
ಸ್ಪೂರ್ತಿಯ ಮಾತುಗಳು : ತಾರಾನಾಥ ಸವಣೂರು
Monday, November 22, 2021
Edit
ಕಲಿಕೆಯಲ್ಲಿ ನಿರಂತರತೆ ಮತ್ತು ನಾವೀನ್ಯತೆ
----------------------------------------------
ವಿದ್ಯಾರ್ಥಿಗಳೇ, ಕಲಿಕೆ ಎನ್ನುವುದು ನಿರಂತರವಾದ ಒಂದು ಪ್ರಕ್ರಿಯೆ. ಕಲಿಕೆಗೆ ಬೇಕಾದದ್ದು ನಮ್ಮನ್ನು ನಾವು ಸಂಪೂರ್ಣವಾಗಿ ತೊಡಗಿಸಿಕೊಳ್ಳುವುದೇ ಆಗಿದೆ. ಯಾವುದೇ ಒಂದು ವಿಚಾರವನ್ನು ಕಲಿಯುವಾಗ ಅದರಲ್ಲಿ ಪಕ್ವತೆ ಬೇಕಾಗುತ್ತದೆ. ಉದಾಹರಣೆಗೆ ಸಂಗೀತ, ಸಂಗೀತ ಕಲಿಯುವಾಗ ಸಂಪೂರ್ಣವಾದ ಮಾಹಿತಿ ಇರುವ ಗುರುಗಳೊಂದಿಗೆ ಕಲಿಯುವುದರಿಂದ ನಮ್ಮ ಜ್ಞಾನ ಅಧಿಕೃತವಾಗಿ ಸ್ಥಾಪಿಸಲ್ಪಡುತ್ತದೆ. ನಾವು ಪರಿಪಕ್ವವಾಗದೆ ವೇದಿಕೆಯನ್ನು ಉಪಯೋಗಿಸಿ ಕಲಾವಿದ ಎಂದು ಹೇಳಿಕೊಂಡು ಕಲಿಕೆಯನ್ನು ಮೊಟಕುಗೊಳಿಸಿದರೆ ಸ್ವಂತಿಕೆ ಕಳೆದುಕೊಳ್ಳುತ್ತೇವೆ. ಅಂತೆಯೆ ಚಿತ್ರಕಲೆ, ಯಕ್ಷಗಾನ, ನಾಟಕ, ಸಂಗೀತ ಪರಿಕರಗಳು, ಕರಕುಶಲತೆ ಹೀಗೆ ಬೇರೆ ಬೇರೆ ಸಂಗತಿಗಳನ್ನು ನಾವು ಸ್ಪಷ್ಟವಾಗಿ ತಿಳಿದುಕೊಂಡು ಆ ಬಳಿಕ ಪ್ರದರ್ಶನ ಚಟುವಟಿಕೆಗಳನ್ನು ಮಾಡಿದರೆ ಉತ್ತಮ. ಹಾಗೆಂದು ಪರಿಪೂರ್ಣನಾಗಲು ಯಾರಿಂದಲೂ ಸಾಧ್ಯವಿಲ್ಲ. ಆದರೆ ಕಲಿಕೆಯನ್ನು ಮೊಟಕುಗೊಳಿಸಬಾರದು ಎನ್ನುವುದೇ ನನ್ನ ಅಭಿಮತ.
ಈಗೀಗ ಬಹಳಷ್ಟು ಮಂದಿ ಕಲಾವಿದರು ಅಪೂರ್ಣವಾಗಿ ಕಲಿತು ವೇದಿಕೆಯಲ್ಲಿ ಪ್ರದರ್ಶನ ನೀಡುವುದನ್ನು ಗಮನಿಸಿದ್ದೇವೆ. ಕೇವಲ ವೋಟ್ ಮೂಲಕ ಅವರನ್ನು ಗೆಲ್ಲಿಸುವುದು ಫ್ಯಾಶನ್ ಆಗಿದೆ. ಇನ್ನು ಕೆಲವರು ತುಂಬಾ ವರ್ಷಗಳ ತರಬೇತಿಯನ್ನು ಪಡೆದು ಪ್ರದರ್ಶನ ನೀಡುತ್ತಾರೆ. ಆದರೆ ವಿಮರ್ಶಕ ಯಾರಿಗೆ ಸಂಗೀತ ಜ್ಞಾನ ಇದೆಯೆನ್ನುವುದನ್ನು ಗುರುತಿಸುತ್ತಾನೆ.
ಒಬ್ಬರು ಹಾಡಿದಂತೆ ಇನ್ನೊಬ್ಬರು ಹಾಡುವುದು, ಒಬ್ಬರು ಚಿತ್ರ ಮಾಡಿದಂತೆ ಇನ್ನೊಬ್ಬರು ಮಾಡುವುದು ಸಾಧನೆಯಲ್ಲ , ಅಲ್ಲಿ ಸ್ವಂತಿಕೆ ಇರುವುದಿಲ್ಲ. ನಾವೆಲ್ಲರೂ ಸ್ವಾಭಿಮಾನಿಗಳಾಗಬೇಕು ನಮ್ಮ ಶೈಲಿಯನ್ನು ಸ್ಥಾಪಿಸಬೇಕು ಮತ್ತು ನಾವು ಪರಂಪರೆಗೆ ದಕ್ಕೆಯಾಗದೇ ಬೆಳೆಯಬೇಕು. ಇದು ಸಾಧ್ಯನಾ ? ಖಂಡಿತಾ ಸಾಧ್ಯವಿದೆ. ನಮ್ಮ ಯೋಚನೆಗಳು ಭಿನ್ನವಾಗಿರಬೇಕು ಹಾಗಾದಾಗ ಕಲಿಕೆಯತ್ತ ನಮ್ಮ ಚಿತ್ತ ಹೊರಳುತ್ತದೆ. ನಾವು ಎಲ್ಲಾ ವಿಷಯಗಳಲ್ಲಿ ಆಸಕ್ತಿಯನ್ನು ಬೆಳೆಸಿಕೊಳ್ಳಬೇಕು , ಯಾವುದಾದರೂ ಒಂದು ವಿಷಯದಲ್ಲಿ ಪರಿಪೂರ್ಣತೆ ಸಾಧಿಸಬೇಕು ಅದು ಕ್ರೀಡೆಯಾಗಿರಲಿ, ಸಾಹಿತ್ಯವಾಗಿರಲಿ, ಸಾಂಸ್ಕೃತಿಕವಾಗಿರಲಿ, ವಿಜ್ಞಾನವಾಗಿರಲಿ, ಸಾಮಾಜಿಕವಾಗಿರಲಿ, ರಾಜಕೀಯವಾಗಿರಲಿ, ನಮಗೆ ಆಸಕ್ತಿ ಇಲ್ಲವೆಂದು ಸುಮ್ಮನಿರಬಾರದು. ನಮ್ಮಲ್ಲಿ ಬದ್ಧತೆ ಇದ್ದಾಗ ನಾವು ಖಂಡಿತಾ ಸೃಜನಶೀಲ ವಿದ್ಯಾರ್ಥಿಗಳಾಗಲು ಸಾಧ್ಯ. ನಮ್ಮಲ್ಲಿ ಉತ್ತಮ ಹವ್ಯಾಸಗಳು ಬೆಳೆಯಬೇಕು. ಒಳ್ಳೆಯ ಕೆಲಸ ಮಾಡಿ ಒಳ್ಳೆಯ ಹೆಸರು ಪಡೆಯಬೇಕು. ಅದು ನಮ್ಮ ಯಶಸ್ಸಿನ ಕಥೆಯಾಗಿ ಮುಂದುವರಿಯುತ್ತದೆ.
ಯಶಸ್ಸು ನಮ್ಮ ಕೈಯಲ್ಲಿದೆ. ಸ್ಪರ್ಧೆಯಲ್ಲಿ ನಾವು ಗೆಲ್ಲುವುದಕ್ಕಿಂತಲೂ ಅದ್ಭುತ ಪ್ರದರ್ಶನ ನೀಡಿ ಜನರ ಮನಸ್ಸನ್ನು ಗೆಲ್ಲುವುದು ಮುಖ್ಯವಾಗಬೇಕು. ಎಷ್ಟೋ ಕೆಲಸಗಳು, ಸಂಶೋಧನೆಗಳು ಒಬ್ಬನ ಯೋಚನೆಯಿಂದಾಗಿದೆ. ಆ ಒಬ್ಬ ನಾವ್ಯಾಕೆಯಾಗಬಾರದು? ಒಂದು ಒಳ್ಳೆಯ ಮಾತು ಹೀಗೆ ಹೇಳುತ್ತದೆ , "ಕೆಲಸ ಮಾಡಿ ಸೋತರೆ ಸೋಲಲ್ಲ. ನಾವು ಏನೂ ಕೆಲಸ ಮಾಡದೆ ಸೋತರೆ ಅದು ದೊಡ್ಡ ಸೋಲು." ಜೀವನವನ್ನು ಪ್ರೀತಿಸೋಣ. ನಿಮ್ಮ ಜೀವನೋತ್ಸಾಹ ಸದಾ ಹಸಿರಾಗಿರಲಿ.
.......................................ತಾರಾನಾಥ ಸವಣೂರು
ಮುಖ್ಯ ಶಿಕ್ಷಕರು, ಸ.ಹಿ.ಪ್ರಾ.ಶಾಲೆ ಜಿಡೆಕಲ್ಲು ಪುತ್ತೂರು.
ಪುತ್ತೂರು ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*********************************************