
ಮಕ್ಕಳ ದಿನಾಚರಣೆಯ ವಿಶೇಷ ಲೇಖನ - ಡಾ.ನರೇಂದ್ರ ರೈ ದೇರ್ಲ
Saturday, November 13, 2021
Edit
ಪ್ರೀತಿಯ ಮಕ್ಕಳೇ, ನಿಮಗೆಲ್ಲರಿಗೂ ಮಕ್ಕಳ ದಿನಾಚರಣೆಯ ಶುಭಾಶಯಗಳು. ನಮಸ್ಕಾರ..... ಹೇಗಿದ್ದೀರಿ?
ಕಳೆದ ಎರಡು ವರ್ಷಗಳಿಂದ ನಾವು ಅನುಭವಿಸುತ್ತಿರುವ ಸಾಂಕ್ರಾಮಿಕ ಸಂಕಷ್ಟ ಶಾಲಾ ಕಲಿಕೆಯ ದಾರಿಯಲ್ಲಿ ನಮಗೆ ಒಂದಷ್ಟು ಅಡಚಣೆಯನ್ನು ಉಂಟು ಮಾಡಿರಬಹುದು. ಸುದೀರ್ಘ ರಜೆಯಲ್ಲಿ ಮುಕ್ತ ಸಮಯವನ್ನು ಪುಸ್ತಕ ಓದು, ಬರವಣಿಗೆ , ಕೂಡಿಸು , ಗುಣಿಸು ಲೆಕ್ಕಾಚಾರಗಳ ಆಚೆ ನೀವು ಹೇಗೆ ಅನುಭವಿಸಿದ್ದೀರಿ ಎನ್ನುವುದರ ಆಧಾರದ ಮೇಲೆ ನಿಮ್ಮ ಜೀವನಾನುಭವ- ಜ್ಞಾನಪ್ರಮಾಣ ನಿರ್ಧಾರವಾಗುತ್ತದೆ. ನಮ್ಮ ಅರಿವು ಪುಸ್ತಕದಿಂದ , ತರಗತಿ- ಕೊಠಡಿಗಳಿಂದ, ಶಿಕ್ಷಕರಿಂದ ಮಾತ್ರ ಬರುತ್ತದೆ ಎಂಬ ನಂಬಿಕೆ ಇಂದು ನಮ್ಮದಾಗಿದೆ.
ಒಂದು ಬಾರಿ ನಾನು 'ತರಂಗ' ಪತ್ರಿಕೆಯಲ್ಲಿದ್ದಾಗ ಜ್ಞಾನಪೀಠ ಪ್ರಶಸ್ತಿ ವಿಜೇತ ಶಿವರಾಮ ಕಾರಂತರು ಆ ಪತ್ರಿಕೆಯಲ್ಲಿ 'ಬಾಲವನದಲ್ಲಿ ಕಾರಂತಜ್ಜ' ಎಂಬ ಅಂಕಣ ಬರೆಯುತ್ತಿದ್ದರು. ನಾಡಿನ ಉದ್ದಗಲದಿಂದ ನಿಮ್ಮ ವಯಸ್ಸಿನ ಮಕ್ಕಳು ಕಾರಂತರಿಗೆ ಪತ್ರಗಳನ್ನು ಬರೆದು ಪ್ರಶ್ನೆಗಳನ್ನು ಕೇಳುತ್ತಿದ್ದರು. ಹಾಗೆ ಬಂದ ಪ್ರಶ್ನೆಗಳ ಪತ್ರಗಳನ್ನು ನಾನು ಶಿವರಾಮ ಕಾರಂತರಿಗೆ ಕೆಲವೊಮ್ಮೆ ಸಂಗ್ರಹಿಸಿ ತೆಗೆದುಕೊಂಡು ಹೋಗಿ ತಲುಪಿಸುತ್ತಿದ್ದೆ. ಸಾಲಿಗ್ರಾಮದ ಅವರ ಮನೆಗೆ ಹೋಗಿದ್ದಾಗ ಒಂದು ಸಲ ಅವರ ಮನೆ ತುಂಬಾ ಅಕ್ಕಪಕ್ಕದ ಮಕ್ಕಳು ಸೇರಿದ್ದರು. ಅದರಲ್ಲಿ ಒಂದು ಮಗುವಿಗೆ ಶಿವರಾಮ ಕಾರಂತರು ಸರಳವಾದ ಒಂದು ಪ್ರಶ್ನೆ ಕೇಳಿದರು. "ನೋಡು ಮಗು, ಹೊರಗಡೆ ಮರದ ಮೇಲೆ ಎಲೆಗಳು ಕಾಣಿಸುತ್ತಿವೆಯಲ್ಲ.... ಆ ಎಲೆಗಳ ಬಣ್ಣ ಯಾವುದು"- ಎಂಬುದು ಶಿವರಾಮ ಕಾರಂತರ ಪ್ರಶ್ನೆ.
ಅದಕ್ಕೆ ಮಗು ಕೊಟ್ಟ ಉತ್ತರ... "ತಾತ ಎಲೆಯ ಬಣ್ಣ ಹಸಿರು". ಉತ್ತರವನ್ನು ಕೇಳಿದ ಶಿವರಾಮ ಕಾರಂತರು ಆ ಮಗುವಿಗೆ ತಿರುಗಿ ಒಂದು ಪ್ರಶ್ನೆ ಕೇಳುತ್ತಾರೆ, "ನಿನಗೆ ಬಾಲ್ಯದಲ್ಲಿ ನಿನ್ನ ಅಮ್ಮ, ನಿನ್ನ ಶಾಲೆಯ ಟೀಚರ್ ಎಲೆಯ ಬಣ್ಣ ಕೆಂಪು ಎಂದು ಹೇಳಿಕೊಟ್ಟಿದ್ದರೆ ಎಲೆಯ ಬಣ್ಣ ಯಾವುದು ಇರುತ್ತಿತ್ತು". ಆವಾಗ ಎಲ್ಲರ ಹಾಗೆ ಮಗುಕೊಟ್ಟ ಉತ್ತರ "ಎಲೆಯ ಬಣ್ಣ ಕೆಂಪು ಇರುತ್ತಿತ್ತು" ಎಂದು.
ಶಿವರಾಮ ಕಾರಂತರು ತಿರುಗಿ ಮಗುವಿಗೆ ಮತ್ತೊಂದು ಪ್ರಶ್ನೆ ಕೇಳುತ್ತಾರೆ. "ಹಾಗಾದರೆ ಎಲೆಯ ಬಣ್ಣ ಇರುವುದು ನಿನ್ನ ಮನಸ್ಸಿನಲ್ಲಿಯಾ? ಕಣ್ಣಿನಲ್ಲಿಯಾ? ಎಲೆಯಲ್ಲಿಯಾ?".
ಮಕ್ಕಳೇ, ಬಣ್ಣ, ಆಕಾರ, ರೂಪ ಎಲ್ಲವೂ ನಮಗೆ ಹೇಳಿಕೊಟ್ಟವುಗಳು. ಅವೆಲ್ಲನ್ನು ನಾವು ಭಾಷೆಯ ಮೂಲಕ ನಮ್ಮ ನಂತರದ ತಲೆಮಾರಿಗೆ ಶಬ್ದಗಳಾಗಿ ಮಾತುಗಳ ಮೂಲಕ ತಲುಪಿಸುತ್ತೇವೆ. ಶಬ್ದಗಳು ಮುಂದೆ ಶಾಶ್ವತ ಅರ್ಥಗಳನ್ನು ಪಡೆದು ಚಲಾವಣೆಯಲ್ಲಿ ಉಳಿಯುತ್ತವೆ. ನೋಡುವುದು, ಗ್ರಹಿಸುವುದು, ಪಾಲಿಸುವುದು, ಅನುಭವಿಸುವುದು- ಇವೆಲ್ಲವೂ ಜ್ಞಾನವನ್ನು ಹೆಚ್ಚಿಸುವ ; ಇನ್ನೊಬ್ಬರಿಗೆ ಹಂಚುವ ವಿಧಾನಗಳು. ಶಿವರಾಮ ಕಾರಂತರು ಹೀಗೆ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳುವುದಕ್ಕೆ ತರಗತಿಯ ಕೊಠಡಿಗಳಲ್ಲಿ ಉಳಿಯಲಿಲ್ಲ. ಗೋಡೆಗಳಿಲ್ಲದ ಲೋಕ ವಿಶ್ವವಿದ್ಯಾನಿಲಯದಲ್ಲಿ ಅವರು ಹೆಚ್ಚು ಹೆಚ್ಚು ಕಲಿತರು. ಮಕ್ಕಳೇ ಹೊರಗಡೆ ಕಾಣಿಸುವ, ಸ್ಪರ್ಶಕ್ಕೆ ಲಭ್ಯವಾಗುವ ವಸ್ತುದರ್ಶನಗಳಿಂದ ನಮಗೆ ಸಿಗುವ ಜ್ಞಾನ ಅಪರಿಮಿತವಾದದ್ದು. ಬಾಲ್ಯದಲ್ಲಿ ಶಾಲೆಗೆ ಪ್ರತಿನಿತ್ಯ ನಾನು 4-5 ಮೈಲು ನಡೆದೇ ಹೋಗುತ್ತಿದ್ದೆ. ಶಾಲೆಯ ದಾರಿ ಬೆಟ್ಟ-ಗುಡ್ಡ , ಹೊಳೆ- ನದಿ - ಕಣಿ ; ಕಾಡಾಡಿ -ಬಾನಾಡಿಗಳು ನನಗೆ ಅರಿವಿನ ಪರಿಕರಗಳಾಗುತ್ತಿತ್ತು. ಚಿಟ್ಟೆ ಹಿಡಿದು ಅವುಗಳ ರೆಕ್ಕೆಯ ಬಣ್ಣ ಬೆರಳಿಗೆ ಆಂಟಿದಾಗ ಅವುಗಳನ್ನು ಎಷ್ಟೋ ಹೊತ್ತು ಬೆರಗಿನಿಂದ ಗಮನಿಸುತ್ತಿದ್ದೆವು. ಚಿಟ್ಟೆಯ ಬಾಲ ಮುರಿದು ಅದಕ್ಕೆ ಕೇಪುಳದ ಹೂವು ಸಿಕ್ಕಿಸಿ ಹಾರಲು ಬಿಡುತ್ತಿದ್ದೆವು. ಸಂಕದ ಕೆಳಗಡೆ ಇಳಿದು ನೀರಾಟವಾಡುತ್ತಿದ್ದೆವು. ಶಾಲೆಯ ಹಾದಿಯಲ್ಲಿ ಕಾಡು ಕಾಯಿಗಳನ್ನು ತಿನ್ನುತ್ತಿದ್ದೆವು. ಮರಳಿನಲ್ಲಿ ಆಟ ಆಡುತ್ತಿದ್ದೆವು. ಮೀನು ಹಿಡಿಯುತ್ತಿದ್ದೆವು. ಆದರೆ ಇವತ್ತು ನಮ್ಮ ಮಕ್ಕಳು ಕೋಳಿಗೂಡಿನ ತರಹದ ಆಟೋದಲ್ಲಿ ಶಾಲೆಗೆ ಹೋಗಿ ಅಲ್ಲಿ ಮೇಷ್ಟ್ರು ಹೇಳುವ ಪುಸ್ತಕದ ವಿಷಯವನ್ನಷ್ಟೇ ಕಲಿಯುತ್ತಿದ್ದಾರೆ. ನಿಜವಾದ ಶಿಕ್ಷಣ ಪ್ರಕೃತಿಯ ಅನುಭವದಿಂದ ಮಾತ್ರ ಸಾಧ್ಯ ಎಂಬ ಅರಿವು ನಮ್ಮ ಮಕ್ಕಳಿಗೆ ಸಿಗುತ್ತಿಲ್ಲ ಎನ್ನುವುದು ಅತ್ಯಂತ ನೋವಿನ ಸಂಗತಿ.
ಮಕ್ಕಳೇ ಈ ನಿಸರ್ಗದಲ್ಲಿ ಒಂದು ಇರುವೆ , ಒಂದು ಕೋಗಿಲೆ, ಒಂದು ಗುಲಾಬಿ ಹೂವು , ಒಂದು ಜಿಂಕೆಮರಿಯಷ್ಟೇ ನಮ್ಮ ಪಾತ್ರ. ಈ ಅರಿವಾದಾಗ ಮಾತ್ರ ನಾವು ಸುರಕ್ಷಿತವಾಗಿ ಉಳಿಯಲು ಸಾಧ್ಯ. ವಂದನೆಗಳು...
...................................ಡಾ. ನರೇಂದ್ರ ರೈ ದೇರ್ಲ
ಉಪನ್ಯಾಸಕರು ಹಾಗೂ ಖ್ಯಾತ ಸಾಹಿತಿಗಳು
ಪುತ್ತೂರು , ದಕ್ಷಿಣ ಕನ್ನಡ ಜಿಲ್ಲೆ
**********************************************