
ಜಗಲಿಯ ಮಕ್ಕಳಿಗೆ ಅಕ್ಕನ ಪತ್ರ - 11
Saturday, November 20, 2021
Edit
ಜಗಲಿಯ ಮಕ್ಕಳಿಗೆ
ಅಕ್ಕನ ಪತ್ರ - 11
ನಮಸ್ತೆ ಮಕ್ಕಳೇ...ಹೇಗಿದ್ದೀರಿ...?
ನೆನಪುಗಳ ಕಾಮನಬಿಲ್ಲಿಗೆ ಮತ್ತೆ ಹೊಸ ರಂಗು ತುಂಬಿದೆ... ಕನಸುಗಳು ರೆಕ್ಕೆ ಬಿಚ್ಚಿ ಕುಣಿದಾಡಿವೆ.. ಮನದ ಮೂಲೆಯಲ್ಲಿ ಬಚ್ಚಿಟ್ಟಿದ್ದ ಸಂತಸದ ಸೆಲೆ ಕಾರಂಜಿಯಾಗಿದೆ.. ಹೌದು.. ಮರೆಯಾದ ಕಲರವ ಮತ್ತೆ ಸದ್ದು ಮಾಡಿದ್ದು... ಶಾಲೆಯಂಗಳ ಮೌನವಾಗಿ ಸಂಭ್ರಮಿಸಿದ್ದು.. ಗೋಡೆಗಳಲ್ಲಿ ಜೀವಕಳೆ ತುಂಬಿದ್ದು ನೀವು ....ನಿಮ್ಮ ಅನುಪಸ್ಥಿತಿಯಲ್ಲಿ ಮೌನವಾಗಿದ್ದ ಗುಡಿಯಲ್ಲಿ ಹೊಸತನ ಸಂಚರಿಸುತ್ತಿದೆ ಎಂದಾದರೆ ನೀವೆಷ್ಟು ಅಮೂಲ್ಯ ನಮಗೆ!
ಮಕ್ಕಳೇ.. ನಿಮ್ಮ ಪ್ರತಿಯೊಂದು ಕಲಿಕೆ.. ಕನವರಿಕೆಯನ್ನು ನಾವು ಆನಂದಿಸುತ್ತೇವೆ. ಈ ಪಯಣಕ್ಕೆ ಜೊತೆಗಾರರು ನೀವೇ....
ಓದು , ಬರೆಹ , ಹಾಡು , ಕುಣಿತ , ಚಿತ್ರ , ಸಂಗೀತ , ಕಲೆ , ಆಟ , ಪಾಠ ಗಳ ಜೊತೆ ದಿನವೂ ಕಾಡುವ ನೀವು ನಿತ್ಯ ಹೊಸತನಕ್ಕೆ ತೆರೆದುಕೊಳ್ಳುವ ಬಗೆ ನಿಜಕ್ಕೂ ಬೆರಗು!
ಹಿರಿಯರ ಮನದ ಮಾತುಗಳಿಗೆ ಕಿವಿಯಾಗುತ್ತಾ ಬದುಕಿನಲ್ಲಿ ಭರವಸೆಯ ಬೆಳಕಾಗಿರುವ ನಿಮ್ಮ ಉತ್ಸಾಹ ನಿತ್ಯ ನೂತನ..
ನೀವೆಲ್ಲರೂ ಓದುವ ಅಭ್ಯಾಸ ರೂಢಿಸಿಕೊಂಡಿರುವವರು.. ಓದು ಬಹಳಷ್ಟು ಮಂದಿಯ ಬದುಕಿಗೆ ಹೊಸ ತಿರುವನ್ನು ನೀಡಿದೆ. ಪುಸ್ತಕಗಳನ್ನು ಪ್ರೀತಿಸುತ್ತಾ ಹೋದಂತೆ ಜ್ಞಾನ ವಿಸ್ತಾರವಾಗುತ್ತದೆ... ನಾನು ಇತ್ತೀಚೆಗೆ ಓದಿದ,ಲೇಖಕಿ ನೇಮಿಚಂದ್ರ ಅವರ *'ಬದುಕು ಬದಲಿಸಬಹುದು'* ಪುಸ್ತಕ ಬದುಕಿನ ವಾಸ್ತವವನ್ನು ವಿಸ್ತರಿಸುತ್ತಾ ಸಾಗಿತು.. ನಾವೆಷ್ಟು ಕಲಿಯಬೇಕು.. ನಮ್ಮನ್ನೇ ಅರಿಯಬೇಕು.. ವಿಭಿನ್ನತೆಯನ್ನು ಒಪ್ಪಿಕೊಂಡು ಮುನ್ನಡೆಯುವ,ಮಾನವತೆಯನ್ನು ಮೆರೆಯುವ ಇಲ್ಲಿನ ಹಲವಾರು ಘಟನೆಗಳು ಇನ್ನಿಲ್ಲದಂತೆ ಕಾಡಿ ಪಾಠವಾಗುತ್ತವೆ.
ತಡಮಾಡಬೇಡಿ..ನೀವೂ ಒಂದು ಪುಸ್ತಕವನ್ನು ಕೈಗೆತ್ತಿಕೊಳ್ಳಿ.. ಓದಿನ ಆನಂದವನ್ನು ನಮ್ಮೊಂದಿಗೆ ಹಂಚಿಕೊಳ್ಳಿ..
ಆರೋಗ್ಯ ಜೋಪಾನ ಮಕ್ಕಳೇ..
.......................................... ತೇಜಸ್ವಿ ಅಂಬೆಕಲ್ಲು
ಶಿಕ್ಷಕಿ
ದ.ಕ.ಜಿ.ಪಂ.ಹಿ.ಪ್ರಾ .ಶಾಲೆ,
ಗೋಳಿತ್ತಟ್ಟು, ಪುತ್ತೂರು ತಾಲ್ಲೂಕು
ದಕ್ಷಿಣ ಕನ್ನಡ ಜಿಲ್ಲೆ
**********************************************