
ಅಕ್ಕನ ಪತ್ರ - 10 ಕ್ಕೆ ಮಕ್ಕಳ ಉತ್ತರ ಸಂಚಿಕೆ -1
Sunday, November 14, 2021
Edit
ಅಕ್ಕನ ಪತ್ರ - 10 ಕ್ಕೆ
ಮಕ್ಕಳ ಉತ್ತರ
ಸಂಚಿಕೆ -1
ನಮಸ್ತೆ ಅಕ್ಕ. ನಾನು ನಿಮ್ಮ ಪ್ರೀತಿಯ ತಂಗಿ ಧೃತಿ. ನೀವು ಹೇಳಿದ್ದು ನಿಜ. ಆ ಕಾಲದಲ್ಲಿನ ಬಾಲ್ಯ ತುಂಬಾ ಚೆನ್ನಾಗಿತ್ತು. ನೀವು ಹೇಳಿದ ಆಟವನ್ನೆಲ್ಲಾ ನಾವು ನಮ್ಮ ಬಾಲ್ಯದಲ್ಲಿ ಆಟವಾಡಿದ್ದೆವು. ನಾನು ಪತ್ರ ಓದುತ್ತಿದ್ದ ಹಾಗೆ ಆ ಎಲ್ಲಾ ಆಟವನ್ನು ನನ್ನ ಗೆಳತಿಯರೊಡನೆ ಆಡಿದ ಆ ಕ್ಷಣಗಳು ಕಣ್ಣ ಮುಂದೆ ಬಂದು ಹೋಯಿತು. ಚಿನ್ನದ ಹುಡುಗಿ ಹಿಮಾದಾಸ್ ಇವರಿಗೆ ದೈಹಿಕ ಶಿಕ್ಷಣ ಶಿಕ್ಷಕರು ಹೇಳಿದ ಆ ಒಂದು ಮಾತು "ನೀನ್ಯಾಕೆ ಓಟಗಾರ್ತಿ ಆಗಲು ಪ್ರಯತ್ನಿಸಬಾರದು?" ಎಂಬುದನ್ನು ತನ್ನ ಮನಸ್ಸಿಗೆ ತಗೊಂಡು ಅದನ್ನು ಛಲ, ಧೈರ್ಯ, ಶ್ರದ್ಧೆಯಿಂದ ಕಲಿತ ಫಲವಾಗಿ ಅವರೀಗ 'ಧಿಂಗ್ ಎಕ್ಸ್ ಪ್ರೆಸ್' ಎಂದೇ ಪ್ರಸಿದ್ಧರಾದರು. ಅದರ ಜೊತೆಗೆ ಅವರ ಕನಸಾಗಿದ್ದ ಪೋಲೀಸ್ ಆಗುವ ಆಸೆ ಕೂಡ ನೆರವೇರಿತು. ಹೌದು ಕನಸು ಕಾಣಬೇಕು ಆ ಕನಸಿನ ಗುರಿಯನ್ನು ತಲುಪುವವರೆಗೂ ನಾವು ಕಷ್ಟ ಪಡಲೇಬೇಕು. "ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ". ಎಂಬ ವಿವೇಕಾನಂದರ ಮಾತು ಇಲ್ಲಿ ನೆನಪಾಗುತ್ತದೆ . ನಿಮ್ಮ ಮುಂದಿನ ಪತ್ರಕ್ಕಾಗಿ ಕಾಯುತ್ತಿರುತ್ತೇನೆ . ಇಂತಿ ನಿಮ್ಮ ಪ್ರೀತಿಯ ತಂಗಿ ಧೃತಿ .
........................................................ಧೃತಿ
9 ನೇ ತರಗತಿ ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು , ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ.
*********************************************
ನಮಸ್ತೆ,
ಪ್ರೀತಿಯ ಅಕ್ಕನಿಗೆ ನಮನಗಳು.
ಅಕ್ಕ, ನೀವು ನಿಮ್ಮ ಪತ್ರದಲ್ಲಿ ಬಾಲ್ಯದ ದಿನಗಳೇ ಚಂದ ಎಂದು ಹೇಳಿದ್ದೀರಿ. ಇದು ನನಗೆ ಇಷ್ಟ ಆಯ್ತು. ಹೌದು ನಾನು ಬಾಲ್ಯವನ್ನು ತುಂಬಾ ಇಷ್ಟ ಪಡುತ್ತೇನೆ. ಬಾಲ್ಯದ ಆಟ ಆಡುವುದೆಂದರೆ ಅದೇನೋ ಖುಷಿ. ಅಕ್ಕ, ತಂಗಿಯರ, ಹಾಗೂ ಅಣ್ಣ ತಮ್ಮಂದಿರ ಜೊತೆ ಆಡಲು ಒಳ್ಳೆ ಅವಕಾಶ.
ಬಡತನದಲ್ಲೇ ಹುಟ್ಟಿ ಬೆಳೆದಿದ್ದರೂ ಇಡೀ ದೇಶವೇ ಹೆಮ್ಮೆಪಡುವಂತೆ ಸಾಧನೆ ಮಾಡಿದ ಹಿಮದಾಸ್ ರವರು ನಿಜಕ್ಕೂ ನಮಗೆಲ್ಲರಿಗೂ ಸ್ಫೂರ್ತಿ. ಬಾಲ್ಯದಲ್ಲಿ ತಮ್ಮ ಸಾಧಾರಣ ಶೂ ಮೇಲೆ adidas ಎಂದು ಹೆಸರು ಬರೆಯುತ್ತಿದ್ದ ಹಿಮಾದಾಸ್ ರವರು ಇಂದು adidas ಕಂಪೆನಿಯೇ ಶೂಗಳ ಮೇಲೆ ಹಿಮಾದಾಸ್ ಎಂದು ಬರೆಯುವಂತೆ ಮಾಡಿದ ಹಿಮದಾಸ್ ರವರ ಸಾಧನೆ ದೇಶವೇ ಹೆಮ್ಮೆ ಪಡುವಂತೆ ಮಾಡಿದೆ. ಹಿಮಾದಾಸ್ ಇನ್ನು ಎತ್ತರಕ್ಕೆ ಬೆಳೆಯಲಿ ಎಂದು ಆಶಿಸುತ್ತೇನೆ. ಅಕ್ಕನ ಮುಂದಿನ ಪತ್ರಕ್ಕೆ ಕಾಯುತ್ತಿರುತೇನೆ ನಮಸ್ತೆ. ಧನ್ಯವಾದಗಳು
..........................................ಧೀರಜ್. ಕೆ.ಆರ್
9ನೇ ತರಗತಿ
ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢ ಶಾಲೆ ರಾಮಕುಂಜ , ಕಡಬ ತಾಲ್ಲೂಕು
ದಕ್ಷಿಣ ಕನ್ನಡ ಜಿಲ್ಲೆ
*******************************************
ಪ್ರೀತಿಯ ಅಕ್ಕನಿಗೆ ವೈಷ್ಣವಿ ಕಾಮತ್ ಮಾಡುವ ನಮಸ್ಕಾರಗಳು. ನಿಮ್ಮ ಪ್ರತಿಯೊಂದು ಪತ್ರಗಳು ನನಗೆ ಸ್ಪೂರ್ತಿಯ ಸೆಲೆಯಾಗಿವೆ. ನಿಮ್ಮ ಈ ಪತ್ರವು ಸಾಧನೆಗೆ ಯಾವುದೂ ಅಡ್ಡಿಯನ್ನುಂಟು ಮಾಡದು ಎಂಬುದನ್ನು ತೋರಿಸುತ್ತದೆ. ನಾವು ಯಾವುದೇ ಕ್ಷೇತ್ರಗಳಲ್ಲಿ ಸಾಧನೆ ಮಾಡುವಾಗ ಅಡ್ಡಿಗಳು ಉಂಟಾಗುವುದು ಸಹಜ. ಅವುಗಳನ್ನೆಲ್ಲಾ ಮೆಟ್ಟಿನಿಂತು ಮುಂದಕ್ಕೆ ಸಾಗಿದಾಗ ಗೆಲುವು ಖಚಿತ. ಎಷ್ಟೇ ಕಷ್ಟ, ನೋವು ಮತ್ತು ಬಡತನದಲ್ಲೇ ಬೆಳೆದ ಹಿಮದಾಸ್ ಸಾಧನೆಯ ತುತ್ತತುದಿಗೇರಿದ್ದು ಪ್ರತಿಯೊಬ್ಬರೂ ಮೆಚ್ಚುವಂತಹ ವಿಷಯವಾಗಿದೆ. ಅವರ ಈ ಸಾಧನೆ ನಮಗೆಲ್ಲರಿಗೂ ಸ್ಪೂರ್ತಿಯಾಗಿದೆ. ಅವರ ಸಾಧನೆಯ ಹಿಂದಿನ ಕಠಿಣ ಪರಿಸ್ಥಿತಿಗಳು, ಅವರನ್ನು ಇಂದು ಈ ಮಟ್ಟಕ್ಕೆ ಬೆಳೆಸಿವೆ. ಅವರ ಸಾಧನೆಗೊಂದು ನನ್ನ ಪುಟ್ಟ ಸಲಾಂ. ಪ್ರತಿಯೊಬ್ಬರೂ ಇವರಿಟ್ಟ ಹೆಜ್ಜೆಯಂತೆ ನಡೆದರೆ ವಿಜಯ ಮಾಲೆ ಧರಿಸುವುದು ಖಂಡಿತ. ನಮ್ಮಂತಹ ಎಲ್ಲಾ ಪುಟಾಣಿಗಳಿಗೂ ಅವರು ಮಾದರಿಯಾಗಿದ್ದಾರೆ. ಅವರ ಸಾಧನೆಯ ಪಥದಲ್ಲಿ ನಾವು ಮುನ್ನಡೆಯೋಣ. ಅಕ್ಕ ನಾನು ನಿಮ್ಮ ಮುಂದಿನ ಪತ್ರದ ದಾರಿ ಕಾಯುತ್ತಿರುವೆ.
..........................................ವೈಷ್ಣವಿ ಕಾಮತ್
5ನೇ ತರಗತಿ
ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ
ಹನುಮಾನ್ ನಗರ ಕಲ್ಲಡ್ಕ.
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ.
**********************************************