-->
ಬದಲಾಗೋಣವೇ ಪ್ಲೀಸ್..! - 20

ಬದಲಾಗೋಣವೇ ಪ್ಲೀಸ್..! - 20

ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಹಾಗೂ ತರಬೇತುದಾರರು
      
   
      ಎಲ್ಲವೂ ಇದೆ... ಆದರೆ ಮುಖ್ಯವಾದುದ್ದೆ ಇಲ್ಲ.!
    -----------------------------------------------
        ಬದುಕಿನ ದಿನನಿತ್ಯದ ಆಹಾರ ಹುಡುಕಾಟಕ್ಕಾಗಿ ಹೊರಟ ಮರಿಪಕ್ಷಿಯೊಂದು ಪಂಜರದೊಳಗಿನ ಪಕ್ಷಿಗಳನ್ನು ನೋಡಿ ತನ್ನ ತಾಯಿ ಪಕ್ಷಿಯಲ್ಲಿ ಪ್ರಶ್ನೆಯೊಂದನ್ನು ಕೇಳುತ್ತದೆ  "ಅಮ್ಮಾ , ದಿನನಿತ್ಯವೂ ಆಹಾರ ಹುಡುಕಾಡಲು ಕಷ್ಟಪಡುವ ನಾವು ಅದೃಷ್ಟಶಾಲಿಗಳಲ್ಲ. ನಮಗಿಂತ ಅದೃಷ್ಟ ಶಾಲಿಗಳೆಂದರೆ ಪಂಜರದೊಳಗಿರುವ ಪಕ್ಷಿಗಳು. ಅವುಗಳಿಗೆ ಆಹಾರ ಹುಡುಕುವ ಸಂಕಟವಿಲ್ಲ. ನೀರಿಗಾಗಿ ಪರಿತಪಿಸುವ ಪ್ರಶ್ನೆಯೇ ಇಲ್ಲ. ಕಾಲಡಿಯಲ್ಲಿಯೇ ನೀರು ಆಹಾರಗಳು ಸಿದ್ಧವಾಗಿರುತ್ತದೆ. ಹಾವು , ಪ್ರಾಣಿ, ದೊಡ್ಡ ಪಕ್ಷಿಗಳು ಇತ್ಯಾದಿ ವೈರಿ ಆಕ್ರಮಣದ ಹೆದರಿಕೆಯಿಲ್ಲ. ಚಿಕ್ಕ ಪಂಜರದೊಳಗೆ  ಕಾಲಕಾಲಕ್ಕೆ ಬೇಕಾದೆಲ್ಲ ಸೌಲಭ್ಯಗಳನ್ನು ಮಾಲೀಕನು ಕಲ್ಪಿಸುತ್ತಾನೆ. ಅದರದ್ದು ಕೂತಲ್ಲೇ ತಿಂದು ಬದುಕುವ  ಸ್ವರ್ಗ ಸದೃಶ ಬದುಕು. ಅಮ್ಮಾ ಪ್ಲೀಸ್.. ನಾವು ಕೂಡಾ  ಪಂಜರದ ಪಕ್ಷಿಗಳಾಗೋಣವೇ...!" ಎಂದಿತು.
      ಆಗ ನಸುನಕ್ಕುಬಿಟ್ಟ ತಾಯಿಯು ಪಂಜರ ಬದುಕಿಗೆ  ಆಕರ್ಷಿತವಾದ ಮರಿಗೆ "ಅಯ್ಯಾ ಮಗುವೇ, ಪಂಜರದೊಳಗಿರುವ ಪಕ್ಷಿಗೆ ಎಲ್ಲವೂ ಇದೆ ಆದರೆ ಎಲ್ಲದಕ್ಕಿಂತ ಮುಖ್ಯವಾಗಿ ಬದುಕಿಗೆ ಬೇಕಾಗಿರುವಂಥದ್ದೇ ಇಲ್ಲ. ಅದು ತಾನಿರುವ  ಚಿಕ್ಕ ಪಂಜರದಿಂದ ಹೊರಗಡೆ  ಬರಲು ಅವಕಾಶವಿಲ್ಲ. ಅದರದ್ದು ಬಂಧಿತ ಜೀವನ. ಅದಕ್ಕೆ ಅದರ ಹಾರಾಟದ ಪ್ರತಿಭೆಯನ್ನು ಪ್ರದರ್ಶಿಸಲು ಸಾಧ್ಯವಿಲ್ಲ.  ತನ್ನಿಷ್ಟದಂತೆ ಬದುಕುವ ಸ್ವಂತಿಕೆಯನ್ನು ಪ್ರದರ್ಶಿಸಲು ಅವಕಾಶವೇ ಇಲ್ಲ. ಅದು ಎಲ್ಲದಕ್ಕೂ ಇನ್ನೊಬ್ಬನ್ನು ಆಶ್ರಯಿಸ ಬೇಕಾಗಿದೆ. ಪರಾವಲಂಬಿ ಬದುಕಿಗೆ ಒಗ್ಗಿಕೊಂಡ ಅದಕ್ಕೆ ಪಂಜರದ ಹೊರಗಡೆಯ ಪ್ರಪಂಚದ ಪರಿಚಯವೇ ಇಲ್ಲ. ಪ್ರಕೃತಿಯ ಸೌಂದರ್ಯ ಕಂಡಿಲ್ಲ. ನೀರಿನ ಜುಳು ಜುಳ ನಿನಾದ ಕೇಳಿಲ್ಲ. ಗಾಳಿಯ ಸ್ಪರ್ಶ ಸುಖ ಸುಖಿಸಿಲ್ಲ. ಮಣ್ಣಿನ ಮಾಂತ್ರಿಕತೆಯನ್ನು ಅನುಭವಿಸಿಲ್ಲ. ಆಹಾರ ಹುಡುಕಾಟದಲ್ಲಿರುವ  ನೋವು ನಲಿವಿನ  ನೋಟ ನೋಡಿಲ್ಲ. ತನ್ನ ಬಂಧು ಬಳಗ ಸ್ನೇಹಿತರ ಒಡನಾಟ ಒಡಮೂಡಿಸಿಲ್ಲ. ಅದಕ್ಕೆ ಎಲ್ಲವೂ ಇದೇ.... ಆದರೆ ಮುಖ್ಯವಾದುದ್ದೆ  ಇಲ್ಲ. ಆದರೆ ನಮಗೆ ಯಾವುದೂ ಇಲ್ಲದಿದ್ದರೂ ಸ್ವಾತಂತ್ರವಿದೆ. ನಾವು ದಿನನಿತ್ಯ  ಕ್ಷಣಕ್ಷಣವೂ ನಿಸರ್ಗದೊಂದಿಗೆ ಕೂಡಿ ಮೇಲಿನೆಲ್ಲ ಸುಖ ಅನುಭವಿಸಬಹುದು. ನಮ್ಮ ಸಾಮರ್ಥ್ಯ ಹಾಗೂ ಪ್ರತಿಭೆಗಳನ್ನು ಮುಕ್ತವಾಗಿ ಪ್ರದರ್ಶಿಸಬಹುದು. ಯಾರನ್ನು ಅವಲಂಬಿಸದೇ  ಸ್ವಾವಲಂಬಿಯಾಗಿ ಬದುಕಬಹುದು. ನನ್ನ ಮುದ್ದು ಮರಿಯೇ... ಅದು ಪಂಜರದ ಪಕ್ಷಿ .... ನಾವು ಮುಕ್ತ ಪಕ್ಷಿ .... ಈಗ ನಿನ್ನ ಆಯ್ಕೆ ಯಾವುದು ?" ಎಂದಿತು.
       ಬದುಕಿನ ಪರ್ವ ಕಾಲದಲ್ಲಿ ಮರಿಪಕ್ಷಿಯ ಸ್ಥಾನದಲ್ಲಿರುವ  ಮುದ್ದುಮಕ್ಕಳೇ ನಿಮ್ಮ ಆಯ್ಕೆ ಯಾವುದು? ನೀವು ಸ್ವಂತಿಕೆಯಿಲ್ಲದ , ಪ್ರತಿಭಾ ಪ್ರದರ್ಶನಕ್ಕೆ ಅವಕಾಶವಿಲ್ಲದ , ಸ್ವತಂತ್ರ ರಹಿತ ಭಾವರಹಿತ ಪಂಜರದ ಪಕ್ಷಿ ಯಾಗಬಯಸುವಿರಾ..?  ಅಥವಾ ಸ್ವಂತಿಕೆಯುಳ್ಳ , ಪ್ರತಿಭಾ ಪ್ರದರ್ಶನಕ್ಕೆ ಅವಕಾಶವಿರುವ , ಸ್ವಾತಂತ್ರ್ಯ ವುಳ್ಳ ಭಾವ ಸಹಿತ ಮುಕ್ತ ಪಕ್ಷಿಯಾಗ ಬಯಸುವಿರಾ..?  ಆಯ್ಕೆ ನಿಮ್ಮದು... ಆದರೆ ಧನಾತ್ಮಕ ಆಯ್ಕೆ ನಿಮ್ಮದಾಗಿರಲಿ. ಈ ಬದಲಾವಣೆಗೆ ಯಾರನ್ನು ಕಾಯದೇ ನಾವೇ ಬದಲಾಗೋಣ. ಬದಲಾಗೋಣವೇ ಪ್ಲೀಸ್..! ಏನಂತೀರಿ...?
...........................  ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಮತ್ತು ತರಬೇತುದಾರರು 
Mob: +91 99802 23736
********************************************


Ads on article

Advertise in articles 1

advertising articles 2

Advertise under the article