-->
ಅವಕಾಶವೇ ದೇವರು

ಅವಕಾಶವೇ ದೇವರು

            

       ಮಕ್ಕಳೆಂದರೆ ದೇಶದ ಭಾವೀ ಸಂಪನ್ಮೂಲ. ನಿಜವಾದ ಅರ್ಥದಲ್ಲಿ ನಮ್ಮ ಮಕ್ಕಳು ಸಂಪನ್ಮೂಲರಾಗಬೇಕು. ಅವಕಾಶದ ಸದ್ಬಳಕೆ ಮಾಡಿಕೊಳ್ಳುವವರು ಮಾತ್ರವೇ ದೇಶದ ಸಂಪನ್ಮೂಲರಾಗಲು ಸಾಧ್ಯ, ಅವಕಾಶದಿಂದ ತಪ್ಪಿಸಿಕೊಳ್ಳುವವರು ಸಂಪನ್ಮೂಲರಾಗುವುದಿಲ್ಲ; ಬದಲಾಗಿ ಆಪನ್ಮೂಲರೇ ಆಗಬಹುದು. ಇದಕ್ಕೆ ಪೂರಕವಾಗಿ ಒಂದು ಕಥೆಯನ್ನು ಹೇಳುತ್ತೇನೆ.
             ಅದೊಂದು ಗ್ರಾಮೀಣ ಶಾಲೆ. ಆ ಶಾಲೆಗೆ ಎಲ್ಲರಂತೆ ಇಬ್ಬರು ಗೆಳೆಯರು ಕಲಿಯಲು ಹೋಗುತ್ತಿದ್ದರು. ಈ ಗೆಳೆಯ ವಿದ್ಯಾರ್ಥಿಗಳು ಆರನೇ ಇಯತ್ತೆಗೆ ಬಂದಾಗ ಹೊಸ ಅಧ್ಯಾಪಕರೋರ್ವರು ಆ ಶಾಲೆಗೆ ನೇಮಕಗೊಂಡರು. ಆ ಅಧ್ಯಾಪಕರಿಗೆ ಮಕ್ಕಳೆಂದರೆ ಹೆಚ್ಚು ಅಚ್ಚು ಮೆಚ್ಚು. ಮಕ್ಕಳನ್ನು ನಾನಾ ಕ್ಷೇತ್ರಗಳಲ್ಲಿ ಸಾಧಕರನ್ನಾಗಿ ಬೆಳೆಸುವ ಹಂಬಲ ಅವರದು. ಅದಕ್ಕಾಗಿ ಮಕ್ಕಳಿಗೆ ನಾನಾ ಚಟುವಟಿಕೆಗಳನ್ನು ಕೊಡುತ್ತಾ ಭಾಗವಹಿಸಲು ಎಲ್ಲರನ್ನು ಉತ್ತೇಜಿಸುತ್ತಿದ್ದರು. ಎಲ್ಲರೂ ತಮಗೆ ದೊರೆತ ಅವಕಾಶಗಳನ್ನು ಉತ್ತಮವಾಗಿಯೇ ಬಳಸುತ್ತಿದ್ದರು. 
          ಮೇಲೆ ಹೇಳಿದ ಇಬ್ಬರು ಗೆಳೆಯರಲ್ಲಿ ಕೃಷ್ಣ ಎನ್ನುವವನು ಬಹಳ ಉತ್ಸಾಹಿ. ಅಧ್ಯಾಪಕರು ಕೊಡುವ ಎಲ್ಲ ಚಟುವಟಿಕೆಗಳಲ್ಲೂ ಅತ್ಯುತ್ತಮವಾಗಿ ಭಾಗವಹಿಸುತ್ತಿದ್ದನು. ತನಗೆ ಬಂದ ಯಾವುದೇ ಅವಕಾಶವನ್ನೂ ಅವನು ಕೈ ಚೆಲ್ಲುತ್ತಿರಲಿಲ್ಲ. ಪ್ರತಿಯೊಂದರಲ್ಲೂ ಲವಲವಿಕೆಯಿಂದ ಭಾಗವಹಿಸಿ ಉತ್ತಮ ಹೆಸರುಗಳಿಸಿದನು. ದಿನದ ಪ್ರತೀ ಕ್ಷಣವನ್ನೂ ಹಾಳು ಮಾಡದೆ ತನ್ನ ಬೆಳವಣಿಗೆಗಾಗಿ ಸದ್ವಿನಿಯೋಗ ಮಾಡಿದನು. ಅವನು ಎಲ್ಲರಿಂದಲೂ ಗೌರವ ಪಡೆದನು. ಮುಂದೆ ದೊಡ್ಡವನಾಗಿ ರಕ್ಷಣಾ ಇಲಾಖೆಯಲ್ಲಿ ದೊಡ್ಡ ಹುದ್ದೆಯನ್ನು ಪಡೆದು ಜನಾದರಣೀಯನಾದನು. ದೇಶದ ಘನತೆ ಗೌರವಗಳನ್ನು ಹೆಚ್ಚಿಸಿ ದೇಶಕ್ಕೆ ಸಂಪನ್ಮೂಲನಾದನು.
         ಆದರೆ ಕೃಷ್ಣನ ಮಿತ್ರ ಹರಿಯು ಸ್ವಲ್ಪ ಕಿರಿ ಕಿರಿ ಸ್ವಭಾವದವನು. ಅವನು ಯಾವುದೇ ಅವಕಾಶ ಬಂದರೂ ಅದನ್ನು ನಿರಾಕರಿಸುತ್ತಿದ್ದನು. ಬೇರೆ ಬೇರೆ ಕ್ಷುಲ್ಲಕ ಕಾರಣಗಳನ್ನು ನೀಡಿ ದೊರೆತ ಎಲ್ಲ ಅವಕಾಶಗಳನ್ನೂ ಕೈಚೆಲ್ಲಿದನು. ತನ್ನ ಸಮಯವನ್ನು ಸದ್ಬಳಕೆ ಮಾಡದೆ, ಕೆಟ್ಟವರ ಜೊತೆಗೆ ಸಮಯ ಕಳೆದನು. ಅನೇಕ ಕೆಟ್ಟ ಚಟಗಳಿಗೆ ದಾಸನಾದನು. ಕಳ್ಳತನ ಮಾಡಲಾರಂಭಿಸಿದನು. ಜನರ ನಿಂದನೆಗಳಿಗೀಡಾದನು. ಅವನನ್ನು ಎಲ್ಲರೂ ಛೀ! ಥೂ!! ಎನ್ನ ತೊಡಗಿದರು. ಹರಿಯನ್ನು ನಿಂದನೆ ಮಾಡತೊಡಗಿದರು. ಇದರಿಂದಾಗಿ ಅವನ ಹೆತ್ತವರ ಮತ್ತು ಸಂಬಂಧಿಕರ ಹೆಸರೂ ಹಾಳಾಯಿತು.
         ನಾವು ಕೃಷ್ಣನಂತೆ ಎಲ್ಲ ಅವಕಾಶಗಳನ್ನೂ ಸದ್ಬಳಕೆ ಮಾಡಿ ಒಳ್ಳೆಯ ಹೆಸರನ್ನು ಗಳಿಸಬೇಕು. ದೇಶದ ಸಂಪನ್ಮೂಲರಾಗಬೇಕು. ಅವಕಾಶವೇ ದೇವರು. ಸಿಕ್ಕಿದ ಅವಕಾಶಗಳನ್ನು ಬಳಸದೆ ನಾಶಗೊಂಡ ಹರಿಯಂತೆ, ನಾವು ನಮ್ಮ ನಾಶವನ್ನು ಮಾಡದಿರೋಣ. ದೇಶದ ಆಪತ್ತು ಮತ್ತು ವಿಪತ್ತುಗಳಿಗೆ ನಾವು ಕಾರಣರಾಗದಿರೋಣ.
..................................ರಮೇಶ ಎಂ. ಬಾಯಾರು 
ರಾಜ್ಯ ಪ್ರಸಸ್ತಿ ಪುರಸ್ಕೃತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*********************************************
Ads on article

Advertise in articles 1

advertising articles 2

Advertise under the article