-->
ಸಂಭ್ರಮದ ಕನ್ನಡ ರಾಜ್ಯೋತ್ಸವ

ಸಂಭ್ರಮದ ಕನ್ನಡ ರಾಜ್ಯೋತ್ಸವ


         ಪ್ರತಿ ವರ್ಷದ ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ. ಮೈಸೂರು ರಾಜ್ಯವು (ಈಗಿನ ಕರ್ನಾಟಕ) 1956 ನವೆಂಬರ್ 1 ರಂದು ನಿರ್ಮಾಣವಾದುದರ ಸಂಕೇತವಾಗಿ ಈ ರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ. ದಕ್ಷಿಣ ಭಾರತದ ಎಲ್ಲಾ ಕನ್ನಡ ಭಾಷೆ-ಮಾತನಾಡುವ ಪ್ರದೇಶಗಳನ್ನು ವಿಲೀನಗೊಳಿಸಿ ಒಂದು ರಾಜ್ಯವನ್ನು ಘೋಷಣೆ ಮಾಡಿದ ಈ ದಿನವನ್ನು ಕನ್ನಡಿಗರು ನಾಡಹಬ್ಬವನ್ನಾಗಿ ಆಚರಿಸುತ್ತಾರೆ. 
ಕನ್ನಡದ ಕುಲಪುರೋಹಿತರಾದ ಆಲೂರು ವೆಂಕಟರಾಯರು, ಕರ್ನಾಟಕ ಏಕೀಕರಣ ಚಳುವಳಿಯನ್ನು 1905 ರಲ್ಲಿ ಪ್ರಾರಂಭಿಸಿದರು. 1950 ರಲ್ಲಿ, ಭಾರತವು ಗಣರಾಜ್ಯವಾದ ನಂತರ ಭಾರತದ ವಿವಿಧ ಪ್ರಾಂತ್ಯಗಳು, ಭಾಷೆಗಳ ಆಧಾರದ ಮೇಲೆ ರಾಜ್ಯಗಳಾಗಿ ರೂಪಗೊಂಡವು. ಈ ಹಿಂದೆ ರಾಜರ ಆಳ್ವಿಕೆಯಲ್ಲಿ ದಕ್ಷಿಣ ಭಾರತದಲ್ಲಿ ಹಲವಾರು ಸಂಸ್ಥಾನಗಳನ್ನು ಒಳಗೊಂಡಂತೆ ರಾಜ್ಯಗಳು ರೂಪುಗೊಂಡಿದ್ದವು. ಕನ್ನಡ ಮಾತನಾಡುವ ಪ್ರಾಂತ್ಯಗಳು ಸೇರಿ, ಮೈಸೂರು ರಾಜ್ಯವು ಉದಯವಾಯಿತು.
          1956 ರ ನವೆಂಬರ್ 1 ರಂದು, ಮದ್ರಾಸ್, ಮುಂಬಯಿ, ಹೈದರಬಾದ್ ಪ್ರಾಂತ್ಯದ ಕನ್ನಡ ಮಾತನಾಡುವ ಪ್ರದೇಶಗಳು ವಿಲೀನಗೊಂಡು ಮೈಸೂರು ರಾಜ್ಯ ಉದಯವಾಯಿತು ಹಾಗೂ ಉತ್ತರ ಕರ್ನಾಟಕ, ಮಲೆನಾಡು ಮತ್ತು ಹಳೆಯ ಮೈಸೂರು ಎಂಬುದಾಗಿ ಹೊಸದಾಗಿ ರೂಪುಗೊಂಡ ಮೈಸೂರು ರಾಜ್ಯವನ್ನು ಮೂರು ಪ್ರದೇಶಗಳಲ್ಲಿ ಗುರುತಿಸಲಾಯಿತು. ಹೊಸದಾಗಿ ಏಕೀಕೃತಗೊಂಡ ರಾಜ್ಯದ ಆರಂಭದಲ್ಲಿ ಮುಂಚಿನ ರಾಜ್ಯದ ಹೆಸರು ಇರಲೆಂದು "ಮೈಸೂರು" ಹೆಸರನ್ನು ಉಳಿಸಿಕೊಂಡರು. ಆದರೆ ಕರ್ನಾಟಕದ ಜನರ ತರ್ಕ ಮಾನ್ಯತೆಗಾಗಿ, ರಾಜ್ಯದ ಹೆಸರು ನವೆಂಬರ್ 1, 1973 "ಕರ್ನಾಟಕ" ಎಂದು ಬದಲಾಯಿಸಲಾಯಿತು. ಈ ಸಂದರ್ಭದಲ್ಲಿ ದೇವರಾಜ ಅರಸ್ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಕರ್ನಾಟಕ ಏಕೀಕರಣಕ್ಕಾಗಿ ಹೋರಾಡಿದವರಲ್ಲಿ ಅನಕೃ , ಕೆ. ಶಿವರಾಮ ಕಾರಂತ , ಕುವೆಂಪು , ಮಾಸ್ತಿ ವೆಂಕಟೇಶ ಅಯ್ಯಂಗಾರ್, ಎ.ಎನ್.ಕೃಷ್ಣರಾವ್ ಮತ್ತು ಬಿ.ಎಂ.ಶ್ರೀಕಂಠಯ್ಯ ಮುಂತಾದವರು ಪ್ರಮುಖರು.
      ಕರ್ನಾಟಕದ ಏಕೀಕರಣ ಭಾರತವು ಸ್ವತಂತ್ರವಾದ ಮತ್ತು ದೇಶ ವಿಭಜನೆಯಾದ ಬಳಿಕ ಭಾಷಾವಾರು ಮತ್ತು ಇತರ ಮಾನದಂಡಗಳನ್ನು ಆಧರಿಸಿ ರಾಜ್ಯಗಳನ್ನು ರಚಿಸಲು ಪುನರ್ವಿಂಗಡಣೆಯ ಗಡಿಗಳನ್ನು ಗುರುತಿಸಲಾಯಿತು. ಸ್ವಾತಂತ್ರ್ಯದ ನಂತರ, ಒಡೆಯರ್ ಅವರು ಜನರ ಮನದಿಂಗಿತವನ್ನು ಗಮನಿಸಿ ಅವರ ಅಪೇಕ್ಷೆ ಮನ್ನಿಸಿ ಭಾರತದ ಭಾಗವಾಗಲು ಸಮ್ಮತಿಸಿದರು. 1950 ರಲ್ಲಿ ಮೈಸೂರು ಭಾರತದ ರಾಜ್ಯವಾಯಿತು, ಮಹಾರಾಜರು 1975 ರ ವರೆಗೆ ಅದರ ರಾಜ ಪ್ರಮುಖ, ಅಥವಾ ರಾಜ್ಯಪಾಲರಾದರು. ಏಕೀಕರಣ ಚಳುವಳಿ 19ನೆಯ ಶತಮಾನದ ಎರಡನೇ ಭಾಗದಲ್ಲಿ ಆರಂಭವಾಗಿ, 1956 ರಲ್ಲಿ ರಾಜ್ಯ ಪುನರ್ ಸಂಘಟನೆ ಕಾಯಿದೆಯೊಂದಿಗೆ ಚಳುವಳಿ ಮುಕ್ತಾಯವಾಯಿತು. ಇದರಿಂದ ಕೊಡಗು , ಮದ್ರಾಸ್`ಪ್ರಾಂತ್ಯ , ಹೈದರಾಬಾದ್ , ಹಾಗೂ ಮುಂಬಯಿ ರಾಜ್ಯದ ಕನ್ನಡ ಭಾಷೆಯ ಜನರು ಹೆಚ್ಚು ಇರುವ ಭಾಗಗಳನ್ನು ಮೈಸೂರು ರಾಜ್ಯಕ್ಕೆ ಸೇರ್ಪಡಿಸಲಾಯಿತು.
             ಆಗಿನ ಮುಖ್ಯಮಂತ್ರಿಯಾಗಿದ್ದ ಡಿ. ದೇವರಾಜ ಅರಸು ಅವರ ಕಾಲದಲ್ಲಿ 1 ನವೆಂಬರ್, 1973 ರಂದು, ಮೈಸೂರು ರಾಜ್ಯದ ಹೆಸರನ್ನು ಕರ್ನಾಟಕ ಎಂದು ಮರುನಾಮಕರಣ ಮಾಡಲಾಯಿತು. ಹೊಸ ಮೈಸೂರು ರಾಜ್ಯವು(ನಂತರ ವಿಶಾಲ ಮೈಸೂರು-ಆಮೇಲೆ ಈಗಿನ ಕರ್ನಾಟಕ) 1 ನವೆಂಬರ್ 1956 ರಲ್ಲಿ ರಚನೆಯಾಯಿತು ಅಂದಿನಿಂದ 1 ನವೆಂಬರ್ ಕನ್ನಡ ರಾಜ್ಯೋತ್ಸವ ಅಥವಾ ಕರ್ನಾಟಕ ರಾಜ್ಯೋತ್ಸವವಾಗಿ ಆಚರಿಸಲಾಗುತ್ತದೆ.
           ಕನ್ನಡ ಭಾಷೆಯ ಕೆಲವು ಪ್ರದೇಶಗಳು ಸೇರ್ಪಡೆ ಆಗದ ಕಾರಣ ಕನ್ನಡಿಗರು ನಿರಾಶೆ ಹೊಂದಿದ್ದರೂ , ಸಂಸತ್ತಿನಲ್ಲಿ ರಾಜ್ಯ ಪುನರ್ವಿಂಗಡಣಾ ಸಮಿತಿಯ ಶಿಫಾರಸುಗಳನ್ನು ಅಂಗೀಕರಿಸಲು ಒಪ್ಪಿದರು. ರಾಜರ ಆಡಳಿತದಲ್ಲಿದ್ದ ಮೈಸೂರು ರಾಜ್ಯವು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿತು. ಕರ್ನಾಟಕಕ್ಕೆ ಸೇರದೆ ಕೈಬಿಟ್ಟ ಹೆಚ್ಚು ಕನ್ನಡಿಗರಿರುವ ಪ್ರದೇಶಗಳ ಪೈಕಿ ಅತ್ಯಂತ ಗಮನಾರ್ಹವಾದ ಪ್ರದೇಶ ಕಾಸರಗೋಡು. ಇದು ಏಕೀಕರಣ ಚಳವಳಿಯನ್ನು ಪ್ರಾರಂಭಿಸಿದ ಕೇಂದ್ರಗಳಲ್ಲಿ ಒಂದಾಗಿದೆ. ಹೀಗಾಗಿ ಕನ್ನಡ ಮಾತನಾಡುವ ಜನಸಂಖ್ಯೆಯುಳ್ಳ ಪ್ರದೇಶಗಳಲ್ಲಿ ಕರ್ನಾಟಕದ ಏಕೀಕರಣಕ್ಕೆ ಹೋರಾಡಿದ ಕನ್ನಡಿಗರು ನಿರಾಸೆಗೊಂಡಿದ್ದಾರೆ; ಹೋರಾಟ ಮುಂದುವರೆಸಿದ್ದಾರೆ.
          ಕರ್ನಾಟಕ ರಾಜ್ಯವು ತನ್ನ ರಾಜಧಾನಿಯಾಗಿ ಬೆಂಗಳೂರು ನಗರವನ್ನು ಆಯ್ಕೆ ಮಾಡಿಕೊಂಡಿತು, ಮತ್ತು ಕನ್ನಡಕ್ಕೆ ಆಡಳಿತ ಭಾಷೆಯ ಸ್ಥಾನಮಾನವನ್ನು ನೀಡಿತು. ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರ ಮೇಲ್ವಿಚಾರಣೆಯಲ್ಲಿ ವಿಧಾನಸೌಧದ ನಿರ್ಮಾಣವಾಗಿ , ಅದು ರಾಜ್ಯದ ಶಾಸನಸಭೆಯ ಸದನವಾಯಿತು. ಹಿಂದಿನ ಸಚಿವಾಲಯವಾಗಿದ್ದ ‘ಅಠಾರಾ ಕಛೇರಿ' ಯನ್ನು (ಸರ್ಕಾರದ ಆಡಳಿತ ಕಛೇರಿ) ರಾಜ್ಯದ ಹೈಕೋರ್ಟ್ ಮಾಡಲಾಯಿತು.
ಸ್ವಾತಂತ್ರಾನಂತರದ ಕರ್ನಾಟಕದ ಇತಿಹಾಸ
ಶ್ರೀ ಕೆ.ಚಂಗಲರಾಯ ರೆಡ್ಡಿ 25ನೇ ಅಕ್ಟೋಬರ್ 1947 ರಂದು ಮೈಸೂರು ರಾಜ್ಯದ ಮೊದಲ ಮುಖ್ಯಮಂತ್ರಿಯಾದರು. ಮೈಸೂರು ಮಹಾರಾಜ ಎಚ್.ಎಚ್.ಶ್ರೀ ಜಯಚಾಮರಾಜೇಂದ್ರ ಒಡೆಯರ್ ರಾಜಪ್ರಮುಖರಾದರು. ನಂತರ ರಾಜ್ಯದ ರಾಜ್ಯಪಾಲರಾದರು. ರೆಡ್ಡಿಯವರ ನಂತರ ದಿನಾಂಕ 30ನೇ ಮಾರ್ಚ್ 1952 ರಿಂದ ಕಾಂಗ್ರೆಸ್ ಕೆಂಗಲ್ ಹನುಮಂತಯ್ಯನವರು ಮುಖ್ಯಮಂತ್ರಿಯಾದರು.
ಮೈಸೂರು ಮತ್ತು ಕೊಡಗು ರಾಜ್ಯಗಳು, ಮುಂಬಯಿ ಮತ್ತು ಹೈದರಾಬಾದ್ ನ ಮತ್ತು ಮದ್ರಾಸ್ ನ ಹಳೆಯ ರಾಜ್ಯಗಳ ಕನ್ನಡ ಮಾತನಾಡುವ ಜಿಲ್ಲೆಗಳು ಕರ್ನಾಟಕದಲ್ಲಿ ವಿಲೀನಗೊಂಡವು. ನಂತರ, 1956 ರಲ್ಲಿ ತನ್ನ ಪ್ರಸ್ತುತ ರೂಪವನ್ನು ತೆಗೆದುಕೊಂಡಿತು. ಆಗ ಮೈಸೂರು ರಾಜ್ಯವು 10 ಜಿಲ್ಲೆಗಳನ್ನು ಹೊಂದಿತ್ತು. ಅವು ಬೆಂಗಳೂರು, ಕೋಲಾರ, ತುಮಕೂರು, ಮಂಡ್ಯ, ಮೈಸೂರು, ಹಾಸನ, ಚಿಕ್ಕಮಗಳೂರು (ಕಡೂರು), ಶಿವಮೊಗ್ಗ ಮತ್ತು ಚಿತ್ರದುರ್ಗ. ಬಳ್ಳಾರಿಯು 1953 ರಲ್ಲಿ ಈಗಿನ ಕರ್ನಾಟಕಕ್ಕೆ ಸೇರಿದವು ಹೊಸ ಆಂಧ್ರ ರಾಜ್ಯವು ಮದ್ರಾಸ್` ನ ಉತ್ತರ ಜಿಲ್ಲೆಗಳಲ್ಲಿ ಸೃಷ್ಟಿಯಾಯಿತು. ಆಗ ಮೈಸೂರು ರಾಜ್ಯಕ್ಕೆ ಮದ್ರಾಸ್ ಪ್ರಾಂತ್ಯದಿಂದ ವರ್ಗಾಯಿಸಿದ. ಕೊಡಗು ಜಿಲ್ಲಾ(ಕೇಂದ್ರಾಡಳಿತ), ಹಾಗೂ ದಕ್ಷಿಣ ಕನ್ನಡ ಜಿಲ್ಲೆ, ಮದ್ರಾಸ್ ರಾಜ್ಯದ ಉತ್ತರ ಕನ್ನಡ ಧಾರವಾಡ, ಬೆಳಗಾವಿ ಜಿಲ್ಲೆ, ಮತ್ತು ಮುಂಬಯಿ ಪ್ರಾಂತ್ಯದ ಬಿಜಾಪುರ ಜಿಲ್ಲೆ; ಮತ್ತು ಹೈದರಾಬಾದ್ ಪ್ರಾಂತ್ಯದಿಂದ ಬೀದರ್ ಜಿಲ್ಲೆ, ಗುಲ್ಬರ್ಗಾ ಜಿಲ್ಲೆ, ಮತ್ತು ರಾಯಚೂರು ಜಿಲ್ಲೆಗಳನ್ನು ಕರ್ನಾಟಕಕ್ಕೆ ವರ್ಗಾಯಿಸಲಾಯಿತು . 1989 ರಲ್ಲಿ ಗ್ರಾಮಾಂತರ ಪ್ರದೇಶ ಬೆಂಗಳೂರಿನಿಂದ ಬೇರ್ಪಟ್ಟು ಬೆಂಗಳೂರು ಗ್ರಾಮಾಂತರ ಜಿಲ್ಲೆಯಾಯಿತು. 1997 ರಲ್ಲಿ ಬಾಗಲಕೋಟೆ ಜಿಲ್ಲೆಯ ವಿಜಯಪುರ/ಬಿಜಾಪುರದಿಂದ ಬೇರ್ಪಟ್ಟು ಹೊಸ ಜಿಲ್ಲೆಯಾಯಿತು. ಮೈಸೂರು ಜಿಲ್ಲೆ ಒಡೆದು ಚಾಮರಾಜನಗರ ಜಿಲ್ಲೆ ಆಯಿತು. ಧಾರವಾಡ ಜಿಲ್ಲೆ ಒಡೆದು ಗದಗ ಜಿಲ್ಲೆ ಹುಟ್ಟಿತು. ಮತ್ತೆ ಧಾರವಾಡ ಜಿಲ್ಲೆ ಒಡೆದು ಹಾವೇರಿ ಜಿಲ್ಲೆ ಆಯಿತು. ರಾಯಚೂರು ಜಿಲ್ಲೆ ಒಡೆದು ಕೊಪ್ಪಳ ಜಿಲ್ಲೆ ಆಯಿತು. ದಕ್ಷಿಣ ಕನ್ನಡ ಬೇರ್ಪಟ್ಟು ಉಡುಪಿ ಜಿಲ್ಲೆ ಮತ್ತು ದಕ್ಷಿಣ ಕನ್ನಡ ಆಯಿತು. ದಾವಣಗೆರೆ ಜಿಲ್ಲೆಯನ್ನು ಬಳ್ಳಾರಿ, ಚಿತ್ರದುರ್ಗ, ಧಾರವಾಡ, ಶಿವಮೊಗ್ಗ ಜಿಲ್ಲೆಗಳ ಭಾಗಗಳಿಂದ ರಚಿಸಲಾಗಿದೆ. 2008 ರಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ಇಬ್ಭಾಗಿಸಿ ರಾಮನಗರ ಎಂಬ ಹೊಸ ಜಿಲ್ಲೆಯ ರಚನೆಯಾಯಿತು. ಅದೇ ರೀತಿಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯನ್ನು, ಹಿಂದಿನ ಕೋಲಾರ ಜಿಲ್ಲೆಯನ್ನು ಒಡೆದು ಮಾಡಲಾಯಿತು. ಹಾಗೆಯೇ ಬಳ್ಳಾರಿ ಜಿಲ್ಲೆಯನ್ನು ಒಡೆದು ವಿಜಯನಗರ ಜಿಲ್ಲೆಯನ್ನು ರಚಿಸಲಾಗಿದೆ. ಇದು ಇಂದಿನ (2021) ಕರ್ನಾಟಕ. ಈಗ ಕರ್ನಾಟಕದಲ್ಲಿ(2021) 31 ಜಿಲ್ಲೆಗಳಿವೆ.
         ಸ್ವಾತಂತ್ರ್ಯ ಪೂರ್ವ ಕರ್ನಾಟಕದ ಸಂಕ್ಷಿಪ್ತ ಇತಿಹಾಸ :
        ಹೊಯ್ಸಳರು ಮತ್ತು ಸೇವುಣರ ನಡುವಿನ ರಾಜಕೀಯ ಸೆಣಸಾಟದಲ್ಲಿ ಕರ್ನಾಟಕವು ಎರಡು ಭಾಗವಾಯಿತು. ತುಂಗಭದ್ರಾ ನದಿಯ ಉತ್ತರಕ್ಕೆ ಸೇವುಣರೂ, ದಕ್ಷಿಣಕ್ಕೆ ಹೊಯ್ಸಳರೂ ಆಳಿದರು. ಇದು ನಡೆದದ್ದು 13 ನೆಯ ಶತಮಾನದ ಆರಂಭದಲ್ಲಿ; ಆಗ ಬೇರೆಯಾದ ಕನ್ನಡಿಗರು ಆಡಳಿತಾತ್ಮಕವಾಗಿ ಒಂದಾದದ್ದು 1956 ರಲ್ಲಿ. ಅಂದರೆ ಸುಮಾರು 750 ವರ್ಷಗಳ ಕಾಲ ಕನ್ನಡಿಗರೇ ಅಧಿಕವಾಗಿದ್ದ ಭಾಗಗಳನ್ನು ಆಳಿದವರು ಕನ್ನಡೇತರರು. ಕರ್ನಾಟಕದ ಗಡಿರೇಖೆಯು ಎಂದೂ ಸ್ಥಿರವಾಗಿರಲಿಲ್ಲ.
ಕದಂಬ-ಗಂಗ-ಬಾದಾಮಿ ಚಾಳುಕ್ಯ ವಂಶಗಳ ಆಳ್ವಿಕೆಯ ಸಂದರ್ಭದಲ್ಲಿ ಗೋದಾವರಿ ನದಿಯನ್ನು ಉತ್ತರ ಗಡಿಯಾಗಿಯೂ, ಕಾವೇರಿ ನದಿಯು ಸಮುದ್ರವನ್ನು ಸೇರುವ ಭಾಗದವರೆಗಿನ ಭಾಗವನ್ನು ದಕ್ಷಿಣ ಗಡಿಯಾಗಿಯೂ ಹೊಂದಿದ್ದ ಕರ್ನಾಟಕವು ಬಾದಾಮಿ ಚಾಳುಕ್ಯ ವಂಶದ ಇಮ್ಮಡಿ ಪುಲಕೇಶಿಯ ಕಾಲದಲ್ಲಿ ನರ್ಮದೆಯವರೆಗೆ ತನ್ನ ಆಡಳಿತವನ್ನು ವಿಸ್ತರಿಸಿಕೊಳ್ಳುವ ಅವಕಾಶಗಳಿದ್ದರೂ ಹಾಗೆ ಮಾಡಲಿಲ್ಲ. ಶ್ರೀವಿಜಯನು, ತನ್ನ ‘ಕವಿರಾಜಮಾರ್ಗ’ದಲ್ಲಿ` ಕಾವೇರಿಯಿಂದಮಾಗೋದಾವರಿವರಮಿರ್ದ’ ನಾಡು ಕನ್ನಡ ನಾಡು ಎಂದು ವರ್ಣಿಸಿದ್ದಾನೆ. ಕಲ್ಯಾಣ ಚಾಳುಕ್ಯರ ಆಳ್ವಿಕೆಯ ಕಾಲಕ್ಕೆ ಈಗಿನ ಮಹಾರಾಷ್ಟ್ರದ ದಕ್ಷಿಣ ಭಾಗಗಳು ಮತ್ತು ಆಂಧ್ರದ ಪಶ್ಚಿಮ ಭಾಗಗಳು ಆಗಿನ ಕರ್ನಾಟಕದ ಅವಿಭಾಜ್ಯ ಭಾಗಗಳಾಗಿದ್ದವು. ಈಗಾಗಲೇ ತಿಳಿಸಿರುವಂತೆ ಹೊಯ್ಸಳರು ಮತ್ತು ಸೇವುಣರ ಕಾಲದಲ್ಲಿ ಒಡೆದುಕೊಂಡ ಕರ್ನಾಟಕವು ಒಂದಾಗಲು ಹಲವು ಶತಮಾನಗಳು ಬೇಕಾಯಿತು; ಹೋರಾಟವೂ ಅನಿವಾರ್ಯವಾಯಿತು. ಇದು ವಿಪರ್ಯಾಸ ಎನಿಸಿದರೂ, ಮರೆಮಾಚಲಾಗದ ಸತ್ಯ. ಹೊಯ್ಸಳರು ಮತ್ತು ಸೇವುಣ ರ ಅನಂತರ ಆಳಿದ ವಿಜಯನಗರದ ಅರಸರ ಕಾಲದಲ್ಲೂ ಕರ್ನಾಟಕವು ತನ್ನ ಹಿಂದಿನ ಸ್ವರೂಪವನ್ನು ಪಡೆಯಲಿಲ್ಲ. 
          ಬ್ರಿಟಿಷರ ಕಾಲದಲ್ಲಿ ಬೆಳಗಾವಿ, ಬಿಜಾಪುರ, ಧಾರವಾಡ ಮತ್ತು ಉತ್ತರ ಕನ್ನಡ ಜಿಲ್ಲೆಗಳು ಬ್ರಿಟಿಷರ ಮುಂಬಯಿ ಆಧಿಪತ್ಯಕ್ಕೂ,         
ದಕ್ಷಿಣ ಕನ್ನಡ ಮತ್ತು ಬಳ್ಳಾರಿ ಜಿಲ್ಲೆಗಳು ಬ್ರಿಟಿಷರ ಮದರಾಸಿನ ಆಧಿಪತ್ಯಕ್ಕೂ, ಬೀದರ್, ಗುಲಬರ್ಗ ಮತ್ತು ರಾಯಚೂರು ಜಿಲ್ಲೆಗಳು ಹೈದರಾಬಾದ್ ನಿಜಾಮನ ಆಳ್ವಿಕೆಗೂ ಸೇರಿದವು. ಕೊಡಗು ಜಿಲ್ಲೆಯು ಬ್ರಿಟಿಷರ ಒಂದು ಅಧೀನ ರಾಜ್ಯವಾಗಿ ಉಳಿಯಿತು.
          ಕನ್ನಡ ಭಾಷೆ ಮತ್ತು ಆ ಮೂಲಕ ರೂಪುಗೊಳ್ಳುವ ಸಂಸ್ಕೃತಿಯನ್ನು ಉಳಿಸಲು ಕನ್ನಡಿಗರೇ ಹೆಚ್ಚು ವಾಸಿಸುವ ಪ್ರದೇಶಗಳನ್ನು ಒಂದೇ ಆಡಳಿತ ವ್ಯಾಪ್ತಿಗೆ ತರುವ ಅಗತ್ಯ ಇತ್ತು. ಅದಕ್ಕಾಗಿ ಅವಶ್ಯಕ ವಾತಾವರಣ ನಿರ್ಮಾಣವಾದದ್ದು 1905 ರ ಸುಮಾರಿನಲ್ಲಿ. ಅಲ್ಲಿಂದ ಆರಂಭಗೊಂಡ ಏಕೀಕರಣದ ಕನಸಿನ ಅಭಿಯಾನ 1956 ರ ನವೆಂಬರ್ 1ರಂದು ನನಸಾಯಿತು. 
      ಬಳಸೋಣ ಕನ್ನಡ ಬೆಳೆಸೋಣ ಕನ್ನಡ   
              ಉಳಿಸೋಣ ಕನ್ನಡ
ಎಲ್ಲ ಕನ್ನಡಿಗರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.
...................................... ಡಾ|  ಶಿವಪ್ರಕಾಶ್ ಎನ್
ಉಪನ್ಯಾಸಕರು, 
ಸಿ.ಟಿ.ಇ. ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
(ಮಾಹಿತಿ ಮೂಲ: ವಿಕಿಪೀಡಿಯಾ ಹಾಗೂ ‘ಕನ್ನಡ ರಾಜ್ಯೋತ್ಸವ’- ಶ್ರೀ ರವೀಂದ್ರ.ಆರ್.ಡಿ.)
*********************************************Ads on article

Advertise in articles 1

advertising articles 2

Advertise under the article