
ಹಕ್ಕಿ ಕಥೆ - 19
Tuesday, November 2, 2021
Edit
ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ
ಹಕ್ಕಿ ಕಥೆ - 19
----------------------------
ಪ್ರೀತಿಯ ಮಕ್ಕಳೇ........
ಎಲ್ಲರಿಗೂ ಬೆಳಕಿನ ಹಬ್ಬ ದೀಪಾವಳಿಯ ಶುಭಾಷಯಗಳು. ಇವತ್ತು ನಿಮಗೆ ಪರಿಚಯ ಮಾಡಬೇಕೆಂದಿರುವ ಹಕ್ಕಿಗೂ ದೀಪಾವಳಿ ಹಬ್ಬಕ್ಕೂ ನೇರ ಸಂಬಂಧ ಇದೆ. ಮಳೆಯನ್ನೇ ಆಶ್ರಯಿಸಿ ಬೆಳೆಯುವ ಭತ್ತದಂತಹ ಬೆಳೆಗಳು ದೀಪಾವಳಿಯ ಸಮಯಕ್ಕೆ ಕೊಯ್ಯಲು ಸಿದ್ಧವಾಗುತ್ತವೆ. ಮಳೆಗಾಲದಲ್ಲಿ ಕಷ್ಟಪಟ್ಟು ಬೆಳೆಯುವ ಬೆಳೆ ಕೊಯ್ಯಲು ಸಿದ್ಧವಾಗುವ ಸಮಯವೇ ದೀಪಾವಳಿ. ಅದಕ್ಕಾಗಿಯೇ ಹಬ್ಬದ ಮೂರನೇ ದಿನವಾದ ಬಲಿಪಾಡ್ಯದಂದು ಧಾನ್ಯಲಕ್ಷ್ಮೀ ಪೂಜೆ ಮಾಡುತ್ತಾರೆ, ಹೊಸ ಅಕ್ಕಿಯ ಊಟವನ್ನೂ ಮಾಡುತ್ತಾರೆ.
ಈ ಹಕ್ಕಿಗೂ ದೀಪಾವಳಿಗೂ ಹೇಗೆ ಸಂಬಂಧ ಎಂದು ನೀವು ಯೋಚನೆ ಮಾಡುತ್ತಿದ್ದೀರಾ? ಭತ್ತದಂತಹ ಮಳೆಯಾಶ್ರಿತ ಬೆಳೆ ಬೆಳೆಯುವ ಮೇ ನಿಂದ ಸಪ್ಟೆಂಬರ್ ತಿಂಗಳಿನ ನಡುವೆ ಈ ಹಕ್ಕಿ ಸಂತಾನಾಭಿವೃದ್ಧಿ ಮಾಡುತ್ತದೆ. ಭತ್ತ, ರಾಗಿ, ನವಣೆ, ಸಜ್ಜೆ, ಕಬ್ಬು ಮೊದಲಾದ ಬೆಳೆ ಬೆಳೆಯುವ ಗದ್ದೆಗಳ ಆಸುಪಾಸಿನಲ್ಲಿ ನೀರಿನ ಮೂಲಗಳಾದ ಕೆರೆ, ಕಾಲುವೆ, ಸಣ್ಣ ಹೊಳೆ, ತೋಡು ಇತ್ಯಾದಿಗಳಿದ್ದರೆ ಅವುಗಳ ಬದಿಯಲ್ಲಿರುವ ಮರದ ಕೊಂಬೆಯ ತುದಿಗಳು ಇವುಗಳಿಗೆ ಗೂಡು ಕಟ್ಟಲು ಪ್ರಶಸ್ತವಾದ ಜಾಗ. ಗದ್ದೆಯಲ್ಲಿ ಸಿಗುವ ಹುಲ್ಲನ್ನು ತನ್ನ ಕೊಕ್ಕಿನಿಂದ ಕೊಯ್ದುತಂದು, ನೇತಾಡುವ ಕೊಂಬೆಯ ತುದಿಯಲ್ಲಿ ಗೂಡು ಹೆಣೆಯಲು ಪ್ರಾರಂಭ ಮಾಡುತ್ತದೆ. ನೇತಾಡುವ ಕೊಂಬೆಯ ತುದಿಯಲ್ಲಿ ಗೂಡಿನ ಆಕಾರ ತಯಾರಾದಾಗ ಹೆಣ್ಣುಹಕ್ಕಿ ಆಕಡೆಗೆ ಬರುತ್ತದೆ. ಹೊಸ ಮನೆಯ ಜಾಗ, ವ್ಯವಸ್ಥೆ, ವಾಸ್ತು ಎಲ್ಲ ಚೆನ್ನಾಗಿದೆಯೇ ಎಂದು ಪರೀಕ್ಷಿಸುತ್ತದೆ. ಹೆಣ್ಣು ಹಕ್ಕಿಗೆ ಒಪ್ಪಿಗೆಯಾದರೆ ಗೂಡು ಮುಂದುವರೆಯುತ್ತದೆ. ಸುಂದರವಾದ ಬೆಚ್ಚನೆಯ ಕೋಣೆ, ಗೂಡಿನ ಒಳಗೆ ಹೋಗಲು ಕೆಳಗಡೆಯಿಂದ ಸುರಕ್ಷಿತವಾದ ಬಾಗಿಲು ಎಲ್ಲವನ್ನೂ ಕೇವಲ ಎಳೆಯ ಹುಲ್ಲಿನಿಂದಲೇ ನೇಯುತ್ತದೆ. ಅಗತ್ಯವಾದರೆ ಗೂಡಿನ ಒಳಗಡೆ ಸ್ವಲ್ಪ ಮಣ್ಣನ್ನು ಮೆತ್ತಿ ಮಳೆಗಾಲದಲ್ಲೂ ಬೆಚ್ಚಗಿನ ವಾತಾವರಣ ಸೃಷ್ಟಿಸುತ್ತದೆ. ಗೂಡು ಪೂರ್ತಿ ತಯಾರಾದಾಗ ಹೆಣ್ಣು ಹಕ್ಕಿ ಮೊಟ್ಟೆ ಇಟ್ಟು ಕಾವು ಕೊಟ್ಟು ಮರಿ ಮಾಡುತ್ತದೆ. ಗಂಡು ಹಕ್ಕಿ ಗೂಡಿನ ರಕ್ಷಣೆಗೆ ನಿಲ್ಲುತ್ತದೆ.
ಮೊಟ್ಟೆಗಳನ್ನು ನುಂಗುವ ಹಾವು ಇವುಗಳ ಮೊಟ್ಟೆಯ ದೊಡ್ಡ ಶತ್ರು. ಅದಕ್ಕಾಗಿಯೇ ಇವುಗಳು ನೀರಿನ ಕಡೆಗೆ ಬಾಗಿದ ಕೊಂಬೆಗಳ ತುದಿಯಲ್ಲಿಯೇ ಗೂಡು ಕಟ್ಟುತ್ತವೆ. ಎಲ್ಲಾದರೂ ಮೊಟ್ಟೆ ತಿನ್ನಲು ಬರುವ ಹಾವು ಆಯ ತಪ್ಪಿದರೆ ನೀರಿಗೆ ಬೀಳುವುದು ಖಂಡಿತ. ಹಾಗೂ ಹೀಗೂ ಸರ್ಕಸ್ ಮಾಡಿ ಹಾವು ಗೂಡಿನ ಬಳಿ ತಲುಪಿದರೆ ಗಂಡು ಹಕ್ಕಿಯ ಧಾಳಿ ಎದುರಿಸಬೇಕಾಗುತ್ತದೆ. ಗಂಡು ಹಕ್ಕಿ ಕುಕ್ಕಿ, ಕಿರುಚಾಡಿ, ಹಾವನ್ನು ಓಡಿಸುತ್ತದೆ. ಒಂದೇ ಮರದಲ್ಲಿ ಹಲವಾರು ಹಕ್ಕಿಗಳು ಗೂಡು ಕಟ್ಟುತ್ತವೆ. ಮರದಲ್ಲಿ ನೇತಾಡುವ ಗೂಡುಗಳನ್ನು ನೋಡಿದಾಗ ಈಗಿನ ಹೌಸಿಂಗ್ ಕಾಲನಿಗಳು ನೆನಪಾಗುತ್ತವೆ. ಕೇವಲ ಹುಲ್ಲಿನಿಂದಲೇ ಹೆಣೆದು, ನೇಯ್ದು ಕಟ್ಟಿದ ಈ ಗೂಡು ಪಕ್ಷಿ ಸಂಕುಲದಲ್ಲಿಯೇ ಅತ್ಯಂತ ನಾಜೂಕಾದ, ಸುಂದರವಾದ ಮತ್ತು ವಿಶೇಷ ಗೂಡುಗಳಲ್ಲಿ ಒಂದು. ಹುಲ್ಲನ್ನು ಬಳಸಿ ಹೆಣೆಯುವ ಸುಂದರ ಗೂಡಿನಿಂದಾಗಿಯೇ ಈ ಹಕ್ಕಿಗೆ WEAVER BIRD ಅಥವಾ ನೇಕಾರ ಹಕ್ಕಿ ಎನ್ನುತ್ತಾರೆ.
ಮಳೆಗಾಲ ಮುಗಿದು ದೀಪಾವಳಿ ಬರುವ ಹೊತ್ತಿಗೆ ಮರಿಗಳು ಹಾರಲು ಕಲಿತಿರುತ್ತವೆ. ದೀಪಾವಳಿಯ ಹೊತ್ತಿಗೆ ಕೊಯ್ಲು ಆದ ಗದ್ದೆಗಳಲ್ಲಿ ಗುಂಪುಗುಂಪಾಗಿ ಕಾಳು ಹೆಕ್ಕಲು ಬರುತ್ತವೆ. ಇದರ ಸುಂದರವಾದ ಗೂಡನ್ನು ಕೆಲವರಾದರೂ ನೋಡಿರುತ್ತೀರಿ. ಇದನ್ನು ಕನ್ನಡದಲ್ಲಿ ಗೀಜಗ ಹಕ್ಕಿ ಎನ್ನುತ್ತಾರೆ. ಗುಬ್ಬಚ್ಚಿ ಗಾತ್ರದ ಈ ಹಕ್ಕಿ ಭಾರತ, ಬಾಂಗ್ಲಾದೇಶ, ಪಾಕಿಸ್ತಾನ, ಶ್ರೀಲಂಕಾ, ಮಯನ್ಮಾರ್ ಮುಂತಾದ ದೇಶಗಳಲ್ಲಿ ಕಾಣಲು ಸಿಗುತ್ತದೆಯಂತೆ. ಸಂತಾನೋತ್ಪತ್ತಿ ಕಾಲದಲ್ಲಿ ಗಂಡು ಹಕ್ಕಿ ಸುಂದರವಾದ ಹಳದಿ ಬಣ್ಣಕ್ಕೆ ತಿರುಗುತ್ತದೆ. ಉಳಿದ ಕಾಲದಲ್ಲಿ ಗುಬ್ಬಚ್ಚಿಯಂತೆ ಬೂದುಮಿಶ್ರಿತ ಕಂದು ಬಣ್ಣದಲ್ಲಿ ಇರುತ್ತದೆ. ಈ ಬಾರಿಯ ದೀಪಾವಳಿ ರಜೆಯಲ್ಲಿ ನಿಮ್ಮ ಸುತ್ತಲಿನ ಗದ್ದೆ ಬಯಲುಗಳ ಸುತ್ತ ಈ ಗೀಜಗ ಹಕ್ಕಿ ಕಾಣಲು ಸಿಗಬಹುದು.. ಹುಡುಕುತ್ತೀರಲ್ಲ
ಕನ್ನಡ ಹೆಸರು: ಗೀಜಗ
ಇಂಗ್ಲೀಷ್ ಹೆಸರು: Baya Weaver Bird
ವೈಜ್ಙಾನಿಕ ಹೆಸರು: Ploceus philippinus
.......................................... ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ
+91 98448 98124
*********************************************