-->
ಅಕ್ಕನ ಪತ್ರ ; ಸಂಚಿಕೆ - 13

ಅಕ್ಕನ ಪತ್ರ ; ಸಂಚಿಕೆ - 13

ಜಗಲಿಯ ಮಕ್ಕಳಿಗೆ 
ಅಕ್ಕನ ಪತ್ರ - 13


ನಮಸ್ತೆ ಮಕ್ಕಳೇ,
     ದಿನಗಳು ಯಾರನ್ನೂ ಕಾಯದೆ ನಿತ್ಯ ಹೊಸತಾಗುತ್ತಿವೆ.. ಈ ನಡುವೆ ನಾವು ಕೂಡಾ.. ಅರಿವಿಲ್ಲದೆ ಕಲಿಯುತ್ತಿದ್ದೇವೆ.. ನಮ್ಮನ್ನು ನಾವೇ ತಿದ್ದಿಕೊಳ್ಳುವುದರ ಮೂಲಕ.. ಬಹುಶಃ ಕಲಿಕೆ ಆರಂಭವಾಗುವುದೇ ಇಲ್ಲಿಂದ.. ಗೊತ್ತಿಲ್ಲ ಎಂದು ಅರಿವಾಗುವ ಕ್ಷಣದಿಂದ..
       ನಿಮಗೊಂದು ರಾಜನ ಕಥೆ ಹೇಳಬೇಕು. ನಾನು ಕೇಳಿರುವ ಕಥೆಯಿದು. ಕಾಶಿ ಎನ್ನುವ ಪಟ್ಟಣದಲ್ಲಿ ರಾಜನು ತೀರಿಹೋದ ನಂತರ ಮುಂದಿನ ರಾಜನನ್ನು ಆಯ್ಕೆಮಾಡುವ ವಿಶಿಷ್ಟ ಪರಂಪರೆ ಹೀಗಿತ್ತು ... ಆನೆಯ ಕೈಗೆ ಹೂವಿನ ಮಾಲೆಯನ್ನು ಕೊಟ್ಟು ಅದು ಯಾರ ಕೊರಳನ್ನು ಅಲಂಕರಿಸುತ್ತದೆಯೋ ಅವರನ್ನು ರಾಜ ಎಂದು ಘೋಷಿಸಲಾಗುತ್ತಿತ್ತು. ಆದರೆ ಈ ಬಾರಿ ಈ ನಿಯಮವನ್ನು ಬದಲಾಯಿಸಿ ಒಂದು ಹೊಸ ಕಾನೂನನ್ನು ಜಾರಿಗೆ ತಂದರು. ಊರಿನ ಹೊರಗೆ ಒಂದು ಗಂಟೆಯನ್ನು ಸಿಕ್ಕಿಸಿ, ಅದನ್ನು ಯಾರೂ ಬಾರಿಸುತ್ತಾರೆಯೋ ಅವರನ್ನು ರಾಜನನ್ನಾಗಿ ಮಾಡುವುದು. ಆದರೆ ಇಲ್ಲಿ ಒಂದು ಷರತ್ತು ಇತ್ತು. ರಾಜನಾಗುವವನಿಗೆ ಕೇವಲ ಎರಡು ವರ್ಷ ಮಾತ್ರ ಅವಕಾಶ. ನಂತರ ಅವನನ್ನು ಊರಿನಾಚೆಗಿರುವ ಕ್ರೂರ ಪ್ರಾಣಿಗಳಿರುವ ಕಾಡಿಗೆ ಬಿಟ್ಟು ಬರಲಾಗುತ್ತಿತ್ತು. ಆರಂಭದಲ್ಲಿ ಜನರು ಒಬ್ಬರ ನಂತರ ಒಬ್ಬರು ಗಂಟೆ ಬಾರಿಸಿ ರಾಜ ಆಗುತ್ತಿದ್ದರು.
       ಎರಡು ವರ್ಷ ರಾಜ್ಯಭಾರ ಮಾಡಿದ ನಂತರ ಅವರನ್ನು ಕಾಡಿನಲ್ಲಿ ಬಿಡುತ್ತಿದ್ದರು. ಅಲ್ಲಿ‌ ಅವರು ಬದುಕಿ ಉಳಿಯುವ ಸಾಧ್ಯತೆ ತುಂಬಾ ಕಡಿಮೆ. ಬದುಕುವ ಆಸೆಯನ್ನು ಬಿಟ್ಟು ಆಳ್ವಿಕೆ‌ ಮಾಡಬೇಕಾದ್ದರಿಂದ ಕ್ರಮೇಣ ‌ಜನರಿಗೆ ರಾಜನಾಗುವ ಆಸಕ್ತಿ ಕಡಿಮೆಯಾಯ್ತು. ಇನ್ಯಾರೂ ರಾಜನಾಗಲು ಬರಲಿಕ್ಕಿಲ್ಲ. ಕಾನೂನನ್ನು ಬದಲಾಯಿಸಬೇಕಷ್ಟೇ ಎಂದು ಚರ್ಚಿಸುತ್ತಿರುವಾಗಲೇ ಮತ್ತೊಂದು ಗಂಟೆಯ ಶಬ್ದ ಕೇಳಿಸಿತು!
      ಹೋಗಿ ನೋಡಿದಾಗ ಒಬ್ಬ ಭಿಕ್ಷುಕ ಗಂಟೆ ಬಾರಿಸುತ್ತಿದ್ದ. ಅವನಲ್ಲಿ ವಿಚಾರಿಸಿದಾಗ 'ನಾನು ರಾಜ ಆಗುತ್ತೇನೆ' ಎಂದು ಹೇಳಿದ. ಆಗ ಮಂತ್ರಿಗಳು ನಿಯಮಗಳನ್ನು ವಿವರಿಸಿದರು . ಭಿಕ್ಷುಕನು ಎಲ್ಲವನ್ನೂ ಒಪ್ಪಿಕೊಂಡೆ ರಾಜನಾಗಲು ತೀರ್ಮಾನಿಸಿದನು. ಊರಿಗೆ ಬಂದ ಭಿಕ್ಷುಕನಿಗೆ ರಾಜನ ಪಟ್ಟವನ್ನು ನೀಡಲಾಯಿತು. ಈ ಭಿಕ್ಷುಕ ರಾಜನ ಅವಧಿಯಲ್ಲಿ ರಾಜ್ಯವು ಇನ್ನಿಲ್ಲದಂತೆ ಅಭಿವೃದ್ಧಿಯನ್ನು ಕಂಡಿತು. ಅತ್ಯುತ್ತಮ ಆಡಳಿತವನ್ನು ನೀಡಿ ಜನರ ವಿಶ್ವಾಸವನ್ನು ಗಳಿಸಿದ. ಇವನನ್ನು ಕಳುಹಿಸಲು ಯಾರಿಗೂ ಮನಸ್ಸಿರಲಿಲ್ಲ. ದಿನಗಳು ತಿಂಗಳು ವರ್ಷಗಳಾಗಿ ಎರಡು ವರ್ಷಗಳು ಮುಗಿಯುತ್ತಿದ್ದ ಹಾಗೆಯೇ ಮಂತ್ರಿಗಳು ಭಿಕ್ಷುಕನ ಹತ್ತಿರ ಹೋಗಿ ಎರಡು ವರ್ಷದ ಅವಧಿ ಮುಗಿಯುತ್ತಿದೆ ಎಂದು ಎಚ್ಚರಿಕೆಯನ್ನು ನೀಡಿದರು. ಆದರೆ ಭಿಕ್ಷುಕ ರಾಜನು ನಿರ್ಲಿಪ್ತವಾಗಿ ಎಲ್ಲವನ್ನು ಪ್ರೀತಿಯಿಂದಲೇ ಒಪ್ಪಿಕೊಳ್ಳುತ್ತಿದ್ದನು. ಮಂತ್ರಿಗಳಿಗೆ ಆಶ್ಚರ್ಯವಾಯಿತು! 
      'ನಾಳಿನ ದಿನ ಅಧಿಕಾರದ ಕೊನೆಯ ದಿನ... ನಾಳೆ ಬೇಗ ತಯಾರಿರಬೇಕು, ಕಾಡಿನಲ್ಲಿ ನಿಮ್ಮನ್ನು ಬಿಟ್ಟು ಬರುವುದಕ್ಕಿದೆ ' ಎಂದು ನೆನಪಿಸಿದರು!. ರಾಜನು ಬಹಳ ಸಾವಧಾನದಿಂದ ಒಪ್ಪಿಗೆಯನ್ನು ಸೂಚಿಸಿದ. ಎರಡನೇ ವರ್ಷದ ಕೊನೆಯ ದಿನ ಬಂದೇ ಬಿಟ್ಟಿತು!. ಮಂತ್ರಿಗಳು ರಾಜನನ್ನು ತೆಪ್ಪದಲ್ಲಿ ಕುಳ್ಳಿರಿಸಿಕೊಂಡು ದೊಡ್ಡ ನದಿಯನ್ನು ದಾಟಿ ಕಾಡಿನೊಳಗೆ ಬಿಟ್ಟು ಬರಲು ತೆರಳಿದರು.!
      ಈ ಸಂದರ್ಭದಲ್ಲಿ ಮಂತ್ರಿಗಳಿಗೆ ಅಚ್ಚರಿ ಕಾದಿತ್ತು! 'ಇಷ್ಟೊಂದು ಸಮಾಧಾನವಾಗಿ ಇರಲು ಹೇಗೆ ಸಾಧ್ಯ ನಿಮಗೆ? ಕಾಡು ಪ್ರಾಣಿಗಳ ಭಯವಿಲ್ಲವೆ? ಬದುಕಲು ಆಸೆ ಇಲ್ಲವೆ? ಎಂದು ರಾಜನನ್ನು ಪ್ರಶ್ನಿಸಿದರು.
      ನಿಗೂಢ ಕಾಡಿನಲ್ಲಿ ಆಗಬಹುದಾದ ಅನಾಹುತದ ಬಗ್ಗೆ ಎಚ್ಚರಿಕೆಯನ್ನೂ ನೀಡಿದರು. ಆಗ ರಾಜನು ಎಲ್ಲಿದೆ ಕಾಡು ? ಹಿಂತಿರುಗಿ ಒಮ್ಮೆ ನೋಡಿ... ಎಂದು ಹೇಳಿದ. ಮಂತ್ರಿಗಳು ತಮ್ಮ ಕಣ್ಣುಗಳನ್ನೇ ನಂಬದಾದರು.! ಕಾಡಿನ ಜಾಗದಲ್ಲಿ ಬಹಳ ಸುಂದರವಾದ ಪಟ್ಟಣ ಒಂದು ತಯಾರಾಗಿತ್ತು.! ಜನರು ತಮ್ಮ ತಮ್ಮ ಕೆಲಸಗಳನ್ನು ಮಾಡುತ್ತಿದ್ದರು. ಮಂತ್ರಿಗಳು‌ ಅತ್ತ ಇತ್ತ ಓಡಾಡಿಕೊಂಡಿದ್ದರು. ಇದೆಲ್ಲ ಏನು? ಎಂದು ರಾಜನನ್ನು ಮಂತ್ರಿಗಳು ಪ್ರಶ್ನಿಸಿದರು. ಆಗ ಆ ಭಿಕ್ಷುಕ ರಾಜನು, "ನನಗೆ ಅಧಿಕಾರ ಬಂದ ದಿನದಿಂದಲೇ ಗೊತ್ತಿತ್ತು, ಮುಂದೆ ಒಂದು ದಿನ ಇಂತಹ ಸಂದರ್ಭವನ್ನು ಎದುರಿಸಬೇಕಾಗಬಹುದು ಎಂದು.. ಹಾಗಾಗಿ ಆಗಲೇ ನಾನು ಒಂದು ನಿರ್ಧಾರವನ್ನು ಮಾಡಿ, ಅಂದಿನಿಂದಲೇ ಕಾಡಿನಲ್ಲಿ  ಪಟ್ಟಣವೊಂದನ್ನು ನಿರ್ಮಿಸಲು ಆರಂಭಿಸಿದೆ. ಈಗ ಈ ಊರಿಗೆ ನಾನೇ ರಾಜ.. ಇಲ್ಲಿ ಮಂತ್ರಿಗಳಿದ್ದಾರೆ ! ಸಿಂಹಾಸನ ನನಗಾಗಿ ಕಾಯುತ್ತಿದೆ " ಎಂದು ಬಹಳ ಸಂಭ್ರಮದಿಂದ ನುಡಿದನು. ಮಂತ್ರಿಗಳು ಬೆರಗಾದರು.! ಹಾಗಾದರೆ ನಮ್ಮ ಗತಿಯೇನು? ಎಂದು ಕೇಳಿದರು. ಆಗ ಭಿಕ್ಷುಕ ರಾಜನು, ಇದು ಕಾಶಿಯ ಉತ್ತರ ಭಾಗಕ್ಕೆ ಇರುವುದರಿಂದ ಇದನ್ನು ಉತ್ತರಕಾಶಿ ಎಂದು ಕರೆಯುತ್ತೇನೆ. ನಿಮ್ಮ ಅಭ್ಯಂತರವಿಲ್ಲದಿದ್ದರೆ ಎರಡು ರಾಜ್ಯಗಳನ್ನು ಒಟ್ಟಿಗೆ ಮಾಡೋಣ.. ನಾನೇ ರಾಜನಾಗುತ್ತೇನೆ ಎಂದು ಹೇಳಿದನು. ಮಂತ್ರಿಗಳು ಪ್ರೀತಿಯಿಂದ ಒಪ್ಪಿದರು. ಅಂದಿನಿಂದ ಆ ಊರಿಗೆ ಕೊನೆಯವರೆಗೂ ಅವನೇ ರಾಜನಾದನಂತೆ!
..............ಸುಂದರವಾದ ಕಥೆ ಅಲ್ವಾ?
ಮಕ್ಕಳೇ, ನಮ್ಮ ನಡುವೆ ಆಯ್ಕೆಗಳು ಹಲವಾರು ಇರುತ್ತವೆ. ನೆಮ್ಮದಿಯ ನಾಳೆಗಾಗಿ ನಮ್ಮ ಯೋಜನೆಗಳು‌ ಇಂದಿನಿಂದಲೇ ಆರಂಭವಾಗಬೇಕು ಅಲ್ವಾ.....?
        ಭಿಕ್ಷುಕ ರಾಜನಾಗಿ ಎದುರಿಸಬಹುದಾದ ಕಷ್ಟದ ದಿನಗಳನ್ನು ಪರಿಹರಿಸಿದ್ದು ಹೇಗೆ ? ಎಂಬುದನ್ನು ಈ ಕಥೆಯ ಮೂಲಕ ತಿಳ್ಕೊಂಡ್ರಿ..... ಹಾಗಾದರೆ ಈ ಹಿಂದಿನ ಉಳಿದ ರಾಜರು ಯಾಕೆ ಈ ರೀತಿ ಮಾಡಿಲ್ಲ..... ? ಕಾರಣ ಯಾಕಿರಬಹುದು....? ನೀವೂ ಈ ರೀತಿಯ ಕಷ್ಟದ ಸನ್ನಿವೇಷ ಎದುರಿಸುತ್ತಿದ್ರೆ ಏನು ಮಾಡುವಿರಿ.....? ನೀವೇ ಆಲೋಚಿಸಿ... ನಿಮ್ಮ ಆಲೋಚನೆಗಳನ್ನು ಅಕ್ಷರ ರೂಪಕ್ಕಿಳಿಸಿ ಮಕ್ಕಳ ಉತ್ತರದಲ್ಲಿ ನಮಗೆ ಕಳಿಸ್ತೀರಲ್ವಾ?
       ಆರೋಗ್ಯ ಜೋಪಾನ..... ಮತ್ತೆ ಭೇಟಿಯಾಗೋಣ. ಅಲ್ಲಿಯವರೆಗೆ ಅಕ್ಕನ‌ ನಮನಗಳು.
................................... ತೇಜಸ್ವಿ ಅಂಬೆಕಲ್ಲು
ಶಿಕ್ಷಕಿ
ದ.ಕ.ಜಿ.ಪಂ.ಹಿ.ಪ್ರಾ .ಶಾಲೆ,
ಗೋಳಿತ್ತಟ್ಟು, ಪುತ್ತೂರು ತಾಲ್ಲೂಕು
ದಕ್ಷಿಣ ಕನ್ನಡ ಜಿಲ್ಲೆ
*********************************************Ads on article

Advertise in articles 1

advertising articles 2

Advertise under the article