
ಜಗಲಿಯ ಮಕ್ಕಳಿಗೆ ಅಕ್ಕನ ಪತ್ರ - 10
Saturday, November 6, 2021
Edit
---------------------------
ಅಕ್ಕರೆಯ ನೆನಪುಗಳೊಂದಿಗೆ ಜಗಲಿಯ ಗೆಳೆಯರ ಬಳಗಕ್ಕೆ ಅಕ್ಕನ ನಮಸ್ಕಾರ....
ನಾಡಹಬ್ಬ, ಕನ್ನಡ ಹಬ್ಬ, ದೀಪಗಳ ಹಬ್ಬದ ಸಂಭ್ರಮವನ್ನು ಜಗಲಿಯೊಂದಿಗೆ ಹಂಚಿಕೊಂಡು ಸಂತಸವನ್ನು ಪಸರಿಸಿದ ನಿಮ್ಮ ಅಕ್ಷರ ಪ್ರೀತಿಗೆ ಹೆಮ್ಮೆ ಇದೆ..
ನಮಗೆ ಗೊತ್ತಿದೆ.. ಅವಕಾಶಗಳು ಹಾಗೂ ಅವಶ್ಯಕತೆಗಳು ಹೊಸ ಸಾಧ್ಯತೆಯೆಡೆಗೆ ನಮ್ಮನ್ನು ಕೊಂಡೊಯ್ಯುತ್ತವೆ ಅಲ್ವಾ....? ಒಮ್ಮೊಮ್ಮೆ ಬಹಳ ಆಶ್ಚರ್ಯ ಅನ್ನಿಸುವುದಿದೆ. ಟಿ.ವಿ,ಸ್ಮಾರ್ಟ್ ಫೋನ್ ಗಳಿಲ್ಲದ ಆ ಕಾಲದಲ್ಲಿನ ಬಾಲ್ಯ ಎಷ್ಟು ಚಂದ ಇತ್ತು...! ಹೇಗೂ ಸಮಯ ಕಳೆಯುತ್ತಿತ್ತು.. ಹೂವಿನ ದಳಗಳನ್ನು ಕೈಗೆ ಉಜ್ಜಿ ಬಣ್ಣ ಬಳಿದುಕೊಳ್ಳುವುದು, ಅಂಗಡಿ ಆಟ, ಅಡುಗೆ ಆಟ, ಮಣ್ಣಿನ ಆಟಗಳು, ತೆಂಗಿನ ಗರಿಗಳಿಂದ ವಾಚ್, ಪೀಪಿ, ಹಾವು , ಕನ್ನಡಕ ತಯಾರಿಸಿದ್ದು.... ನೆಲ್ಲಿಕಾಯಿಗಾಗಿ ಕಾಡನ್ನು ಸುತ್ತಿದ್ದು... ಲಗೋರಿ, ಚಿನ್ನಿದಾಂಡು, ಮರಕೋತಿ ಆಟದಲ್ಲಿ ಜಗಳವಾಡಿದರೂ ಕ್ಷಣ ಮಾತ್ರಕ್ಕೆ ಮತ್ತೊಂದು ಆಟದಲ್ಲಿ ರಾಜಿಯಾಗಿ ಪ್ರತಿದಿನವನ್ನೂ ಸಂಭ್ರಮಿಸುವಂತೆ ಮಾಡಿದ ನೆನಪುಗಳಿನ್ನೂ ಹಸಿರು..... ಈ ಖುಷಿಯ ದಾರಿಯಲ್ಲಿ ನೀವೂ ಪಯಣಿಸುವತ್ತ ಆಲೋಚಿಸಿ.. ಹಳತು ಹೊಸತಾಗುವ ಸಂತಸ ಆವರಿಸಿಕೊಳ್ಳಲಿ.
ಆಟ ಅಂದಾಗ ಚಿನ್ನದ ಹುಡುಗಿ ಹಿಮಾದಾಸ್ ನೆನಪಾಗುತ್ತಾರೆ... ಬಾಲ್ಯದ ದಿನಗಳಲ್ಲಿ ಹುಡುಗರ ಜೊತೆ football ಆಡುತ್ತಿದ್ದ ಹಿಮಾದಾಸ್ ಅವರು ಓಡುವ ವೇಗವನ್ನು ನೋಡಿದ ದೈಹಿಕ ಶಿಕ್ಷಣ ಶಿಕ್ಷಕರು ನೀನ್ಯಾಕೆ ಓಟಗಾರ್ತಿಯಾಗಲು ಪ್ರಯತ್ನಿಸಬಾರದು? ಎಂದರಂತೆ... ಅಷ್ಟೇ ಸಾಕಾಯಿತು ಈ ಛಲಗಾತಿಗೆ....ನಿರಂತರ ವಾಗಿ ಅಭ್ಯಾಸ ಮಾಡತೊಡಗಿದರು.
ಸಾಮಾನ್ಯವಾಗಿ ಕ್ರೀಡಾಪಟುಗಳು ಕಾಲಿಗೆ ಶೂ ಧರಿಸಿರುತ್ತಾರೆ..ಆದರೆ ಹಿಮಾದಾಸ್ ಅವರ ಬಡತನ ಇದಕ್ಕೆ ಅಡ್ಡಿಯಾಗಿತ್ತು.. ಬರಿಗಾಲಿನಲ್ಲಿಯೇ ಓಡತೊಡಗಿದರು. ಕಾಲಿಗೆ ಶೂ ಇಲ್ಲದೆ, ಸರಿಯಾದ ಕೋಚ್ ಇಲ್ಲದೆಯೂ ಹಿಮಾದಾಸ್ ರಾಜ್ಯ ಮಟ್ಟದ ಅಥ್ಲೆಟಿಕ್ಸ್ ನಲ್ಲಿ ಕಂಚಿನ ಪದಕ ಗೆದ್ದರು. ಇವರ ಸಾಧನೆಗೆ ಬೆರಗಾದ ಅಸ್ಸಾಂ ಸ್ಪೋರ್ಟ್ಸ್ ಫೆಡರೇಶನ್ ಕೋಚ್ ಮಿಥುನ್ ದಾಸ್ ವೃತ್ತಿಪರ ತರಬೇತಿಯನ್ನು ನೀಡಲಾರಂಭಿಸಿದರು. ಮಗಳ ಸಾಧನೆಯನ್ನು ಕಂಡ ತಂದೆ ಅಷ್ಟಿಷ್ಟು ದುಡ್ಡು ಸೇರಿಸಿ ಸಾಧಾರಣ ಶೂಗಳನ್ನು ಖರೀದಿಸಿ ಕೊಟ್ಟರು. ತಮ್ಮ ಜೊತೆಗಿದ್ದವರೆಲ್ಲ ಜರ್ಮನಿಯ ಪ್ರಸಿದ್ದ ಕಂಪೆನಿ Adidas ಶೂಗಳನ್ನು ಧರಿಸಿಕೊಂಡಿದ್ದರೆ, ಈ ಹುಡುಗಿ ತಮ್ಮ ಶೂ ಮೇಲೆ Adidas ಎಂದು ಪೆನ್ನಿ ನಲ್ಲಿ ಬರೆದುಕೊಳ್ಳುತ್ತಿದ್ದರಂತೆ...!
ಆದರೆ ಸಾಧನೆ ಅಂದರೆ ಇದು.! 2018 ರಲ್ಲಿ ಇಂಡೋನೇಷ್ಯಾ ದ ಜಕಾರ್ತದಲ್ಲಿ ನಡೆದ ಏಷ್ಯನ್ ಗೇಮ್ಸ್ ನಲ್ಲಿ 400 ಮೀಟರ್ ಓಟವನ್ನು ಕೇವಲ 50.79/ಸೆಕುಂಡ್ ಗಳಲ್ಲಿ ಓಡಿ ರಾಷ್ಟ್ರ ದಾಖಲೆ ನಿರ್ಮಿಸಿದ ಹಿಮಾದಾಸ್ 'ಧಿಂಗ್ ಎಕ್ಸ್ ಪ್ರೆಸ್' ಎಂದೇ ಪ್ರಸಿದ್ಧರಾಗಿದ್ದಾರೆ.
2018 ರಲ್ಲಿ ಫಿನ್ ಲ್ಯಾಂಡ್ ನಲ್ಲಿ ನಡೆದ ವಿಶ್ವ ಜೂನಿಯರ್ ಅಥ್ಲೆಟಿಕ್ಸ್ 400 ಮೀಟರ್ ಓಟದ ಸ್ಪರ್ಧೆಯಲ್ಲಿ ಚಿನ್ನದ ಪದಕವನ್ನು ಗೆದ್ದು, ಈ ಕ್ರೀಡಾಕೂಟದ ಭಾರತದ ಮೊದಲ ವಿಜೇತೆಯಾಗಿ ಹಾಗೂ ಈ ವಿಭಾಗದಲ್ಲಿ ದೇಶಕ್ಕೆ ಮೊದಲ ಚಿನ್ನ ಗೆದ್ದು ಕೊಟ್ಟ ಹೆಮ್ಮೆಯ ಮಗಳಾಗಿ ರಾಷ್ಟ್ರದ ಕೀರ್ತಿ ಯನ್ನು ವಿಶ್ವದೆತ್ತರಕ್ಕೆ ಏರಿಸಿದರು.
ಇವರು ಏರಿದ ಎತ್ತರಕ್ಕೆ ಬೆರಗಾಗಿ ತನ್ನ ಶೂಗಳ ಮೇಲೆ ಸ್ವತಃ Adidas ಕಂಪೆನಿ ಹಿಮಾದಾಸ್ ಹೆಸರನ್ನು ಬರೆದುಕೊಂಡಿತು... ಈ ಹೆಣ್ಣು ಮಗಳು ನಮ್ಮ ದೇಶದ ಹೆಮ್ಮೆ ಅಲ್ವಾ....?
ಅಂದ ಹಾಗೆ ಹಿಮಾದಾಸ್ ಅಸ್ಸಾಂ ರಾಜ್ಯದ ಕಂಡುಲಿಮಾರಿಯ ರೈತ ದಂಪತಿಯ ಮಗಳು. ಬಾಲ್ಯದಿಂದಲೂ ಪೊಲೀಸ್ ಆಗಬೇಕೆಂದು ಕನಸು ಕಂಡು, ಹುಡುಗರ ಜೊತೆ football. ಆಡುತ್ತಿದ್ದರಂತೆ.. ಆದರೆ ಅವರ ಕ್ರೀಡಾ ಸಾಧನೆಗೆ ಅಸ್ಸಾಂ ಸರ್ಕಾರ DSP ಹುದ್ದೆಯ ಗೌರವ ನೀಡಿದೆ. ಹೌದು.. ಹಿಮಾದಾಸ್ ಈಗ ಪೊಲೀಸ್ ಅಧಿಕಾರಿ. ಇವರಿಗೆ ಭಾರತ ಸರ್ಕಾರದ ಪ್ರತಿಷ್ಠಿತ ಅರ್ಜುನ ಪ್ರಶಸ್ತಿಯೂ ಗೌರವವಾಗಿ ಒದಗಿ ಬಂದಿದೆ.
ಕನಸುಗಳನ್ನು ಕಾಣಬೇಕು..ಗುರಿ ಮುಟ್ಟುವವರೆಗೂ ಪ್ರಯತ್ನದಿಂದ ಹಿಂದೆ ಸರಿಯಬಾರದು ಎನ್ನುವುದು ಇವರ ಸಾಧನೆಯ ಹಿಂದಿನ ಪ್ರೇರಣೆ..
ಎಲ್ಲರಿಗಿಂತ ವಿಭಿನ್ನವಾದ ಆಲೋಚನೆ ನಮ್ಮನ್ನು ವಿಶೇಷವಾಗಿ ಗುರುತಿಸುವಂತೆ ಮಾಡುತ್ತದೆ... ಏನಂತೀರಿ? ಉತ್ತರ ಬರೆದು ಕಳುಹಿಸಿ.. ಮುಂದಿನ ಪತ್ರದೊಂದಿಗೆ ಮತ್ತೆ ಭೇಟಿಯಾಗೋಣ..
ಆರೋಗ್ಯ ಜೋಪಾನ ಮಕ್ಕಳೇ..
......................................... ತೇಜಸ್ವಿ ಅಂಬೆಕಲ್ಲು
ಶಿಕ್ಷಕಿ
ದ.ಕ.ಜಿ.ಪಂ.ಹಿ.ಪ್ರಾ .ಶಾಲೆ,
ಗೋಳಿತ್ತಟ್ಟು, ಪುತ್ತೂರು ತಾಲ್ಲೂಕು
ದಕ್ಷಿಣ ಕನ್ನಡ ಜಿಲ್ಲೆ
*********************************************