೈಹಿಕ , ಮಾನಸಿಕ ಮತ್ತು ಸಾಮಾಜಿಕ ನೆಮ್ಮದಿಯ ಸ್ಥಿತಿಯೇ ಆರೋಗ್ಯ..
       ಕಾಮ , ಕ್ರೋಧ , ಲೋಭ , ಮೋಹ , ಮದ ಹಾಗೂ ಮತ್ಸರಗಳೆಂಬ ಆರು ಅಂಶಗಳನ್ನು ಯೋಗ್ಯ ರೀತಿಯಲ್ಲಿ ನಿರ್ವಹಿಸುವುದೇ ಆರೋಗ್ಯ ಎಂದು ಹಿರಿಯರು ಎನ್ನುತ್ತಾರೆ. ಕಂಡದ್ದನ್ನು ಬಯಸುವುದೇ ಕಾಮ. ಬಯಸಿದ್ದು ಸಿಗದಿದ್ದಾಗ ಬರುವುದೇ ಕೋಪ. ಅಗತ್ಯಕ್ಕೆ ಬೇಕಾದಷ್ಟು ದೊರೆತರೂ ಇನ್ನಷ್ಟು ಬೇಕೆನ್ನುವುದೇ ಲೋಭ . ಇನ್ನಷ್ಟು ದೊರೆತರೊ ಕೈಬಿಟ್ಟು ಹೋಗಬಾರದು ಎನ್ನುವುದೇ ಮೋಹ. ಕೈಬಿಟ್ಟು ಹೋಗದೆ ತನ್ನ ಬಳಿಯೇ ಉಳಿದಾಗ , ತನ್ನ ಬಳಿ ಮಾತ್ರವೇ ಇರುವುದು ಎಂಬ ಜಂಭವೇ ಮದ. ತನ್ನ ಬಳಿ ಇರುವುದು ಬೇರೊಬ್ಬರಲ್ಲಿಯೂ ಇದೆ ಎಂದು ತಿಳಿದಾಗ ಬರುವುದೇ ಮತ್ಸರ. ಹಾಗಾಗಿ ಈ ಆರು ವೈರಿಗಳನ್ನು ಗೆದ್ದವನೇ ಆರೋಗ್ಯವಂತ. ಈ ಆರು ವೈರಿಗಳಿಂದ ಮುಕ್ತಗೊಳಿಸುವ ಏಕೈಕ ಮಾರ್ಗವೇ ಯೋಗ.
        ಆರೋಗ್ಯವಂತ ಮನುಷ್ಯ ಎಂದರೆ ಅವನಲ್ಲಿನ ವಾತ , ಪಿತ್ತ ಮತ್ತು ಕಫಗಳೆಂಬ 3 ದೋಷಗಳು, ರಕ್ತ , ಮಜ್ಜೆ ಇತ್ಯಾದಿ ಸಪ್ತಧಾತುಗಳು , ಅಗ್ನಿ ಮತ್ತು ಮಲ ಕ್ರಿಯೆಗಳು ಸಮವಾಗಿದ್ದು ಪಂಚೇಂದ್ರಿಯಗಳು - ಮನಸ್ಸು - ಆತ್ಮವು ಪ್ರಸನ್ನವಾಗಿರುವ ಸ್ಥಿತಿಯನ್ನು ಹೊಂದಿರುವಾತ ಎನ್ನಬಹುದು, ಆದರೆ ಈ ಸ್ಥಿತಿಯನ್ನು ಹೊಂದಲು ಯೋಗವೇ ಔಷಧಿಯಾಗಿದೆ. ನಮ್ಮ ದೇಹವು ಅನ್ನಮಯ ಕೋಶ, ಪ್ರಾಣಮಯ ಕೋಶ , ಮನೋಮಯ ಕೋಶ ವಿಜ್ಞಾನಮಯ ಕೋಶ ಹಾಗೂ ಆನಂದಮಯ ಕೋಶಗಳಿಂದಾಗಿದೆ. ಈ ಪಂಚ ಕೋಶಗಳು ತಾಳ ತಪ್ಪದಂತೆ ಸಕ್ರಿಯಾಗಿ ಕಾರ್ಯನಿರ್ವಹಿಸಲು ಯೋಗವು ಪ್ರೇರಕದಾಯಕವಾಗಿದೆ.
        ಒಂದು ಭವ್ಯ ಕಟ್ಟಡಕ್ಕೆ ಭದ್ರವಾದ ಅಡಿಪಾಯ ಹೇಗೆ ಮುಖ್ಯವೋ ಅದೇ ರೀತಿ ಭದ್ರ ಆರೋಗ್ಯಕ್ಕೆ ಅಷ್ಟಾಂಗಗಳಾದ ಯಮ , ನಿಯಮ , ಆಸನ, ಪ್ರಾಣಾಯಾಮ , ಪ್ರತ್ಯಾಹಾರ ಧಾರಣ , ಧ್ಯಾನ ಮತ್ತು ಸಮಾಧಿ ಎಂಬ ವಿಚಾರಗಳ ಬಗೆಗಿನ ಸುಜ್ಞಾನ ಮಾಹಿತಿಗಳನ್ನು ಹೊಂದಿರುವುದು ಅತೀ ಅಗತ್ಯವಾಗಿದೆ. ಯೋಗದ 4 ಪಥಗಳಾದ ಜ್ಞಾನಯೋಗ, 
ಭಕ್ತಿಯೋಗ , ಕರ್ಮಯೋಗ , ರಾಜಯೋಗಗಳ ಬಗ್ಗೆ ಅರಿತರೆ ಬದುಕಿನ ಗುರಿಯನ್ನು ಅನಾರೋಗ್ಯರಹಿತರಾಗಿ ಕಳೆಯಬಹುದು. ಈ ಬಗ್ಗೆ ಯೋಗಬಲ್ಲ ಗುರು ಹಿರಿಯರಿಂದ ಹೆಚ್ಚಿನ ಮಾಹಿತಿಗಳನ್ನು ಪಡೆಯೋಣ.... ಆ ಮೂಲಕ ಆರೋಗ್ಯಕರ ಜೀವನ ಶೈಲಿಗೆ ನಮ್ಮನ್ನು ನಾವು ಬದಲಾಯಿಸೋಣ. ಈ ಬದಲಾವಣೆಗೆ ಯಾರನ್ನು ಕಾಯದೇ ನಾವೇ ಬದಲಾಗೋಣ.... ಬದಲಾಗೋಣವೇ ಪ್ಲೀಸ್..! ಏನಂತೀರಿ...?
........................... ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಮತ್ತು ತರಬೇತುದಾರರು 
Mob: +91 99802 23736
*******************************************


Ads on article

Advertise in articles 1

advertising articles 2

Advertise under the article