-->
ಪದಗಳ ಆಟ ಭಾವ ಚಿತ್ರ ಪಾತ್ರ ಸಂಚಿಕೆ - 16

ಪದಗಳ ಆಟ ಭಾವ ಚಿತ್ರ ಪಾತ್ರ ಸಂಚಿಕೆ - 16

ಪದಗಳ ಆಟ
ಭಾವಚಿತ್ರ
ಪಾತ್ರ
ಸಂಚಿಕೆ - 16
        
                  ತೊಟ್ಟ ಶಪಥವ ಪೂರೈಸದೆ
               ಕಟ್ಟುವವನಲ್ಲ ಬಿಟ್ಟ ಶಿಖೆಯನು
         ಪ್ರಾಚೀನ ಭಾರತದ ಶ್ರೇಷ್ಠ ಗುರು, ಮೇಧಾವಿ, 
 ಪ್ರಗಲ್ಭ , ಪ್ರಾಜ್ಞ , ತತ್ವಜ್ಞಾನಿ , ಭಾರತೀಯ ರಾಜ್ಯಶಾಸ್ತ್ರ , ಅರ್ಥಶಾಸ್ತ್ರ , ನೀತಿ ಶಾಸ್ತ್ರಗಳ ಪ್ರವರ್ತಕ. ಇವುಗಳ ಬಗ್ಗೆ ಅಧಿಕಾರವಾಣಿಯಿಂದ ಮಾತನಾಡಬಲ್ಲ ಜ್ಞಾನಿ. ಔಷಧಶಾಸ್ತ್ರ , ಖಗೋಳಶಾಸ್ತ್ರ ಗಳಲ್ಲಿ ಪರಿಣತ, ಸಿದ್ಧಹಸ್ತ. ಭಾರತದಲ್ಲಿ ಮೊಟ್ಟಮೊದಲು ಉತ್ತಮ ಆಡಳಿತದ ಮಾದರಿಯನ್ನು ಪ್ರಾಯೋಗಿಕವಾಗಿ ಅನುಷ್ಠಾನಕ್ಕೆ ತಂದು ತೋರಿಸಿದ ಪ್ರಖರ ಬುದ್ಧಿಮತ್ತೆಯ ತೀಕ್ಷ್ಣಮತಿ, ರಾಜತಾಂತ್ರಿಕ ನಿಪುಣ. ತಕ್ಷಿಲಾದಲ್ಲಿ ರಾಜ್ಯಶಾಸ್ತ್ರ ಕಲಿಯುತ್ತಿರುವಾಗ ಅಖಂಡ ಭಾರತದ ಕನಸು ಕಂಡು ಅದಕ್ಕೆ ತಕ್ಕಂತೆ ಹಲವು ದಶಕಗಳ ಬೃಹತ್ ಯೋಜನೆಯನ್ನು ತನ್ನ ದೂರದರ್ಶಿತ್ವದಿಂದ ರೂಪಿಸಿ, ಅದನ್ನು ಸಾಕಾರಗೊಳಿಸಲು ತಾನು ಕಲಿತ ವಿದ್ಯೆಯನ್ನು, ತಂತ್ರಗಳನ್ನು ಅಪೂರ್ವ ರೀತಿಯಲ್ಲಿ, ಯುಕ್ತಾಯುಕ್ತತೆಯಿಂದ ಬಳಸಿ, ಸಾಧಿಸಿ ತೋರಿಸಿದ ಮೇರುಸಾಧಕ.
        ಭಾರತದ 16 ಜನಪದಗಳನ್ನು ಒಗ್ಗೂಡಿಸಿ ಏಕಮೇವ ಬೃಹತ್ ಸಾಮ್ರಾಜ್ಯ ಕಟ್ಟುವ ಪ್ರಮಾಣಮಾಡಿದ. ತನಗಾದ ಅವಮಾನವನ್ನು ಅವಮಾನದಿಂದ ಉಂಟಾದ ಕೋಪಾವೇಶವನ್ನು ಸಮರ್ಥವಾಗಿ ಹಠವಾಗಿ ಪರಿವರ್ತಿಸಿ ಗುರಿ ಹಾಕಿಕೊಂಡ ಆಚಾರ್ಯ. ಆ ಗುರಿಸಾಧನೆಗಾಗಿ ತನ್ನ ಜೀವಿತದ ಪ್ರತಿ ಕ್ಷಣ, ಪ್ರತಿ ನುಡಿ, ಪ್ರತಿ ನಡೆ, ಪ್ರತಿ ನೋಟ, ಪ್ರತಿಕಣ, ಪ್ರತಿ ಧಾತುವನ್ನು ಮುಡುಪಾಗಿಟ್ಟ. ರಾಜನ ಆಟವಾಡುತ್ತಿದ್ದ ಸಾಮಾನ್ಯ ಹುಡುಗನಲ್ಲಿ ಸಾಮ್ರಾಟನನ್ನು ಕಂಡ. ಆತನಿಗೆ ತನ್ನೆಲ್ಲಾ ವಿದ್ಯೆಯನ್ನು ಧಾರೆಯೆರೆದು, ತನ್ನ ಕನಸನ್ನು, ದರ್ಶನವನ್ನು ಆತನ ಎದೆಯೊಳಗೆ ಬಿತ್ತಿದ. ಕಾಲ ಕಾಲಕ್ಕೆ ಬೇಕಾದ ಕೌಶಲ್ಯಗಳನ್ನು, ರಾಜ್ಯಶಾಸ್ತ್ರ ಜ್ಞಾನವನಿತ್ತು ಪೋಷಿಸಿದ. ಅಲೆಕ್ಸಾಂಡರ್ ನಂತಹ ಶತ್ರುಗಳ ಗೆಳೆತನ ಮಾಡಿ ಅವರ ದೌರ್ಬಲ್ಯಗಳನ್ನು ಅಧ್ಯಯನ ಮಾಡಿದ. ಗೂಢಚಾರಿಕೆಯನ್ನು ಸಮರ್ಥವಾಗಿ ಬಳಸಿಕೊಂಡ. ಕಾಡಿನವರಲ್ಲೂ ನಾಡಿನವರಲ್ಲೂ ಅಖಂಡ ಭಾರತದ ಕನಸನ್ನು ಬಿತ್ತಿ, ದೇಶಪ್ರೇಮವನ್ನು ಹೊತ್ತಿಸಿ ಅವರವರ ವಿದ್ಯೆಗಳಲ್ಲಿ ವಿಶೇಷ ಸಾಧನೆ ಮಾಡುತ್ತಿರುವುದಕ್ಕೆ ಪ್ರೇರಣೆ ನೀಡಿದ. ಅನೃತದ ಸೋಂಕಿಲ್ಲದ, ಅಮೃತ ಮನದ, ಸದಾ ಸತ್ಯಪರವಾದ, ಪರ ಹಿತವಾದಿ ಆಚಾರ್ಯ ಲಿಂಗಭೇದವಿಲ್ಲದೆ ಪುಟ್ಟ ಸೈನ್ಯವನ್ನು ಕಠಿಣವಾದ ತರಬೇತಿ ಕೊಟ್ಟು ಸಿದ್ಧಮಾಡಿದ.
       ವಿಷಕನ್ಯೆ ಎಂಬ ಕಿಶೋರಿಗಳ ಸೈನ್ಯದಲ್ಲಿ ಅವರ ಆಹಾರದಲ್ಲಿ ಅಧಿಕ ಪ್ರಮಾಣದ ವಿಷ ಸೇರಿಸುತ್ತಾ ನಿರೋಧಕ ಶಕ್ತಿಯನ್ನು ವರ್ಧಿಸುವಂತೆ ಮಾರ್ಗದರ್ಶನ ನೀಡಿದ. ಕಠಿಣ ಪರಿಸ್ಥಿತಿಯಲ್ಲೂ ಅವರ ದೇಹ ಕ್ಷಮತೆ ದುರ್ಬಲವಾಗದಂತೆ ಬೆಳೆಸಿದ.
        ನಾಡಿನುದ್ದಕ್ಕೂ ಓಡಾಡುತ್ತಾ ಜನಬಲವನ್ನು ಒಗ್ಗೂಡಿಸಲು ಅವರಿಗೆ ನೆರವಾದದ್ದು ಸಮುದ್ರಶಾಸ್ತ್ರ. ಈ ವಿಶೇಷ ವಿದ್ಯೆಯಂತೆ ಆಚಾರ್ಯರಿಗೆ ಒಬ್ಬ ವ್ಯಕ್ತಿಯ ಭಾವನೆಗಳನ್ನು ನೋಡಿ ಅವರ ಮನಸ್ಸಲ್ಲಿ ನಡೆಯುವ ಯೋಚನೆಗಳನ್ನು ವಿಶ್ಲೇಷಿಸಿ, ತೀರ್ಮಾನಿಸುವ ಅಪೂರ್ವ ಕೌಶಲಸಿದ್ಧಿಸಿತ್ತು.
    ಆಚಾರ್ಯರು ಎಷ್ಟು ಬುದ್ಧಿವಂತ ರಾಗಿದ್ದರೆಂದರೆ ಪ್ರತಿಯೊಂದು ಸನ್ನಿವೇಶಕ್ಕೆ ನೂರು ಬದಲಿ ದಾರಿಗಳನ್ನು, ನಡೆಗಳನ್ನು ಯೋಚಿಸಿ, ಮಾನಸಿಕ ನಕ್ಷೆ ತಯಾರಿಸುತ್ತಿದ್ದರು. ಸಾಮಾನ್ಯ ವ್ಯಕ್ತಿಗಿಂತಲೂ ಬಹಳ ಮುಂಚೆಯೇ ಪರಿಹಾರವನ್ನು ವಿಕೇಂದ್ರೀಕೃತವಾಗಿ, ವಿಭಿನ್ನವಾಗಿ ಚಿಂತಿಸಿ, ನೀಡಬಲ್ಲ ಕುಶಾಗ್ರಮತಿಗಳಾಗಿದ್ದರು. ಭಾವಿ ಸಾಮ್ರಾಟನಿಗೆ ಅವರು ಸಾಂದರ್ಭಿಕವಾಗಿ ನೀಡಿದ ಉಪದೇಶಗಳು ಅವರ ಹೆಸರಿನ ನೀತಿಯಿಂದಲೇ ಖ್ಯಾತವಾಗಿದೆ. 
     ಕೋಪ ಕೆಟ್ಟದು ಶತ್ರುವಿಗೆ ಕೂಡಲೇ ಉತ್ತರಿಸಬಾರದು.
       ಮನೋಬಲ ಹೆಚ್ಚಿಸುವವರ ಜೊತೆ ಇರು. ಋಣಾತ್ಮಕ ಯೋಚನೆ ಮಾಡುವವರಿಂದ ದೂರವಿರು. 
  ಕೈಗೆ ವಿಷ ಸೇರಿದರೆ ಆ ಭಾಗವನ್ನು ಕತ್ತರಿಸು. 
       ವೈರಿಗಳನ್ನು ದೂಷಿಸಬೇಡ ದ್ವೇಷಿಸಬೇಡ , ಗೆಳೆತನ ಮಾಡು ಸೂಕ್ಷ್ಮಾತಿ ಸೂಕ್ಷ್ಮಗಳನ್ನು ಅವಲೋಕಿಸು.
           ಬಲದ ಬದಲು ಬುದ್ಧಿವಂತಿಕೆಯಿಂದ ಹೋರಾಡು. ಯುಕ್ತಿ ಮಾರ್ಗದಿಂದ ಮುನ್ನುಗ್ಗು.
ಭಯವನ್ನು ಗೆಲ್ಲು.
       ಪ್ರಜಾರಂಜಕನಾಗಿರಬೇಕು ಸರ್ವರನ್ನು ಸಮಾನತೆಯಿಂದ ಕಾಣಬೇಕು.
      ಪ್ರಜೆಗಳಿಂದ ವಸೂಲಿ ಮಾಡಿದ ತೆರಿಗೆ ಅವರ ಕಲ್ಯಾಣಕ್ಕೆ, ಅಭಿವೃದ್ಧಿಗೆ, ಅಭ್ಯುದಯಕ್ಕೆ ಬಳಕೆಯಾಗಬೇಕು. 
       ಈ ಸುಶಿಕ್ಷಣದಿಂದ ಸಾಮ್ರಾಟನನ್ನು ತಯಾರಿ ಮಾಡುತ್ತಾ ಆತನಿಗಾಗಿ ಸಾಮ್ರಾಜ್ಯವನ್ನು ಕಟ್ಟುತ್ತಾ ತನ್ನ ವಿವೇಕದಿಂದ, ದೈತ್ಯ ಪ್ರತಿಭೆಯಿಂದ, ಅಪೂರ್ವ ಚಿತ್ತ ಸ್ವಾಸ್ಥ್ಯದಿಂದ ಅತ್ಯಂತ ಕಡಿಮೆ ರಕ್ತಪಾತವಾಗುವಂತೆ, ವೈರಿಗಳು, ರಿಪುಗಳು, ಅವರೊಳಗೆ ಪರಸ್ಪರ ಕಾದಾಡಿ ನೆಲಕಚ್ಚುವಂತೆ ಮಾಡಿ, ಶಾಂತಿಯನ್ನು ಮರುಸ್ಥಾಪಿಸಿ, ಅಖಂಡ ಸಮಗ್ರಭಾರತವನ್ನು ಗೆಲ್ಲಿಸಿಕೊಟ್ಟ. ನ ಭೂತೋ ನ ಭವಿಷ್ಯತಿ ಎಂಬ ಆಚಾರ್ಯರ ಚಾಣಾಕ್ಷತನಕ್ಕೆ ಶಬ್ದಗಳೆ ಸೋತುಬಿಡುತ್ತವೆ. ಮನಸ್ಸು ಶರಣಾಗುತ್ತದೆ. ಕಾಲಚಕ್ರ ಹಿಂದೆ ತಿರುಗಬಾರದೇ ಎಂದು ಅನಿಸುತ್ತದೆ. ಆಚಾರ್ಯರ ಜೀವನಗಾಥೆ ಓದುತ್ತಿದ್ದರೆ. ಆ ಕಾಲದ ಭಾಗವಾಗಿದ್ದೇವೆಯೋ ಅಥವಾ ವ್ಯಕ್ತಿ ಆಗಿದ್ದೇವೆಯೋ ಎನ್ನುವ ತಾದಾತ್ಮ್ಯತೆ ಬಂದುಬಿಡುತ್ತದೆ. ತದನುಭೂತಿಯಲ್ಲಿ ಮನಸ್ಸು ಜಾರಿ ಹೋಗುತ್ತದೆ. 
ಆಹಾ ಭರತವರ್ಷದಲ್ಲಿ ಆಗಾಗ ಇಂತಹ ಪುಣ್ಯ ಪುರುಷರು ಬಂದು ಹೋಗುತ್ತಾರೆ. ಅವರಿಂದಾಗಿ ಈ ವಸುಂಧರೆಯ ಜನರು ಪುನೀತರಾಗಿದ್ದಾರೆ. ಹೊಸ ಮನ್ವಂತರ ಉದಯವಾಗಿದೆ.
    ಮತ್ತೊಮ್ಮೆಆಚಾರ್ಯ ಈ ಯುಗದಲ್ಲಿ 
ಹುಟ್ಟಿ ಬಾ.
    ಭ್ರಷ್ಟತನವನ್ನು ಮಟ್ಟಹಾಕಲು ಬಾ
ದುಷ್ಟತನವನ್ನು ತಂತ್ರದಿಂದ ಶಿಷ್ಟತನಕ್ಕೆ 
ಪರಿವರ್ತಿಸಲು ಬಾ
      ಆಡಳಿತದ ನಾವೆಗೆ ಚುಕ್ಕಾಣಿ ಯಾಗಿ ಬಾ
ನಿನ್ನ ಬಿಚ್ಚುಗತ್ತಿಯ ಕೆಚ್ಚು, ಕಿಚ್ಚು ಮತ್ತೆ ಬೇಕಾಗಿದೆ.
      ಸ್ವಚ್ಛ ಮನದ ಅಚ್ಚ ಭಾರತೀಯತೆ ಮತ್ತೆ ಬೆಳಗ ಬೇಕಾಗಿದೆ.
    ಇಂಥವರು ನಿಮ್ಮೊಳಗಿಲ್ಲವೇ .................?
..................................................ಸುಮಾಡ್ಕರ್
ಸ್ವರೂಪ ಅಧ್ಯಯನ ಸಂಸ್ಥೆ 
ಮಂಗಳೂರು
Mob: +91 99016 38372
*******************************************

Ads on article

Advertise in articles 1

advertising articles 2

Advertise under the article