-->
ಸ್ಪೂರ್ತಿಯ ಮಾತುಗಳು : ರಮೇಶ್ ಎಂ.ಬಾಯಾರು

ಸ್ಪೂರ್ತಿಯ ಮಾತುಗಳು : ರಮೇಶ್ ಎಂ.ಬಾಯಾರು


                   ಮೊಬೈಲು ಸ್ನೇಹ ಬೇಕೆ?
             ----------------------------------
ಪ್ರೀತಿಯ ಮಕ್ಕಳೇ, 
ಇಂದು ಮೊಬೈಲ್ ಯುಗ. ನಿಮಗೆ ಅಣ್ಣನೂ ನನಗೆ ತಮ್ಮನೂ ಆಗಿರುವ ಮೊಬೈಲ್ (ಚರವಾಣಿ) ನನ್ನ ಬಾಲ್ಯದಲ್ಲಿರಲಿಲ್ಲ. ನನ್ನ ಕೈಗೆ ಮೊಬೈಲು ಬಂದು ಹದಿನೈದು ವರ್ಷವಷ್ಟೇ ಸಂದಿತು. ಕೆಲವರಿಗೆ ಇಪ್ಪತ್ತು ವರ್ಷಗಳಷ್ಟು ಹಿಂದೆಯೇ ಮೊಬೈಲು ಕೈಸೇರಿರಲೂಬಹುದು. ನನ್ನ ಹುಟ್ಟಿನ ನಂತರ , ನನಗೆ ಸುಮಾರು ನಲುವತ್ತು ವರ್ಷ ಪ್ರಾಯವಾದ ಮೇಲೆ ಕಾಣಿಸಿದ ಮೊಬೈಲು ನನಗೆ ತಮ್ಮ. ನಿಮಗೆ ಹಾಗಲ್ಲ ಮಕ್ಕಳೇ, ನಿಮ್ಮ ಹುಟ್ಟಿನ ಮೊದಲೇ ಮೊಬೈಲಿನ ಜನನವಾಯಿತಲ್ಲವೇ? ಹಾಗಾಗಿ ನಿಮಗೆ ಮೊಬೈಲು, “ಅಣ್ಣ” ಎಂದೆನು. ಸರಿ ಅಲ್ಲವೇ ಮಕ್ಕಳೇ?
         ಮೊಬೈಲಿನ ಮೇಲೆ ನಮಗೆ ಎಷ್ಟೊಂದು ಅಕ್ಕರೆ. ಅದನ್ನು ದಿನದಲ್ಲಿ ಹಲವು ಬಾರಿ ಸ್ವಚ್ಛ ಬಟ್ಟೆಯಿಂದ ಉಜ್ಜಿ ಶುಚಿಗೊಳಿಸುತ್ತೇವೆ. ಅದರ ಮೈ ಸವರುತ್ತೇವೆ. ನೀರು ಮತ್ತು ಧೂಳು ತಾಗದಂತೆ ಎಚ್ಚರವಹಿಸುತ್ತೇವೆ. ಗಾಯಗಳಾಗದಂತೆ, ಕೈಯಿಂದ ಜಾರಿ ಬೀಳದಂತೆ ಅತ್ಯಂತ ಜಾಗರೂಕರಾಗಿರುತ್ತೇವೆ. ಹೆಚ್ಚು ಬೆಲೆಯ ಕವರೆಂಬ ಅಂಗಿ ಹೊದಿಸಿ ಮೊಬೈಲನ್ನು ಬಿರುಗಾಳಿ ಮಳೆಯಿಂದ ಸುರಕ್ಷಿತವಾಗಿಡುತ್ತೇವೆ. ಬೆಂಕಿಯ ಹತ್ತಿರವೋ, ನದಿಯ ದಡದಲ್ಲೋ ಅಥವಾ ಎತ್ತರದ ಬದಿಗಳಲ್ಲಿಯೋ ನಿಂತಿರುವಾಗ ಮೊಬೈಲ್ ಬಗ್ಗೆ ನಮ್ಮ ನಿಗಾ ತೀವ್ರವಾಗಿರುತ್ತದೆ. ಸಾಧ್ಯವಾದಷ್ಟೂ ಸಮಯ ಮೊಬೈಲನ್ನು ಅಂಗೈಯಲ್ಲೇ ಇರಿಸುತ್ತೇವೆ. ಮೊಬೈಲನ್ನು ನಮ್ಮ ದೇಹಕ್ಕಿಂತ ದೂರದಲ್ಲಿರಿಸುವುದೆಂದರೆ, ನಮಗೆ ಸಹಿಸಲಾಗುವುದಿಲ್ಲ. ಮೊಬೈಲ್ ನಮ್ಮ ಹತ್ತಿರವೇ ಇರಬೇಕೆಂಬ ವಿಶೇಷ ಬಯಕೆ ನಮಗೆ. ಮೊಬೈಲು ಹತ್ತಿರವಿರದೇ ಇದ್ದರೆ ಊಟ, ತಿಂಡಿ, ಪಾನೀಯ ನಮಗೆ ಸೇರದು. ಪುಸ್ತಕ ನೋಡದಿದ್ದರೂ ಬೇಸರವಾಗದು. ಆದರೆ ಮೊಬೈಲನ್ನು ನೋಡದೆ ಇದ್ದರೆ ನಮಗೆ ಯಾವುದೂ ಸೇರದು. ಎಷ್ಟೊಂದು ಪ್ರೀತಿ ನಮಗೆ ಮೊಬೈಲು ಮೇಲೆ ಅಲ್ಲವೇ? ಮೊಬೈಲನ್ನು ಕೆಳಗಿರಿಸುವಾಗ ಬಹಳ ಮೃದುವಾಗಿ ಇರಿಸುತ್ತೇವೆ. ಕೆಲವರು ಬಟ್ಟೆಯನ್ನೋ ಟವೆಲನ್ನೋ ಹಾಸಿ ಅದರ ಮೇಲೆಯೇ ಮೊಬೈಲನ್ನು ಮಲಗಿಸುತ್ತಾರೆ. ಪುಟ್ಟ ಹಸುಳೆಗಳ ಮೇಲೆ ತೋರಿಸುವುದಕ್ಕಿಂತ ಬಹಳಷ್ಟು ಪಟ್ಟು ಮಿಗಿಲಾದ ಮೋಹವನ್ನು ಮೊಬೈಲಿಗೆ ನಾವು ತೋರಿಸುತ್ತೇವೆ.
            ಶಾಲೆ, ಕಾಲೇಜು ಮೂಲಕ ಪಡೆಯುವ ಶಿಕ್ಷಣವನ್ನು ಮೊಬೈಲ್ ಮೂಲಕವೇ ಪಡೆಯುವ ಹಂತಕ್ಕೆ ನಾವೂ ನಮ್ಮನ್ನು ಬದಲಾಯಿಸಿ ಕೊಳ್ಳುವಂತಾಗಿದೆ, ಜೀವನದ ಕಳಚಲಾರದ ನಮ್ಮ ಸಂಗಾತಿಯಾಗಿ ಮೊಬೈಲು ವಿಜೃಂಭಿಸುತ್ತಿದೆ. ಜೀವನದೊಂದಿಗೆ ನಿಕಟವಾಗುತ್ತಿರುವ ಮೊಬೈಲಿನಿಂದಾಗಿ ನಾವು ಏರುತ್ತಿದ್ದೇವೆಯೋ? ಎತ್ತರೆತ್ತರಕ್ಕೆ ಬೆಳೆಯುತ್ತಿದ್ದೇವೆಯೋ ಅಥವಾ ಜಾರುತ್ತಿದ್ದೇವೆಯೋ ಎಂದು ಯೋಚಿಸಲೇ ಬೇಕಾದ ಕಾಲದಲ್ಲಿ ನಾವಿದ್ದೇವೆ ಮಕ್ಕಳೇ. ಒಂದು ನಾಯಿಗೆ ಮೊಬೈಲಿಗಿಂತ ಅದೆಷ್ಟೋ ಪಾಲು ಕಡಿಮೆ ಪ್ರೀತಿಯನ್ನು ನಾವು ತೋರಿಸಿದರೂ ಪ್ರತಿಯಾಗಿ ಆ ನಾಯಿಯು ಸಹಸ್ರಾರು ಪಟ್ಟು ಪ್ರೀತಿಯನ್ನು ನಮ್ಮ ಮೇಲೆ ಇರಿಸುತ್ತದೆ ಮತ್ತು ಆ ಪ್ರೀತಿಯನ್ನು ವ್ಯಕ್ತಪಡಿಸುತ್ತದೆ. ನಮ್ಮನ್ನು ಮೂಸುತ್ತದೆ, ಕಾಲಿಗೆ ಸುತ್ತುತ್ತದೆ, ನಮಸ್ಕಾರ ಹಾಕುತ್ತದೆ. ಅದೇ ರೀತಿ ಬೆಕ್ಕು , ದನ, ಕತ್ತೆ, ಕುದುರೆ ಹೆಚ್ಚೇಕೆ ಕ್ರೂರ ಪ್ರಾಣಿಗಳೂ ನಾವು ಪ್ರೀತಿಸಿದರೆ ನಮ್ಮನ್ನು ಗಾಢವಾಗಿ ಪ್ರೀತಿಸುತ್ತವೆ. ನಮ್ಮ ಬದುಕಿನಲ್ಲಿ ಬೇರೆ ಬೇರೆ ಸಂದರ್ಭಗಳಲ್ಲೂ ಪ್ರಯೋಜನಕರವಾಗಿ ಸಹಕರಿಸುತ್ತವೆ. ಪ್ರಕೃತಿಯಲ್ಲಿ ಒಂದು ಗಿಡ ನೆಟ್ಟು ನೀರುಣಿಸಿ ಪೋಷಿಸಿದರೆ ಅದೂ ನಮ್ಮನ್ನು ನೋಡಿದೊಡನೆಯೇ ತಲೆದೂಗಿ ನಮಗೆ ಪ್ರೀತಿಯನ್ನು ತೋರಿಸುತ್ತದೆ, ತಲೆಯಾಡಿಸಿ ಧನ್ಯವಾದವನ್ನು ಹೇಳುತ್ತದೆ. ನಮ್ಮ ಅಣ್ಣ, ತಮ್ಮ, ಅಕ್ಕ, ತಂಗಿ, ಅಪ್ಪ, ಅಮ್ಮ. ಅಜ್ಜ, ಅಜ್ಜಿ, ಅತ್ತೆ, ಮಾವ, ಗೆಳೆಯರು, ನೆರೆಕರೆಯವರು, ಬಂಧು ಬಳಗದವರು ನಮ್ಮನ್ನು ಪ್ರೀತಿಸುತ್ತಾರೆ. ಅವರಿಗೆ ನಾವು ಮೊಬೈಲಿಗೆ ಕೊಡುವ ಪ್ರಮಾಣದ ಪ್ರೀತಿಯನ್ನೂ ತೋರುವುದಿಲ್ಲ. ಆದರೂ ಅವರೆಲ್ಲರಿಗೂ ನಮ್ಮ ಬಗ್ಗೆ ಅಕ್ಕರೆ ಮತ್ತು ಅಭಿಮಾನವಿದೆ. ಆದರೆ ಮೊಬೈಲನ್ನು ಬಹಳ ಪ್ರೀತಿಸಿದರೂ ಅದು ನಮ್ಮನ್ನು ಪ್ರೀತಿಸದು, ನಮ್ಮ ಎಲ್ಲ ಅಗತ್ಯಗಳನ್ನೂ ಮೊಬೈಲು ಪೂರೈಸುವುದಿಲ್ಲ. ಮೊಬೈಲು ನಮ್ಮ ಕೈಯನ್ನೇರಿ ಬಿಟ್ಟರೆ ನಮ್ಮ ಸಂಬಂಧಿಕರು ಮನೆಗೆ ಬಂದರೆ ಮುಖ ನೋಡಲೂ ನಮಗೆ ಸಮಯವಿರುವುದಿಲ್ಲ. ಅವರ ಮನೆಗೆ ಹೋದರೂ ನಾವು ಮೊಬೈಲು ಮುಖಿಗಳಾಗಿಯೇ ಇರುತ್ತೇವೆ. ಮನೆಯಲ್ಲೇ ಇದ್ದರೂ ಮನೆಯವರಲ್ಲಿ ಮಾತನಾಡಿ ಅವರಿಗೆ ಆನಂದವನ್ನುಂಟು ಮಾಡಲು ನಮಗೆ ಇಂಬಿರದು. ನೆರೆಕರೆಯವರನ್ನು ದೀರ್ಘಕಾಲದಿಂದ ನಾವು ನೋಡಿಯೇ ಇರುವುದಿಲ್ಲ. ಅವರ ಆರೋಗ್ಯ, ಅನಾರೋಗ್ಯ, ಸುಖ ದುಖಗಳ ಅರಿವೇ ನಮಗಿರದು. ಮೊಬೈಲು, ನಮ್ಮಲ್ಲಿರಲೇಬೇಕಾದ ಪ್ರೀತಿಯೆಂಬ ಸದ್ಭಾವನೆಯನ್ನು ಕಿತ್ತು ಕಾಕಿದೆ. ಇದರಿಂದಾಗಿ ಇತರರಿಂದ ಪ್ರೀತಿ ದೊರಕದ ವಾತಾವರಣದತ್ತ ನಮ್ಮ ಬದುಕು ಸಾಗುತ್ತಿದೆ. ನಾವು ಮೊಬೈಲಿನಿಂದಾಗಿ ಏಕಾಂಗಿಗಳಾಗಿ ಬೇಸರದ ದಿನಗಳನ್ನು ಅನುಭವಿಸಬೇಕಾಗುತ್ತದೆ. ನಮ್ಮ ದಿನಚರಿಗಳನ್ನು ಏರುಪೇರುಗೊಳಿಸಿ ಮೊಬೈಲು ನಮ್ಮನ್ನು ಅನಾರೋಗಿಗಳನ್ನಾಗಿ ಮಾಡುತ್ತಲಿದೆ. ನಮ್ಮ ಕಲಿಕೆಯ ವೇಗ ಮತ್ತು ಸಾಮರ್ಥ್ಯವನ್ನು ಮೊಬೈಲು ಕುಂಠಿತಗೊಳಿಸುತ್ತಲಿದೆ. “ಅಕ್ಷರಸ್ಥ ಅನಾಗರಿಕ”, ಎಂಬ ಬಿರುದು ನಮಗೆ ಒದಗಿ ಬರಲು ಮೊಬೈಲು ಕಾರಣವಾಗಲಿದೆ. ಮೊಬೈಲು ನಮಗೆ ಅನ್ನ ಆಹಾರ ನೀಡದು. ಪರಿಸರದಿಂದಲೇ ನಮಗೆ ಅನ್ನ ನೀರು ಮತ್ತು ಆಹಾರ. ಉಸಿರಾಟದ ಗಾಳಿಗೂ ಪರಿಸರವೇ ನಮಗೆ ಬೇಕು. ಮೊಬೈಲು ದೂರದಲ್ಲಿದ್ದಾಗ ಸಂಪರ್ಕಿಸಲು ಒಂದು ಸಲಕರಣೆಯೇ ಹೊರತು ಜೀವನದ ಅವಿಭಾಜ್ಯ ಅಂಗವಲ್ಲ. ಅನಿವಾರ್ಯ ಅಂಶವೂ ಅಲ್ಲ. ಆಚೆ ಕೊಣೆಯಲ್ಲಿರುವ ಅಮ್ಮನಲ್ಲೂ ನಾವು ಮೊಬೈಲಿನಲ್ಲೇ ಮಾತನಾಡುವ ಸ್ಥಿತಿಯನ್ನು ಕಾಣುತ್ತಿದ್ದೇವೆ. ಅಮ್ಮನ ಬಳಿಯಿದ್ದು ಮಾತನಾಡುವಾಗ ಆಗುವ ಆನಂದ ಮೊಬೈಲಿನಿಂದ ಸಿಗದು. ನಮಗೆ ಪ್ರೀತಿ ನೀಡದ ಮೊಬೈಲನ್ನು ನಾವು ಪ್ರೀತಿಸಬೇಕೇ? ನಮಗೆ ಪ್ರೀತಿ ನೀಡುವ ಪರಿಸರ ಮತ್ತು ಕುಟುಂಬ ಸಂಬಂಧಗಳನ್ನು ನಾವು ಪ್ರೀತಿಸಬೇಕೇ? ಹಾಗಿರುವಾಗ ಮೊಬೈಲಿನೊಂದಿಗೆ ನಮಗೆ ಅತಿಯಾದ ಸ್ನೇಹ ಬೇಕೇ ಎಂದು ಆಲೋಚಿಸಿ ಮಕ್ಕಳೇ. ಮಕ್ಕಳ ದಿನಾಚರಣೆಯ ಶುಭಾಶಯಗಳು.
..................................ರಮೇಶ ಎಂ. ಬಾಯಾರು 
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
 ಸಂಪರ್ಕ ಸಂಖ್ಯೆ : +91 94486 26093
*********************************************


Ads on article

Advertise in articles 1

advertising articles 2

Advertise under the article