
ಹಕ್ಕಿ ಕಥೆ - 23
Tuesday, November 30, 2021
Edit
ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ
ಹಕ್ಕಿ ಕಥೆ - 23
ನಿಮ್ಮ ಮನೆಯಲ್ಲೊಂದು ದಾಸವಾಳ ಹೂವಿನ ಗಿಡ ಇದೆ ಎಂದಾದರೆ, ಈ ಹಕ್ಕಿಯನ್ನು ನೀವು ಖಂಡಿತಾ ನೋಡಿರುತ್ತೀರಿ. ಬೆಳಗ್ಗೆ ಹಿತವಾಗಿ ಬಿಸಿಲು ಬರಲು ಶುರುವಾಗಿ ಹೂವು ಅರಳಲು ಪ್ರಾರಂಭವಾಗುವ ಹೊತ್ತಿಗೆ ಚಿಪ್ ಚೀ ಚೀ ಎಂದು ನಿರಂತರವಾಗಿ ಕೂಗುತ್ತಾ ಬರುತ್ತದೆ. ದಾಸವಾಳದ ಹೂವಿನ ತೊಟ್ಟಿನಲ್ಲಿ ಕುಳಿತರೂ ಹೂವು ಕಿತ್ತು ಬೀಳದಷ್ಟು ಹಗುರ. ಚೂಪಾದ ಉದ್ದನೆಯ ಕೊಕ್ಕಿನಿಂದ ಮಕರಂದವನ್ನು ಹೀರುತ್ತಾ ಹೂವಿನಿಂದ ಹೂವಿಗೆ ಚುರುಕಾಗಿ ಹಾರುವ ಈ ಪುಟಾಣಿ ಹಕ್ಕಿಯನ್ನು ಹಲವರು ಹಮ್ಮಿಂಗ್ ಬರ್ಡ್ ಎಂದು ತಪ್ಪಾಗಿ ಗುರುತಿಸುತ್ತಾರೆ. ಹಮ್ಮಿಂಗ್ ಬರ್ಡ್ ಇದಕ್ಕಿಂತಲೂ ಚಿಕ್ಕ ಹಕ್ಕಿ ಮತ್ತು ಭಾರತದಲ್ಲಿ ಹಮ್ಮಿಂಗ್ ಬರ್ಡ್ ಹಕ್ಕಿಯ ಯಾವ ಪ್ರಬೇಧಗಳೂ ಇಲ್ಲ.
ಈ ಪುಟಾಣಿ ಸುಂದರ ಹಕ್ಕಿಯ ಹೆಸರು ಸೂರಕ್ಕಿ.. ಹೂಗುಬ್ಬಿ ಎಂಬ ಇನ್ನೊಂದು ಹೆಸರೂ ಇದಕ್ಕಿದೆ. ಇಂಗ್ಲೀಷ್ ನಲ್ಲಿ SUN BIRD ಎನ್ನುತ್ತಾರೆ. ಅದನ್ನೇ ನೇರ ಕನ್ನಡದಲ್ಲಿ ಸಣ್ಣ ಹಕ್ಕಿ ಎಂದೂ ಕರೆಯಬಹುದು. ಹೂವಿನ ಮಕರಂದ ಈ ಜಾತಿಯ ಹಕ್ಕಿಗಳ ಪ್ರಮುಖ ಆಹಾರ. ಜೊತೆಗೆ ಜೇಡಗಳು ಮತ್ತು ಕೀಟಗಳನ್ನೂ ತಿನ್ನುತ್ತವೆ. ಕಳೆದ ವರ್ಷ ಬೇಸಗೆಯಲ್ಲಿ ನಮ್ಮ ಶಾಲೆಯ ಬೇಲಿಯ ಬದಿಯ ಪೊದೆಯಲ್ಲಿ ಈ ಹಕ್ಕಿ ಗೂಡು ಮಾಡಿತ್ತು. ಹಕ್ಕಿಯ ಗೂಡುಕಟ್ಟುವ ಕಾಯಕಕ್ಕೆ ತೊಂದರೆಯಾಗದಂತೆ ಅದರ ಕೌಶಲವನ್ನು ನಾವೂ ದಾಖಲೀಕರಣ ಮಾಡಿದ್ದೇವೆ. ನಮ್ಮ ಮನೆಯ ಕಿಟಕಿಯ ಗಾಜನ್ನು ಈ ಹಕ್ಕಿ ದಿನವೂ ಬಂದು ಕುಟ್ಟುತ್ತದೆ ಎಂದು ಹಲವರು ಹೇಳುವುದನ್ನು ಹೇಳಿದ್ದೇನೆ. ಕಳೆದ ಬಾರಿ ಹೆಣ್ಣುಹಕ್ಕಿ ಗೂಡುಮಾಡುವುದರಲ್ಲಿ ಬಿಜಿಯಾಗಿದ್ದಾಗ ಅಲ್ಲೇ ಸಮೀಪದಲ್ಲಿ ನಿಲ್ಲಿಸಿದ್ದ ಕಾರಿನ ಗಾಜಿಗೆ ಗಂಡು ಹಕ್ಕಿ ಕೊಕ್ಕಿನಿಂದ ಕುಟ್ಟುತ್ತಿತ್ತು. ಇನ್ನೊಂದು ಗಂಡು ಹಕ್ಕಿ ಇದೆ ಎಂದುಕೊಂಡು ಕುಟ್ಟುತ್ತಿತ್ತೋ ಅಥವಾ ತನ್ನ ಸೌಂದರ್ಯವನ್ನು ನೋಡಿ ತಾನೇ ಸಂತೋಷ ಪಡುತ್ತಿತ್ತೋ ಗೊತ್ತಿಲ್ಲ.
ಸೂರಕ್ಕಿಗಳಲ್ಲಿ ಗಂಡು ಹಕ್ಕಿ ಬಹಳ ಆಕರ್ಷಕವಾದ ಬಣ್ಣ, ಮಿರಿಮಿರಿ ಮಿಂಚುವ ದೇಹ ಹೊಂದಿರುತ್ತದೆ. ಹೆಣ್ಣು ಹಕ್ಕಿ ತಿಳಿ ಹಳದಿ ಮತ್ತು ಕಂದು ಬಣ್ಣದಿಂದ ಕೂಡಿರುತ್ತದೆ. ವಿಶೇಷ ಎಂದರೆ ಗೂಡುಮಾಡುವ ಕೆಲಸವನ್ನು ಪೂರ್ತಿ ಹೆಣ್ಣು ಹಕ್ಕಿಯೇ ಮಾಡುತ್ತದೆ. ಯಾವುದೋ ಜೇಡನ ಬಲೆಯ ನೂಲು, ಒಣಗಿದ ಮರದ ಎಲೆ, ಹುಲ್ಲಿನ ತುಂಡುಗಳು ಇನ್ನೂ ಏನೇನೋ ಬಳಸಿ ಗೂಡು ಮಾಡುತ್ತದೆ. ಗೂಡನ್ನು ನೋಡಿದರೆ ಗೂಡಿಗೆ ಬಳಸಿದ ವಸ್ತುಗಳು ಈಗ ಬಿದ್ದು ಬಿಡುತ್ತವೆಯೋ ಎಂಬಂತೆ ನೇತಾಡುತ್ತಿರುತ್ತವೆ. ಆದರೆ ಅದರೊಳಗೆ ಎರಡು ಮೊಟ್ಟೆ ಮತ್ತು ಕಾವು ಕೊಡುವ ಹೆಣ್ಣು ಹಕ್ಕಿ ಕುಳಿತರೂ ಗೂಡಿಗೆ ಯಾವುದೇ ತೊಂದರೆಯಾಗದಷ್ಟು ಗೂಡು ಗಟ್ಟಿಯಾಗಿರುತ್ತದೆ. ಗೂಡು ಕಟ್ಟಿ, ಮೊಟ್ಟೆ ಇಟ್ಟು, ಕಾವು ಕೊಟ್ಟು ಮರಿಮಾಡುವ ಕೆಲಸ ಹೆಣ್ಣು ಹಕ್ಕಿ ಮಾಡಿದರೆ, ಮರಿಗಳಿಗೆ ಆಹಾರ ತರುವ ಮತ್ತು ಮರಿಗಳನ್ನು ಬೆಳೆಸುವ ಕೆಲಸವನ್ನು ಹೆಚ್ಚಾಗಿ ಗಂಡು ಹಕ್ಕಿ ಮಾಡುತ್ತದೆ.
ಆರ್ ಸಿ ಸಿ ಮನೆಗಳಲ್ಲಿ, ಮನೆಯ ಸಿಟೌಟ್ ಅಥವಾ ತಾರಸಿಗೆ ಹಾಕಿರುವ ಹುಕ್ ಗಳಲ್ಲಿ ಗೂಡು ಮಾಡಿರುವುದನ್ನು ಹಲವು ಕಡೆ ನೋಡಿದ್ದೇನೆ. ನಮ್ಮ ಆತ್ಮೀಯ ಸ್ನೇಹಿತರೊಬ್ಬರು ಮನೆಯ ಸುತ್ತ ಚಂದದ ಹೂವಿನ ಸಸಿಗಳನ್ನು ಬೆಳೆಸಿದ್ದಾರೆ. ಅವರ ಮನೆಯಲ್ಲಂತೂ ವರುಷಕ್ಕೊಮ್ಮೆ ಈ ಹಕ್ಕಿ ಗೂಡು ಮಾಡುತ್ತದೆ. ಅವರಿಗಂತೂ ಆ ಹಕ್ಕಿ ಜೋಡಿ ತಮ್ಮ ಮನೆಯ ಸದಸ್ಯರಂತೆಯೇ ಆಗಿವೆ.
ನೀವೂ ಈ ಹಕ್ಕಿಯನ್ನು ನೋಡಿದ್ದೀರಾ ?.... ಈ ಹಕ್ಕಿ ನಿಮ್ಮ ಮನೆಯಲ್ಲಿ ಯಾವತ್ತಾದರೂ ಗೂಡು ಮಾಡಿದೆಯೇ..? ಈ ಸನ್ ಬರ್ಡ್ ನಿಮ್ಮ ಆಸುಪಾಸಿನಲ್ಲಿ ಖಂಡಿತಾ ನೋಡಲು ಸಿಗುತ್ತದೆ.. ಗಮನಿಸುತ್ತೀರಲ್ಲ....
.......................................... ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ
+91 98448 98124
*********************************************