ಪದಗಳ ಆಟ ಭಾವ ಚಿತ್ರ ಪಾತ್ರ ಸಂಚಿಕೆ - 18
Saturday, November 20, 2021
Edit
ಪದಗಳ ಆಟ
ಭಾವಚಿತ್ರ
ಪಾತ್ರ
ಸಂಚಿಕೆ - 18
ವಿಶ್ವಕೆ ಎಲ್ಲಾ ಕೊಟ್ಟವ ಈಶ್ವರ ನಾನೇ.
ಜೀವನ ಸಂಧ್ಯೆಯಲ್ಲಿ ನಿಂತು ಶತಾಯುಷ್ಯದ ನನ್ನ ಬದುಕನ್ನು ಸಿಂಹಾವಲೋಕನ ಮಾಡಿದರೆ ಅನೇಕ ರೋಚಕ ಘಟನೆಗಳು ಕಥಾ ಮಾಲಿಕೆ ಯಂತೆ ನನ್ನ ಚಿತ್ತಭಿತ್ತಿಯಲ್ಲಿ ಮೂಡಿ ಮರೆಯಾಗುತ್ತವೆ.
ಅಂದು ನಾನು ಹುಟ್ಟಿದ ಹಳ್ಳಿಯಲ್ಲಿ ಸಂಭ್ರಮ. ಇಂಜಿನಿಯರಿಂಗ್ ಕಾಲೇಜ್ ಅಲ್ಲಿ ಓದಿ ಪ್ರಥಮ ರಾಂಕ್ ಅನ್ನು ಪಡೆದ ಪುಳಕ ಎಲ್ಲರ ಮೈಮನಗಳಲ್ಲಿ. ನನಗೆ ಅದಕ್ಕಿಂತ ಹೆಚ್ಚು ಸಂತೋಷ ಮುಂಬೈ ಸರಕಾರ ಕರೆದು ಅಭಿಯಂತರ ಕೆಲಸ ಕೊಟ್ಟಾಗ. ನಾನು ನನ್ನ ಕಾಯಕದಲ್ಲಿ ಪ್ರೀತಿಯಿಟ್ಟು ದುಡಿಯುತ್ತಿರುವ ಆ ದಿನಗಳಲ್ಲಿ ಭಾರತದ ಬೇರೆ ಬೇರೆ ಸರ್ಕಾರಗಳು ನನ್ನಲ್ಲಿ ಕೆಲವು ಸಮಸ್ಯೆಗಳಿಗೆ ಪರಿಹಾರವನ್ನು ಕೇಳಿಕೊಳ್ಳುತ್ತಿದ್ದವು.
ಪಾಕಿಸ್ತಾನದ ಸುಕ್ಕೂರಿಗೆ ಸಿಂಧು ನದಿಯಿಂದ ನೀರು ಸರಬರಾಜು ಮಾಡುವ ಯೋಜನೆಯನ್ನು ರೂಪಿಸಿದೆ. ಪಂಜ್ರಾದ ನದಿಯಿಂದ ದಾತಾರಿ ಹಳ್ಳಿಗೆ ಸೈಫನ್ ಎಂಬ ಸ್ಟ್ರಕ್ಚರ್ ಕಟ್ಟಿ ನೀರು ಹರಿಯುವಂತೆ ಮಾಡಿದೆ. ಪಂಜ್ರಾ ನದಿಯ ಬಳಿ ಕೆಲಸ ಮಾಡುವಾಗ ಕುದುರೆ ಮೇಲೆ ಹೋಗುತ್ತಿದ್ದೆ. ಒಂದು ದಿನವಂತೂ ಜಡಿಮಳೆ, ಕುಂಭದ್ರೋಣ ಮಳೆ, ಮುಸಲ ವರ್ಷಧಾರೆ. ಆಕಾಶಕ್ಕೆ ತೂತು ಬಿದ್ದಿದೆಯೋ ಎಂಬಷ್ಟು ಮಳೆ. ನದಿ ಉಕ್ಕಿ ಹರಿಯಿತು. ನನಗೆ ಪ್ರವಾಸಿ ಮಂದಿರಕ್ಕೆ ಹಿಂದಿರುಗಲು ಆಗಲಿಲ್ಲ. ಎರಡು ದಿನ ದಾತಾರಿಯಲ್ಲಿ ಉಳಿದೆ. ಮೂರನೇ ದಿನ ಧೈರ್ಯ ಮಾಡಿ ಇಬ್ಬರು ಕಾರ್ಮಿಕರೊಂದಿಗೆ ನದಿಯನ್ನು ಈಜಿ ಬಂದೆ. ನಾನು ಬಾಲ್ಯದಲ್ಲಿ ತುಂಬಾ ದೂರ ನಡೆದುಕೊಂಡು ಶಾಲೆಗೆ ಹೋಗಬೇಕಿತ್ತು. ಆಗ ಶಿಕ್ಷಕರು ಅಲ್ಪಾಯುಷಿಯಾದಾನು ಎಂದು ಹೆದರಿಸಿದ್ದರು. ಹತ್ತನೇ ತರಗತಿಯ ಪರೀಕ್ಷೆಗೂ ತುಂಬಾ ದೂರ ನಡೆದುಕೊಂಡು ಹೋಗಿ ಬರೆದಿದ್ದೆ. ಅವೆಲ್ಲದರ ಫಲಶ್ರುತಿಯಾಗಿ ನನ್ನ ದೇಹದಲ್ಲಿ ಕಸುವಿತ್ತು. ನೆರೆಯಲ್ಲೂ ಈಜುವ ಸಾಹಸ ಯಶಸ್ವಿಯಾಯಿತು.
ಮತ್ತೊಂದು ಸಲ ಸರಕಾರ ವಿಶಾಖಪಟ್ಟಣ ಬಂದರು ಅಪಾಯದಲ್ಲಿದೆ. ಸಮುದ್ರ ಕೊರೆತದಿಂದ ಅದನ್ನು ರಕ್ಷಿಸಲು ಉಪಾಯ ಅರಸುವಂತೆ ಕೋರಿದರು. ಈ ಸಮಸ್ಯೆಗೆ ಹಗಲಿರುಳು ಯೋಚಿಸಿ ಉತ್ತಮ ಪರಿಹಾರ ಕೊಟ್ಟೆ.
ಹೈದರಾಬಾದಿನಲ್ಲಿ ವಿಪರೀತ ಪ್ರವಾಹ. ಇದಕ್ಕಾಗಿ ಯೋಜನೆ ರೂಪಿಸಲು ಅಲ್ಲಿನ ನಿಜಾಮರಿಂದ ಬುಲಾವ್ ಬಂತು. ಆಗ ಹೈದರಾಬಾದ್ ನಗರದಿಂದ ಹದಿನಾರು ಮೈಲು ಆಚೆ ಇದ್ದ ಜಾಗದಲ್ಲಿ ಒಸ್ಮಾನ್ ಮತ್ತು ಹಿಮಾಯತ್ ಸಾಗರಗಳನ್ನು ನಿರ್ಮಿಸಲು ಸಲಹೆ ನೀಡಿದೆ. ಒಳಚರಂಡಿ-ನೀರು ಕಾಲುವೆಗಳ ವ್ಯವಸ್ಥೆಯನ್ನು ಮಾಡಿಸಿದೆ. ಇದರಿಂದ ಆಧುನಿಕ ಹೈದರಾಬಾದಿನ ನಿರ್ಮಾತೃ ಎಂದು ನನ್ನನ್ನು ಕರೆದರು.
ಪುಣೆಯಲ್ಲಿ ಸರೋವರದಿಂದ ನೀರು ಪೂರೈಕೆ ಮಾಡುವಾಗ ಸ್ವಯಂಚಾಲಿತ ಜಾರು ಬಾಗಿಲುಗಳು ವಿನ್ಯಾಸ ಮಾಡಿದೆ. ಪ್ರವಾಹ ಬಂದಾಗ ಅವು ಸ್ವಯಂ ತೆರೆದುಕೊಂಡು ಹೆಚ್ಚುವರಿ ನೀರು ಹೊರಗೆ ಹೋಗುತ್ತಿತ್ತು. ನೀರಿನ ಮಟ್ಟ ಕಡಿಮೆಯಾದರೆ ದ್ವಾರಗಳು ಅವಾಗಿಯೇ ಮುಚ್ಚಿಕೊಳ್ಳುತ್ತಿದ್ದವು. 1910 ರಲ್ಲಿ ಮಾಡಿದ ಈ ವ್ಯವಸ್ಥೆ ನಾನು 45 ವರ್ಷಗಳ ನಂತರ ಹೋದಾಗಲೂ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಈ ಯೋಜನೆಯ ಗುಣಮಟ್ಟವನ್ನು ಎಲ್ಲರೂ ಪ್ರಶಂಸಿಸಿದರು. ನಾನು ಆಗ ಹೇಳುತ್ತಾ ಇದ್ದೆ. ನಾವು ಮಾಡುವ ಪ್ರತಿಯೊಂದು ಕೆಲಸ ಶ್ರೇಷ್ಠವಾಗಿರಬೇಕು. ಉತ್ಕೃಷ್ಟತೆ ಕಾಣಬೇಕು. ನನ್ನ ಕೆಲಸ ರಸ್ತೆ ಗುಡಿಸುವುದಾದರೆ ನನ್ನ ಭಾಗದ ರಸ್ತೆ ಜಗತ್ತಿನ ಅತ್ಯಂತ ಸ್ವಚ್ಛ ರಸ್ತೆಯಾಗುವಂತಿರಬೇಕು.
ನನ್ನ ಸಮಸ್ಯೆ ಪರಿಹಾರ ಯೋಜನೆಗಳ ಜನಪ್ರಿಯತೆ ಅಂದು ಇಟಲಿಗೂ ತಲುಪಿತ್ತು. ಅಲ್ಲಿ ಮಿಲಾನ್ ಮತ್ತು ಈಡನ್ ನಗರಗಳಿಗೆ ನೀರು ಸರಬರಾಜು ಮಾಡಲು ಯೋಜನೆ ರೂಪಿಸ ಬೇಕಾಗಿತ್ತು. ಅಲ್ಲಿ ಬೀಳುವ ಮಳೆಯ ನೀರು ಇಂಗಿ ಹೋಗುತ್ತಿತ್ತು. ನಾನು ಅಲ್ಲಿಗೆ ಹೋಗಿ ಸುತ್ತಮುತ್ತಲ ಪ್ರದೇಶಗಳ ಅಧ್ಯಯನ ಮಾಡಿ ಅಲ್ಲಿಂದ 18 ಮೈಲು ದೂರದಲ್ಲಿ ಗುಡ್ಡಗಾಡಿನ ನೆಲದಡಿಯಲ್ಲಿ ಅಂತರ್ಜಲದ ಆಗರವನ್ನು ಗುರುತಿಸಿದೆ. ಅಲ್ಲಿ ಸರೋವರ ಮಾಡಿ ಕುಡಿಯುವ ನೀರಿಗೆ ವ್ಯವಸ್ಥೆ ಮಾಡಿದೆ. ಅಷ್ಟೇ ಅಲ್ಲದೆ ಒಳಚರಂಡಿ ವ್ಯವಸ್ಥೆಯ ನಿರ್ಮಾಣವೂ ಆಯಿತು. ಈ ಕಾರ್ಯಕ್ಕಾಗಿ ಬ್ರಿಟಿಷ್ ಸರ್ಕಾರ ಕೈಸರ್-ಇ-ಹಿಂದ್ ಎಂಬ ಬಿರುದು ನೀಡಿ ಗೌರವಿಸಿತು.
ನಾನು ಸರ್ಕಾರಿ ಕೆಲಸ ಮಾಡುವಾಗ ರಾತ್ರಿ ಅವರು ಕೊಟ್ಟ ಮೋಂಬತ್ತಿ ಬಳಸುತ್ತಿದ್ದೆ. ನನ್ನ ಕೆಲಸಕ್ಕೆ ನನ್ನದೇ ಮೊಂಬತ್ತಿಗಳನ್ನು ಉಪಯೋಗಿಸುತ್ತಿದ್ದೆ. ನನ್ನ ಕಾರ್ಯವೈಖರಿಯ ಬಗ್ಗೆ ತಿಳಿದುಕೊಂಡ ಮೈಸೂರು ಒಡೆಯರು ನನಗೆ ದಿವಾನ ಹುದ್ದೆಗೆ ಆಹ್ವಾನಿಸಿದರು. ಆಗ ನನ್ನ ತಾಯಿಗೆ ಹೇಳಿದೆ, ನೀನು ಮುಂದೆ ಯಾರ ಬಗೆಗೂ ಶಿಫಾರಸನ್ನು ನನ್ನ ತನಕ ತರುವುದಿಲ್ಲ ಎಂದು ಮಾತು, ವಚನ ಕೊಟ್ಟರೆ, ಶಪಥ, ಪ್ರತಿಜ್ಞೆ ಮಾಡಿದರೆ ಮಾತ್ರ ದಿವಾನಗಿರಿ ಒಪ್ಪುವೆ ಎಂದು. ನಾನು ದಿವಾನನಾಗಿದ್ದಾಗ ನನ್ನ ಯೋಜನೆಗಳಿಗೆ ಕೆಲಸಗಾರರನ್ನು ಆಯ್ಕೆ ಮಾಡುವಾಗ ಕೇವಲ ಪ್ರತಿಭೆಯನ್ನು ಮಾನದಂಡವಾಗಿ ನಿಷ್ಕರ್ಷೆ ಮಾಡುತ್ತಿದ್ದೆ. ಯಾರ ಶಿಫಾರಸಿಗೂ ಬಾಗುತ್ತಿರಲಿಲ್ಲ. ಈ ವಿಷಯದಲ್ಲಿ ಕೆಲವರಲ್ಲಿ ವೈರ ಕಟ್ಟಿಕೊಂಡದ್ದು ಇದೆ. ಇದಕ್ಕಾಗಿ ನನ್ನ ತಾತ್ವಿಕ ಸಿದ್ಧಾಂತವನ್ನು ಎಂದೂ ಬಲಿ ಕೊಡುತ್ತಿರಲಿಲ್ಲ.
ದೇಶ ಅಭಿವೃದ್ಧಿ, ಅಭ್ಯುದಯ, ಪ್ರಗತಿ ಹೊಂದಬೇಕಾದರೆ ಕೈಗಾರಿಕೆಗಳನ್ನು ಸ್ಥಾಪಿಸಬೇಕು. ಅದರಿಂದ ಸಾವಿರಾರು ಜನರಿಗೆ ಉದ್ಯೋಗ ಸಿಗುತ್ತದೆ, ಬಡತನ ನಿವಾರಣೆಯಾಗುತ್ತದೆ ಎನ್ನುತ್ತಿದ್ದೆ. ನನ್ನ ಬೌದ್ಧಿಕ ಔನ್ನತ್ಯದಿಂದ, ಅಗಾಧ ಪ್ರತಿಭೆಯಿಂದ ನವನವೀನ, ನೂತನ ಯೋಜನೆಗಳನ್ನು ರೂಪಿಸುತ್ತಿದ್ದೆ. ನನ್ನ ನಿರಂತರ ಪ್ರಯತ್ನದಿಂದ ಭದ್ರಾವತಿಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ತಲೆ ಎತ್ತಿ ನಿಂತಿತು. ಕೆಲವೇ ವರ್ಷಗಳಲ್ಲಿ ಲಾಭಗಳಿಸಲು ಆರಂಭಿಸಿತು. ಚೇರ್ಮನ್ ಆಗಿದ್ದ ನಾನು ಇದಕ್ಕೆ ಯಾವ ಹಣವನ್ನು ಪಡೆದಿರಲಿಲ್ಲ. ಆಗ ಸರ್ಕಾರ ಎರಡು ಲಕ್ಷ ರೂಪಾಯಿ ಸಂಭಾವನೆ ಕೊಟ್ಟಿತು. ನಾನು ಅದನ್ನು ಸ್ವೀಕರಿಸದೆ ಬೆಂಗಳೂರಿನಲ್ಲಿ ಪಾಲಿಟೆಕ್ನಿಕ್ ಕಾಲೇಜು ಕಟ್ಟಲು ಹೇಳಿದೆ. ಅದುವೇ ಜಯಚಾಮರಾಜೇಂದ್ರ ಪಾಲಿಟೆಕ್ನಿಕ್.
ಮೈಸೂರಿನಲ್ಲಿ ಕೆ ಆರ್ ಎಸ್ ಅಣೆಕಟ್ಟು ಕಟ್ಟಿದೆ, ಬೃಂದಾವನ ಗಾರ್ಡನ್ ನಿರ್ಮಿಸಿದೆ. ಈ ಯೋಜನೆಯಿಂದ ಮಂಡ್ಯದ ನೂರಾರು ಎಕರೆ ಭೂಮಿಗೆ ನೀರಾವರಿ ಭಾಗ್ಯ ದೊರಕಿತು. ಬಣ್ಣ ಮನುಜರಿಗೆ ಅನ್ನ ದೊರಕಿತು. ಗಂಧದ ಎಣ್ಣೆ, ಸಾಬೂನು ಕಾರ್ಖಾನೆ, ಜೋಗದ ಶರಾವತಿ ವಿದ್ಯುತ್ ಯೋಜನೆ, ಶೈಕ್ಷಣಿಕ ಅಭಿವೃದ್ಧಿಗಾಗಿ ಮೈಸೂರು ವಿಶ್ವವಿದ್ಯಾನಿಲಯ ಸ್ಥಾಪಿಸಿದೆ. ಭಾಷಾ ಅಭಿವೃದ್ಧಿಗಾಗಿ ಕನ್ನಡ ಸಾಹಿತ್ಯ ಪರಿಷತ್ತನ್ನು ಆರಂಭಿಸಿದೆ.
ನನಗಿನ್ನೂ ಚೆನ್ನಾಗಿ ನೆನಪಿದೆ. ಆಗ ನನಗೆ 85ರ ವಯಸ್ಸು. ಅಮೆರಿಕಕ್ಕೆ ಅಧ್ಯಯನ ಪ್ರವಾಸ ಕೈಗೊಂಡಿದ್ದೆ. ನಾಲ್ಕು ಮಹಡಿ ಕಟ್ಟಡದ ಮೇಲಂತಸ್ತಿನ ಯಂತ್ರ ಹೇಗೆ ಕಾರ್ಯನಿರ್ವಹಿಸುತ್ತದೆ ಎಂದು ನೋಡಲು ಹೋಗಬೇಕಾಗಿತ್ತು. ನನ್ನ ಜೊತೆಯವರಿಗೆ ಎಲ್ಲಾ ಭಯ. ಆದರೆ ನಾನು ನಿರ್ಭೀತನಾಗಿ ಆತ್ಮವಿಶ್ವಾಸದಿಂದ ತುದಿ ತಲುಪಿದೆ. ನನ್ನ ಈ ಆತ್ಮವಿಶ್ವಾಸ ದಿಟ್ಟ ನಿರ್ಧಾರಗಳು ನನ್ನ ಬದುಕು ಕಲಿಸಿದ ಪಾಠ.
ನನ್ನ ತಂದೆ ತೀರಿಹೋದ ಮೇಲೆ ನನ್ನ ಅಕ್ಕಪಕ್ಕದ ಮನೆಯಲ್ಲಿ ಕೆಲಸ ಮಾಡಿ ನನ್ನನ್ನು ಸಾಕಬೇಕಿತ್ತು. ಆಗ ನಾನು ಚಿಕ್ಕಬಳ್ಳಾಪುರದಲ್ಲಿ ಕಾಲೇಜು ವಿದ್ಯಾಭ್ಯಾಸಕ್ಕಾಗಿ ಒಬ್ಬರ ಮನೆಯಲ್ಲಿ ಉಳಿದೆ. ಖರ್ಚಿಗಾಗಿ ಅವರ ಇಬ್ಬರು ಮಕ್ಕಳಿಗೆ ಮನೆಪಾಠ ಮಾಡುತ್ತಿದ್ದೆ. ವಿದ್ಯುತ್ ಇಲ್ಲದ ಕಾಲದಲ್ಲಿ ದಾರಿಯ ದೀಪದಡಿ ಓದಿದೆ. ಬಡತನ, ಕಷ್ಟಪರಂಪರೆ ನನ್ನ ಗುರಿಯಿಂದ ನನ್ನನ್ನು ವಿಚಲಿತನಾಗಿಸಲಿಲ್ಲ. ಜೀವನ್ಮುಖಿಯಾಗಿ ಬದುಕಲು ಕಲಿತೆ. ಸ್ಕಾಲರ್ಶಿಪ್ ಪಡೆದು ಇಂಜಿನಿಯರಿಂಗ್ ಕಲಿತೆ. ಅಂದು ಪ್ರಿನ್ಸಿಪಾಲ್ ಚಾರ್ಲ್ಸ್ ಉಡುಗೊರೆ ಕೊಟ್ಟ ಡಿಕ್ಷನರಿಯನ್ನು 80 ವರ್ಷ ಉಪಯೋಗಿಸಿದೆ. ಅಗತ್ಯವಿರುವಷ್ಟೇ ವಸ್ತುಗಳನ್ನು ಕೊಂಡು ಕೊಳ್ಳುತಿದ್ದೆ. ಪ್ರತಿಯೊಂದು ವಸ್ತುವಿನ ಬೆಲೆಯನ್ನು ಅರಿತು ಬಳಸುತ್ತಿದ್ದೆ. ಸಮಯಕ್ಕೆ ಗೌರವ ಕೊಟ್ಟೆ. ನನ್ನ ಉಡುಗೆ ತೊಡುಗೆಯಲ್ಲಿ ಅತ್ಯಂತ ಸ್ವಚ್ಛತೆ ಮತ್ತು ಶಿಸ್ತು ಕಾಯ್ದುಕೊಳ್ಳುತ್ತಿದ್ದೆ.
ದೇಶದ ಅಭಿಯಂತರರಿಗೆ ನನ್ನ ಕಿವಿಮಾತು. ನಮ್ಮ ಭವಿಷ್ಯ ನಮ್ಮ ಕೈಯಲ್ಲಿದೆ. ದೇಶದ ಪ್ರಮುಖ ಯೋಜನೆಗಳಿಗೆ ಭದ್ರಬುನಾದಿ ಹಾಕುವಲ್ಲಿ ಇಂಜಿನಿಯರ್ ಗಳ ಪಾತ್ರ ಪ್ರಮುಖ. ನಿಮ್ಮ ಕ್ರಿಯಾಶೀಲತೆ, ಬುದ್ಧಿವಂತಿಕೆಗಳು ದೇಶವನ್ನು ಆರ್ಥಿಕವಾಗಿ ಅಭಿವೃದ್ಧಿಗೆ ಕೊಂಡೊಯ್ಯುತ್ತದೆ.
ನಾನು ನನ್ನ ಕಾರ್ಯವನ್ನು ನಿಸ್ಪೃಹನಾಗಿ ಮಾಡುತ್ತಾ ಹೋದೆ. ಬ್ರಿಟಿಷ್ ಸರ್ಕಾರ ನೈಟ್ ಹುಡ್ ಪದವಿ ನೀಡಿ ಗೌರವಿಸಿತು. ಸರ್ವಾಂಗೀಣ ಅಭಿವೃದ್ಧಿಗೆ ದೊಡ್ಡಪಾಲು ಕೊಟ್ಟ ಮೇಧಾವಿ ನೀನು ಎಂದು ಹೆಮ್ಮೆಯ ಭಾರತರತ್ನ ಪದವಿ ನೀಡಿ ದೇಶ ಸನ್ಮಾನಿಸಿತು.
ಕನ್ನಡದ ನೆಲ ವಿಜ್ಞಾನ, ತಂತ್ರಜ್ಞಾನಗಳ ತವರೂರಾಗಿದೆ ನಿಮ್ಮ ಅಗಾಧ ಪರಿಶ್ರಮ, ದೂರದೃಷ್ಟಿ, ಸಮಾಜಮುಖಿ ಯೋಜನೆಗಳೇ ಇದಕ್ಕೆ ಕಾರಣ ಎಂದ ಜನ ಮೈಸೂರು ಸಂಸ್ಥಾನದ ಭಾಗ್ಯವಿಧಾತ ಎಂದು ಹಾಡಿ ಹೊಗಳಿದರು. ನನ್ನನ್ನು ಮುಕ್ತಕಂಠದಿಂದ ಪಾಡಿದರು. ಒಂದು ವಿದ್ಯಮಾನವಾಗಿ ಕಂಡರು. ನನ್ನ ಬಗ್ಗೆ ಎಷ್ಟೋ ದಂತ ಕಥೆಗಳು ಹುಟ್ಟಿಕೊಂಡವು. ಹಳ್ಳಿಯ ಹೈದನೊಬ್ಬ ವಿಶೃಂಖಲನಾಗಿ ಭಾರತ ಮಾತ್ರವಲ್ಲ ವಿಶ್ವ ವಿಶ್ರುತನಾಗಿ ಸಾಧನೆ ಮಾಡಲು ಸಾಧ್ಯವಾಯಿತಲ್ಲ. ಶತಾಯುಷಿಯಾಗಿ ನನ್ನ ವಿಧಾಯಕ ಯೋಜನೆಗಳ ಮೂಲಕ ನೆಲ-ಜಲ, ಮಾತೆಯ ಋಣ ತೀರಿಸಿದ ಸಂತೃಪ್ತ ಜೀವನ ಸಾಗಿಸಿದ್ದೇನೆ. ನನಗೆ ಇನ್ನೇನು ಬೇಕು?
...............................................ಸುಮಾಡ್ಕರ್
ಸ್ವರೂಪ ಅಧ್ಯಯನ ಸಂಸ್ಥೆ
ಮಂಗಳೂರು
Mob: +91 99016 38372
********************************************