-->
ಜೀವನ ಸಂಭ್ರಮ :  ಸಂಚಿಕೆ -16

ಜೀವನ ಸಂಭ್ರಮ : ಸಂಚಿಕೆ -16

ಜೀವನ ಸಂಭ್ರಮ : ಸಂಚಿಕೆ -16


     ಪೌರಾಣಿಕ ನಾಟಕ ಅಭ್ಯಾಸದ ಸಂಭ್ರಮ
     --------------------------------------------
             ನನ್ನ ತಂದೆ ಡ್ರಾಮಾ ಮಾಸ್ಟರ್ ಆಗಿದ್ದರು. ನಾನು ಬಹುಶಃ 8 ಅಥವಾ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದೆ. ನನ್ನ ತಂದೆ ಪಕ್ಕದ ಊರಾದ ಹುನುಗನಹಳ್ಳಿ ಕಾಲೋನಿಯಲ್ಲಿ ಶಿಶುಪಾಲನ ವಧೆ ನಾಟಕ ಕಲಿಸುತ್ತಿದ್ದರು. ಸಮಯ ಸಿಕ್ಕಾಗ , ಅಪರೂಪಕ್ಕೆ ನನ್ನನ್ನು ಕರೆದುಕೊಂಡು ಹೋಗುತ್ತಿದ್ದರು. ಆ ಸಮಯದಲ್ಲಿ ಪೌರಾಣಿಕ ನಾಟಕ ಅಭ್ಯಾಸಮಾಡಿ ಪ್ರದರ್ಶನ ಮಾಡುವುದು ಊರಿನ ಸಾಂಸ್ಕೃತಿಕ ಸಂಕೇತವಾಗಿತ್ತು . ಪೌರಾಣಿಕ ನಾಟಕ ಕಲಿಯಬೇಕಾದರೆ ಒಂದಷ್ಟು ಜನ ಒಟ್ಟುಗೂಡಬೇಕು. ಒಟ್ಟಾಗಿ ಹಣ ಹಾಕಬೇಕು. ನಾಟಕದ ಅಭ್ಯಾಸ ಕನಿಷ್ಠ ಎರಡರಿಂದ ಮೂರು ತಿಂಗಳಾದರೂ ಬೇಕಾಗುತ್ತಿತ್ತು. ಅದಕ್ಕಾಗಿ ಇಂತಿಷ್ಟು ರೂಪಾಯಿ ಮತ್ತು ಊಟ , ನಾಟಕ ಕಲಿಸುವ ಗುರುಗಳಿಗೆ ನೀಡಬೇಕಾಗಿತ್ತು.  
           ನಮ್ಮ ತಂದೆ ಸ್ಪಷ್ಟ ಉಚ್ಚಾರಣೆ ಮಾಡುತ್ತಿದ್ದರು. ಓದಿದ್ದು 9ನೇ ತರಗತಿ ಆದರೂ ಉಚ್ಚಾರಣೆಯಲ್ಲಿ ಅಷ್ಟು ಅಚ್ಚುಕಟ್ಟು. ತಪ್ಪು ಮಾಡಿದರೆ ಯಾವ ವಯಸ್ಸಿನವರೇ ಆದರೂ ಶಿಕ್ಷೆ ಇರುತ್ತಿತ್ತು. ಪಾತ್ರಧಾರಿಗಳಿಗೆ ಅವರು ಬಾಯಿಪಾಠ ಮಾಡಬೇಕಾದ ವಿವರವನ್ನು ಚಿಕ್ಕ ಪುಸ್ತಕದಲ್ಲಿ ಬರೆದು ಕೊಡಬೇಕಾಗಿತ್ತು. ಅದು ನನ್ನ ಪಾಲಿಗೆ ಮೀಸಲು. ಹೀಗಾಗಿ ನನ್ನ ಬರವಣಿಗೆ ಸುಂದರವಾಗಲು , ನನ್ನ ತಂದೆ ಡ್ರಾಮಾ ಕಲಿಸುತ್ತಿದ್ದದ್ದೇ ಕಾರಣವಾಗಿತ್ತು.  
        ಒಮ್ಮೆ ಪಾತ್ರಧಾರಿಗೆ ಅಭ್ಯಾಸದ ಸಂದರ್ಭದಲ್ಲಿ, ಒಂದು ವಾಕ್ಯ, ಅದರಲ್ಲಿ ಆಶೀರ್ವದಿಸು ಎನ್ನುವ ಪದ ಬಂದಿತು. ಪಾತ್ರದಾರಿ ಸರಿಯಾಗಿ ಉಚ್ಚರಿಸಲು ಭಾರದೆ ಆಶೀರ್ವದಿಸು ಎನ್ನುವ ಬದಲಿಗೆ 'ಆ ಸೀರೆ ವಧಿಸು' ಎಂದು ಹೇಳಿದ. ನಮ್ಮ ತಂದೆ ನಾಲ್ಕೈದು ಬಾರಿ ಹೇಳಿಕೊಟ್ಟರೂ ಉಚ್ಚಾರ ಸರಿಬರಲಿಲ್ಲ. ನಮ್ಮ ತಂದೆಗೆ ಕೋಪ ನೆತ್ತಿಗೇರಿತು. ಸರಿಯಾಗಿ ಆರು ಏಟು ನೀಡಿದರು. ಅದೇ ದಿನ ಮತ್ತೊಮ್ಮೆ ಮತ್ತೊಬ್ಬ ಪಾತ್ರಧಾರಿಗೆ ಶ್ರೀವತ್ಸವ ಎನ್ನುವ ಪದ ಒಂದು ಹೇಳಿಕೆಯಲ್ಲಿ ಬಂದಿದ್ದು , ಪಾತ್ರದಾರಿ ಶ್ರೀವತ್ಸವ ಎನ್ನುವ ಬದಲು 'ಸಿರಿವಸ್ತವ' ಎನ್ನುತ್ತಿದ್ದ. ನಮ್ಮ ತಂದೆ ನಾಲ್ಕೈದು ಬಾರಿ ಸರಿಯಾಗಿ ಹೇಳಿಕೊಟ್ಟರೂ ಆ ಪದದ ಉಚ್ಚಾರಣೆ ಸರಿಯಾಗಿ ಬಾರದೆ ಇದ್ದುದರಿಂದ ಅವನಿಗೂ ಅದೇ ಗತಿಯಾಯಿತು.
         ಈ ಘಟನೆ ನೋಡಿದಾಗ ಮೂರು ತಿಂಗಳಲ್ಲಿ ಅನಕ್ಷರಸ್ಥರಿಗೆ ಸರಿಯಾಗಿ ಉಚ್ಚಾರಣೆ ಬರುವಂತೆ ಮಾಡುವುದು , ಧ್ವನಿ ಏರಿಳಿತ ಕಾಪಾಡುವಂತೆ ತಿದ್ದುವುದು, ವಾಕ್ಯಕ್ಕೆ ಅನುಗುಣವಾಗಿ ನಟಿಸುವುದು, ಅಷ್ಟು ಸುಲಭವಿರಲಿಲ್ಲ. ಪಾತ್ರಧಾರಿಗೆ ಪಾತ್ರ ಹಂಚುವುದು ಅಷ್ಟು ಸುಲಭವಿರಲಿಲ್ಲ. ಅವರ ಧ್ವನಿ , ಎತ್ತರ , ಆಕಾರ ಇದನ್ನೆಲ್ಲಾ ಅಳೆದು-ತೂಗಿ ಪಾತ್ರವನ್ನು ಹಂಚಿಕೆ ಮಾಡುತ್ತಿದ್ದರು. ಅದಕ್ಕಾಗಿ ಎಷ್ಟು ಪ್ರಯತ್ನ ಪಡುತ್ತಿದ್ದರು ಎನ್ನುವ ಸ್ಪಷ್ಟತೆ ನನಗೆ ಬಂದಿತ್ತು. ಆ ಪ್ರಯತ್ನ ನಾಟಕದ ದಿನದವರೆಗೂ ನಿರಂತರವಾಗಿ ಸಾಗುತ್ತಿತ್ತು. ಜನರಿಗೂ ಆಗ ಮನರಂಜನೆಗೆ ಬೇರೆ ಮಾರ್ಗವಿರಲಿಲ್ಲ. ಎಲ್ಲರೂ ರಾತ್ರಿ ಊಟ ಮಾಡಿ ನಾಟಕ ಅಭ್ಯಾಸ ಮಾಡುವ ಸ್ಥಳಕ್ಕೆ ಬಂದು ಕುಳಿತುಕೊಳ್ಳುತ್ತಿದ್ದರು. ಕಲಿಯುವವನ ಮುಗ್ಧತೆ , ಕಲಿಸುವವನ ಪ್ರಯತ್ನ ನೋಡಿ ಸಂಭ್ರಮ ಪಡುತ್ತಿದ್ದರು. ಅದಷ್ಟೇ ಅಲ್ಲ ನಾಟಕದ ದಿನಾಂಕಕ್ಕೆ ಸುಮಾರು ಜನರಿಗೆ ಆ ಪಾತ್ರದ ವಾಕ್ಯಗಳು ನಟನೆ ತಮಗರಿವಿಲ್ಲದಂತೆ ಬರುತ್ತಿತ್ತು. ಇದನ್ನು ಕುರಿ ಕಾಯುವಾಗ, ಜಮೀನಿನಲ್ಲಿ ವ್ಯವಸಾಯ ಮಾಡುವಾಗ ತಮ್ಮಷ್ಟಕ್ಕೆ ತಾವೇ ಅಭಿನಯಿಸಿ ಆನಂದ ಪಡುತ್ತಿದ್ದರು.
        ಇನ್ನೊಂದು ಘಟನೆ, ನನ್ನ ದೂರದ ಸಂಬಂಧಿ, ಸಂಬಂಧದಲ್ಲಿ ದೊಡ್ಡಪ್ಪ, ನನ್ನ ತಂದೆಗೆ ಆಪ್ತಸ್ನೇಹಿತ. ಅವರೂ ಒಮ್ಮೆ ನಾಟಕದಲ್ಲಿ ರಾಜನ ಪಾತ್ರ ಮಾಡಿದ್ದರು. ಅವರು ಸರ್ಕಾರಿ ನೌಕರ. ಇವರ ಗೆಳೆತನ ಅಂದರೆ ಅಷ್ಟೊಂದು ಗಾಢವಾದದ್ದು. ನಾಟಕ ಅಭ್ಯಾಸ ಮಾಡುವಾಗ ನನ್ನ ತಂದೆ ಹಾರ್ಮೋನಿಯಂ ನುಡಿಸಲು ಕುಳಿತ ತಕ್ಷಣ ಗೆಳೆತನ ಮರೆಯಾಗುತ್ತಿತ್ತು. ತಪ್ಪು ಮಾಡಿದರೆ ಗೆಳೆತನವು ನೆನಪಿಲ್ಲ, ಪೆಟ್ಟು ತಪ್ಪಿದ್ದಲ್ಲ. ಮತ್ತೆ ಬೆಳಿಗ್ಗೆ ಎಂದಿನಂತೆ ಗೆಳೆತನ ಇದ್ದೇ ಇರುತ್ತಿತ್ತು. ನನ್ನ ದೊಡ್ಡಪ್ಪನ ತೊಂದರೆ ಏನಂದರೆ ಪ್ರಾರಂಭದ ಒಂದೆರಡು ಪದ ಹೇಳಿಕೊಡಬೇಕು ಮುಂದಿನದನ್ನು ಅವರೇ ಹೇಳುವರು. ಮತ್ತೆ ಮರೆತು ಹೋದರೆ ಮತ್ತೆ ಒಂದೆರಡು ಪದ ನೆನಪಿಸಬೇಕು. ಆ ಕೆಲಸಕ್ಕೆ ನನ್ನನ್ನು ನೇಮಿಸಿದ್ದರು. ಡ್ರಾಮ ಸಿಂಹಾಸನದ ಹಿಂದೆ , ನಾನು ನಿಂತು ಮರೆತು ಹೋದದ್ದನ್ನು ಹೇಳಿಕೊಡುವ ಕೆಲಸ ನನ್ನದಾಗಿತ್ತು. ಅವರಿಗೆ ಕಿವಿ ಸರಿಯಾಗಿ ಕೇಳಿಸುತ್ತಿರಲಿಲ್ಲ. ಆಗವರು ಠೀವಿಯಿಂದ ನನ್ನ ಕಡೆಗೆ ಕಿವಿ ಬರುವಂತೆ ನಟಿಸುತ್ತಿದ್ದ ಘಟನೆ ಒಂದು ಅದ್ಭುತ. ನಾಟಕದ ದಿನ ಸಾವಿರಾರು ಮಂದಿ ಸೇರುತ್ತಿದ್ದರು. ಅಲ್ಲಿ ತಿಂಡಿ ಮಾಡುವವರು , ಆಟಿಕೆ ಮಾರುವವರಿಗೆ ವ್ಯಾಪಾರ ಹೆಚ್ಚು. ಅಕ್ಕಪಕ್ಕದಲ್ಲಿ ಪ್ರೀತಿ ಪಾತ್ರರೆಲ್ಲ ಸೇರಿ ನಾಟಕದ ಸವಿಯನ್ನು ಸವಿಯುತ್ತಿದ್ದರು.   
           ಎಲ್ಲಾ ಧರ್ಮೀಯರು ತಮ್ಮ ಧಾರ್ಮಿಕ ಗ್ರಂಥಗಳನ್ನು ಪ್ರತಿದಿನ ಪಠಣ ಮಾಡುತ್ತಾರೆ. ಆದರೆ ರಾಮಾಯಣ ಮಹಾಭಾರತದ ಕಥೆಗಳು ಯಾವುದೇ ಪಠಣ ಮಾಡದೆ ಪ್ರತಿಯೊಬ್ಬ ಭಾರತೀಯನ ಮನದಲ್ಲಿ ನೆಲೆಸಿರುವಂತೆ ಮಾಡಿರುವುದು ಈ ನಾಟಕ. ಇದು ಎಂತಹ ಅದ್ಭುತವಾದ ಕಲೆಯಾಗಿತ್ತು ಅಲ್ಲವೇ. ನನಗೆ ನಾನು ಭಾಗವಹಿಸಿದ ಎಲ್ಲಾ ಘಟನೆಗಳು ನೆನಪಿದೆ. ಆದರೆ ಟಿವಿ ಮುಂದೆ ಕುಳಿತು ಸಂಭ್ರಮದಿಂದ ಸಂಭ್ರಮಿಸಿದ್ದು ನೆನಪಿನಲ್ಲಿ ಇಲ್ಲ. ಮಕ್ಕಳೇ ಸಂಭ್ರಮವು ಮನಸ್ಸಿನಲ್ಲಿ ಬಹಳ ದಿನ ಇರಬೇಕಾದರೆ ನಾವು ಅದರಲ್ಲಿ ಭಾಗಿಯಾಗಿದ್ದರೆ ಮಾತ್ರ ನೆನಪಿನಲ್ಲಿರುತ್ತದೆ. ಬದುಕಿನಲ್ಲಿ ವಿಭಿನ್ನ ಅನುಭವಗಳಿಸಿದಾಗ ಬದುಕಿನ ಸಂಭ್ರಮವನ್ನು ಗಳಿಸಲು ಸಾಧ್ಯ
..........................................ಎಂ.ಪಿ. ಜ್ಞಾನೇಶ್ 
ಕ್ಷೇತ್ರ ಶಿಕ್ಷಣಾಧಿಕಾರಿಯವರು
ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
*******************************************



Ads on article

Advertise in articles 1

advertising articles 2

Advertise under the article