-->
ಪದಗಳ ಆಟ ಭಾವ ಚಿತ್ರ ಪಾತ್ರ  ಸಂಚಿಕೆ - 14

ಪದಗಳ ಆಟ ಭಾವ ಚಿತ್ರ ಪಾತ್ರ ಸಂಚಿಕೆ - 14         ಬಾಲಾದಪಿ ಶುಕಾದಪಿ ಪರಿಸರ ಸಾಂತ್ರಾಣಿ
         ಹೆರಿಗೆಯ ನೋವು ಹೆತ್ತವರಿಗೆ ಗೊತ್ತು. ಶೋಷಿತರ ಬನ್ನ ಬವಣೆ ಅನುಭವಿಸಿದವರಿಗೆ ಗೊತ್ತು.
         ಅಡುಗೆ-ಆಹಾರ ಉರುವಲು ಇಂತಹ ಸಮಸ್ಯೆಗಳಿಂದ ನೇರ ತೊಂದರೆ ಉಪಸರ್ಗ ಗಳನ್ನು ಅನುಭವಿಸುವುದು ಮಹಿಳೆಯರು. ಅರಣ್ಯಗಳ ನಾಶ ಮಾಡಿದರೂ ನೇರ ತೊಂದರೆಯಾಗುವುದು ವನಿತೆಯರಿಗೆ. ಶೋಷಿತ ಮಹಿಳೆಯರೇ ದನಿ ಎತ್ತಿದರೆ ಹೇಗಿರುತ್ತದೆ? ಅಧಿಕಾರಿಗಳ ಕಿವಿ ನೆಟ್ಟಗಾಗುತ್ತದೆ. ಮಂತ್ರಿ, ಪ್ರಧಾನಮಂತ್ರಿಗಳ ಕಣ್ಣು ಬೇಗ ತೆರೆಯುತ್ತದೆ. ಮಾನಿನಿಯರು ಸೇರಿ ದುಷ್ಟರಿಗೆ ಅವಮರ್ಯಾದೆ ಮಾಡಿದರೆ ಅದು ಬೇಗ ದೇಶದಾಚೆಯೂ ಸುದ್ದಿಯಾಗುತ್ತದೆ.
       ಉತ್ತರಾಖಂಡದ ಬೆಟ್ಟ ದಿಟ್ಟ ಸ್ತ್ರೀಯರನ್ನು ಕೊಟ್ಟಿದೆ. ಲಲನೆಯರಿಗೆ ಅಡುಗೆ ಮಾಡಲು ಉರುವಲು ಸೌದೆ ಕೊಟ್ಟಿದೆ. ಅವರು ಸಾಕುವ ಗೋವುಗಳಿಗೆ ಮೇವು ನೀಡಿದೆ. ನೀರು ಕೊಟ್ಟಿದೆ. ಬೇರು ಮಣ್ಣ ಹಿಡಿದಿದೆ. ಜೀವನಕ್ಕೆ ಅಡಿಪಾಯ, ಆಧಾರವಾಗಿದೆ. ಅಂತಹ ಬೆಟ್ಟಗಳ ವೃಕ್ಷ ಅಲಂಕಾರಗಳನ್ನು ಲೂಟಿ ಮಾಡಿದರೆ ಹೆಂಗಳೆಯರ ಹೃದಯ ಮಿಡಿಯದಿದ್ದೀತೆ!
      ಅಂದು ಚಮೇಲಿಯಲ್ಲಿ ಹೀಗೇ ಆಯಿತು. ಒಂದು ಬೃಹತ್ ಕಂಪನಿ ಟೆನ್ನಿಸ್ ರಾಕೆಟ್ ತಯಾರು ಮಾಡಲು 300 ಮರಗಳನ್ನು ಕಡಿಯ ಹೊರಟಿತು. ನಿತ್ಯ ಪ್ರಕೃತಿಯ ಅನುಸಂಧಾನ ದಲ್ಲಿರುವ ನಾರಿಯರು ಬಿಡುತ್ತಾರೆಯೆ...? ಶಸ್ತ್ರಾಸ್ತ್ರಗಳಿಲ್ಲ, ಬಿಲ್ಲು ಬಾಣಗಳಿಲ್ಲ , ಧನುಸ್ಸು ಶರ ಗಳಿಲ್ಲ , ಕತ್ತಿ ಗುರಾಣಿಗಳಿಲ್ಲ , ಇಷುಧಿಯಿಲ್ಲ, ಬತ್ತಳಿಕೆಯಿಲ್ಲ. ಆದರೆ ಇವೆಲ್ಲದಕ್ಕಿಂತ ಅಮೂಲ್ಯವಾದ, ಅಮೇಯವಾದ, ಅನುಪಮವಾದ ನಿಧಿ ಅವರಲ್ಲಿತ್ತು. ಅದುವೇ ಮೇರುಸದೃಶ ಧೈರ್ಯ-ಸ್ಥೈರ್ಯ , ನಿರ್ಭೀತಿ , ನಿರ್ಭಿಡೆ ಹಾಗೂ ಪ್ರೀತಿ ಕಾಳಜಿ. ಅದೇ ಧೈರ್ಯದಿಂದ ನೂರರಷ್ಟು ಮಹಿಳೆಯರು ಬೆಟ್ಟ ಏರಿದರು, ಕಾಂತಾರದೊಳ ಹೊಕ್ಕರು. ವಿಪಿನದ ತರುಗಳನ್ನು ಲತೆಯಂತೆ ಪ್ರೀತಿಯಿಂದ ಅಪ್ಪಿಕೊಂಡರು. ಹಿಮಾದ್ರಿಯ ವೃಕ್ಷಸಮೂಹ ಗಳೆಡೆಯಿಂದ ಮಾರ್ದನಿಸಿತು ಧ್ವನಿ.
      ವನ ಬನಗಳಉಪಕಾರವೇನು 
      ನೆಲ-ಜಲ-ಅನಲ
      ಜೀವನಕಾಧಾರವಲ್ಲವೇನು? 
ಹಾಡು ಕಾಡ ತುಂಬಾ ಝೇಂಕರಿಸಿತು. ವೃಕ್ಷಗಳ ರಕ್ಷೆ ಅವರ ದೀಕ್ಷೆಯಾಯಿತು. ಮತ್ತಷ್ಟು ಅರಣ್ಯ ಬೆಳೆಸಿದರು. ಅಲ್ಲಲ್ಲಿ ಚಿಕ್ಕ ಗುಂಪು, ಸಂಘ ಕಟ್ಟಿದರು. ತಮ್ಮ ಗಂಡಂದಿರಿಗೆ ಮಧ್ಯ ಕೊಡಿಸಿದಾಗ ಮದ್ಯಪಾನ ವಿರೋಧಿ ಚಳವಳಿ ಆರಂಭಿಸಿದರು. ಅರಣ್ಯ ಸಂರಕ್ಷಣೆಗಾಗಿ ಕಾನೂನುಗಳನ್ನು ಪ್ರಶ್ನಿಸಿದರು. ರೇಲಿ ಮಾಡಿದರು, ಡ್ರಮ್ ಬಡಿದರು ಡ್ರಮ್, ಘೋಷಣೆ ಕೂಗಿದರು. ಸೌಟು ಹಿಡಿವ ಹೆಣ್ಣು ಇಡೀ ಚಳವಳಿಯ ಸೂತ್ರ ಹಿಡಿಯಬಲ್ಲರು ಎಂಬುವುದನ್ನು ಮಾಡಿ ತೋರಿಸಿದರು. ಸಮಾಜಸೇವಕಿ ವಿಮಲಾ ವಿವಾಹದ ಬಳಿಕ ಈ ಸೂತ್ರವನ್ನು ತನ್ನ ಪತಿಗೆ ಕೊಟ್ಟಳು. ಪತಿಯೋ ಖಾದಿ ತೊಟ್ಟ ಗಾಂಧಿವಾದಿ. ಅಹಿಂಸಾ ಮಾರ್ಗದಲ್ಲಿಯೇ ಉತ್ತರದ ಕಾಶ್ಮೀರದಿಂದ ದಕ್ಷಿಣ ಕೊಹಿಮಾ ದವರೆಗೆ 5000 ಕಿಲೋಮೀಟರ್ ನಡೆದು ಹಿಮಾಲಯ ಸಂರಕ್ಷಣೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದರು. ಇವರಿಂದಾಗಿ ವೃಕ್ಷಗಳ ರಕ್ಷಣೆಯಿಂದ ಈ ಕೈಂಕರ್ಯ ಇಡೀ ಪರಿಸರ ರಕ್ಷಣೆಗೆ ನಿರ್ದೇಶಿತವಾಯಿತು. ವನಿತೆಯರಿಂದ ವಾಮನ ರೂಪದಲ್ಲಿ ಚಮೇಲಿಯಲ್ಲಿ ಜನಿಸಿದ ಚಳವಳಿ ಹಿಮಾಲಯದಗಲಕ್ಕು ಆತ್ಯಂತಿಕವಾಗಿ ತ್ರಿವಿಕ್ರಮ ರೂಪಕ್ಕೆ ಬೆಳೆಯಿತು. ಮಹಿಳಾ ಶಿಕ್ಷಣ, ದಲಿತ ಶಿಕ್ಷಣ, ಮದ್ಯಪಾನ ವಿರೋಧಿ ಆಂದೋಲನ, ಬೀಜ ಬಚಾವೊ ಅಭಿಯಾನ, ನದಿ ರಕ್ಷಣೆ, ಸರ್ವೋದಯ ತತ್ವ ಇವೆಲ್ಲವುಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತಾ ಚಳವಳಿಯು ಹಿಮಾಲಯ ಸಂರಕ್ಷಣೆಯಿಂದ ಇಡೀ ದೇಶದ ಪರಿಸರ ರಕ್ಷಣೆವರೆಗೆ ಬೃಹತ್ತಾಗಿ ಬೆಳೆಯಿತು. ಹಿಮಾಲಯದಲ್ಲಿ ಗಾಂಧೀಜಿಯ ಸಿಪಾಯಿಯಂತೆ ಕೆಲಸ ಮಾಡಿದ ಈ ದೇಶಭಕ್ತನ ಪರಿಸರ ಪ್ರಜ್ಞೆ ದೇಶದ ಬೇರೆ ಬೇರೆ ರಾಜ್ಯಗಳಿಗೆ ಹರಡಿತು, ಹಬ್ಬಿತು, ವ್ಯಾಪಿಸಿತು, ಪಸರಿಸಿತು. ಕೇರಳದಲ್ಲಿ ಅಣೆಕಟ್ಟಿನ ವಿರುದ್ಧ ಆಂದೋಲನ, ಉತ್ತರ ಕನ್ನಡದ ಪಶ್ಚಿಮಘಟ್ಟದಲ್ಲಿ ಅಪ್ಪಿಕೋ ಚಳವಳಿಗೆ ಚಿಪ್ಕೋ ಚಳವಳಿ ಪ್ರೇರಕವಾಯಿತು. ಪರಿಸರ ಪತ್ರಕರ್ತ ಸೇಹಗಲ್, ಗಾಯಕ ರಾಹುಲ್ ರಾಮ್, ಭವಾನಿಬಾಯ್ ಪಾಂಡುರಂಗ ಹೆಗಡೆ ಅವರಂಥ ಪರಿಸರ ಸೇನಾನಿಗಳು ಸಮಾಜ ಸುಧಾರಕರು ಚಿಪ್ಕೋ ದಿಂದ ಪ್ರಭಾವಿತರಾದರು ಪ್ರೇರಿತರಾದರು.
       ಚಿಪ್ಕೋ ಚಳವಳಿ ಅದರ ತೀವ್ರತೆ, ಮಹಿಳಾ ಒಳಗೊಳ್ಳುವಿಕೆ ಹಾಗೂ ಜನಪ್ರಿಯ ಮಾನವೀಯ ಮುಖದಿಂದಾಗಿ ಇಡೀ ವಿಶ್ವದಲ್ಲೇ ಅನನ್ಯವಾಗಿ 
ನಿಲ್ಲುತ್ತದೆ.
       ಈ ಗಾಂಧಿವಾದಿ ಬಾಲ್ಯದಲ್ಲಿ ಥೇರಿಯ ರಾಜನ ಆಡಳಿತವನ್ನು ಪ್ರತಿಭಟಿಸಿ ನಂತರದ ಸ್ವಾತಂತ್ರ್ಯದ ಸಮರಕ್ಕೆ 13ನೇ ವಯಸ್ಸಲ್ಲೇ ಧುಮುಕಿದವರು. ರಾಜನ ಕ್ರೌರ್ಯ ಸ್ವಾತಂತ್ರ್ಯಯೋಧರ ಧಾರುಣ ಮರಣ, ನದಿಗೆ ಎಸೆದ ಅನಾಥರ ಹೆಣಗಳು - ಈ ಎಲ್ಲಾ ಘಟನೆಗಳು ಇವರಲ್ಲಿ ಸ್ವಾತಂತ್ರ್ಯದ, ಸಮಾಜ ಸುಧಾರಣೆಯ ಮಹತ್ವಾಕಾಂಕ್ಷೆಯನ್ನು ಪೋಷಿಸಿದವು. ಅವರ ಪರಿಸರ ರಕ್ಷಣೆಯ ಕಾಯಕಕ್ಕೆ ವಿಜ್ಞಾನ ಮತ್ತು ತಲಸ್ಪರ್ಶಿ ಜ್ಞಾನದ ಭದ್ರ ಆಧಾರ, ಅಡಿಪಾಯ, ತಳಹದಿ ಇತ್ತು. ಇವರ ದನಿ ಮೃದುವಾದರೂ ನಿಲುವು, ತತ್ವ , ನೇರ, ದೃಢ. ಇವರು ಮೊನಚು ಸಂವಹನಕಾರ. ಅಣೆಕಟ್ಟಿನ ವಿರುದ್ಧ ಭಾಗೀರಥಿ ನದಿಯ ತಟದಲ್ಲಿ ವಾಸ್ತವ್ಯ ಹೂಡಿ 45 ದಿನ ಉಪವಾಸ ಮಾಡಿದರು. 2001ರಲ್ಲಿ ರಾಜ್ಘಾಟ್ ಅಲ್ಲಿ 24 ದಿನ ಉಪವಾಸ ಮಾಡಿದರು. ಅಣೆಕಟ್ಟನ್ನು ನಿಲ್ಲಿಸಲಾಗಲಿಲ್ಲ. ಆದರೆ ಅವರ ಹೋರಾಟ ನಿಷ್ಫಲವಾಗುವುದಿಲ್ಲ. ಅಭಿವೃದ್ಧಿ ಹೆಸರಿನಲ್ಲಿ ಜನವಿರೋಧಿ ಯೋಜನೆಗಳ ವಿರುದ್ಧ ಅವರು ಎತ್ತಿದ ಪ್ರಶ್ನೆಗಳು ಇಂದು ಪ್ರಜಾತಂತ್ರದ ಅಂಬುಧಿಯಲ್ಲಿ ತೀವ್ರ ಸಂಚಲನವನ್ನು ಉಂಟು ಮಾಡಿರುವುದಂತೂ ದಿಟ. Ecology is the permanent economy ಎಂಬ ಅವರ ಹಸಿರುವಾಣಿ ಹೆಸರುವಾಸಿಯಾಗಿದೆ. ಜಗತ್ಪ್ರಸಿದ್ಧವಾಗಿದೆ , ವಿಶ್ವವಿಖ್ಯಾತವಾಗಿದೆ. ಭತ್ತ ಬೆಳೆಯಲು ಅಧಿಕ ನೀರು ಬೇಕೆಂಬ ಕಾರಣಕ್ಕಾಗಿ ಅನ್ನ ತಿನ್ನುವುದನ್ನೇ ಬಿಟ್ಟ ಅತಿ ಸೂಕ್ಷ್ಮ ಸಂವೇದಿ ಬಹು ಗುಣಗಳ ಖನಿ, ಗಣಿ. ಬಾಲಾದಪಿ ಶುಕಾದಪಿ ಎಂಬಂತೆ ಪರಿಸರ ಹಿತಾಕಾಂಕ್ಷಿ, ಪರಿಸರ ಋಷಿ, ಪರಿಸರ ಸಂತ್ರಾಣಿ. ಚಿಲ್ಲಾರ ಹಳ್ಳಿಯಲ್ಲಿ ತಾನು ಕಲ್ಲು, ಮಣ್ಣು, ಹೊತ್ತು, ಆಶ್ರಮ ಕಟ್ಟಿ, ನುಡಿದಂತೆ ನಡೆದ ಸರಳ ಶ್ರಮಜೀವಿ.
      ಧರತೀ ಕಾ ಪ್ರಕಾಶ್, India, Environment Myth and reality. ಮುಂತಾದ ಅನುಭವಜನ್ಯ, ಅನರ್ಘ್ಯ ಜ್ಞಾನನಿಧಿಯನ್ನು ನಮಗೆ ಕೊಟ್ಟು ಅಮರರಾಗಿದ್ದಾರೆ. ಭಾರತದ ಪ್ರಕೃತಿಮಾತೆಯಲ್ಲಿ ಐಕ್ಯವಾಗಿದ್ದಾರೆ. ಹಿಮಾಲಯದ ತರುಗಳಲ್ಲಿ, ಪುಷ್ಪ ಹೊದ್ದ ಕಣಿವೆಗಳಲ್ಲಿ, ಅಣೆಕಟ್ಟಿನ ನೀರಿನ ಭೋರ್ಗರೆತದಲ್ಲಿ, ಪಶ್ಚಿಮಘಟ್ಟದ ಪವನದಲ್ಲಿ, ಭಾಗೀರಥಿಯ ಮಂಜುಳ ಕಲರವದಲ್ಲಿ ಅವರು ಜೀವಂತವಾಗಿದ್ದಾರೆ.
ಬಹುಗುಣಿಯಾಗಿ, ಬಹುಮುಖಿಯಾಗಿ,    
ಬಹುಕಾಲ ಬಹು ತಪಿಸಿದ ತಾತ ನಿಮಗೆ    
ಬಹುಪರಾಕ್.
ಇಂಥವರು ನಿಮ್ಮೊಳಗಿಲ್ಲವೇ ...............?
     ...............................................ಸುಮಾಡ್ಕರ್
ಸ್ವರೂಪ ಅಧ್ಯಯನ ಸಂಸ್ಥೆ 
ಮಂಗಳೂರು
Mob: +91 99016 38372
*********************************************Ads on article

Advertise in articles 1

advertising articles 2

Advertise under the article