-->
ಪದಗಳ ಆಟ ಭಾವ ಚಿತ್ರ ಪಾತ್ರ ಸಂಚಿಕೆ - 17

ಪದಗಳ ಆಟ ಭಾವ ಚಿತ್ರ ಪಾತ್ರ ಸಂಚಿಕೆ - 17

ಪದಗಳ ಆಟ
ಭಾವಚಿತ್ರ
ಪಾತ್ರ
ಸಂಚಿಕೆ - 17

                ಆತ ಜಗವೆಲ್ಲ ನಕ್ಕು ನಗಿಸಿದ..
         ತನ್ನ ಒಳಗಿನ ಕಣ್ಣೀರು ಕಾಣದಿರಲು 
                 ಮಳೆಗೆ ನೆನೆ ನೆನೆದು ಅತ್ತ.
             ಒಬ್ಬಾಕೆ ಅನಾಥೆಗೆ ತನ್ನ ತಾಯ್ತನವೇ ಅಪರಾಧವಾಯಿತು. ಮಗುವನ್ನು ಹೆತ್ತ ಮೇಲೆ ಆಸ್ಪತ್ರೆಯಿಂದ ಹೊರಗೆ ಹಾಕಿದರು. ಆಕೆ ಹಾಲು ಹಸುಳೆಯನ್ನು ಹಿಡಿದುಕೊಂಡು ಅನಾಥಪ್ರಜ್ಞೆಯಿಂದ ಅಧೀರಳಾದಳು. ಕಿಂಕರ್ತವ್ಯ ಮೂಢಳಾಗಿ ಮಗುವನ್ನು ಒಂದು ವಾಹನದ ಸೀಟಿನಲ್ಲಿಟ್ಟು ಮರೆಯಾದಳು. ವಾಹನದವರು ಮಗು ಸೀಟಿನಲ್ಲಿ ಅಳುವುದನ್ನು ಕಂಡು ಎತ್ತಿ ಕಸದ ತೊಟ್ಟಿಯ ಬಳಿ ಬಿಟ್ಟು ಹೋದರು. ಅಲ್ಲಿಗೆ ಬಂದ ನಮ್ಮ ನಟ ಬೆಳಗಿನ ನಡಿಗೆಯ ಸಂದರ್ಭ ಬೆಳ್ಳಂಬೆಳಗ್ಗೆ ಅನೇಕರು ಮಹಡಿಯಿಂದಲೇ ಕಸ ಎಸೆಯುತ್ತಾ ಇರುತ್ತಾರೆ. ಅದು ಅವನ ಮೇಲೆ ಬೀಳುವುದನ್ನು ತಪ್ಪಿಸಿಕೊಳ್ಳುತ್ತಾ ಹೋಗುವಾಗ ಅಳುವ ಹಸುಳೆಯನ್ನು ನೋಡಿ ಎತ್ತಿಕೊಳ್ಳುತ್ತಾನೆ. 
 ಅದು ಕಸ ಒಯ್ಯುವ ಕೆಲಸದಾಕೆಯದು ಎಂದು ಭಾವಿಸಿ ಅವಳ ಗಾಡಿಯಲ್ಲಿ ಇಡುತ್ತಾನೆ. ಅವಳು ತನ್ನದಲ್ಲ ಎನ್ನುತ್ತಾಳೆ. ಕೊನೆಗೆ ತಾನೇ ಹಸುಳೆಯನ್ನು ಒಯ್ದು ತಾನೇ ತಾಯಿ ತಂದೆಯಾಗಿ ಬೆಳೆಸುತ್ತಾನೆ. ಇಲ್ಲಿ ಬರುವ ಅಷ್ಟೂ ವಿನೋದದ ದೃಶ್ಯಗಳು ಎಂದೂ ಅಸಂಗತ, ಅಸಂಬದ್ಧ ಎನಿಸುವುದಿಲ್ಲ. 
      ಅಲ್ಲಿ ಮುಂಜಾನೆಯ ವಾಕ್ ನಲ್ಲಿದ್ದವ ಪ್ರಸಿದ್ಧ ಕಾಮಿಡಿ ನಟ. ಅವನ ನಡಿಗೆ ಮುಖಭಾವ ವೇಷಭೂಷಣ ಎಲ್ಲವೂ ಅಸಾಮಾನ್ಯ ವಿಚಿತ್ರ. ಆದರೆ ವಿಶಿಷ್ಟ ಅನನ್ಯ. ಪ್ರತಿಕ್ಷಣವೂ ನಕ್ಕುನಗಿಸುವ ಹಾವಭಾವಗಳ ಪಾತ್ರವನ್ನು ಸುಮಾರು 75 ವರ್ಷಗಳ ವೃತ್ತಿಜೀವನದಲ್ಲಿ ಸರ್ವೋತ್ಕೃಷ್ಟವಾಗಿ ನಿರ್ವಹಿಸಿದ ಈ ಮೇರುನಟ ಮೂಕಿ ಚಲನಚಿತ್ರಗಳ ಸಂದರ್ಭದಲ್ಲಿ ಜಾಗತಿಕ ಐಕಾನ್ ಆಗಿ ಅನನ್ಯ ಸ್ಕ್ರೀನ್ ಪರ್ಸನಾಲಿಟಿಯಾಗಿ ಚಲನಚಿತ್ರ ಉದ್ಯಮದಲ್ಲಿ ಚರಿತ್ರೆಯನ್ನು ನಿರ್ಮಾಣಮಾಡಿದ ದೈತ್ಯಪ್ರತಿಭೆ. 
       ಬನ್ನ ಬವಣೆಗಳೊಂದಿಗೆ, ನೋವಿನೊಂದಿಗೆ, ಸಂಕಟ ದೊಂದಿಗೆ ಆಟವಾಡುತ್ತಲೇ ಜಗತ್ತನ್ನೇ ನಗಿಸಿದವನು. ನಗೆಗಡಲಲ್ಲಿ ತೇಲಿಸುತ್ತಲೇ ವಿಡಂಬನೆಯ ಸ್ಪರ್ಶ ಕೊಟ್ಟವನು. ತನ್ನ ನಿಜ ಜೀವನದಲ್ಲಿ ಅತ್ಯಂತ ಬಡತನ ದಾರಿದ್ರ್ಯವನ್ನು ಅನುಭವಿಸಿದ. ತಂದೆ ಇರಲಿಲ್ಲ. ತಾಯಿ ಬಡತನದಲ್ಲಿ ಬೆಂದು ಕೊನೆಗೆ ಮಾನಸಿಕ ರೋಗಿಯಾಗಿ ಆಶ್ರಮ ಸೇರಿದಳು. ಈತ ಚಿಕ್ಕ ವಯಸ್ಸಲ್ಲೇ ಮ್ಯೂಸಿಕ್ ಹಾಲಿನಲ್ಲಿ ಕೆಲಸಕ್ಕೆ ಸೇರಿಕೊಂಡ. ತನ್ನ ಐದನೇ ವಯಸ್ಸಿನಲ್ಲೇ ಪ್ಯಾಂಟೋ ಮೈಮ್ ತಂಡದೊಂದಿಗೆ ಪ್ರದರ್ಶನ ನೀಡಲಾರಂಭಿಸಿದ. ತನ್ನ ಅದ್ಭುತ ನಟನೆಯಿಂದಾಗಿ ಪ್ರತಿಷ್ಠಿತ ಫ್ರೆಂಡ್ ಕಾರ್ನೋ ಕಂಪನಿಯಲ್ಲಿ ಕೆಲಸ ಗಿಟ್ಟಿಸಿಕೊಂಡ. ಟ್ರಾಂಪ್ ಪರ್ಸನ್ ಆಗಿ ಅಭಿನಯಿಸುತ್ತಾ ಬೆಸ್ಟ್ ಪ್ಯಾಂಟೋ ಮೈಮಿಸ್ಟ್ ಆಗಿ ಹೊರಹೊಮ್ಮಿದ. ದೊಡ್ಡ ಅಭಿಮಾನಿಗಳ ಬಳಗವನ್ನು ಗಳಿಸಿದ. ಹದಿಮೂರನೇ ವಯಸ್ಸಿಗೆ ಶಿಕ್ಷಣವನ್ನು ತೊರೆದ. ತಾನೇ ಚಿತ್ರಕಥೆ ಬರೆದು ನಿರ್ದೇಶಿಸಿದ ಆತನ ಮೊದಲ ಚಿತ್ರ "ದ ಕಿಡ್"
       ಎಲ್ಲವೂ ವಿರೋಧಾಭಾಸವಾಗಿರುವಂತೆ ಬ್ಯಾಗಿ ಪ್ಯಾಂಟ್, ಟೈಟ್ ಕೋಟ್, ದೊಡ್ಡ ಶೂ ಚಿಕ್ಕ ಮೀಸೆ ಇರುವಂತಹ ಪಾತ್ರ ಸೃಷ್ಟಿ ಮಾಡಿದ. ಅದಕ್ಕೆ ಅಪಾರ ಜನಪ್ರಿಯತೆ ಬಂತು. ಕೊನೆಗೆ ಅದೇ ಪಾತ್ರ ಆತನಿಗೆ ಸ್ಥಿರವಾಯಿತು. ಕುಡುಕ, ವೇಟರ್, ಉಗ್ರಾಣ ಗುಮಾಸ್ತ, ಭಗ್ನಪ್ರೇಮಿಯಾಗಿ ಪಾತ್ರಗಳನ್ನು ನಿರ್ವಹಿಸಿದ. ಅಲೆಮಾರಿಯಾಗಿ, ತಿರುಕನಾಗಿ ಆತನ ವಿಚಿತ್ರ ಪಾತ್ರಪೋಷಣೆ ಸಾರ್ವತ್ರಿಕ ಪ್ರಶಂಸೆಗೆ ಭಾಜನವಾಯಿತು. ವೀಕ್ಷಕರು ಅವನ ತುಂಟತನ, ಆಡಂಬರ ಡೌಲು, ಆಟಾಟೋಪ, ಥಳಕು ಬಳಕುಗಳ ಅಭೂತಪೂರ್ವ ನಟನೆಗೆ ಮಾರುಹೋದರು. ಕಾತರ, ಹಂಬಲ, ಚಾಪಲ್ಯ ವಿಷಾದ ಈ ಎಲ್ಲವುಗಳ ರಸಕವಳವಾಗಿದ್ದ ಆತನ ಚಿತ್ರಗಳು ಮನುಕುಲದ ಅನಾಗರಿಕತೆ, ಅಸಂಸ್ಕೃತ ವರ್ತನೆ, ಬರ್ಬರತೆ, ಉಗ್ರತೆ ಕ್ರೌರ್ಯಗಳನ್ನು ಹಾಸ್ಯದ ಲೇಪದೊಂದಿಗೆ ಪ್ರಸ್ತುತ ಪಡಿಸಿದ ರೀತಿ ವಿಶಿಷ್ಟವಾಗಿತ್ತು. ವ್ಯಂಗ್ಯಚಿತ್ರ ಒಂದು ಪಾತ್ರವಾಗಿ ಜನಮನದಲ್ಲಿ ಶಾಶ್ವತವಾಗಿ ಬೇರೂರಿತು. ಒಂದು ಚಿತ್ರದಲ್ಲಿ ಜೀವಂತ ಉಳಿಯಲಿಕ್ಕಾಗಿ ಶೂ ವನ್ನು ತಿನ್ನುವ ಪ್ರಸಂಗ ಚಿತ್ರದ ಶ್ರೀಮಂತ ಹಾಸ್ಯ ಮತ್ತು ವಿಷಣ್ಣತೆಯ ಸಮ್ಮಿಶ್ರವಾಗಿದೆ. ಮಾರ್ಡನ್ ಟೈಮ್ಸ್ ಮೂಕಿ ಚಿತ್ರಕ್ಕೆ ಪರಿಣಾಮಕಾರಿ ಸಂಗೀತ ಹೊಸೆದ, ತಿರುಕನಿಗೆ ಧ್ವನಿ ಇತ್ತ. ಅನಾಮಿಕ ಕಾರ್ಮಿಕನಾಗಿ ಈತ ಮಾಡುವ ಅಬೌದ್ಧಿಕ ಕ್ರಿಯೆಗಳು -ಬೋಲ್ಟ್, ನಟ್ ಬಿಗಿ ಮಾಡುವುದು, ಜಗ್ಲಿಂಗ್ ತರ ಇಟ್ಟಿಗೆ ಪೇರಿಸುವುದು, ರಶ್ ರೈಲಿಗೆ ಹತ್ತಲಾಗದೆ ಯಾವುದೋ ಗಾಡಿ ಅಂಗಡಿಗೆ ಹತ್ತಿ ನೇತಾಡಿಸಿದ ಬದನೆಯನ್ನು ಹಿಡಿದು ರೈಲಿನಲ್ಲಿ ನಿಂತಂತೆ ಹಾಸ್ಯಮಯವಾಗಿ ಅಲುಗಾಡುತ್ತಾ ಇರುವುದು,... ಮುಂತಾದ ಅನೇಕ ಹಾಸ್ಯಮಯ ಸನ್ನಿವೇಶಗಳು ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತವೆ. ಇದು ಹಾಲಿವುಡ್ ನ ಕೊನೆಯ ಮೂಕಿಚಿತ್ರವಾದರೂ ಬಿದ್ದು ಬಿದ್ದು ನಗುವ ಹಾಸ್ಯಕ್ಕಾಗಿ ಅದನ್ನು ನೋಡಲು ಜನ ಮುಗಿಬೀಳುತ್ತಿದ್ದರು. 
      ಆತನ *ಲೈಮ್ ಲೈಟ್* ಎಂಬ ಚಿತ್ರದಲ್ಲಿ ಟೆರ್ರಿ ಎಂಬ ಬ್ಯಾಲೆ ನೃತ್ಯಗಾತಿಯನ್ನು ದುರಂತದಿಂದ ರಕ್ಷಿಸಿ ಆಕೆಗೆ ವಸತಿ, ಪ್ರೋತ್ಸಾಹ ಇತ್ತು ತನ್ನ ಜೀವನದ ಭದ್ರತೆಯನ್ನು ಕಡೆಗಣಿಸಿ ಆಕೆಯ ವೃತ್ತಿ ಜೀವನದ ಉತ್ತುಂಗಕ್ಕೆ, ಉತ್ಥಾನಕ್ಕೆ ತಲುಪಲು ಸಹಾಯ ಮಾಡುತ್ತಾನೆ. ಇದಕ್ಕೆ ಆಸ್ಕರ್ ಪ್ರಶಸ್ತಿಯ ಅಲಂಕಾರ. ಆತ ಆಸ್ಕರ್ ಪ್ರಶಸ್ತಿ ಪಡೆಯುವಾಗ ಹನ್ನೆರಡು ನಿಮಿಷಗಳ ನಿಂತ ಗೌರವ ಸಿಗುತ್ತದೆ. ಅಷ್ಟು ಕರತಾಡನ, ಮೆಚ್ಚುಗೆ, ನಲ್ಬರವು, ಹರ್ಷ ಧ್ವನಿ, ಅಮಿತೋತ್ಸಾಹ ಮತ್ತ್ಯಾರಿಗೂ ಸಿಕ್ಕಿಲ್ಲ. 
    ಮೂಕಿಚಿತ್ರಗಳ ಸಾಮ್ರಾಟ ನಟ ಸಾರ್ವಭೌಮನ ಪ್ರಕಾರ ಜೀವನವೇ ಒಂದು ನಾಟಕ. ಪ್ರಯೋಗಕ್ಕೆ ಅವಕಾಶ ಇಲ್ಲ. ಹಾಗಾಗಿ ಹಾಡು, ಅಳು, ಕುಣಿ , ನಗು. ಪರದೆ ಸರಿಯುವ ಮುನ್ನ ಇರುವಂತೆ ಬದುಕು ಎಂದ. ಗೆಲುವಿಗಿಂತ ಸೋಲಿನಲ್ಲೇ ಹೆಚ್ಚು ಪಾಠ ಕಲಿತ. ಜಗತ್ತಿಗೆ ನಗುವನ್ನು ಹಂಚಿ ನಗಲು ಕಲಿಸಿದ. 
        ನಗುವು ಸಹಜದ ಧರ್ಮ
        ನಗಿಸುವುದು ಪರಧರ್ಮ. 
ಇಂಥವರು ನಿಮ್ಮೊಳಗಿಲ್ಲವೇ .................?
....................................................ಸುಮಾಡ್ಕರ್
ಸ್ವರೂಪ ಅಧ್ಯಯನ ಸಂಸ್ಥೆ 
ಮಂಗಳೂರು
Mob: +91 99016 38372
**********************************************

Ads on article

Advertise in articles 1

advertising articles 2

Advertise under the article