-->
ಪದಗಳ ಆಟ ಭಾವ ಚಿತ್ರ ಪಾತ್ರ ಸಂಚಿಕೆ - 20

ಪದಗಳ ಆಟ ಭಾವ ಚಿತ್ರ ಪಾತ್ರ ಸಂಚಿಕೆ - 20

ಪದಗಳ ಆಟ
ಭಾವಚಿತ್ರ
ಪಾತ್ರ
ಸಂಚಿಕೆ - 20

    ನಾನು ಹೋದರೆ ಹೋದೇನು
-----------------------------------
 ಬೀರೇಗೌಡ ಬೀಚಮ್ಮರ
 ಪುಣ್ಯ ಗರ್ಭದಿ ಉದಿಸಿ
 ಬಂಕಾಪುರ ಡಣ್ಣಾಯಕನಾಗಿ
 ಕಾಳಗದಿ ಸಾವ ಜಯಿಸಿದ
     ಪೂರ್ವವೃತ್ತಿಯ ಬಿಟ್ಟು
     ಭಕ್ತಿಮಾರ್ಗದಿ ನಡೆದ ಸಂತ
     ಮೋಕ್ಷಕ್ಕೆ ಯಾರು ಹೋದಾರು
     ವ್ಯಾಸತೀರ್ಥರ ಪ್ರಶ್ನೆ
     ನಾನು ಹೋದರೆ ಹೋದೇನು
     ಒಡಪಲಿ ಉತ್ತರ
     ವಿಭಿನ್ನ ಸಾಹಿತ್ಯಕ ತಾತ್ವಿಕ ವ್ಯಾಖ್ಯಾನ
     ಇತ್ತು ಸಮರ್ಥಿಸಿದ ಜಾಣ
ಸಾಹಿತ್ಯಕ ಅಭಿವ್ಯಕ್ತಿ ಸಾಮಾಜಿಕ ಆಸಕ್ತಿ
ಆಡಂಬರದಿ ನಿರಾಸಕ್ತಿ
ನಿರುತ ಹರಿಯಲಿ ಅನುರಕ್ತಿ
     ಈ ಕಾಲಕೂ 
     ನವ ನವಾರ್ಥ ಸ್ಪುರಣ 
     ನಿನ್ನ ಕಾವ್ಯಕಿಹುದು 
     ಸಂಗತ ಚಿಂತನ
     ಕೀರ್ತನಕುಚ್ಚು ಹರಿ ಚರಣರಚ್ಚು
     ಕೇಳುವವರಿಗೆ ತನಿ ಬೆಲ್ಲದಚ್ಚು
     ಹರಿ ನಿನಗೆ ಧಣಿ ಹರಿ ನಿನಗೆ ಇನಿಯ
     ಅಣೋರಣೀಯ ಮಹತೋ ಮಹಿಮ
 ಪ್ರಾಣವ ಪರರಿಗೆ ಕೊಡಬಹುದು
 ಹರಿ ಸಂಗ ಬಿಡಲಾಗದು 
 ರಂಗನ ಹೃದಯ ಸದನಕೆ 
 ಕರೆದ ಅನುಭಾವಿ
ದೈವ ಪ್ರಚಂಡ ರಿಪುಗಂಡ ಉದ್ಧಂಡ
 ನರಸಿಂಹನ ಕಂಡ ಭಕ್ತಾಗ್ರೇಸರ
     ಜಾತಿಮತಗಳ 
     ಕಟ್ಟುಪಾಡಿಲ್ಲದೆ
     ಅನುಭವದಿಂದ ಭಕ್ತಿಭಾವನೆಯ
     ತಾಯಿನುಡಿಯಲಿ ಹಾಡಿ
     ಆತ್ಮೋದ್ಧಾರಕಿತ್ತ ಸರಳ ಪಥ
ಬಯಲು ಆಲಯದೊಳಗೊ
ಆಲಯವು ಬಯಲೊಳಗೊ
ಆಳ ಜಿಜ್ಞಾಸೆಯೊಳು
ಕಳ ಕೊಳ್ಳುವುದರಲ್ಲಿ ಪಡಕೊಳ್ಳುವ ಗುಟ್ಟಡಗಿದೆ
ಎಂದ ದಾರ್ಶನಿಕ
ಪ್ರತಿಭಟನಾ ನೆಲೆಗಟ್ಟಿನಿಂದ
ದಾಸಸಾಹಿತ್ಯಕ್ಕೆ 
ಸೂರ್ಯ ಪ್ರಭೆ ನೀಡಿದ ವೈಚಾರಿಕ
     ಹೊಟ್ಟೆಯೊಳಗಿನ ಕಾಮ
     ಬಿಟ್ಟು ನಡೆದರೆ ಮಡಿ
     ತನುವ ನೇಗಿಲ ಮಾಡಿ
     ಹೃದಯ ಹೊಲವನು ಮಾಡಿ
     ಧ್ಯಾನವೆಂಬ ಧಾನ್ಯ ಬಿತ್ತಿದ
     ಭಾವವಿಲ್ಲದ ಭಕುತಿ ಕುಹಕ
     ಎಂದವಗೆ ಇರಲಿಲ್ಲ ಬಿಂಕ
ರಾಮಧಾನ್ಯ ಚರಿತೆಯಲ್ಲಿ
ಮೆರೆದೆ ಸೃಜನಶೀಲತೆ
ರಾಗಿ ಅಕ್ಕಿಯ ಕದನಕುತೂಹಲದಲಿ 
ತೆರೆದಿಟ್ಟೆ ದೀನ ಧನಿಕರ ಅಂತರ
ಬಡ ರಾಗಿಗೂ ರಾಮನಾಮದ ಅಲಂಕಾರ
ರಾಗಿಯ ನೆಪದಲ್ಲಿ ಆತ್ಮ ವೇದನೆ ನಿವೇದನೆ
ಬಂಡಾಯ ಸಾಹಿತ್ಯದ
ಬೇರು ದಿಟ ಅದೇನೆ
     ಹರಿಭಕ್ತಿಸಾರ ಕನ್ನಡ ಭಗವದ್ಗೀತೆ
     ಕರುಣರಸ ಪ್ರಧಾನ ನಳಚರಿತೆ
     ಪ್ರೌಢಶೃಂಗಾರ ಪೋಣಿಸಿದಲತೆ
     ಮೋಹನ ತರಂಗಿಣಿಯೊ 
     ಕೃಷ್ಣ ಕಾವ್ಯ ಸುಧೆ
     ರಸಿಕರೆದೆಯಲಿ ನಿರಂತರ ಹರಿವ ರಸಗಂಗೆ
ಒಂದೇ ತರ ಜನನ  
ಕುಡಿವ ನೀರು ಅದೇ
ಅದೇ ಗಾಳಿ, ಅದೇ ಸೂರ್ಯ
ಎಲ್ಲರೂ ಸಮಾನರೇ
    ಕೆಸರಲಿದ್ದರೂ ತಾವರೆಯು
    ದೇವ ಮುಡಿಗೇರುವಂತೆ
    ನೊಂದಬದುಕುಗಳನಡುವಿಂದ
    ಮೇಲೆದ್ದು ಬಂದ ಧೀಮಂತ
ಜಗದ ನೋವ 
ಪದವ ಮಾಡಿ ಹಾಡಿ
ಎಲ್ಲರಿಗೆ ಸೋತವನು
ಎಲ್ಲರನು ಗೆಲಿದವನು 
    ನಿನ್ನಂತವರು ಮತ್ತೆ ಹುಟ್ಟಿ ಬರಬೇಕಾ... 
    ಮತ್ತೆ ಹುಟ್ಟಿ ಬರಬೇಕಾ... 
ಇಂಥವರು ನಿಮ್ಮೊಳಗಿಲ್ಲವೇ .................?
...............................................ಸುಮಾಡ್ಕರ್
ಸ್ವರೂಪ ಅಧ್ಯಯನ ಸಂಸ್ಥೆ 
ಮಂಗಳೂರು
Mob: +91 99016 38372
*******************************************




Ads on article

Advertise in articles 1

advertising articles 2

Advertise under the article