-->
ಬದಲಾಗೋಣವೇ ಪ್ಲೀಸ್ - 19

ಬದಲಾಗೋಣವೇ ಪ್ಲೀಸ್ - 19

ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಹಾಗೂ ತರಬೇತುದಾರರು

         ಬದಲಾಗೋಣವೇ ಪ್ಲೀಸ್ - 19
   ------------------------------------------
        ನರ್ಸರಿ ಗಿಡ ಮಾರಾಟ ಕೇಂದ್ರವೊಂದರಲ್ಲಿ ಕುತೂಹಲಕಾರಿಯಾಗಿ  ಮಾತುಕತೆ ನಡೆಯುತಿತ್ತು.
ಸಂದರ್ಶಕ : ಈ ವಿಚಿತ್ರವಾದ ಚಿಕ್ಕಗಿಡ ಯಾವುದು?
ಮಾಲೀಕ : ಇದು ಬೊನ್ಸಾಯ್ ಕೃಷಿಯ ಆಲದ ಮರ.
ಸಂದರ್ಶಕ: ಹೌದೇ!... ಇದಕ್ಕೆ ಎಷ್ಟು ವರ್ಷ ಆಗಿರಬಹುದು...?
ಮಾಲೀಕ : ಸುಮಾರು 80 ವರ್ಷ ಹಳೆಯದು.
ಸಂದರ್ಶಕ: ಅಯ್ಯೋ! 80 ವರ್ಷಕ್ಕೆ ನೂರಾರು ಅಡಿ ಬೆಳೆಯಬೇಕಾದ ಈ ಆಲದ ಮರ ಈ ರೀತಿ ಏಕೆ  ಎರಡು ಅಡಿ ಎತ್ತರ ಮಾತ್ರ ಬೆಳೆದಿದೆ.
ಮಾಲೀಕ : ಅದು ಎತ್ತರವಾಗಿ ಬೆಳೆಯದಂತೆ ಆಗಾಗ ರೆಂಬೆ ಕೊಂಬೆಗಳನ್ನು ಕತ್ತರಿಸುತ್ತೇವೆ. ಬೇರು ಹೆಚ್ಚು ಆಳಕ್ಕಿಳಿಯದಂತೆ ಆಗಾಗ ಬೇರುಗಳನ್ನು ಕತ್ತರಿಸುತ್ತೇವೆ. ಹಾಗಾಗಿ ವಿಶಾಲವಾಗಿ ಬೆಳೆಯಬಹುದಾದ ಮರವನ್ನು ಅತೀ ಕುಬ್ಜವಾಗಿ ಬೆಳೆಸಿದ್ದೇವೆ (ಏನೋ ಮಹಾನ್ ಸಾಧಿಸಿದ ನಗು) ಹಾಗಾಗಿ ಈ ಮರವು ನನ್ನಿಷ್ಟದಂತೆ ರೂಪಿಸಲ್ಪಟ್ಟಿದೆ.
     ಹೌದಲ್ವ , ಅವಕಾಶ ಕೊಟ್ಟಿದ್ದರೆ ಆಲದ ಮರವು 80 ವರ್ಷದಲ್ಲಿ ವಿಶಾಲವಾಗಿ ಹಬ್ಬಿ ನೂರಾರು ಜೀವಿಗಳ ನೋವು-ನಲಿವು, ದುಃಖ-ದುಮ್ಮಾನ , ಆಟ-ಪಾಠ , ಏಳು- ಬೀಳುಗಳಿಗೆ ಸಾಕ್ಷಿಯಾಗಿ ನೂರಾರು ಬದುಕಿಗೆ ಆಶ್ರಯ ತಾಣವಾಗುತಿತ್ತು. ಆದರೆ ತನ್ನ ಮಾಲೀಕನ ಸಂಕುಚಿತ ದೃಷ್ಟಿಕೋನದಿಂದಾಗಿ  ಬೆಳೆಯಲು ಪೂರಕವಾದ ರೆಂಬೆ - ಕೊಂಬೆ ಹಾಗೂ ಬೇರುಗಳನ್ನು ಕತ್ತರಿಸಿಕೊಂಡ ಕಾರಣ ಅವಕಾಶ ಹೀನವಾಗಿ ತನ್ನ ಸ್ವಂತಿಕೆಯನ್ನು ತೋರಿಸಲಾಗದೆ ಇನ್ನೊಬ್ಬರ ಖುಷಿಗಾಗಿ ಬೆಳೆಯುವ ನಿಷ್ಟ್ರಯೋಜಕ ಎರಡು ಅಡಿಯ ಗಿಡವಾಗಿ ಬೆಳೆದಿದೆ....ಎಂಥಾ ವಿಪರ್ಯಾಸ !
        ಈ ಬೊನ್ಸಾಯ್  ಆಲದ ಮರದ ಸ್ಥಾನದಲ್ಲಿ ನಮ್ಮ ಪ್ರತಿಭಾವಂತ ಮಕ್ಕಳನ್ನು ಇಟ್ಟರೆ ಒಂದು ಕ್ಷಣ ವಿಚಲಿತರಾಗಬೇಕಾಗುತ್ತದೆ. ಪ್ರತಿಭೆಗಳಿದ್ದರೂ ಕೇವಲ ಅಂಕವೆಂಬ ಬೊನ್ಸಾಯ್ ಕೃಷಿ ಬೆಳೆಗೆ ಆಸ್ತಕರಾದ ಶಿಕ್ಷಕರು ಹಾಗೂ ಹೆತ್ತವರ (ಅಪವಾದಗಳನ್ನು ಹೊರತು ಪಡಿಸಿ) ಕೈಗೆ ಸಿಕ್ಕಿ ಅದೆಷ್ಟೂ ಪ್ರತಿಭೆಗಳು ಕಮರಿ ಹೋಗಿರಬಹುದು. ಪ್ರತಿಭಾ ವಿಕಸನಕ್ಕೆ ಅವಕಾಶ ವಂಚಿತರಾಗಿ ತನ್ನ ಹೊತ್ತವರ (ಹೆತ್ತವರು) ಮೂಗಿನ ನೇರಕ್ಕೆ ಬೆಳೆಯುತ್ತಿರುವ ಅಸಂಖ್ಯಾತ ಪ್ರತಿಭೆಗಳ ಸ್ಥಿತಿ ನೆನೆದುಕೊಂಡರೆ  ಒಂದು ಕ್ಷಣ ಕಣ್ಣಂಚಿನಲ್ಲಿ ನೀರು ಬರುತ್ತದೆ. ಎಲ್ಲರೂ ಮಕ್ಕಳನ್ನು ಬೈಯುವವರೇ...!! ಹೀಯಾಳಿಸುವವರೇ...!!  ಬುದ್ದಿ ಹೇಳುವವರೇ...!! ಆದರೆ ಮಕ್ಕಳನ್ನು ಮಕ್ಕಳಂತೆ ನೋಡುವವರು ಯಾರೂ ಇಲ್ಲ , ಮಕ್ಕಳನ್ನು ಅಪ್ಪುವವರಿಲ್ಲ .. ಒಪ್ಪುವವರಿಲ್ಲ ... ಅರ್ಥ ಮಾಡಿಕೊಂಡವರಿಲ್ಲ..!!
           ಕೊರೋನಾ ಮಹಾಮಾರಿಯ ಸಂದರ್ಭದಲ್ಲಂತೂ ಲಾಕ್ ಡೌನ್ ನಿಂದಾಗಿ ಪ್ರತಿಭಾ ಪ್ರಕಟಣೆಗೆ ಅವಕಾಶವಿಲ್ಲದೆ ಅಕ್ಷರಶಃ ಬಂಧಿಖಾನೆಯಲ್ಲಿದ್ದಂತೆ ಕಳಾಹೀನವಾದ ಮಕ್ಕಳಿಗೆ  ಬೆಳ್ಳಿಬೆಳಂದಿಂಗಳಾಗಿ ಆಶಾಕಿರಣವಾಗಿ  ಮೂಡಿ ಬಂದ ಚೇತನವೇ ಮಕ್ಕಳ ಜಗಲಿ.
       ಇದ್ದುದ್ದನ್ನು ಕತ್ತರಿಸಿ ಕುಬ್ಜಗೊಳಿಸುವ ಬೊನ್ಸಾಯ್ ಕೃಷಿಗಿಂತ ಇದ್ದುದ್ದಕ್ಕಿಂತಲೂ ಹೆಚ್ಚಿನದ್ದನ್ನು ಬೆಳೆಯುವ  ಬೆಳೆಸುವ ಬೆಳಕಿನ ಮುನ್ನಡೆಸುವ ಪ್ರತಿಭಾ ವಿಕಸನದ ಕೃಷಿಯೇ ಶ್ರೇಷ್ಠವೆಂದು ತೋರಿಸಿದ ಮಕ್ಕಳ ಪಾಲಿನ ಅದ್ಭುತ ವೇದಿಕೆಯೇ ಮಕ್ಕಳ ಜಗಲಿಯಾಗಿದೆ. ಇಂದು ಮಾತೃ ಜಿಲ್ಲೆಯಿಂದ ಅಂತರ ಜಿಲ್ಲಾಮಟ್ಟಕ್ಕೆ , ರಾಜ್ಯ ಮಟ್ಟದಿಂದ ಅಂತರ ರಾಜ್ಯ ಮಟ್ಟಕ್ಕೆ, ದೇಶ- ವಿದೇಶ ಮಟ್ಟದಿಂದಲೂ ಪ್ರತಿಕ್ರಿಯೆಗಳನ್ನು ಪಡೆದಿರುವುದು ನಿಜಕ್ಕೂ ಶ್ಲಾಘನೀಯ. ಬಿಂದು ಬಿಂದುವಿನಿಂದ ಸಿಂಧೂವಿನ ತರಹ ಹೆಜ್ಜೆ ಹೆಜ್ಜೆಗಳ ಮೂಲಕ ಶೂನ್ಯದಿಂದ ಒಂದರ ಹರೆಯಕ್ಕೆ ಕಾಲಿಡುತಿರುವ ಸಂಭ್ರಮದ ಈ ಸುಸಂದರ್ಭದಲ್ಲಿ ನಾವೆಲ್ಲರೂ ಮಕ್ಕಳ ಜಗಲಿಯ ಸಾಧನೆಗೆ ಸಾಕ್ಷಿಗಳಾಗೋಣ.  ಬನ್ನಿ ಬೊನ್ಸಾಯ್ ನಿಂದ ಸ್ವರೂಪಕ್ಕೆ ಸ್ವಂತಿಕೆಗೆ ಸ್ವತಂತ್ರ ವಿಕಸನಕ್ಕೆ ಅವಕಾಶ ಕೊಡುವ ಬದಲಾವಣೆಗೆ ಬದಲಾಗೋಣ. ಈ ಬದಲಾವಣೆಗೆ ಯಾರನ್ನು ಕಾಯದೆ ನಾವೇ ಬದಲಾಗೋಣ. ಮಕ್ಕಳಿಗಾಗಿ ಬದಲಾಗೋಣವೇ ಪ್ಲೀಸ್..! ಏನಂತೀರಿ...?

 ...........................  ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಮತ್ತು ತರಬೇತುದಾರರು
Mob: +91 99802 23736
*********************************************
Ads on article

Advertise in articles 1

advertising articles 2

Advertise under the article