-->
ಬದಲಾಗೋಣವೇ ಪ್ಲೀಸ್....! ಸಂಚಿಕೆ - 18

ಬದಲಾಗೋಣವೇ ಪ್ಲೀಸ್....! ಸಂಚಿಕೆ - 18

ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಹಾಗೂ ತರಬೇತುದಾರರು

          ಬದಲಾಗೋಣವೇ ಪ್ಲೀಸ್....! ಸಂಚಿಕೆ - 18
        ---------------------------------------------
            ಹಬ್ಬಗಳು ಮತ್ತು ಭಾರತೀಯ ಜೀವನಶೈಲಿಯು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ, ಒಂದೇ ನದಿಯ ಎರಡು ದಡಗಳಿದ್ದಂತೆ , ಒಂದಕ್ಕೊಂದು ಬಿಂಬ - ಪ್ರತಿಬಿಂಬಗಳಿದ್ದಂತೆ. ಒಂದನ್ನು ಬಿಟ್ಟರೆ ಮತ್ತೊಂದಕ್ಕೆ ಅರ್ಥವಿಲ್ಲ ಹಾಗೂ ಅಸ್ತಿತ್ವವಿಲ್ಲ. ಹಬ್ಬಗಳ ಆಚರಣೆಗೆ ಎರಡು ದೃಷ್ಟಿಕೋನಗಳಿರುತ್ತವೆ. ಒಂದು ಪೌರಾಣಿಕ ಕತೆಗಳಿಂದ ಪ್ರಭಾವಿತವಾದ ಆಚರಣೆಗಳಾದರೆ , ಇನ್ನೊಂದು ಜೀವನ ಸಾರ್ಥಕ್ಯಭಾವ ಹೊಂದುವುದಕ್ಕಾಗಿ ಇರಬೇಕಾದ ಸರಳ ತತ್ವಗಳ ಅರಿವಿನ ಸಂದೇಶವಾಗಿದೆ. ಹಾಗಾಗಿ ಬಿಂಬ - ಪ್ರತಿಬಿಂಬವಾಗಿ ಪುರಾಣಕತೆಯ ಜತೆ ಜೀವನ ಸಂದೇಶವು ಪ್ರತಿಬಿಂಬಿಸಲ್ಪಡುತ್ತಿದೆ.
      ದೀಪಾವಳಿ ಹಬ್ಬದಲ್ಲಿ ಬಲೀಂದ್ರ ಪೂಜೆ, ಧನಲಕ್ಷ್ಮೀ ಪೂಜೆ , ಗೋಪೂಜೆ , ತುಳಸಿ ಪೂಜೆ, ಹೂವಿನ ಅಲಂಕಾರ , ಉಡುಗೊರೆ ಹಂಚಿಕೆ, ಹೊಸ ಬಟ್ಟೆಯ ಹೊಸತನ, ಸಿಹಿತಿಂಡಿಗಳ ವಿಶೇಷತನ , ಬಿಸಿನೀರಿನ ತೈಲಾಭ್ಯಂಜನ, ಪಟಾಕಿಗಳ ಸಿಡಿತ , ದೀಪಗಳ ದೀಪೋತ್ಸವ... ಇತ್ಯಾದಿಗಳು. ಇದೆಲ್ಲವೂ ಪೌರಾಣಿಕ ಹಿನ್ನೆಲೆಯಲ್ಲಿ ಲೇಪಿತವಾದ ಆಚಾರ ವಿಚಾರಗಳಾಗಿವೆ. ಇವೆಲ್ಲವೂ ನಮ್ಮಲ್ಲಿನ ಬಾಹ್ಯ ಅಂಧಕಾರವನ್ನು ಹೋಗಲಾಡಿಸುವ ಆಚರಣೆಗಳು. ಆದರೆ ನಾವಿದರ ಜತೆಗೆ ಆಂತರ್ಯದ ಅಂಧಕಾರವನ್ನು ಹೋಗಲಾಡಿಸುವ ಜ್ಞಾನದ ಬೆಳಕಿನ ದೀಪವನ್ನು ಹಚ್ಚುವ ಬೆಳಕಿನ ಬಗ್ಗೆ ಚಿಂತಿಸಬೇಕಾಗಿದೆ.
        ನರಕಾಸುರ ವಧೆಯ ನಂತರ ಶ್ರೀ ಕೃಷ್ಣ -ಸತ್ಯಭಾಮೆಯು ತಮಗಂಟಿದ ರಕ್ತದ ಕಲೆಯನ್ನು ಹೋಗಲಾಡಿಸಲು ತೈಲಾಭ್ಯಂಜನ ಮಾಡಿದರೆ ನಾವಿಂದು ನಮ್ಮೊಳಗಿನ ನರಕ ರೂಪದ ಸ್ವಾರ್ಥ, ದುರಾಸೆ , ಅಹಂ , ಮೋಹ , ದುರಾಸೆ ಇತ್ಯಾದಿಗಳ ಕಲೆಯನ್ನು ಹೋಗಲಾಡಿಸಲು ಸದ್ಗುಣವೆಂಬ ತೈಲದಲ್ಲಿ ಅಭ್ಯಂಜನ ಮಾಡಿ ಶುದ್ಧರಾಗಬೇಕಾಗಿದೆ.
         ಸಕಲ ಸದ್ಗುಣಗಳ ಸಾಕಾರರೂಪ ಆದರ್ಶ ಮೂರ್ತಿ ಶ್ರೀರಾಮನು ರಾವಣ ಸಂಹಾರದ ನಂತರ ಅಯೋಧ್ಯೆಗೆ ಬಂದಾಗ ಹಣತೆಗಳನ್ನು ಹಚ್ಚಿ ಸ್ವಾಗತಿಸಿದಂತೆ ನಾವಿಂದು ನಮ್ಮಲ್ಲಿರುವ ರಾವಣನ ವ್ಯಕ್ತಿತ್ವದ ದುರ್ಗುಣಗಳನ್ನು ನಾಶ ಮಾಡಿ ಶ್ರೀರಾಮನ ಸದ್ಗುಣಗಳನ್ನು ತುಂಬಿಕೊಂಡು ನಮ್ಮ ನಮ್ಮ ಬದುಕೆಂಬ ಮನೆಗೆ ಬರಲೆಂಬ ಆಶಯದೊಂದಿಗೆ ದೀಪಹಚ್ಚಿ ಹಬ್ಬವನ್ನು ಸ್ವಾಗತಿಸಬೇಕಾಗಿದೆ.
          ತನ್ನ ದುರಂಹಕಾರದಿಂದ ದೈತ್ಯ ಮಹಾಬಲಿಯು ಕುಬ್ಜ ವಾಮನನೆದುರು ನಿಲ್ಲಲು ನೆಲೆಯಿಲ್ಲದೆ ಸೋತು ಕೊನೆಗೆ ತನ್ನನ್ನೇ ತಾನು ಸಮರ್ಪಿಸಿದಂತೆ ನಾವೆಲ್ಲರೂ ತಾನೇ ಶ್ರೇಷ್ಠನೆಂಬ ದುರಂಹಕಾರದ ದೈತ್ಯ ಭಾವಗಳನ್ನು ತ್ಯಜಿಸಿ ಪ್ರಕೃತಿಯ ಅಗಾಧ ತ್ರಿವಿಕ್ರಮ ಶಕ್ತಿಗೆ ತಲೆಬಾಗಿ ತನ್ನನ್ನು ತಾನು ಸಮರ್ಪಿಸುವ ಗುಣವನ್ನು ಬೆಳೆಸಬೇಕಾಗಿದೆ.
    ಬಡತನವೆಂದರೆ ಹಣದ ಮೇಲೆ ನಿರ್ಧಾರವಾಗುವ ಕಲಿಕಾಲವಿದು. ಆದರೆ ಆಸ್ತಿ ಸಂಪತ್ತು, ಬಂಗಾರದೊಡವೆ , ಐಶಾರಾಮಿ ಸೌಲಭ್ಯಗಳು ಇಲ್ಲದಿರುವುದು ಬಡತನವಲ್ಲ. ವಿದ್ಯೆ , ಒಳ್ಳೆಯ ಗುಣನಡತೆ , ಶಾಂತಿ , ಮಾನವೀಯ ಗುಣ, ಸಂತೃಪ್ತಿ ಭಾವಗಳು ಇಲ್ಲದಿರುವುದೇ ನಿಜವಾದ ಬಡತನ. ಹಾಗಾಗಿ ಈ ಬಡತನವನ್ನು ಮೀರಿ ಒಬ್ಬರಿಗೆ ಇನ್ನೊಬ್ಬರನ್ನು ಹೋಲಿಕೆ ಮಾಡದೇ ಒಳ್ಳೆಯ ಗುಣಶೀಲರಾಗಿ ಬದುಕುವುದೇ ನಿಜವಾದ ಸಿರಿತನ. ಹಾಗಾಗಿ ಈ ಧನಲಕ್ಷ್ಮೀ ಪೂಜೆಯಲ್ಲಿ ಅಂತರಂಗ ಹಾಗೂ ಬಹಿರಂಗದ ಧನಾತ್ಮಕ ನಡೆ ನುಡಿಗಳು ಶ್ರೀಮಂತವಾಗಿರಲಿ ಎಂದು ಪ್ರಾರ್ಥಿಸೋಣ ಹಾಗೂ ಕಾರ್ಯರೂಪಕ್ಕೆ ತರೋಣ.
       ಸಾವಿನ ಮೂಲಕ ನಮ್ಮಿಂದ ದೂರವಾಗಿರುವ ಹಿರಿಯರಿಗೆ ಸ್ವರ್ಗದ ದಾರಿ ತೋರಿಸಲು ಆಕಾಶ ಬುಟ್ಟಿ (ಗೂಡುದೀಪ ) ಯನ್ನು ಎತ್ತರದಲ್ಲಿ ಇಟ್ಟು ದಾರಿದೀಪವಾದಂತೆ ನಾವೆಲ್ಲರು ನಮ್ಮ ಸಜ್ಜನ ವ್ಯಕ್ತಿತ್ವದಿಂದ ಎತ್ತರಸ್ಥಾನದಲ್ಲಿದ್ದು ಕಿರಿಯರಿಗೆ ದಾರಿದೀಪವಾಗಿ ನಿಲ್ಲಬೇಕಾಗಿದೆ.
      ಗಾಡಾಂಧಕಾರದ ಕಗ್ಗತ್ತಲ್ಲಿನ ಅಮಾವಾಸ್ಯೆಯ ದಿನದಂದು ಹಣತೆ ಹಚ್ಚಿ ಬೆಳಕಿನ ಕಿರಣ ಚಾಚುವ ಹಬ್ಬವೇ ದೀಪಾವಳಿ. ನಮ್ಮೆಲ್ಲರ ಅಜ್ಞಾನ ಅನೀತಿಗಳ ಅಂಧಕಾರವನ್ನು ಕಳೆದು ಸುಜ್ಞಾನ ಬೆಳಕಿನ ಹಣತೆಯ ಹಚ್ಚೋಣ. ದೀಪಾವಳಿ ಬೆಳಕಿನ ಹಬ್ಬ. ಕೊಳೆ ತೊಳೆಯುವ ಹಬ್ಬ. ದೀಪ ಬೆಳಗಿಸುವ ಹಬ್ಬ. ಕತ್ತಲಿನಿಂದ ಬೆಳಕಿನೆಡೆಗೆ ನಡೆಯುವ ಹಬ್ಬ. ಬನ್ನಿ ದೀಪಾವಳಿಯ ಈ ಸಂದರ್ಭದಲ್ಲಿ ಬಹಿರಂಗದ ಆಚರಣೆಯ ಜತೆಗೆ ಅಂತರಂಗಿಕವಾಗಿಯೂ ಸ್ವಚ್ಛವಾಗಿ ಕತ್ತಲಿನಲ್ಲಿರುವವರಿಗೆ ಬೆಳಕಾಗಿ ಮೂಡಿ ಬರೋಣ. ಈ ಬದಲಾವಣೆಗೆ ಯಾರನ್ನೂ ಕಾಯದೆ ನಾವೇ ಬದಲಾಗೋಣ . ಬದಲಾಗೋಣವೇ ಪ್ಲೀಸ್..! ಏನಂತೀರಿ...?
........................... ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಮತ್ತು ತರಬೇತುದಾರರು 
Mob: +91 99802 23736
********************************************



Ads on article

Advertise in articles 1

advertising articles 2

Advertise under the article