ಜೀವನ ಸಂಭ್ರಮ - 11
Monday, November 22, 2021
Edit
ಜಾತ್ರೆ ಸಂಭ್ರಮ
--------------------------------
ನನ್ನೂರು ಮಂಡ್ಯ ಜಿಲ್ಲೆ , ಮಂಡ್ಯ ತಾಲೂಕಿನ ಒಂದು ಸಣ್ಣ ಗ್ರಾಮ ಜಿ. ಮಲ್ಲಿಗೆರೆ. ನಮ್ಮ ಮನೆ ದೇವರು ಆದಿಚುಂಚನಗಿರಿಯ ಕಾಲಭೈರವೇಶ್ವರ. ಅದು ಸುಮಾರು ನಮ್ಮೂರಿನಿಂದ 30 ಕಿಲೋಮೀಟರ್ ದೂರದಲ್ಲಿದೆ. ನಮ್ಮೂರಿನ ಪಕ್ಕದ ಊರಿನಲ್ಲಿ ಭೈರವೇಶ್ವರ ದೇವಸ್ಥಾನವಿದೆ. ಈ ದೇವರಿಗೆ ಆಡುಭಾಷೆಯಲ್ಲಿ ಬೋರೇದೇವರು ಎನ್ನುತ್ತೇವೆ. ಇಲ್ಲಿಯ ಹಬ್ಬ ಪ್ರತಿ ವರ್ಷ ಮಾರ್ಚ್ ತಿಂಗಳಿನಲ್ಲಿ ಭಾನುವಾರದಂದೇ ಬರುತ್ತದೆ. ಹಬ್ಬಕ್ಕೆ ಪ್ರತಿ ಮನೆಯವರು ಹಾಜರಿರಬೇಕು. ಕೆಲಸಕ್ಕೋಸ್ಕರ ಹೊರಗೆ ಹೋದವರು ಈ ಹಬ್ಬಕ್ಕೆ ಕಡ್ಡಾಯವಾಗಿ ಬರುತ್ತಾರೆ. ನಾನು ವರ್ಗಾವಣೆ ಹೊಂದಿ ಮಂಗಳೂರಿಗೆ ಬಂದಮೇಲೆ ಅದೇ ಸಮಯಕ್ಕೆ ಎಸ್.ಎಸ್.ಎಲ್.ಸಿ. ಪರೀಕ್ಷೆ ಬೀಳುತ್ತಿದ್ದುದರಿಂದ ನನ್ನ ಕುಟುಂಬ ಈ ಹಬ್ಬದಲ್ಲಿ ಪಾಲ್ಗೊಳ್ಳುವುದು ಕಡಿಮೆಯಾಯಿತು.
ಈ ಹಬ್ಬದ ದಿನಾಂಕದಿಂದ ಹಿಂದಕ್ಕೆ ಸುಮಾರು ಹತ್ತರಿಂದ ಹನ್ನೆರಡು ದಿನಕ್ಕೆ ಕಂಬ ಬರುತ್ತದೆ. ಇದಕ್ಕೆ ಗಿಂಡಿ ಬಂತು ಎನ್ನುತ್ತಾರೆ. ಕಂಬ ಬಂದ ದಿನಾಂಕದಿಂದ ಹಬ್ಬದವರೆಗೆ ಊರಿನ ಯಾರ ಮನೆಯಲ್ಲೂ ಖಾರದ ಘಾಟು ಬರುವಂತಿಲ್ಲ. ಮಾಂಸಾಹಾರ ಅಡುಗೆ ಮಾಡುವಂತಿಲ್ಲ , ಪೂರ್ತಿ ಸಸ್ಯಹಾರ, ಮಡಿ. ಕಂಬ ಬಂದ ದಿನದಿಂದ ಜಾತ್ರೆಯ ವರೆಗೆ ಪ್ರತಿದಿನ ರಂಗ ಕುಣಿತ, ಕೋಲಾಟ ರಾತ್ರಿ 8 ಗಂಟೆಗೆ ಪ್ರಾರಂಭವಾಗಿ 10:00 ಅಥವಾ 11:00 ಗಂಟೆಗೆ ಮುಗಿಯುತ್ತದೆ. ಹಗಲು ಹೊತ್ತಿನಲ್ಲಿ ಪ್ರತಿಯೊಬ್ಬರು ಕೃಷಿ ಚಟುವಟಿಕೆಯಲ್ಲಿ ತೊಡಗಿರುತ್ತಾರೆ. ಸಂಜೆ ಬೇಗನೆ ಊಟ ಮಾಡಿ ಮನೆಮಂದಿಯೆಲ್ಲ ಅಂದರೆ ಹಿರಿಯರು-ಕಿರಿಯರು ಮಕ್ಕಳು ಎಲ್ಲರೂ 8 ಗಂಟೆಗೆ ರಂಗ ಚಾವಡಿಗೆ ಬಂದು, ಚಾಪೆ ಹಾಸಿ ಕುಳಿತುಕೊಳ್ಳುವರು. ಪ್ರತಿ ಮನೆಯಿಂದ ಯುವಕರು, ಹಿರಿಯರು ತಾಳಕ್ಕೆ ತಕ್ಕಂತೆ ರಂಗ ಕುಣಿಯುವರು. ಕೈಯಲ್ಲಿ ಟವಲ್ ಹಿಡಿದು ತಾಳಕ್ಕೆ ತಕ್ಕಂತೆ ಎಲ್ಲರೂ ಒಂದೇ ರೀತಿಯಾಗಿ ಸಾಲಾಗಿ ಕುಣಿಯುವರು. ಕುಣಿತವನ್ನು ನೋಡುತ್ತಿದ್ದವರಿಗೆ ಒಂದು ಸಂಭ್ರಮ. ರಂಗ ಕುಣಿಯುವಾಗ, ತಪ್ಪಾದಾಗ ಪಕ್ಕದವರು , ಪ್ರೇಕ್ಷಕರು ತಿದ್ದುವುದು ಒಂದು ರೀತಿ ಖುಷಿ. ರಂಗ ಕುಣಿತವಾದ ಮೇಲೆ ಕೋಲಾಟ ಶುರುವಾಗುವುದು. ಕೋಲಾಟದಲ್ಲಿ ಹಾಡಿಗೆ ತಕ್ಕಂತೆ ಕೋಲುಗಳ ಬಡಿತ. ಬಹಳ ಅದ್ಭುತ. ಕೋಲಾಟದಲ್ಲಿ ತುಂಬಾ ಮನರಂಜನೆ ಇರುತ್ತದೆ. ನಮ್ಮ ಊರು ಈಗಾಗಲೇ ಹೇಳಿದಂತೆ ಚಿಕ್ಕದಾಗಿತ್ತು. ಹೆಚ್ಚು ವಿದ್ಯಾವಂತರು ಇರಲಿಲ್ಲ. ಹೆಂಗಸರಿಗೆ ಹುಚ್ಚಮ್ಮ , ಅಕ್ಕಮ್ಮ , ಮಲ್ಲಮ್ಮ , ಕೆಂಪಮ್ಮ , ಅಣ್ಣಮ್ಮ ,ಬೋರಮ್ಮ ಮತ್ತು ಪಾರ್ವತಿ ಹೀಗೆ , ಕೋಲಾಟದಲ್ಲಿ ಹೆಂಗಸರು ತಮ್ಮ ಹೆಸರು ಹೇಳಿಕೊಂಡು, ಹಾಸ್ಯಮಯವಾಗಿ ಕೋಲಾಟ ಹಾಡುತ್ತಿದ್ದರು. ಅದರ ಒಂದು ಚರಣ ಹೀಗಿದೆ........
ಹುಚ್ಚಳ್ಳು ಉರ್ಕೊಂಡು, ಹುಚ್ಚಿಯ ಕರ್ಕೊಂಡು,
ನಾನು ಬತ್ತೀನಿ ಜಾತುರಿಗೆ.
ಯಾವ ಊರಿನ ಜಾತುರಿಗೆ ,
ನಮ್ಮ ಬೋರೆದೇವರ ಜಾತುರಿಗೆ.
ಅಕ್ಕಿಯ ತಕ್ಕೊಂಡು,
ಅಕ್ಕಮನ ಕರ್ಕೊಂಡು ,
ನಾನು ಬತ್ತೀನಿ ಜಾತುರಿಗೆ ,
ಯಾವ ಊರಿನ ಜಾತುರಿಗೆ ,
ನಮ್ಮ ಬೋರೇದೇವರ ಜಾತುರಿಗೆ.
ಮಲ್ಲಿಗೆ ತಕ್ಕೊಂಡು, ಮಲ್ಲಕನ ಕರ್ಕೊಂಡು ,
ನಾನು ಬರ್ತೀನಿ ಜಾತುರಿಗೆ.
ಯಾವ ಊರಿನ ಜಾತುರಿಗೆ,
ನಮ್ಮ ಬೋರೇದೇವರ ಜಾತುರಿಗೆ .
ಅನ್ನವ ಮಾಡ್ಕೊಂಡು ,ಅಣ್ಣವನ್ ಕರ್ಕೊಂಡು,
ನಾನು ಬತ್ತೀನಿ ಜಾತುರಿಗೆ .
ಯಾವ ಊರಿನ ಜಾತುರಿಗೆ,
ನಮ್ಮ ಬೋರೇದೇವರ ಜಾತುರಿಗೆ.
ತಂಗಳನ್ನ ತಕ್ಕೊಂಡು, ತಂಗವ್ವನ ಕರ್ಕೊಂಡು,
ನಾನು ಬತ್ತೀನಿ ಜಾತುರಿಗೆ ,
ಯಾವ ಊರಿನ ಜಾತುರಿಗೆ,
ನಮ್ಮ ಬೋರೇದೇವರ ಜಾತುರಿಗೆ.
ಹೀಗೆ ಹೇಳುವಾಗ ಹುಚ್ಚಮ್ಮ, ಮಲ್ಲಕ್ಕ , ಅಣ್ಣಮ್ಮ ಮತ್ತು ತಂಗಮ್ಮ ನಾಚಿ ನೀರಾಗುವರು. ಜನ ಗೊಳ್ಳೆಂದು ಕೇಕೆ ಹಾಕಿ ನಗುವರು. ಇದು ಹೀಗೆ ಜಾತ್ರೆಯ ದಿನದವರೆಗೆ ನಡೆಯುತ್ತದೆ. ಜಾತ್ರೆಯ ದಿನ ರಂಗ ಕುಣಿತ , ಕೋಲಾಟ ಮುಗಿದಮೇಲೆ ಪೂಜೆ ಕುಣಿತ ಪ್ರಾರಂಭವಾಗುತ್ತದೆ. ಪೂಜೆಯನ್ನು ಬಿದಿರಿನ ಬೊಂಬನ್ನು ಎರಡು ಭಾಗವಾಗಿ ಸೀಳಿ, ಚೌಕಾಕಾರದಲ್ಲಿ ನಿರ್ಮಿಸಿ, ಅದರ ತುದಿಗೆ ಕಳಸಗಳನ್ನು ಇಟ್ಟು, ಮಧ್ಯದಲ್ಲಿ ದೇವರ ವಿಗ್ರಹ ಸ್ಥಾಪಿಸಿ, ಕೆಳಗಡೆ ತಲೆಯ ಮೇಲೆ ಸರಿಯಾಗಿ ಕುಳಿತುಕೊಳ್ಳಲು ಲೋಹದ ವ್ಯವಸ್ಥೆ ಮಾಡಿರುತ್ತಾರೆ. ಬಟ್ಟೆಗಳಿಂದ ಅಲಂಕಾರ ಮಾಡಿ , ನಂತರ ಹೂವಿನಿಂದ ಅಲಂಕಾರ ಮಾಡುತ್ತಾರೆ. ಪೂಜೆ ಕುಣಿತ ಶುರುವಾಗುತ್ತದೆ, ಬೆಳಗಿನವರೆಗೂ ಮುಂದುವರಿಯುತ್ತದೆ. ಪೂಜೆ ಕುಣಿತದ ಅನುಭವ ಇರುವವರು ಒಬ್ಬರಾದ ಮೇಲೆ ಒಬ್ಬರು ಪೂಜೆ ಕುಣಿತದಲ್ಲಿ ತೊಡಗುತ್ತಾರೆ. ಬೆಳಿಗ್ಗೆ 6:00 ಗಂಟೆ ಹೊತ್ತಿಗೆ ಕೊಂಡ ಹಾಯುವುದರೊಂದಿಗೆ ಜಾತ್ರೆ ಮುಕ್ತಾಯವಾಗುತ್ತದೆ. ಕೊಂಡ ಹಾಯುವುದಕ್ಕೆ ನಿರ್ದಿಷ್ಟ ವ್ಯಕ್ತಿ ಇರುತ್ತಾನೆ . ಕೊಂಡ ಹಾಯುವುದು ಎಂದರೆ ದೇವಸ್ಥಾನದ ಮುಂಭಾಗ ಸುಮಾರು 25ರಿಂದ 30 ಅಡಿ ದೂರಕ್ಕೆ ಬೆಂಕಿ ಹಾಕಲು ತೆಳುವಾದ ಕಾಲುವೆ ರೀತಿ ಮಾಡುವರು. ಅದರಲ್ಲಿ ಮರದ ಕೊಂಬೆಗಳನ್ನು ಹಾಕಿ , ರಾತ್ರಿಯಲ್ಲಿ ಬೆಂಕಿ ಹಚ್ಚುವರು. ಬೆಳಗ್ಗೆ ವರೆಗೆ ಎಲ್ಲ ಮರದ ಕೊಂಬೆಗಳು ಬೆಂದು ಬೆಂಕಿ ಕೆಂಡವಾಗುವುದು. ಅಲ್ಲಿ ಸಾಕಷ್ಟು ಜನ ಕೆಂಡದ ಮೇಲೆ ಬೂದಿ ಕೂರದಂತೆ ಟವಲ್ , ಬಟ್ಟೆ ಬಳಸಿ ಆರಿಸುವರು. ಪೂಜೆ ಕುಣಿತದ ಪೂಜಾ ಹೊತ್ತವರು ಮೂರು ಸುತ್ತು ಕೊಂಡ ಸೇರಿದಂತೆ ದೇವಸ್ಥಾನದ ಸುತ್ತ ಪ್ರದಕ್ಷಿಣೆ ಹಾಕುವರು. ಇದರೊಂದಿಗೆ ತಂಬಿಟ್ಟಿನ ಕಳಸ ಹೊತ್ತ ಮುತ್ತೈದೆಯರು ಮುಂಬದಿಯಲ್ಲಿ, ಮಕ್ಕಳನ್ನು ಹೆಗಲ ಮೇಲೆ ಕೂರಿಸಿಕೊಂಡು ಗಂಡಸರು ಮತ್ತು ಜನ ಪೂಜೆಯ ಹಿಂದೆ ಸಾಗುವರು. ಮುಂದೆ ವಾಹನದ ವಿಗ್ರಹವನ್ನು ಹೊತ್ತುಕೊಂಡು ನಾಲ್ಕುಜನ ಹೋಗುವರು. ಪೂಜೆ ಹೊತ್ತವರು ವಾಹನವನ್ನು ಹೊತ್ತವರು ಪ್ರದಕ್ಷಿಣೆ ಹಾಕುವಾಗ, ಬಾಳೆಹಣ್ಣಿಗೆ ಜವನದ( ಒಂದು ರೀತಿಯ ಪರಿಮಳದ ಗಿಡ) ಕಡ್ಡಿಯನ್ನು ಸಿಕ್ಕಿಸಿ , ಪೂಜೆ ಮತ್ತು ವಾಹನಕ್ಕೆ ಕೇಕೆ ಹಾಕುತ್ತ ಸಂಭ್ರಮದಿಂದ ಕುಣಿಯುವರು. ಕೊಂಡದ ಮುಂದೆ ಪೂಜೆ ಬಂದು ನಿಂತ ಮೇಲೆ, ಪೂಜಾರಿ ಬಂದು ಪೂಜೆ ಮಾಡುತ್ತಾನೆ. ಪೂಜೆಯ ನಂತರ ವಾಹನ ಹೊತ್ತ ನಾಲ್ಕೂ ಜನ, ಕೆಂಡದ ಮೇಲೆ ವಾಹನ ಇರುವಂತೆ ನೋಡಿಕೊಂಡು ಮೊದಲು ಓಡುತ್ತಾರೆ. ನಂತರ ಪೂಜೆ ಹೊತ್ತ, ಕೊಂಡ ಹಾಯುವವನು ಕೊಂಡದ ಬೆಂಕಿಯ ಮೇಲೆ ಓಡುವನು. ಕೆಲವರು ಮುಂದೆ ಕಾಯ್ದುಕೊಂಡಿರುತ್ತಾರೆ ಏಕೆಂದರೆ ಕೆಂಡದ ಮೇಲೆ ಓಡಿದ ನಂತರ ಪೂಜೆ ಕೆಳಕ್ಕೆ ಬೀಳದಂತೆ ನೋಡಿಕೊಳ್ಳುವ ಸಲುವಾಗಿ ಕೆಲವರು ಕಾಯ್ದುಕೊಂಡು ಇರುತ್ತಾರೆ. ಕೊಂಡ ಹಾಯ್ದ ನಂತರ ಅಲ್ಲಿರುವ ಬೂದಿಯನ್ನು ವಿಭೂತಿಯಂತೆ ಎಲ್ಲರೂ ಹಣೆಗೆ ಧರಿಸುವರು. ನಂತರ ಮನೆಗೆ ಹೋಗುವರು. ಜಾತ್ರೆಯ ದಿನ ಮನೆಯ ಒಡತಿ ಉಪವಾಸ ಮಾಡುವಳು. ಕೊಂಡದ ನಂತರ ದೇವರ ಪೂಜೆ ಮಾಡಿ ಉಪವಾಸ ಬಿಡಬೇಕು. ಆ ದಿನ ಸಿಹಿ ಭೋಜನ ಮಾತ್ರ. ಅಂದು ರಾತ್ರಿ ಪ್ರತಿ ಮನೆಯಿಂದ ಮಹಿಳೆಯರು ಹಣ್ಣಡುಗೆ ಅಂದರೆ ಒಂದು ಚಿಪ್ಪು ಬಾಳೆಹಣ್ಣು , ತೆಂಗಿನಕಾಯಿ, ಎಲೆ ಅಡಿಕೆ, ಕರ್ಪೂರ ಮತ್ತು ಹೂ ತೆಗೆದುಕೊಂಡು ದೇವಸ್ಥಾನಕ್ಕೆ ಹೋಗುವರು. ದೇವಸ್ಥಾನಕ್ಕೆ ಎಲ್ಲರೂ ಮಾತಾಡಿಕೊಂಡು ಒಟ್ಟಾಗಿ ಹೋಗುವರು. ಮಾರನೆಯ ದಿನ ವೈವಿಧ್ಯಮಯ ಅಡುಗೆ ಮಾಡಿ , ಬಂಧುಬಳಗವನ್ನು ಕರೆಸಿ ಊಟ ಬಡಿಸುತ್ತಾರೆ. ಬಂಧು-ಬಳಗ ಬಂದಾಗ ಕಾಲು ತೊಳೆಯಲು ನೀರು ಕೊಡುವುದು, ನಂತರ ಕ್ಷೇಮ ಸಮಾಚಾರ ವಿಚಾರಿಸಿ , ಹರಟೆ ಹೊಡೆಯುತ್ತಾ ಸವಿಘಟನೆಗಳನ್ನು ನೆನೆಸಿಕೊಂಡು, ಮನೆಮಂದಿಯಲ್ಲ ಸಂಭ್ರಮಪಡುವರು.
ಮಕ್ಕಳೇ , ಈಗ ಟಿವಿ ಬಂದಮೇಲೆ ರಂಗ ಕುಣಿತ ,ಕೋಲಾಟ ಇದ್ದಲ್ಲಿ ಹಿರಿಯರು ಮಾತ್ರ ಹೋಗುತ್ತಾರೆ. ಮಕ್ಕಳು ಮನೆಯಲ್ಲಿ ಟಿವಿ ನೋಡುತ್ತಾ ಇರುತ್ತಾರೆ. ಮಕ್ಕಳಿಗೆ ಸಹಜ ಸಂಭ್ರಮ ಬೇಕಿಲ್ಲ . ಟಿವಿಯಲ್ಲಿ ಬರುವ ಕಾರ್ಯಕ್ರಮವನ್ನು ನೋಡುತ್ತಾ ಕಾಲಕಳೆಯುತ್ತಾರೆ. ಇದು ತಪ್ಪು. ಟಿ.ವಿ ಯಲ್ಲಿ ಬರುವ ಸಂಭ್ರಮ ಕ್ಷಣಿಕ ಹಾಗೂ ತಾತ್ಕಾಲಿಕ. ಮಕ್ಕಳೇ ಮಾನವೀಯ ಸಂಬಂಧ ಬಹಳ ಮುಖ್ಯ. ಮಾನವೀಯ ಸಂಬಂಧ ಉತ್ತಮವಾಗಿದ್ದಾಗ ಮಾನಸಿಕ ಕಾಯಿಲೆಗಳು ದೂರವಿರುತ್ತದೆ. ಜಾತ್ರೆ ಹಬ್ಬ- ಹರಿದಿನಗಳಲ್ಲಿ ಮಾನವೀಯ ಸಂಬಂಧಗಳಿಗೆ ಬೆಲೆ ಕೊಟ್ಟು, ಮುಖಾಮುಖಿ ಸವಿನೆನಪುಗಳನ್ನು ಮೆಲುಕು ಹಾಕುತ್ತಾ ಹರಟೆ ಹೊಡೆಯುವುದೇ ಜಾತ್ರೆಯ ಸಂಭ್ರಮ. ಇದು ಸಹಜವಾಗಿದ್ದು ಈ ಸಂಭ್ರಮ ದೀರ್ಘಕಾಲ ನೆನಪಿನಲ್ಲಿ ಉಳಿಯುತ್ತದೆ ಮತ್ತು ಸವಿನೆನಪು ಜೀವನ ಪೂರ್ತಿ ಇರುತ್ತದೆ.
..........................................ಎಂ.ಪಿ. ಜ್ಞಾನೇಶ್
ಕ್ಷೇತ್ರ ಶಿಕ್ಷಣಾಧಿಕಾರಿಯವರು
ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
**********************************************