
ಸ್ಪೂರ್ತಿಯ ಮಾತುಗಳು
Sunday, October 24, 2021
Edit
ನೆಪಗಳು ನಿಮ್ಮನ್ನು ಸೋಲಿಸದಿರಲಿ. "ಸಂದೇಶ್, ಯಾಕೆ ಇಷ್ಟು ಕಡಿಮೆ ಮಾರ್ಕ್ಸ್ ಬಂದಿದೆ....? ಪರೀಕ್ಷೆಗೆ ಓದಿಲ್ಲವಾ...? ಹತ್ತನೇ ತರಗತಿಯ ಮಕ್ಕಳು ಜವಾಬ್ದಾರಿಯಿಂದ ಓದದಿದ್ದರೆ ಹೇಗೆ....? ಮುಂದಿನ ಸಲ ಹೀಗಾಗಬಾರದು." F.A 1 ನ ಉತ್ತರ ಪತ್ರಿಕೆ ಕೊಡುತ್ತಾ ನಂದಿನಿ ಮೇಡಂ ಗದರುವಿಕೆಯ ದನಿಯಲ್ಲಿ ಹೇಳಿದರು. ಕಣ್ಣಲ್ಲಿ ನೀರು ತಂದುಕೊಂಡು ಸಂದೇಶ್ ಹೇಳಿದ....,"ಮೇಡಂ, ನನ್ನ ಅಪ್ಪ ದಿನವೂ ಕುಡಿದು ಬಂದು ಕೂಗಾಡ್ತಾರೆ. ಅಮ್ಮನೊಂದಿಗೆ ಜಗಳವಾಡ್ತಾರೆ. ಹಾಗಾಗಿ ನನಗೆ ಓದಲಿಕ್ಕೇ ಆಗುವುದಿಲ್ಲ." ಮೇಡಂ ಅವನಿಗೆ ಸಾಂತ್ವನ ಹೇಳುತ್ತಾ, "ಅಳಬೇಡ. ನೀನು ಸಮಯ ಹೊಂದಿಸಿ ಚೆನ್ನಾಗಿ ಓದಲು ಪ್ರಯತ್ನಿಸು. ಪಬ್ಲಿಕ್ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸು ಆಯ್ತಾ." ಎಂದರು. ಸಂದೇಶ್ ತಲೆಯಲ್ಲಾಡಿಸಿದ.
ಪೋಷಕರ ಸಭೆಯ ದಿನ ನಂದಿನಿ ಮೇಡಂ ತರಗತಿಗೆ ಪ್ರಥಮ ಸ್ಥಾನ ಪಡೆದ ವಿನುತಾಳ ಅಮ್ಮನೊಂದಿಗೆ ಮಾತನಾಡುತ್ತಿದ್ದರು. "ನಿಮ್ಮ ಮಗಳು ವಿನುತಾ ತುಂಬಾ ಜಾಣೆ. ಹೆತ್ತವರ ಪ್ರೋತ್ಸಾಹ, ಮನೆಯಲ್ಲಿ ಕಲಿಕೆಯ ವಾತಾವರಣ ಇವಿಷ್ಟಿದ್ದರೆ ಮಕ್ಕಳು ಚೆನ್ನಾಗಿ ಕಲಿಯುತ್ತಾರೆ. ಪಾಪ ನಮ್ಮ ಕೆಲವು ವಿದ್ಯಾರ್ಥಿಗಳ ಮನೆಯ ಪರಿಸ್ಥಿತಿ ಸರಿಯಿಲ್ಲದೇ ಅವರು ಕಲಿಕೆಯಲ್ಲಿ ಹಿಂದುಳಿದಿದ್ದಾರೆ. ನೀವು ಹಾಗೂ ವಿನುತಾ ಪುಣ್ಯವಂತರು." ವಿನುತಾಳ ಅಮ್ಮ ಭವಾನಿ ನಕ್ಕು ನುಡಿದರು. "ಮೇಡಂ ನಮ್ಮ ಮನೆಯ ವಾತಾವರಣದಿಂದ ವಿನುತಾ ಚೆನ್ನಾಗಿ ಕಲಿಯುತ್ತಿದ್ದಾಳೆ ಅಂತೀರಾ....? ನಮ್ಮ ಮನೆಯ ಪರಿಸ್ಥಿತಿ ಆ ದೇವರಿಗಷ್ಟೇ ಗೊತ್ತು. ಅವಳ ಅಪ್ಪ ದಿನಾಲೂ ಕುಡಿದು ಬಂದು ಮಕ್ಕಳ ಪುಸ್ತಕ, ಚೀಲ ತೆಗೆದು ಎಸೆಯುತ್ತಾರೆ. ವಿನಾಕಾರಣ ನನ್ನ ಜೊತೆ ಜಗಳವಾಡುತ್ತಾರೆ. ಕೆಟ್ಟ ಪದಗಳಿಂದ ಬೈಯುತ್ತಾರೆ. ಒಂದೆರಡು ಗಂಟೆಯ ರಂಪದ ನಂತರ ಎಲ್ಲಾದರೂ ಮಲಗಿ ನಿದ್ರಿಸುತ್ತಾರೆ. ನಮ್ಮ ವಿನುತಾ ಸಂಜೆ ಶಾಲೆಯಿಂದ ಬಂದವಳೇ ಬೇಗನೇ ಸ್ನಾನ ಮುಗಿಸಿ ಓದಲು ಕುಳಿತುಕೊಳ್ಳುತ್ತಾಳೆ. ಅಪ್ಪ ಬರುವಷ್ಟರಲ್ಲಿ ಹೋಮ್ ವರ್ಕ್ ಮುಗಿಸಿ ಮಲಗುತ್ತಾಳೆ. ಅಪ್ಪನ ಕೂಗಾಟ, ರಂಪಾಟ ಮುಗಿದ ನಂತರ ಮೆಲ್ಲನೆ ಎದ್ದು ಬಂದು ತಡರಾತ್ರಿಯವರೆಗೆ ಓದುತ್ತಾಳೆ." ನಂದಿನಿ ಮೇಡಂ ಚಕಿತರಾಗಿ ಅವರ ಮಾತುಗಳನ್ನು ಕೇಳಿಸಿಕೊಂಡರು.
ಈ ಕತೆಯಲ್ಲಿನ ಸಂದೇಶ್ ಹಾಗೂ ವಿನುತಾರನ್ನು ಗಮನಿಸಿ. ಇಬ್ಬರ ಪರಿಸ್ಥಿತಿಯೂ ಒಂದೇ ಆಗಿತ್ತು. ಆದರೆ ಪರಿಸ್ಥಿತಿಗೆ ಅವರು ಪ್ರತಿಕ್ರಿಯಿಸಿದ ರೀತಿ ಭಿನ್ನವಾಗಿತ್ತು. ಸಂದೇಶ್ ಪರಿಸ್ಥಿತಿಯನ್ನು ದೂರುತ್ತಾ ತಟಸ್ಥನಾಗಿದ್ದು ಕಲಿಕೆಯಲ್ಲಿ ಹಿಂದುಳಿದ. ವಿನುತಾ ಪರಿಸ್ಥಿತಿಯನ್ನು ಜಾಣ್ಮೆಯಿಂದ ಎದುರಿಸಿ ಗೆಲುವನ್ನು ತನ್ನದಾಗಿಸಿದಳು.
ಪ್ರೀತಿಯ ಮಕ್ಕಳೇ, ನಿಮಗೆ ಹಲವು ಕೊರತೆಗಳಿರಬಹುದು. ಸಮಸ್ಯೆಗಳಿರಬಹುದು. "ಪವರ್ ಕಟ್ ನಿಂದ ಕರೆಂಟ್ ಇರಲಿಲ್ಲ. ಹಾಗಾಗಿ ಹೋಮ್ ವರ್ಕ್ ಮಾಡಲಿಲ್ಲ." "ಮೊಬೈಲ್ ಗೆ ನೆಟ್ವರ್ಕ್ ಇರಲಿಲ್ಲ. ಹಾಗಾಗಿ ಆನ್ ಲೈನ್ ಕ್ಲಾಸ್ ಅಟೆಂಡ್ ಆಗಲಿಲ್ಲ." "ಮಾವನ ಮನೆಯಲ್ಲಿ ಕಾರ್ಯಕ್ರಮಕ್ಕೆ ಅಮ್ಮನ ಜೊತೆ ನಾನೂ ಹೋದದ್ದರಿಂದ ಒಂದು ವಾರ ಶಾಲೆಗೆ ಬರಲಿಲ್ಲ" ದಿನವೂ ಈ ರೀತಿಯ ಹಲವು ನೆಪಗಳನ್ನು ಹೇಳುವ ಸಹಪಾಠಿಗಳನ್ನು ನೀವು ನೋಡಿರಬಹುದು. ನೀವೇ ಒಮ್ಮೊಮ್ಮೆ ಕೆಲವೊಂದು ಜವಾಬ್ದಾರಿಗಳಿಂದ ತಪ್ಪಿಸಿಕೊಳ್ಳಲು, ನಿಮಗಾದ ಸೋಲನ್ನು ಸಮರ್ಥಿಸಲು ನೆಪಗಳನ್ನು ಹೇಳಿರಬಹುದು. ಸಾಧಿಸಬೇಕೆಂಬವನಿಗೆ ಯಾವ ಸಮಸ್ಯೆಯೂ ಸಮಸ್ಯೆಯಲ್ಲ. ಯಾವ ಅಡೆತಡೆಯೂ ಅಡೆತಡೆಯಲ್ಲ. ಎದುರಿಸಲಾಗದ ಯಾವ ಸಮಸ್ಯೆಯೂ ಈ ಪ್ರಪಂಚದಲ್ಲಿಲ್ಲ. ಕೈಕಾಲುಗಳಿಲ್ಲದೇ ಮಾಂಸದ ಮುದ್ದೆಯಂತೆ ಹುಟ್ಟಿದ ರಷ್ಯಾದ ನಿಕ್ ವೊಯಾಚಿಚ್ ಎಂಬ ಹುಡುಗನಿಗೆ ಬೇಕಾದಷ್ಟು ನೆಪಗಳಲ್ಲ, ಸಕಾರಣಗಳೇ ಇದ್ದವು. ಆದರೆ ಅವನಿಗೆ ಅಂತಹ ಸಬೂಬುಗಳಿಂದ ಬದುಕನ್ನು ನಾಶಗೊಳಿಸುವ ಮನಸ್ಸಿರಲಿಲ್ಲ. ಕೈಕಾಲುಗಳಿಲ್ಲದಿದ್ದರೂ ಈಜಲು, ಪಿಯಾನೋ ನುಡಿಸಲು, ಫುಟ್ಬಾಲ್ ಆಡಲು... ಹೀಗೆ ಎಲ್ಲವನ್ನೂ ಮಾಡಲು ಅವನು ಕಲಿತ. ಈಗ ಆತ ಜಗತ್ತಿನಾದ್ಯಂತ ಲಕ್ಷಾಂತರ ನೊಂದ ಮನಸುಗಳಿಗೆ ಪ್ರೇರಣೆ ನೀಡುವ ಸ್ಪೂರ್ತಿದಾಯಕ ಭಾಷಣಗಾರನಾಗಿದ್ದಾನೆ.
ಕೈಕಾಲುಗಳು, ಕಿವಿ, ಕಣ್ಣು ಹೀಗೆ ಯಾವುದಾದರೂ ಅಂಗದಲ್ಲಿ ಊನತೆಯಿದ್ದರೂ ಶ್ರೇಷ್ಠ ಸಾಧನೆ ಮಾಡಿದ ಸಂಗೀತಗಾರರು, ಕಲಾವಿದರ ಬಗ್ಗೆ ನೀವು ಕೇಳಿರಬಹುದು. ಒಂದು ಕಾಲನ್ನು ಕಳೆದುಕೊಂಡ ನರ್ತಕಿ ಸುಧಾ ಚಂದ್ರನ್ ಮರದ ಕಾಲನ್ನು ಅಳವಡಿಸಿಕೊಂಡು ನೃತ್ಯ ಮುಂದುವರಿಸಿದರು. ಒಂದು ಕಾಲನ್ನು ಕಳೆದುಕೊಂಡರೂ ಒಂಟಿಕಾಲಿನಿಂದ ಜಗತ್ತಿನ ಅತ್ಯುನ್ನತ ಶಿಖರವನ್ನೇರಿ ಅರುಣಿಮಾ ಸಿನ್ಹಾ ಸಾಧನೆ ಮಾಡಿದರು. ಚಲನೆಯ ಶಕ್ತಿ ಕಳೆದುಕೊಂಡು ಗಾಲಿಕುರ್ಚಿಯಲ್ಲೇ ಬಹುಕಾಲ ಬದುಕಿದ ವಿಜ್ಞಾನಿ ಸ್ಟೀಫನ್ ಹಾಕಿಂಗ್ಸ್ ಮಾತು ನಿಂತು ಹೋದರೂ ವಿಶೇಷ ಉಪಕರಣದ ಸಹಾಯದಿಂದ ಮೆದುಳಿನ ಸಂಕೇತಗಳನ್ನು ರವಾನಿಸಿ ವೈಜ್ಞಾನಿಕ ಅನ್ವೇಷಣೆಗಳನ್ನು ಮುಂದವರಿಸಿ ಇತರರಿಗೆ ತಿಳಿಸುತ್ತಿದ್ದರು.
ನೆಪಗಳನ್ನು ಒಡ್ಡುತ್ತಾ ಹೋದರೆ ನಮಗೆ ಸಾವಿರ ನೆಪಗಳು ಸಿಗುತ್ತಾ ಹೋಗುತ್ತವೆ. ನೆಪಗಳನ್ನು ಹುಡುಕುತ್ತಾ ಹೋದಂತೆ ನಮ್ಮಲ್ಲಿ ಋಣಾತ್ಮಕ ಚಿಂತನೆ ತುಂಬುತ್ತದೆ. ಋಣಾತ್ಮಕ ಚಿಂತನೆ ನಮ್ಮನ್ನು ನಿಷ್ಕ್ರಿಯತೆಗೆ ತಳ್ಳುತ್ತದೆ. ನಮ್ಮನ್ನು ಬದುಕಲ್ಲಿ ಸೋಲಿಸುತ್ತದೆ.
ಮುದ್ದುಮಕ್ಕಳೇ, ಹಲವು ಕಷ್ಟಕರ ಪರಿಸ್ಥಿತಿಗಳು ನಮ್ಮ ಬದುಕಲ್ಲಿರಬಹುದು. ಅವನ್ನು ಎತ್ತಿ ಹಿಡಿದು, ಅದರ ಬಗ್ಗೆಯೇ ಚಿಂತಿಸುತ್ತಾ ನಿಮ್ಮ ಬದುಕನ್ನು ಬರಡಾಗಿಸಬೇಡಿ. ಕಷ್ಟ, ದುಃಖ, ಸಮಸ್ಯೆಗಳ ನಡುವೆಯೂ ಭರವಸೆಯ ಬೆಳಕಿನ ಕಿರಣವನ್ನು ಹುಡುಕಿ. ಧನಾತ್ಮಕವಾಗಿ ಚಿಂತಿಸಿ. ನಿಮ್ಮ ಹಿತೈಷಿಗಳ, ಶಿಕ್ಷಕರ ಸಲಹೆ, ಸಹಾಯ ಪಡೆಯಿರಿ. 'ಈ ಕೆಟ್ಟ ಪರಿಸ್ಥಿತಿಯು ನನ್ನ ಬದುಕನ್ನು ಹಾಳು ಮಾಡಲು ನಾನು ಬಿಡುವುದಿಲ್ಲ' ಎಂಬ ದೃಢ ನಿಶ್ಚಯ ಮಾಡಿ. ಬಂಡೆಯಂತೆ ನಿಂತ ನಿಮ್ಮನ್ನು ಎದುರಿಸುವ ಶಕ್ತಿಯಿಲ್ಲದೇ ಸಮಸ್ಯೆ ಸೋತುಸುಮ್ಮನಾಗುತ್ತದೆ. ನೀವು ಗೆದ್ದು ಬೀಗುತ್ತೀರಿ. ಆದುದರಿಂದ ಪ್ರೀತಿಯ ಮಕ್ಕಳೇ, ನೆಪಗಳನ್ನು ದೂರವಿಡಿ. ಸಮಸ್ಯೆಗಳನ್ನು ಧೈರ್ಯವಾಗಿ ಎದುರಿಸಿ ಬದುಕಲ್ಲಿ ಗೆಲ್ಲಿ.
......................................................ಜೆಸ್ಸಿ ಪಿ.ವಿ
ಸಹಶಿಕ್ಷಕಿ
ಕರ್ನಾಟಕ ಪಬ್ಲಿಕ್ ಸ್ಕೂಲ್ ಕೆಯ್ಯೂರು.
ಪುತ್ತೂರು ತಾಲೂಕು. ದಕ್ಷಿಣ ಕನ್ನಡ ಜಿಲ್ಲೆ
********************************************