-->
ಋಣಾತ್ಮಕತೆಯ ಮೂಲ : ದುರಾಸೆ

ಋಣಾತ್ಮಕತೆಯ ಮೂಲ : ದುರಾಸೆ

ಜೀವನ ಸಂಭ್ರಮ : ಸಂಚಿಕೆ -9
          

        ಮಕ್ಕಳೇ, ಈ ಘಟನೆಯನ್ನು ಓದಿ. ಒಂದು ಊರಿನಲ್ಲಿ ಮರಗೆಲಸ ಮಾಡುವ ಮತ್ತು ಪೌರಾಣಿಕ ನಾಟಕ ಕಲಿಸುವ ಮಾಸ್ಟರ್ ಪುಟ್ಟಸ್ವಾಮಿ ಇದ್ದರು. ಅವರಿಗೆ ನಾಲ್ಕು ಜನ ಮಕ್ಕಳು. ಮೊದಲನೆಯವ ರಮೇಶ ಚೆನ್ನಾಗಿ ಓದಿ ಸರ್ಕಾರಿ ಅಧಿಕಾರಿಯಾಗಿದ್ದ. ಎರಡನೆಯವಳು ಮಗಳು , ರತ್ನಮ್ಮ ಇವಳನ್ನು ವಿವಾಹ ಮಾಡಿಕೊಡಲಾಗಿತ್ತು. ಇನ್ನುಳಿದಂತೆ ಇಬ್ಬರು ಗಂಡು ಮಕ್ಕಳು ಮಹೇಶ ಮತ್ತು ಸತೀಶ. ಹಿರಿಯ ಮಗ ಅಧಿಕಾರಿಯಾದುದರಿಂದ ತನ್ನ ತಮ್ಮಂದಿರನ್ನು ಓದಿಸಲು ಪ್ರಯತ್ನಪಟ್ಟು ವಿಫಲನಾದನು. ಹೀಗಿರಬೇಕಾದರೆ ಹಿರಿಯ ಮಗ ನಗರದಲ್ಲಿ ವಾಸಿಸುತಾ ಇದ್ದುದರಿಂದ ತನ್ನ ಇಬ್ಬರು ತಮ್ಮಂದಿರಿಗೆ ಡ್ರೈವಿಂಗ್ ಲೈಸೆನ್ಸ್ ಮಾಡಿಸಿ ಕೊಟ್ಟಿದ್ದನು. ಮೊದಲನೇ ತಮ್ಮನಿಗೆ ಒಂದು ಆಟೋ ವನ್ನು ತೆಗೆದುಕೊಟ್ಟು , ಸ್ವತಂತ್ರವಾಗಿ ದುಡಿಯುಲು ಸಹಾಯ ಮಾಡಬೇಕಾದರೆ , ಊರಿನ ಮನೆಯಲ್ಲಿದ್ದ 98 ವರ್ಷದ ಅಜ್ಜಿ ವಯೋಸಹಜ ಕಾರಣದಿಂದ ಮರಣಹೊಂದುತ್ತಾಳೆ. 
         "ಮರಣ ಹೊಂದಿದ ಒಂದು ವರ್ಷದಲ್ಲಿ ಶುಭಕಾರ್ಯ ಮಾಡದಿದ್ದರೆ ಮೂರು ವರ್ಷ ಶುಭ ಕಾರ್ಯ ಮಾಡಲು ಆಗುವುದಿಲ್ಲ." ಎಂಬುದಾಗಿ ಸ್ನೇಹಿತರು , ಮಾಸ್ಟರ್ ಪುಟ್ಟಸ್ವಾಮಿಗೆ ಹೇಳುತ್ತಾರೆ. ಅದೇ ಸಮಯಕ್ಕೆ ಮಾಸ್ಟರ್ ದೂರದ ಸಂಬಂಧಿಕರ ಮನೆಗೆ ಹಬ್ಬಕ್ಕೆ ಹೋಗುತ್ತಾರೆ. ಅವರ ತೋಟ ಮತ್ತು ಆತಿಥ್ಯಕ್ಕೆ ಮನಸೋತು, ಅವರ ಮನೆಯ ಮೊಮ್ಮಗಳನ್ನು ಮನೆಗೆ ಸೊಸೆ ಮಾಡಿಕೊಳ್ಳುವುದಾಗಿ ವಾಗ್ದಾನ ಮಾಡುತ್ತಾರೆ. ಆ ಹೆಣ್ಣು ಮಗುವಿನ ಹೆಸರು ಸುಮಿತ 9ನೇ ತರಗತಿ ಓದುತ್ತಿದ್ದಳು. ಈ ವಿಚಾರ ಹಿರಿಯ ಮಗನಿಗೆ ತಿಳಿದು ಇದು ಬಾಲ್ಯ ವಿವಾಹ ವಾಗುತ್ತದೆ ಹಾಗಾಗಿ ಇದು ಬೇಡ ಎಂದು ಅಸಮ್ಮತಿ ವ್ಯಕ್ತಪಡಿಸುತ್ತಾನೆ. ಆದರೆ ತಂದೆ ಇದನ್ನು ಸ್ವಾಭಿಮಾನವಾಗಿ ತೆಗೆದುಕೊಂಡು ವಿವಾಹಕ್ಕೆ ತಯಾರು ಮಾಡುತ್ತಾರೆ. ಹಿರಿಯ ಮಗ ವಿಧಿಯಿಲ್ಲದೆ ಒಲ್ಲದ ಮನಸ್ಸಿನಿಂದ ತನ್ನ ಎರಡನೇ ತಮ್ಮನ ಮದುವೆಯಲ್ಲಿ ಭಾಗಿಯಾಗುತ್ತಾನೆ. 
        ಮದುವೆಯ ನಂತರ ಸುಮಿತಾಳನ್ನು ಶಾಲೆಯಲ್ಲಿ ಓದಲು ವ್ಯವಸ್ಥೆ ಮಾಡಿಕೊಡುತ್ತಾರೆ. ಆಕೆ ಎಸ್. ಎಸ್.ಎಲ್. ಸಿ. ಪಾಸ್ ಆಗುತ್ತಾಳೆ. ಹೀಗಿರಬೇಕಾದರೆ ಆ ಊರಿನ ಅಂಗನವಾಡಿಯಲ್ಲಿ ಖಾಲಿ ಇದ್ದ ಶಿಕ್ಷಕರ ಹುದ್ದೆಗೆ ಸುಮಿತಾಳನ್ನು ಆಯ್ಕೆ ಮಾಡುತ್ತಾರೆ. ಆದರೆ ಆಕೆ ದುರಾಸೆ ಬುದ್ಧಿಯವಳು. ತನ್ನ ದುರಾಸೆಯಿಂದಾಗಿ ಒಟ್ಟು ಕುಟುಂಬದಿಂದ ಪ್ರತ್ಯೇಕ ವಾಸಮಾಡಲು ತನ್ನ ಗಂಡನಿಗೆ ಒತ್ತಡ ಹಾಕುತ್ತಿದ್ದಳು. ಆ ಸಮಯದಲ್ಲಿ ಆಕೆಗೆ ಒಂದು ಗಂಡು ಮಗು ಕೂಡಾ ಜನಿಸುತ್ತದೆ.
       ಸರಕಾರಿ ಅಧಿಕಾರಿಯಾಗಿದ್ದ ಹಿರಿಯ ಭಾವ ಮತ್ತು ಅವರ ಕುಟುಂಬ ಊರಿಗೆ ಬಂದಾಗ ಅವರನ್ನು ಕಂಡು ಮತ್ಸರ ಪಡುತ್ತಿದ್ದಳು. ಆಕೆಯ ಮುಖದಲ್ಲಿ, ನಡುವಳಿಕೆಯಲ್ಲಿ ಎದ್ದುಕಾಣುತ್ತಿತ್ತು. ಅವರು ಏನೇ ಖರೀದಿಸಿದರೂ ತನಗೂ ಅಂತಹುದೇ ಬೇಕೆಂದು ಹಠ ಮಾಡುತ್ತಿದ್ದಳು. ಪ್ರತಿ ಬಾರಿಯೂ ಪ್ರತ್ಯೇಕ ಮನೆ ಮಾಡಿ ವಾಸವಾಗೋಣವೆಂದು ಒತ್ತಾಯಿಸುತ್ತಿದ್ದಳು. ಆದರೆ ಆಕೆಯ ಗಂಡ ಮತ್ತು ಮಗು ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ಒಟ್ಟು ಕುಟುಂಬದಲ್ಲಿ ಇರಲು ಪ್ರಯತ್ನಪಡುತ್ತಿದ್ದರು. ಸುಮಿತಾ ಮಾತ್ರ ತನ್ನ ಮನದ ದುರಾಸೆ ದುಗುಡವನ್ನು ಬೇರೆಯವರೊಂದಿಗೆ ಹೇಳಿ, ಕುಟುಂಬದ ವಿರುದ್ಧ ಎತ್ತಿಕಟ್ಟಲು ಪ್ರಯತ್ನಿಸುತ್ತಿದ್ದಳು. ಮನೆಯವರ ನಡುವೆ ಮನಸ್ತಾಪಗಳು ಬರಲು ಏನೇನು ಬೇಕೋ.... ಅದನ್ನೆಲ್ಲ ಮಾಡುತ್ತಿದ್ದಳು. ಆದರೆ ಮನೆಯ ಗಂಡು ಮಕ್ಕಳಲ್ಲಿ ಒಗ್ಗಟ್ಟು ಇದ್ದುದರಿಂದ ಆಕೆಯ ಪ್ರಯತ್ನ ವಿಫಲವಾಗುತ್ತಿತ್ತು. ಆಕೆಯ ಗುಣದಿಂದ ಗಂಡ ಮತ್ತು ಮಗನಿಗೆ ನೆಮ್ಮದಿಯಾಗಿರಲು ಸಾಧ್ಯವಾಗುತ್ತಿರಲಿಲ್ಲ. ಪದೇಪದೇ ಘರ್ಷಣೆ, ಜಗಳ ಆ ಮನೆಯಲ್ಲಿ ಸಾಮಾನ್ಯವಾಗಿತ್ತು. ತಾನು ನೆಮ್ಮದಿಯಲ್ಲಿಲ್ಲದೆ ತನ್ನ ಕುಟುಂಬದ ನೆಮ್ಮದಿಯನ್ನೂ ಹಾಳು ಮಾಡುತ್ತಿದ್ದಳು.     
            ಹಾಗಾದರೆ ಈ ಘಟನೆಯಿಂದ ನಾವು ತಿಳಿಯಬೇಕಾದುದೇನು.... ? ಈ ಋಣಾತ್ಮಕ ಗುಣಗಳು ಬಾರದಂತಿರಬೇಕಾದರೆ ಆಸೆಗೆ ಮಿತಿ ಹಾಕಿಕೊಂಡು ಇರುವುದರಲ್ಲಿ ಹೇಗೆ ಸಂತೃಪ್ತವಾಗಿ ಬಾಳಬೇಕೆಂದು ಯೋಚಿಸಬೇಕು. ಈ ಋಣಾತ್ಮಕ ಗುಣಗಳನ್ನು ತಡೆಯುವ ಗುಣ ಕೇವಲ ಸರಳ ಪ್ರೀತಿ. ಯಾವ ವ್ಯಕ್ತಿ ಪ್ರತಿಯೊಂದನ್ನು ಪ್ರೀತಿಸುತ್ತಾನೋ ಆತನಿಗೆ ಎಂದೂ ಋಣಾತ್ಮಕ ಗುಣ ಬರುವುದಿಲ್ಲ. ಎಲ್ಲರೂ ಸಂತೋಷದಿಂದ ಇರಬೇಕಾದರೆ ಸಂತೃಪ್ತ ಜೀವನ ಮುಖ್ಯ. ಹಾಸಿಗೆ ಇದ್ದಷ್ಟು ಕಾಲು ಚಾಚು ಎಂಬ ನಾಣ್ಣುಡಿಯಂತೆ, ನಮ್ಮ ಗಳಿಕೆಗೆ ತಕ್ಕಂತೆ ನಮ್ಮ ಯೋಜನೆ ರೂಪಿಸಿಕೊಳ್ಳಬೇಕು. ನಮ್ಮ ಆದಾಯದ ಮಿತಿಯಲ್ಲಿ ಸಂತೃಪ್ತ ಬದುಕನ್ನು ರೂಪಿಸಿಕೊಳ್ಳಬೇಕು. ಬೇರೆಯವರೊಂದಿಗೆ ಹೋಲಿಸಿಕೊಳ್ಳಬಾರದು. ನಮಗೆ ನಾವೇ ಹೋಲಿಕೆ ಮಾಡಿಕೊಳ್ಳಬೇಕು. ನಿನ್ನೆಗಿಂತ ಇಂದು ಉತ್ತಮವಾಗಲು ಯೋಚಿಸಬೇಕು, ಇಂದಿಗಿಂತ ನಾಳೆ ಉತ್ತಮವಾಗಲು ನಮಗೆ ನಾವೇ ಹೋಲಿಸಿಕೊಳ್ಳಬೇಕು. ಸಂಭ್ರಮದ ಜೀವನಕ್ಕಾಗಿ ಧನಾತ್ಮಕ ಆಲೋಚನೆ ಅಗತ್ಯ. ಹಾಗಾಗಿ ನಾವೆಲ್ಲ ಎಲ್ಲರಲ್ಲೂ ಒಳ್ಳೆಯ ವಿಚಾರಗಳನ್ನು ಕಾಣೋಣ... ಎಲ್ಲರನ್ನು ಪ್ರೀತಿಸುವುದ ಕಲಿಯೋಣ...... ಜೀವನ ಸಂಭ್ರಮ ಪಡೋಣ.
.............................................ಎಂ.ಪಿ. ಜ್ಞಾನೇಶ್ 
ಕ್ಷೇತ್ರ ಶಿಕ್ಷಣಾಧಿಕಾರಿಯವರು
ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
********************************************


Ads on article

Advertise in articles 1

advertising articles 2

Advertise under the article