
ಜಗಲಿಯ ಮಕ್ಕಳಿಗೆ ಅಕ್ಕನ ಪತ್ರ - 9
Saturday, October 23, 2021
Edit
ನಮಸ್ತೆ ಮಕ್ಕಳೇ,
ನಾವು ಬಯಸುವ ಬದಲಾವಣೆಗಳು ನಮ್ಮಿಂದಲೇ ಆರಂಭವಾಗಬೇಕಲ್ವಾ....? ಈ ನಿಟ್ಟಿನಲ್ಲಿ ಹೊಸತನಕ್ಕೆ ತೆರೆದುಕೊಳ್ಳುತ್ತಾ ಪ್ರತಿಯೊಂದು ಪತ್ರಕ್ಕೂ ನಿಮ್ಮ ಆತ್ಮೀಯ ಪ್ರತಿಕ್ರಿಯೆಗಳು ಭರವಸೆಯನ್ನು ಗಟ್ಟಿಗೊಳಿಸ್ತಿವೆ. ಧನ್ಯವಾದಗಳು ನಿಮ್ಮ ಓದಿನ ಪ್ರೀತಿಗೆ......
ಮೊನ್ನೆ thanks ಹೇಳುವ ಬಗ್ಗೆ ಮಾತನಾಡಿದೆವು ಅಲ್ವಾ? ನಮ್ಮ ಪ್ರೀತಿ ಪಾತ್ರರಿಗೆ ವಿಶೇಷ ದಿನಗಳಂದು ಶುಭಾಶಯ ಕೋರುವ ಅಭ್ಯಾಸವೂ ಇದೆ ನಮ್ಮೆಲ್ಲರಿಗೆ.. ಹೇಳಲು ಮರೆತೆ..! ನೀವು ಶುಭಾಶಯ ಪತ್ರ ಕಳಿಸಿದ್ದೀರಾ ಯಾರಿಗಾದರೂ....?
ಯಾರಿಗೆಲ್ಲಾ thanks ಹೇಳ್ಬೇಕು ಅನ್ನಿಸ್ತದೆಯೋ ಸಾಧ್ಯವಾದರೆ ಅವರಿಗೊಂದು greeting card ಕಳಿಸಿ. ನಿಮ್ಮದೇ ಕೈ ಬರೆಹದಲ್ಲಿ ನೀವೇ design ಮಾಡಿದ ಅಂದವಾದ ಧನ್ಯವಾದ ಪತ್ರವನ್ನು ಕೊಟ್ಟುಬಿಡಿ. ಬಹಳ ಒಳ್ಳೆಯ ನೆನಪಾಗಿ ಉಳಿದುಕೊಳ್ಳುತ್ತದೆ ಅದು. ಮುಂದಿನ ಪತ್ರಕ್ಕೆ ಉತ್ತರ ಬರೆಯುವಾಗ ನೀವೇ ಮಾಡಿದ thanks card ಕೂಡಾ ಜೊತೆಗಿರಲಿ.
ಮನೆಗೆ ಅತಿಥಿಗಳು ಬಂದ್ರು. ಮನೆಯ ಪುಟಾಣಿಗಳಿಬ್ಬರು ಕೈ ಜೋಡಿಸಿ ನಮಸ್ತೆ ಮಾಮ ಅಂದ್ರು. ಅವರಿಗೆಂದು ಮಾಡಿ ಇಟ್ಟ ಪಾನೀಯವನ್ನು ಮಕ್ಕಳೇ ಕೊಟ್ಟು ಪರಿಚಯ ಮಾಡಿಕೊಂಡರು. ನಿಮ್ಮ ಮನೆಗಳಲ್ಲಿ ಹೇಗಿರುತ್ತವೆ ಇಂತಹ ಸಂದರ್ಭಗಳು?
ಹೆಚ್ಚಿನವರು ಇಂತಹ ಅಭ್ಯಾಸಗಳನ್ನು ರೂಢಿಸಿಕೊಂಡಿರುತ್ತೇವೆ. ನಮ್ಮ ಅಪ್ಪ ಅಮ್ಮ ಅಥವಾ ಮನೆಯ ಹಿರಿಯರು ಅಭ್ಯಾಸ ಮಾಡಿಸಿದಂತೆ ಅಲ್ವಾ? ನಿಮ್ಮಲ್ಲಿ ಯಾಕೆ ಗೊತ್ತಾ ಈ ವಿಚಾರ? ಕೆಲವು ಮನೆಯ ಹಿರಿಯರಿಗೂ ಇದನ್ನೆಲ್ಲಾ ಹೇಳಲು ನೆನಪಾಗುವುದಿಲ್ಲ. ಅಥವಾ ಅದೇನೂ ಅಷ್ಟೊಂದು ದೊಡ್ಡ ವಿಷಯವೂ ಅಲ್ಲ ಎಂದೆನಿಸುವುದು ಸಹಜ..!
ಹಾಗಾಗಿ ಹೇಳಲು ಉಳಿದಿರುವ ಸಣ್ಣ ಸಂಗತಿಯೊಂದನ್ನು ನಿಮ್ಮೊಡನೆ ಹಂಚಿಕೊಳ್ಳಬೇಕೆನಿಸಿತು. ಸಾಮಾನ್ಯವಾಗಿ ಮನೆಗೆ ಯಾರಾದರೂ ಬಂದೊಡನೆ ಟಿ.ವಿ. ನೋಡಿಕೊಂಡೇ ಇರೋದು ಅಥವಾ ಏನೂ ಪ್ರತಿಕ್ರಿಯಿಸದೆ ಮನೆಯೊಳಗೆ ಓಡಿ ಹೋಗೋದು ಅಷ್ಟೊಂದು ಒಳ್ಳೆಯ ಅಭ್ಯಾಸ ಅನ್ನಿಸೋದಿಲ್ಲ ಅಲ್ವಾ...? ಯಾರದಾದರೂ phone ಕರೆ ಸ್ವೀಕರಿಸುವಾಗಲೂ ಮೊದಲು 'ನಮಸ್ತೆ' ಅಂದುಬಿಡಬೇಕು. ಯಾರು...? ಅನ್ನುವ ಪದವನ್ನು ಮೊದಲೇ ಬಳಸುವುದೂ ಸಭ್ಯತೆ ಅಲ್ಲ ಎನ್ನುವುದು ನನ್ನ ಅನಿಸಿಕೆ... ಹಿರಿಯರನ್ನು ಕಂಡೊಡನೆ ಎರಡು ಕೈ ಜೋಡಿಸಿ ನಮಸ್ಕರಿಸುವ ಸಂಸ್ಕಾರವನ್ನು ಮರೆಯದೆ ಬೆಳೆಸೋಣ. ಮಾತಿನ ಆರಂಭದಿಂದ ಹಿಡಿದು ಕೊನೆಯವರೆಗೂ ನಾವು ಬಳಸುವ ಪದಗಳು ನಾವು ಹೇಗೆ ಅನ್ನುವ ಒಂದಷ್ಟು ಚಿತ್ರಣವನ್ನು ಕೇಳಿಸಿಕೊಂಡವರಿಗೆ ನೀಡುತ್ತದೆ. ನಮ್ಮ ವ್ಯಕ್ತಿತ್ವವನ್ನು ನಿರೂಪಿಸುತ್ತಾ ಹೋಗುತ್ತದೆ.
......................................... ತೇಜಸ್ವಿ ಅಂಬೆಕಲ್ಲು
ಶಿಕ್ಷಕಿ
ದ.ಕ.ಜಿ.ಪಂ.ಹಿ.ಪ್ರಾ .ಶಾಲೆ,
ಗೋಳಿತ್ತಟ್ಟು, ಪುತ್ತೂರು ತಾಲ್ಲೂಕು
ದಕ್ಷಿಣ ಕನ್ನಡ ಜಿಲ್ಲೆ
*********************************************