-->
ಒಬ್ಬ ಬಾಲಕನ ಕಥೆ

ಒಬ್ಬ ಬಾಲಕನ ಕಥೆ


                       ಒಬ್ಬ ಬಾಲಕನ ಕಥೆ
      ನಿನ್ನೆ ನನ್ನ ಆತ್ಮೀಯ ಸ್ನೇಹಿತ ಅಲ್ತಾಫ್ ಕಾಲ್ ಮಾಡಿ ಒಂದು ವ್ಯಥೆಯ ಕತೆ ಹೇಳಿ ಪರಿಹಾರ ಸೂಚಿಸು ಎಂದರು. ನಾನು ಈ ಸಬ್ಜೆಕ್ಟ್ ಎಕ್ಸ್‌ಪರ್ಟ್ ಅಲ್ಲ ಮಾರ್ರೆ ಎಂದೆ. ಸಬ್ಜೆಕ್ಟ್ ಏನು ಎಂದು ಮುಂದೆ ಓದಿ.
        ಅದೊಂದು ಆರ್ಥಿಕವಾಗಿ ಸಬಲವಾಗಿರುವ ದಲಿತ ಕುಟುಂಬ. ತಂದೆ ಬ್ಯಾಂಕ್ ಆಫೀಸರ್. ತಾಯಿಗೆ ಮನೆವಾರ್ತೆ ಕೆಲಸ. ಹಿರಿ ಮಗಳು ಖಾಸಗಿ ಆಂಗ್ಲ ಮಾಧ್ಯಮ ಹೈಸ್ಕೂಲಲ್ಲಿ ಓದುತ್ತಿದ್ದಾಳೆ. ಕಿರಿಯ ಮಗನಿಗೆ ಈಗ ವಯಸ್ಸು ಸುಮಾರು ಹದಿನಾಲ್ಕು. ನಾಲ್ಕು ವರ್ಷಗಳಿಂದ ಶಾಲೆಗೆ ಹೋಗುತ್ತಿಲ್ಲ. ಶಾಲೆಯ ವಿಷಯ ತೆಗೆದರೆ ಆತ್ಮ ಹತ್ಯೆ ಮಾಡಿಕೊಳ್ಳುವೆ, ಮನೆ ಬಿಟ್ಟು ಓಡಿ ಹೋಗುವೆ ಎಂದು ಹೆತ್ತವರಿಗೆ ಬೆದರಿಕೆ ಹಾಕುತ್ತಾನೆ. ಆತ ನಾಲ್ಕನೇ ತರಗತಿಯವರೆಗೆ ಎಲ್ಲಾ ಮಕ್ಕಳಂತೆಯೇ ತನ್ನ ಅಕ್ಕನೊಂದಿಗೆ ಶಾಲೆಗೆ ಹೋಗುತ್ತಿದ್ದ. ಕಲಿಕೆಯಲ್ಲಿ ಹಿಂದಿದ್ದ. ಕ್ಲಾಸಲ್ಲಿ ಏನೇ ಪ್ರಶ್ನೆ ಕೇಳಿದರೂ ಉತ್ತರಿಸಲು ಆತನಿಗೆ ಸಾಧ್ಯವಾಗುತ್ತಿರಲಿಲ್ಲ. ಪ್ರತಿ ದಿನ ಹುಡುಗನನ್ನು ದಡ್ಡ, ಶತ ದಡ್ಡ, ಮೂರ್ಖ, ಪೆದ್ದ ಹೀಗೆ ನಾನಾ ವಿಧದಲ್ಲಿ ಹಂಗಿಸುತ್ತಿದ್ದರು. ಮತ್ತೆ ಮತ್ತೆ ಅವನಿಗೆ ಪ್ರಶ್ನೆ ಕೇಳುವುದನ್ನೂ ನಿಲ್ಲಿಸಿದರು. ಆತನನ್ನು ಗಮನಿಸುವುದನ್ನೇ ಬಿಟ್ಟು ಬಿಟ್ಟರು. ಆತನನ್ನು ಆತನ ಸಹಪಾಠಿಗಳೂ ಪೆದ್ದ ಪೆದ್ದ ಎಂದು ಗೇಲಿ ಮಾಡತೊಡಗಿದರು. ಆತ ಒಳಗೊಳಗೇ ಕುಗ್ಗತೊಡಗಿದ. ಯಾರಿಗೇ ಆದರೂ ಮುಖ ತೋರಿಸಿ ಮಾತನಾಡುವುದಕ್ಕೂ ಹಿಂಜರಿಯತೊಡಗಿದ. ಆತನೊಳಗೆ ಬೆಳೆದ ಕೀಳರಿಮೆ ಆತನನ್ನು ಮಾನಸಿಕವಾಗಿ ಬಹಳಷ್ಟು ಡಿಸ್ಟರ್ಬ್ ಮಾಡತೊಡಗಿತು. ಶಾಲೆಗೆ ಹೋಗುವುದನ್ನೂ ನಿಲ್ಲಿಸಿದ. ಈಗ ಆತ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದಾನೆ. ತಂದೆ ತಾಯಿಗೆ ಆತನದೇ ಚಿಂತೆ.. ಹತ್ತಾರು ವೈದ್ಯರ ಚಿಕಿತ್ಸೆ ಪಡೆದಾಯಿತು. ಸರಣಿ ಕೌನ್ಸೆಲಿಂಗ್‌‌ಗಳೂ ಆಯಿತು. ಆದರೆ ಆತನ ಮಾನಸಿಕ ಸ್ಥಿತಿಯನ್ನು ಬದಲಿಸಲು ಸಾಧ್ಯವೇ ಆಗಲಿಲ್ಲ..!!
         ಎಲ್ಲಾ ಮಕ್ಕಳ ಬುದ್ಧಿಮತ್ತೆ ಮತ್ತು ಸ್ಮರಣ ಶಕ್ತಿ ಒಂದೇ ರೀತಿ ಇರಬೇಕೆಂದಿಲ್ಲ. ಎಲ್ಲವೂ ಎಲ್ಲಾ ಮಕ್ಕಳಿಗೂ ಅರ್ಥವಾಗಬೇಕೆಂದಿಲ್ಲ. ಆತನನ್ನು ಇತರ ಮಕ್ಕಳ ಮುಂದೆ ಹಂಗಿಸದೇ ಆತನನ್ನು ಪರ್ಸನಲ್ಲಾಗಿ ಕರೆದು ಆತನಿಗೆ ಕೌನ್ಸೆಲಿಂಗ್ ಮಾಡಿದರೆ ಆತ ಹೀಗಾಗುತ್ತಿರಲಿಲ್ಲ.  ಒಬ್ಬನಿಗೆ ಒಂದು ಸಬ್ಜೆಕ್ಟ್ ಅರ್ಥೈಸಲು ಕಷ್ಟವಾದರೆ ಆತನನ್ನು ಪದೇ ಪದೇ ಎಲ್ಲರ ಮುಂದೆ ಪ್ರಶ್ನೆ ಕೇಳಿ ಹಿಂಸಿಸುವುದು ಸರಿಯಲ್ಲ. ಅಂತಹ ಮಕ್ಕಳಿಗೆ ಉದ್ದೇಶಪೂರ್ವಕವಾಗಿ ಸರಳ ಪ್ರಶ್ನೆಗಳನ್ನು ಮಾತ್ರ ಕೇಳಬೇಕು. ಅವರು ಉತ್ತರಿಸುವಂತೆ ಪ್ರೇರೇಪಿಸಬೇಕು. ಉತ್ತರಿಸಿದಾಗ ಪ್ರಶಂಸಿಸಬೇಕು. ಹಿಂದಿನ ಕ್ಲಾಸ್ ಟೆಸ್ಟ್‌ಗಿಂತ ನಂತರದ ಕ್ಲಾಸ್ ಟೆಸ್ಟಲ್ಲಿ ಒಂದು ಅಂಕ ಹೆಚ್ಚು ಗಳಿಸಿದರೂ ಆತನನ್ನು ಎಲ್ಲರ ಮುಂದೆ ಪ್ರಶಂಸಿಸಬೇಕು. ಕಡಿಮೆ ಬಂದರೆ ಬೆಟರ್ ಲಕ್ ನೆಕ್ಸ್ಟ್ ಟೈಮ್ ಇಂತಹ ಭರವಸೆ ತುಂಬುವ ಮಾತುಗಳನ್ನಾಡಬೇಕು. ಶಿಕ್ಷಕರು ಎಲ್ಲಕ್ಕಿಂತ ಮೊದಲು ವೈಯಕ್ತಿಕವಾಗಿ ಮಕ್ಕಳ ಬುದ್ಧಿ ಮತ್ತೆ ಮತ್ತು ಸ್ಮರಣ ಶಕ್ತಿಯನ್ನು ಪರೀಕ್ಷಿಸಬೇಕು. ಅವರವರ ಸಾಮರ್ಥ್ಯಕ್ಕನುಸಾರ ಪ್ರಶ್ನೆಗಳನ್ನು ಕೇಳಬೇಕು. 
        ಶಿಕ್ಷಣ ಮಾಧ್ಯಮ ಮಗುವಿನ ಮಾತೃಭಾಷೆ ಯಲ್ಲಾಗಬೇಕು. ನಾನು ಇಂದಿಗೂ ಆಲೋಚಿಸುವುದು ನನ್ನ ಮಾತೃಭಾಷೆಯಲ್ಲೇ ಹೊರತು ನಾನು ಕಲಿತ ಇಂಗ್ಲೀಷಲ್ಲಿ ಅಲ್ಲ. ಆದರೆ ಕನ್ನಡ ನನ್ನ ಪರಿಸರದ ಸಹಜ ಭಾಷೆಯಾದುದರಿಂದ ಆಲೋಚಿಸಿದ್ದನ್ನು ಕನ್ನಡಕ್ಕೆ ಸಲೀಸಾಗಿ ತರಬಲ್ಲೆ. ಓಪನ್ ಬುಕ್ ಎಕ್ಸಾಮ್ ಸಿಸ್ಟಮ್ ಎಂದರೆ ಇಂದಿಗೂ ಅನೇಕರಲ್ಲಿ ಒಂದು ತಪ್ಪು ಕಲ್ಪನೆಯಿದೆ. ನೋಡಿ ಬರೆಯುವುದು ಎಂತಹ ಪರೀಕ್ಷೆ ಮಾರ್ರೆ ಎಂದು ನನ್ನಲ್ಲಿ ಹಲವರು ಪ್ರಶ್ನಿಸಿದ್ದಾರೆ. ವಾಸ್ತವದಲ್ಲಿ ಅದು ನೋಡಿ ಬರೆಯುವ ಪರೀಕ್ಷೆಯಲ್ಲ. ಯೋಚಿಸಿ ಬರೆಯುವ ಪರೀಕ್ಷೆ. ನಾವು ಮಕ್ಕಳನ್ನು ಯೋಚಿಸುವಂತೆ ಮಾಡಬೇಕೇ ಹೊರತು, ಬಾಯಿಪಾಠ ಮಾಡುವಂತೆ ಮಾಡಬಾರದು.
       ಇನ್ನು ಶಿಕ್ಷಣ ಇಲಾಖೆ ಖಾಸಗಿ ಶಾಲೆಯಿರಲಿ, ಸರಕಾರಿ ಶಾಲೆಯಿರಲಿ.. ರೆಫ್ರೆಶರ್ ಕೋರ್ಸ್ ಗಳನ್ನು ಕನಿಷ್ಠ ತಿಂಗಳಿಗೊಮ್ಮೆಯಾದರೂ ಇಟ್ಕೊಳ್ಳಬೇಕು. ಅದರಲ್ಲಿ ಸಬ್ಜೆಕ್ಟ್ ಕುರಿತ ಚರ್ಚೆ ಖಂಡಿತಾ ಅಗತ್ಯವಿಲ್ಲ. ಸಬ್ಜೆಕ್ಟ್ ಅಪ್ಡೇಟ್ ಆಗಲು ಇಂದಿನ ಮಾಹಿತಿ ತಂತ್ರಜ್ಞಾನ ಯುಗದಲ್ಲಿ ಏನೇನೂ ಕಷ್ಟವಿಲ್ಲ. ಚೈಲ್ಡ್ ಸೈಕಾಲಜಿ ವಿಷಯದಲ್ಲಿ ಹೆಚ್ಚು ಹೆಚ್ಚು ಜಾಗೃತಗೊಳ್ಳುವಂತೆ ಮಾಡುವ ರೆಫ್ರೆಶರ್ ಕೋರ್ಸ್ ಒತ್ತಡದ ಬದುಕಿನ ಈ ಕಾಲದಲ್ಲಿ ಬಹು ಅಗತ್ಯ.
       ದಯಮಾಡಿ ಮಕ್ಕಳಿಗೆ ಅಮ್ಮಂದಿರಾಗಿ.. ಮಕ್ಕಳನ್ನು‌ ಪ್ರೀತಿಸಿ..‌ ಅವರು ಮಮತೆಗೆ, ಪ್ರೀತಿಯ ಮಾತುಗಳಿಗೆ ಬೇಗ ಬದಲಾಗುತ್ತಾರೆ..!!
 .......................................... ಇಸ್ಮತ್ ಪಜೀರ್   
ಪೆರ್ನಪಾಡಿ ಮನೆ
ಪಜೀರು ಅಂಚೆ
ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
********************************************

Ads on article

Advertise in articles 1

advertising articles 2

Advertise under the article