-->
ಜೀವನ ಸಂಭ್ರಮ : ಸಂಚಿಕೆ -15

ಜೀವನ ಸಂಭ್ರಮ : ಸಂಚಿಕೆ -15

    ಜೀವನ ಸಂಭ್ರಮ : ಸಂಚಿಕೆ -15

  ಸತತ ಪ್ರಯತ್ನ ಹಾಗೂ ಪರಿಶ್ರಮದ ಜೀವನ 
 -------------------------------------------- 
           ಡಾಕ್ಟರ್ ಗುರುರಾಜ ಕರ್ಜಗಿಯವರು ಭಾಷಣದಲ್ಲಿ ಹೇಳಿದ ಒಂದು ಘಟನೆ....... ಅಮೇರಿಕಾದ ಒಂದು ಊರಿನಲ್ಲಿ ಒಂದು ಬಡ ಕುಟುಂಬ ಇತ್ತು. ಮನೆ ಯಜಮಾನ ತೀರಿ ಹೋಗಿದ್ದರಿಂದ, ತಾಯಿ ಆ ಮನೆ-ಈ ಮನೆ ಕೆಲಸ ಮಾಡಿ ಮಗನನ್ನು ಸಾಕುತ್ತಿದ್ದಳು. ಮಗನಿಗೆ ರಿಕೆಟ್ಸ್ ಕಾಯಿಲೆ ಕಾಡುತ್ತಿತ್ತು. ರಿಕೆಟ್ಸ್ ಕಾಯಿಲೆ ಎಂದರೆ ತಮಗೆಲ್ಲ ಗೊತ್ತಿರುವ ಹಾಗೆ ಹೊಟ್ಟೆ ದಪ್ಪವಾಗಿರುತ್ತದೆ, ಊದಿಕೊಂಡಿರುತ್ತದೆ. ಕೈಕಾಲು ಸಣ್ಣದಾಗಿರುತ್ತದೆ. ಆ ಮಗುವಿಗೆ ಫುಟ್ಬಾಲ್ ಎಂದರೆ ಬಲು ಇಷ್ಟ. ಆತನ ಮನೆಯಲ್ಲಿ ಪುಟ್ಬಾಲ್ ಆಟಗಾರರ ಫೋಟೋಗಳೆ ತುಂಬಿರುತ್ತಿತ್ತು. ಸಾಧನೆ ಮಾಡಿದವರ ವಿವರಗಳನ್ನು ತನ್ನ ಡೈರಿಯಲ್ಲಿ ಬರೆದಿಡುತ್ತಿದ್ದ. ಹೀಗಿರಬೇಕಾದರೆ ಪಕ್ಕದ ಊರಿನಲ್ಲಿ ಒಂದು ದೊಡ್ಡ ಪುಟ್ಬಾಲ್ ಸ್ಪರ್ಧೆ ಏರ್ಪಾಡಾಗಿತ್ತು. ಈ ಆಟದಲ್ಲಿ ಅಂತರರಾಷ್ಟ್ರೀಯ ಪುಟ್ಬಾಲ್ ಕ್ರೀಡಾಪಟು ವಿಲ್ಸನ್ ಭಾಗವಹಿಸಿದ್ದ. ಇದನ್ನು ಕೇಳಿ ಆತನ ಸಂತೋಷಕ್ಕೆ ಪಾರವೇ ಇಲ್ಲದಾಯಿತು. ಆಗ ಈಗಿನಂತೆ ದೊಡ್ಡ ದೊಡ್ಡ ಸ್ಟೇಡಿಯಂ ಇರಲಿಲ್ಲ. ದೊಡ್ಡ ಬಯಲಿನಲ್ಲಿ ವೃತ್ತಾಕಾರವಾಗಿ ಜನ ಕುಳಿತುಕೊಳ್ಳಲು ಮರದ ಹಲಗೆ ಜೋಡಿಸಿ ಗ್ಯಾಲರಿ ಮಾಡುತ್ತಿದ್ದರು. ಟಿಕೆಟ್ ಖರೀದಿಸಿದ ಪ್ರೇಕ್ಷಕರು ಈ ಗ್ಯಾಲರಿಯ ಒಳಗೆ ಹಲಗೆ ಮೇಲೆ ಕುಳಿತು ಆಟವನ್ನು ನೋಡಿ ಆನಂದಿಸುತ್ತಿದ್ದರು. ಹುಡುಗ ತುಂಬಾ ಬಡವ. ಟಿಕೆಟ್ ಖರೀದಿಸಲು ಹಣವಿಲ್ಲ. ಹಾಗಾಗಿ ಮರದ ಹಲಗೆಯ ಕೆಳಗೆ ನುಸುಳಿಕೊಂಡು ಹೋಗಿ ಇಕ್ಕಟ್ಟಾದ ಪ್ರದೇಶದಲ್ಲಿ ಕುಳಿತು , ಆಟವನ್ನು ನೋಡುತ್ತಿದ್ದ. ಈತನಿಗೆ ತುಂಬಾ ಹಸಿವು ಬೇರೆ. ಹಲಗೆ ಮೇಲೆ ಕುಳಿತ ಶ್ರೀಮಂತ ಮಗು ಬ್ರೆಡ್ಡನ್ನು ಅರ್ಧ ತಿಂದು ಉಳಿದುದನ್ನು ಕೆಳಗೆ ಬಿಸಾಕುತ್ತಿತ್ತು. ಹುಡುಗ ಅದನ್ನು ಎಂಜಲು ಎನ್ನದೆ , ಅದನ್ನು ತೆಗೆದು , ಧೂಳನ್ನು ಒರೆಸಿ , ತಿನ್ನುತ್ತಾ ಪುಟ್ಬಾಲ್ ನೋಡಿದ. ವಿಲ್ಸನ್ ಆಟದಲ್ಲಿ ಗೋಲುಗಳ ಸುರಿಮಳೆಗೈದಿದ್ದ. ಆಟ ಮುಗಿದ ನಂತರ ಪ್ರೇಕ್ಷಕರಲ್ಲಿ ಕೆಲವರು ಆಟೋಗ್ರಾಫ್ ಬರಿಸಿಕೊಳ್ಳಲು ವಿಲ್ಸನ್ ನನ್ನು ಸುತ್ತುವರಿದರು . ಆಟೋಗ್ರಾಫ್ ಬರೆದುಕೊಡುತ್ತಿದ್ದ ಸಮಯದಲ್ಲಿ ಈ ಹುಡುಗ ವಿಲ್ಸನ್ ಮೈಮುಟ್ಟಿ ತನ್ನ ಕಡೆ ನೋಡುವಂತೆ ಗಮನಸೆಳೆದ. ಆಗ ವಿಲ್ಸನ್ ಕೇಳಿದ, ಏನಪ್ಪಾ ನಿನ್ನ ಸಮಾಚಾರ ಎಂದು. ಅದಕ್ಕೆ ಆ ಹುಡುಗ ಸರ್, ನೀವು ಗೋಲು ಹೊಡೆಯಲು ಓಡುವಾಗ ನಿಮ್ಮ ಕಾಲೇ ಕಾಣುತ್ತಿರಲಿಲ್ಲ. ಅದೇನು ಓಟ ಸರ್. ಗೋಲು ಹೊಡೆಯುವಾಗ , ಬಾಲು ಮುಂದಿತ್ತು , ನೀವು ಮುಂದೆ ಡೈ ಹೊಡೆದು ಗೋಲ್ ಬಾರಿಸಿದ್ದು ತುಂಬಾ ಅದ್ಭುತ ಸಾರ್ ಎಂದ. ಅದಕ್ಕೆ ಥ್ಯಾಂಕ್ಯು ಎಂದು ಹೇಳಿ ವಿಲ್ಸನ್ ಆಟೋಗ್ರಾಫ್ ಬರೆಯಲು ಶುರು ಮಾಡಿದ. ಪುನಃ ಇದೆ ಹುಡುಗ ವಿಲ್ಸನ್ನನ್ನು ಮುಟ್ಟಿ ಗಮನಸೆಳೆದ. ಆಗ ವಿಲ್ಸನ್ ಪುನಃ ಏನ್ ನಿಂದು ಎಂದು ಪ್ರಶ್ನಿಸಿದರು. ಆಗ ಈ ಹುಡುಗ ಸರ್, ನೀವು ಇದುವರೆಗೆ ಮಾಡಿರುವ ಎಲ್ಲಾ ಸಾಧನೆಗಳನ್ನು , ದಾಖಲೆಗಳನ್ನು ನನ್ನ ಡೈರಿಯಲ್ಲಿ ಬರೆದಿಟ್ಟಿದ್ದೇನೆ ಎಂದ. ಅದಕ್ಕೆ ವಿಲ್ಸನ್ ಗುಡ್, ಒಳ್ಳೆಯದು , ಕೀಪ್ ಇಟ್ ಅಪ್ ಎಂದು ಹೇಳಿ ಪುನಃ ಆಟೋಗ್ರಾಫ್ ಬರೆಯಲು ಶುರು ಮಾಡಿದ. ಸ್ವಲ್ಪ ಸಮಯದ ನಂತರ ಮತ್ತೆ ಈ ಹುಡುಗ ಮುಟ್ಟಿ ತನ್ನ ಕಡೆ ಗಮನ ಸೆಳೆದ. ಆಗ ವಿಲ್ಸನ್ ಗೆ ಕೋಪ ನೆತ್ತಿಗೇರಿತ್ತು. ಏನು .....? ಒಮ್ಮೆಲೆ ಹೇಳಿಬಿಡು, ಇಲ್ಲಾಂದ್ರೆ ನಿನ್ನನ್ನು ದೂರಕ್ಕೆ ಎಸೆದು ಬಿಡುತ್ತೇನೆ ಎಂದ. ಆಗ ಹುಡುಗ ಎರಡು ಹೆಜ್ಜೆ ಹಿಂದಕ್ಕೆ ಸರಿದು ಸರ್, ದಯವಿಟ್ಟು ಮರೆಯಬೇಡಿ ಸರ್ , ನೀವು ಇದುವರೆವಿಗೂ ಏನೇನು ಸಾಧನೆ ಮಾಡಿದ್ದೀರಾ ಆ ಎಲ್ಲಾ ಸಾಧನೆಯನ್ನು ನಾನೇ ಮುರಿಯುತ್ತೇನೆ ಅಂದ. ಆಗ ವಿಲ್ಸನ್ ಆಟೋಗ್ರಾಫ್ ಬರೆಯುವುದನ್ನು ನಿಲ್ಲಿಸಿ , ಈತನನ್ನೇ ಗಮನಿಸಿದ. ಅದು ಅಲ್ಲದೆ ಅಲ್ಲಿ ಸುತ್ತುವರಿದವರೆಲ್ಲ ಈತನನ್ನು ಗಮನಿಸಿದರು. ದೊಡ್ಡ ಹೊಟ್ಟೆ , ಕೈ ಕಾಲು ಸಣ್ಣ , ಅವನೇನು ಮಾಡಿಯಾನು ಎಂದು ಯೋಚಿಸಿದರು. ಆದರೆ ಮಕ್ಕಳೇ.......... 16 ವರ್ಷದ ನಂತರ ವಿಲ್ಸನ್ ನ ಎಲ್ಲಾ ದಾಖಲೆಗಳನ್ನು ಮುರಿದವನು ಇದೆ ಹುಡುಗ. ಈತನ ಹೆಸರು ಓಜೆ ಸಿಮ್ಸನ್. ಆತ ಸ್ಟೇಡಿಯಂಗೆ ಬಂದರೆ ಪ್ರೇಕ್ಷಕರೆಲ್ಲ ಎದ್ದು ಓಜೆ , ಓಜೆ ಎಂದು ಸ್ಟೇಡಿಯಂ ತುಂಬಾ ಆ ಹೆಸರೇ ಮೊಳಗುತ್ತಿತ್ತು. ಇವನ ಸಾಧನೆ ನೋಡಿ ಟಿವಿ ನಿರೂಪಕಿ ಸಂದರ್ಶನದಲ್ಲಿ ಈ ರೀತಿ ಪ್ರಶ್ನೆ ಕೇಳುತ್ತಾಳೆ. ನೀವು ಬಾಲ್ಯದಲ್ಲಿ ತುಂಬಾ ಬಡತನ , ರಿಕೆಟ್ಸ್ ಕಾಯಿಲೆಯಿಂದ ಬಳಲುತ್ತಿದ್ದರಂತೆ. ಇದೆಲ್ಲ ಹೇಗೆ ಸಾಧ್ಯವಾಯಿತು.......? ಇದಕ್ಕೆ ಸಿಮ್ಸನ್ ಹೇಳಿದ ಮಾತು , "ನಾನು ಮಾಡಿದ್ದು ಎರಡು ಕೆಲಸ. ಒಂದು ಎತ್ತರವಾದ ಗುರಿ ಹಾಕಿಕೊಂಡೆ. ಹೋರಾಟ ಮಾಡಿದರೆ ಬಲಿಷ್ಠ ರೊಡನೆ ಹೋರಾಡಬೇಕು , ದುರ್ಬಲರ ಜೊತೆಯಲ್ಲಲ್ಲ. ನನಗೆ ಸ್ಪರ್ಧೆ ಇದ್ದದ್ದು ವಿಲ್ಸನ್ ಮಾತ್ರ. ಆತನ ಸಾಧನೆ ಮುರಿಯಲು ನಿರಂತರ ಪ್ರಯತ್ನ ಮಾಡಿದೆ. ಪ್ರಯತ್ನ ಹದಿನಾರು ವರ್ಷಗಳ ಕಾಲ ಇತ್ತು. ನನಗೆ ಬೆಳಿಗ್ಗೆ ಎದ್ದ ಕೂಡಲೇ , ರಾತ್ರಿ ಮಲಗುವಾಗ ಬೇರೆ ಯಾವುದೆ ಗುರಿ ಇರಲಿಲ್ಲ. ಆ ಸಾಧನೆ ಮಾಡಲು ಸತತ ಪ್ರಯತ್ನ ಮಾಡಿದೆ. ಇವೆರಡೇ ಕೆಲಸ ಮಾಡಿದ್ದು" ಎಂದು ಹೇಳಿದ.
           ಇನ್ನೊಂದು ಕಥೆ ನಮಗೆಲ್ಲ ಚಿರಪರಿಚಿತ , ಮೊಲ ಮತ್ತು ಆಮೆ. ಮೊಲಕ್ಕೂ ಆಮೆಗೂ ಒಮ್ಮೆ ಸ್ಪರ್ಧೆ ಏರ್ಪಟ್ಟಿತು. ಒಂದು ನಿರ್ದಿಷ್ಟ ದೂರವನ್ನು ಯಾರು ಮೊದಲು ತಲುಪುತ್ತಾರೆ ಅವರು ಗೆದ್ದಂತೆ ಎಂಬುದು ಸ್ಪರ್ಧೆ. ಮೊಲಕ್ಕೆ ಅತಿಯಾದ ಭರವಸೆ , ನಾನೇ ಗುರಿ ತಲುಪುವುದು ಖಚಿತ ಎಂದು. ಸ್ಪರ್ಧೆ ಪ್ರಾರಂಭವಾಯಿತು. ಮೊಲ ಸ್ವಲ್ಪ ದೂರ ಓಡುವುದು, ಇನ್ನು ಆಮೆ ಬಹಳ ದೂರವಿದೆ ಎಂದು ವಿಶ್ರಾಂತಿ ಪಡೆಯುವುದು. ಆಮೆಯದು ಸತತ ಪ್ರಯತ್ನ ಅದಕ್ಕೆ ವಿಶ್ರಾಂತಿ ಇಲ್ಲ. ಮೊಲ ಸ್ವಲ್ಪ ದೂರ ಓಡುವುದು ಮತ್ತೆ ವಿಶ್ರಾಂತಿ ಪಡೆಯುವುದು ಹೀಗೆ ಸಾಗಿತ್ತು. ಇನ್ನು ಸ್ವಲ್ಪ ದೂರ ಇರುವಾಗ ಮೊಲ ವಿಶ್ರಾಂತಿ ಪಡೆಯುವಾಗ ಗಾಡವಾದ ನಿದ್ರೆಗೆ ಜಾರಿತು. ಆಮೆ ಸತತ ಪ್ರಯತ್ನದಿಂದ ಗುರಿಮುಟ್ಟಿತು. 
       ಮೂರನೇ ಘಟನೆ....... ಮಕ್ಕಳೇ ನೀವೆಲ್ಲಾ ಅಬ್ರಹಾಂ ಲಿಂಕನ್ ರವರ ಜೀವನ ಚರಿತ್ರೆ ಓದಬೇಕು. ಆತ ಹೆಚ್ಚು ಓದಲಿಲ್ಲ. ಕುರಿ ಕಾಯ್ದುಕೊಂಡು ಜೀವನ ನಡೆಸುತ್ತಿದ್ದ. ಏನೆಲ್ಲಾ ಪ್ರಯತ್ನಪಟ್ಟರೂ ಸೋಲು ಖಚಿತವಾಗಿತ್ತು. ಆದರೆ ಪ್ರತಿ ಸೋಲಿನಿಂದ ಕಂಗೆಡದೆ ಸತತ ಪ್ರಯತ್ನ ಪಡುತ್ತಲೇ ಇದ್ದ. ಈ ಸತತ ಪ್ರಯತ್ನದಿಂದ ಕೊನೆಗೆ ಅಮೆರಿಕದ ಹೆಸರಾಂತ ಅಧ್ಯಕ್ಷನಾದ.
        ಈ ಮೂರು ಘಟನೆಯಿಂದ ತಿಳಿಯುವುದು ಏನೆಂದರೆ, ಜೀವನದಲ್ಲಿ ಯಾರು ಸತತ ಪ್ರಯತ್ನ ಪಡುತ್ತಾರೋ ಅವರೇ ಯಶಸ್ವಿಯಾಗುವುದು. ಸತತ ಪ್ರಯತ್ನದ ಜೊತೆಗೆ ಪರಿಶ್ರಮ ಸೇರಿದರೆ ಸೋಲೆಂಬುದು ಇಲ್ಲವೇ ಇಲ್ಲ. ನಾವು ಯಾವುದನ್ನೇ ಆಗಲಿ ಕಲಿಯುತ್ತಿರಬೇಕಾದರೆ, ಅದು ಪೂರ್ಣ ಅರ್ಥವಾಗುವವರೆಗೆ ನಮ್ಮ ಸತತ ಪ್ರಯತ್ನ ಮುಂದುವರಿಯಬೇಕು. ಆ ಪ್ರಯತ್ನಕ್ಕೆ ಮಿತಿ ಎನ್ನುವಂತಿಲ್ಲ. ಅದು ನಮ್ಮ ವಶವಾಗುವವರೆಗೆ ಸತತ ಪ್ರಯತ್ನ ಪಟ್ಟರೆ ಫಲಿತಾಂಶ ಯಶಸ್ವಿಯಾಗುತ್ತದೆ. ಅದೇ ರೀತಿ ಜೀವನದ ಯಾವುದೇ ಗುರಿಯಾಗಲಿ , ಕೆಲಸವಾಗಲಿ , ಸತತ ಪ್ರಯತ್ನ ಮುಖ್ಯ. ಪ್ರತಿ ಪ್ರಯತ್ನದಲ್ಲೂ ತನ್ನ ಹಿಂದಿನ ತಪ್ಪುಗಳ ಸುಧಾರಣೆಯಾಗಬೇಕು. ತಪ್ಪು ಸುಧಾರಣೆಯಾಗದೆ ಪ್ರಯತ್ನಪಟ್ಟರೆ ಅದು ಕೇವಲ ಪರಿಶ್ರಮ. ಕೇವಲ ಪರಿಶ್ರಮದಿಂದ ಯಶಸ್ಸು ಪಡೆಯಲು ಸಾಧ್ಯವಿಲ್ಲ. ಅದು ಎತ್ತುಗಳು ನಿತ್ಯ ಗಾಣ ಸುತ್ತಿದಂತೆ...! 
          ಸತತ ಪ್ರಯತ್ನ ಮತ್ತು ಪರಿಶ್ರಮದಿಂದ ಸಂಭ್ರಮದ ಜೀವನ ನಡೆಸಬಹುದು. ಸುಖಕರವಾದ , ಸಂತೋಷ ಭರಿತ ಬದುಕಿಗೆ ನಾವೆಲ್ಲರೂ ಪ್ರೇರಕರಾಗೋಣ....!
..........................................ಎಂ.ಪಿ. ಜ್ಞಾನೇಶ್ 
ಕ್ಷೇತ್ರ ಶಿಕ್ಷಣಾಧಿಕಾರಿಯವರು
ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
*******************************************


Ads on article

Advertise in articles 1

advertising articles 2

Advertise under the article