-->
ಅಕ್ಕನ ಪತ್ರ - 8 ಕ್ಕೆ ಮಕ್ಕಳ ಉತ್ತರ ( ಸಂಚಿಕೆ - 2 )

ಅಕ್ಕನ ಪತ್ರ - 8 ಕ್ಕೆ ಮಕ್ಕಳ ಉತ್ತರ ( ಸಂಚಿಕೆ - 2 )

ಜಗಲಿಯ ಮಕ್ಕಳಿಗೆ ಅಕ್ಕ ಬರೆದ ಪತ್ರ - 8 ರಲ್ಲಿ 
Thsnks - ಕೃತಜ್ಞತೆಯ ಪದ ಬಳಕೆಯ 
ಕುರಿತಾಗಿ ತಿಳಿಸಲಾಗಿತ್ತು. 
ಬಹಳಷ್ಟು ವಿದ್ಯಾರ್ಥಿಗಳು ಈ ಪತ್ರಕ್ಕೆ 
ತಮ್ಮ ಉತ್ತರ ದ ಪತ್ರವನ್ನು 
ಬರೆದು ಕಳಿಸಿದ್ದಾರೆ...... 


ಪ್ರೀತಿಯ ಅಕ್ಕನಿಗೆ ಮೋಕ್ಷ ಮಾಡುವ ನಮಸ್ಕಾರಗಳು....
                ಪತ್ರ-8ರ ಮೂಲಕ ನಮ್ಮ ಮನಸ್ಸಿನ ಭಾವನೆಗಳನ್ನು ಇನ್ನೊಬ್ಬರಲ್ಲಿ ಮಾತನಾಡುವ ಮೂಲಕ ಹಂಚಿಕೊಳ್ಳಬೇಕು ಎಂಬುದನ್ನು ನನಗೆ ನೆನೆಪಿಸಿದ್ದೀರಿ. ನಮಗೆ ಸಹಕರಿಸಿದವರಿಗೆ ಥ್ಯಾಂಕ್ಸ್ ಹೇಳಲು ನೆನಪಿಸಿದ್ದೀರಿ..
    ನಾನು ತಪ್ಪುಮಾಡಿದಾಗ ಪ್ರತಿಬಾರಿಯು ಬೈದು ಬುದ್ದಿಹೇಳಿ, ನನಗೆ ಜೀವನದಲ್ಲಿ ಯವುದಕ್ಕೂ ಕೊರತೆ ಬಾರದಂತೆ ಪ್ರೀತಿಯಿಂದ ಸಾಕುತ್ತಿರುವ ಮತ್ತು ಸದಾ ನನಗೆ ಮಾರ್ಗದರ್ಶನ ನೀಡುತ್ತಾ ನನ್ನ ಒಳಿತಿಗಾಗಿಯೇ ಶ್ರಮಿಸುವ ನನ್ನ ತಂದೆ-ತಾಯಿಗೆ ಮೊದಲನೆಯದಾಗಿ ಧನ್ಯವಾದಗಳನ್ನು ತಿಳಿಸುತ್ತೇನೆ. ಪ್ರತಿದಿನವೂ ಒಳ್ಳೆಯ ಮೌಲ್ಯಗಳನ್ನು ಕಲಿಸುತ್ತಾ , ನನಗೆ ಸಂಸ್ಕಾರಯುತ ಶಿಕ್ಷಣವನ್ನು ನೀಡುತ್ತಾ , ನನ್ನ ಭವಿಷ್ಯವು ಉಜ್ವಲವಾಗಲಿ ಎಂದು ಹಾರೈಸುವಂತಹ ನನ್ನ ಗುರುವೃಂದದವರಿಗೆಲ್ಲಾ ಧನ್ಯವಾದಗಳು.....
     ಬಾಲ್ಯದಿಂದಲೂ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಿಗೆ ಪ್ರತಿಕ್ಷಣವೂ ಸಹಕರಿಸುತ್ತಾ ಬಂದಿರುವ, ನನ್ನ ಅಕ್ಕ ಚೈತನ್ಯಳಿಗೂ ಧನ್ಯವಾದಗಳು. ಮಕ್ಕಳ ಜಗಲಿಯ ಮೂಲಕ ನನ್ನಂತಹ ಅದೆಷ್ಟೋ ವಿದ್ಯಾರ್ಥಿಗಳ ಪ್ರತಿಭೆಗಳ ಅನಾವರಣಕ್ಕೆ ಕಾರಣರಾಗಿರುವ ತಾರಾನಾಥ್ ಕೈರಂಗಳ ಸರ್ ಇವರಿಗೂ ಧನ್ಯವಾದಗಳು.   
       ಮಕ್ಕಳ ಜಗಲಿಯ ಪ್ರತಿಯೊಂದು ಮಕ್ಕಳಲ್ಲಿಯೂ ಬರವಣಿಗೆಯ ಕೌಶಲ್ಯವನ್ನು ಮೂಡಿಸುವ ಹಾಗೂ ನಮ್ಮ ಮನಸ್ಸಿನ ಭಾವನೆಗಳನ್ನು ಪತ್ರಗಳಲ್ಲಿ ಬರೆಯಲು ಪ್ರೋತ್ಸಾಹ ನೀಡುವ ಅಕ್ಕ ತೇಜಸ್ವಿನಿ ಯವರಿಗೂ ತುಂಬು ಹೃದಯದ ಧನ್ಯವಾದಗಳು... 
......................................................ಮೋಕ್ಷಾ 
10ನೇ ತರಗತಿ 
ಸರಕಾರಿ ಪ್ರೌಢಶಾಲೆ ಮಾಣಿಲ 
ಬಂಟ್ವಾಳ ತಾಲೂಕು , ದ.ಕ ಜಿಲ್ಲೆ
**********************************************




           ಪ್ರೀತಿಯ ತೇಜಸ್ವಿ ಅಕ್ಕನಿಗೆ ನಿಮ್ಮ ತಂಗಿ ಮಾಡುವ ನಮಸ್ಕಾರಗಳು.  ನನ್ನ ಹೆಸರು ಪ್ರಿಯ, ನಾನು 10 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದೇನೆ. 
         ನಾನು ಅಕ್ಕನ ಪತ್ರ - {8} ನ್ನು ಓದಿದೆ. ಹೌದು ನೀವು ಹೇಳುವ ಮಾತು ನಿಜಕ್ಕೂ ಸತ್ಯ. ಏಕೆಂದರೆ ಇತ್ತೀಚಿನ ದಿನಗಳಲ್ಲಿ ನಾವೆಲ್ಲರೂ ಎಲ್ಲರೊಡನೆ ಇರುವ ಸ್ನೇಹ, ಪ್ರೀತಿ, ಕಾಳಜಿ, ಒಡನಾಟ ಗಳೆಲ್ಲವನ್ನು ಮರೆತಿದ್ದೇವೆ. ಅಷ್ಟೇ ಅಲ್ಲದೇ ನಾವು ಇಂದಿನ ದಿನಗಳಲ್ಲಿ ಯಾರೊಂದಿಗೂ ಮಾತನಾಡಲು ಹಿಂಜರಿಯುತ್ತೇವೆ. ಏಕೆಂದರೆ ನಾವು ಮಾತನಾಡುವುದನ್ನೇ ಮರೆತಿದ್ದೇವೆ. ಇವೆಲ್ಲವನ್ನೂ ನಾವು ಮತ್ತೆ ಪಡೆಯಬೇಕಾದರೆ ಮರೆತು ಹೋದ ನಗುವನ್ನು, ಕೇಳಿಸಿಕೊಳ್ಳಲು ಮರೆತ ಸಮಯವನ್ನು, ಅಮ್ಮ - ಅಪ್ಪನೊಂದಿಗೆ ಬೆರೆಯುವ ಪ್ರೀತಿಯನ್ನು, ತಂಗಿ - ತಮ್ಮ - ಅಕ್ಕ - ಅಣ್ಣನೊಂದಿಗೆ ಆಟ ಆಡುವ ಖುಷಿ ಯನ್ನು ಮತ್ತೆ ಬೆಳೆಸಿಕೊಳ್ಳಬೇಕು. ಮತ್ತು ನಾವೆಲ್ಲರೂ ನಮ್ಮ ಜೀವನದಲ್ಲಿ ಒಳ್ಳೆ - ಒಳ್ಳೆಯ ಹವ್ಯಾಸಗಳನ್ನು ಬೆಳೆಸುವುದರಿಂದ ನಮ್ಮ ಮುಂದಿನ ಭವಿಷ್ಯ ಅರ್ಥಪೂರ್ಣವಾಗುತ್ತದೆ. ಹೌದು ನೀವು ಹೇಳಿದ ಹಾಗೇ, ನಾವು ನಮ್ಮನ್ನು ಪ್ರೀತಿಯಿಂದ ನೋಡಿಕೊಳ್ಳುವ ಯಾರೊಬ್ಬರಿಗೂ ಸಹ "Thank you" ಎಂದು ಹೇಳಿದರೆ ನಾವೇನು ಸಣ್ಣವರಾಗುವುದಿಲ್ಲ. ನಾನು, ನನ್ನನ್ನು ಪ್ರೀತಿಯಿಂದ ನೋಡಿಕೊಳ್ಳುವ ನನ್ನ ಪ್ರೀತಿಯ ಅಮ್ಮನಿಗೆ, ಯಾವುದೇ ಸಂದರ್ಭದಲ್ಲೂ ನನ್ನ ಜೊತೆ ಖುಷಿಯಾಗಿರುವ ನನ್ನ ಮುದ್ದಿನ ತಂಗಿಗೆ, ನನಗೆ ಮಕ್ಕಳ ಜಗಲಿಯನ್ನು ಪರಿಚಯಿಸಿದ ಶಾರದ ಟೀಚರ್ ಇವರಿಗೆ , ನಮ್ಮ ಪ್ರತಿಯೊಂದು ಚಿತ್ರ, ಪತ್ರ ಲೇಖನ ಗಳನ್ನು ಮಕ್ಕಳ ಜಗಲಿಯ ರುವಾರಿಯಾದಂತಹ ತಾರಾನಾಥ್ ಕೈರಂಗಳ ಸರ್ ಇವರಿಗೆ, ಮಕ್ಕಳ ಜಗಲಿಯ ಮಕ್ಕಳಿಗೆ ಒಳ್ಳೆಯ ಸಂದೇಶ ನೀಡುವ ಪತ್ರಗಳನ್ನು ಬರೆದು ಕಳಿಸುವ ತೇಜಸ್ವಿ ಅಕ್ಕನಿಗೆ, ನಮಗೆ ಪಾಠ ಭೋದಿಸುವ ಶಿಕ್ಷಕರಿಗೆ, ಇವರೆಲ್ಲರಿಗೂ ಧನ್ಯವಾದಗಳನ್ನು ಹೇಳಲು ಇಷ್ಟ ಪಡುತ್ತೇನೆ.  ಹಾಗೆಯೇ ನೀವು ಪತ್ರದ ಕೊನೆಯಲ್ಲಿ ಮತ್ತಿನ್ಯಾರನ್ನಾದರು ಮರೆತಿದ್ದರೆ ನೆನಪಿಸಿ ಎಂದು ಹೇಳಿದ್ದೀರಿ. ನನ್ನ ಪ್ರಕಾರ ನಾವು, ನಮ್ಮ ದೇಶ ರಕ್ಷಣೆಗಾಗಿ ತಮ್ಮ ಪ್ರಾಣವನ್ನು ಭಾರತ ಮಾತೆಯ ಪಾದಕ್ಕರ್ಪಿಸುವ ವೀರ ಯೋಧರಿಗೆ, ಹಾಗೂ ನಮಗೆ ಅನ್ನ ನೀಡಿ ಸಲಹಿರುವ ರೈತರಿಗೆ ಧನ್ಯವಾದಗಳನ್ನು ಹೇಳಲು ಇಷ್ಟ ಪಡುತ್ತೇನೆ. ಹಾಗೂ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಾಯ ಮಾಡುವ ಎಲ್ಲಾ ಮನಸ್ಸುಗಳಿಗೆ ನನ್ನ ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ.  ಅಕ್ಕ ನಿಮ್ಮ ಈ ಪತ್ರದಿಂದ ನಾನು ಇವರೆಲ್ಲರಿಗೂ ನಿಜವಾಗಿಯೂ ಧನ್ಯವಾದಗಳನ್ನು ಹೇಳಿದಂತೆ ಭಾಸವಾಗುತ್ತಿದೆ. ನಿಮ್ಮ ಇಂದಿನ ಪತ್ರ ಓದಿ ನನಗೆ ತುಂಬಾ ಸಂತೋಷವಾಯಿತು. ಮುಂದಿನ ಪತ್ರಕ್ಕಾಗಿ ಕಾಯುತ್ತಿರುತ್ತೇನೆ ಅಲ್ಲಿಯವರೆಗೆ ನಿಮ್ಮ ತಂಗಿಯ ನಮನಗಳು.
............................................................ಪ್ರಿಯ
10 ನೇ ತರಗತಿ .
ಸರಕಾರಿ ಪ್ರೌಢ ಶಾಲೆ ನಾರಾವಿ. 
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ, 
**********************************************



ನಮಸ್ತೆ ಅಕ್ಕ ನಾನು ಪಲ್ಲವಿ
         ನಿಮ್ಮ ಎಲ್ಲಾ ಪತ್ರಗಳನ್ನು ಒದಿದ್ದೇನೆ ಮತ್ತು ಹಲವಾರು ವಿಷಯಗಳನ್ನು ನಿಮ್ಮಿಂದ ತಿಳಿದುಕೊಂಡಿದ್ದೆನೆ ಆದ್ದರಿಂದ ನಿಮಗೂ ಕೃತಜ್ಞತೆ (thank you akka) ಸಲ್ಲಿಸುತ್ತೇನೆ.
   ಪತ್ರ ಓದಿದ ಮೇಲೆ ಹಲವರಿಗೆ ಧನ್ಯವಾದಗಳನ್ನು ಹೇಳಿದ್ದೇನೆ ಮತ್ತು ಅವರಿಂದ ಮೆಚ್ಚುಗೆಗೆ ಪಾತ್ರಳಾಗಿದ್ದೇನೆ. ನಿಮ್ಮ ಪತ್ರದಿಂದಾಗಿ ಹಲವರಿಗೆ ಧನ್ಯವಾದಗಳನ್ನು ತಿಳಿಸುವ ಸೌಭಾಗ್ಯ ಒದಗಿ ಬಂತು ಆದ್ದರಿಂದ ಅಕ್ಕ ನಿಮಗೆ ಮಗದೊಮ್ಮೆ ನನ್ನ ವಂದನೆಗಳು.
.......................................................... ಪಲ್ಲವಿ
ಹತ್ತನೇ ತರಗತಿ
ಮುಂಡಾಜೆ ಪ್ರೌಢಶಾಲೆ ಮುಂಡಾಜೆ 
ಬೆಳ್ತಂಗಡಿ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
**********************************************



ನಮಸ್ತೆ,
           ನನ್ನ ಪ್ರೀತಿಯ ಅಕ್ಕನಿಗೆ ಸಾತ್ವಿಕ್ ಗಣೇಶ್ ಮಾಡುವ ನಮಸ್ಕಾರಗಳು.  ನಾನು ಕ್ಷೇಮ. ನೀವು ಕ್ಷೇಮವೆಂದು ಭಾವಿಸುತ್ತೇನೆ.
     ನಾನು ಮೊದಲು ದೇವರಿಗೆ ನಮಸ್ಕಾರ ಮಾಡುತ್ತೇನೆ. ನನ್ನ ಚಿತ್ರ ಹಾಗೂ, ಅಕ್ಕನಪತ್ರ ಎಲ್ಲದಕ್ಕೂ, ಪ್ರೋತ್ಸಾಹ ಕೊಟ್ಟು ಮಕ್ಕಳ ಜಗಲಿಯ ಮೂಲಕ ಜನರು ಚಿತ್ರವನ್ನು ನೋಡುವಂತೆ ಮಾಡಿದ ತಾರಾನಾಥ್ ಸರ್ ಅವರಿಗೆ ಮೊದಲಿಗೆ ಥ್ಯಾಂಕ್ ಯು ಹೇಳುತ್ತೇನೆ. ನನ್ನ ಚಿತ್ರವನ್ನು ನೋಡಿ ಹೋದ ದಿನೇಶಣ್ಣನವರು ತಾರಾನಾಥ್ ಸರ್ ನಂಬರ್ ಕೊಟ್ಟರು.  ಅವರಿಗೂ ಕೂಡ ಥ್ಯಾಂಕ್ಸ್. ಮಕ್ಕಳಜಗಲಿ ಯಲ್ಲಿರುವ ಎಲ್ಲ ಸರ್ ಹಾಗೂ ಮೇಡಂನವರಿಗೆ ಥ್ಯಾಂಕ್ ಯು ಹೇಳುತ್ತೇನೆ. ನಮಗೆ ಪ್ರೀತಿಯಿಂದ ಪಾಠ ಹೇಳಿ ಕೊಟ್ಟು, ಕಲೆಗೆ ಪ್ರೋತ್ಸಾಹ ನೀಡುವ 
ನಮ್ಮ ಶಾಲಾ ಟೀಚರಿನವರಿಗೆ ಥ್ಯಾಂಕ್ ಯು.
    ಅಕ್ಕನ ಪತ್ರದಲ್ಲಿ ಒಳ್ಳೆಯ ವಿಷಯ ತಿಳಿಸುವ ತೇಜಸ್ವಿ ಅಕ್ಕನವರಿಗೆ ಥ್ಯಾಂಕ್ ಯು. ನಮಗೆ ಸಹಾಯ ಮಾಡುವ ವೈದ್ಯರಿಗೆ, ಅಪಘಾತವಾದಾಗ ಸಹಾಯ ಮಾಡುವ ಅಂಬುಲೆನ್ಸ್ ಚಾಲಕರಿಗೆ, ಒಳ್ಳೆಯ ಪುಸ್ತಕ ಬರೆದವರಿಗೆ, ವಿಮಾನದಲ್ಲಿ ಜನರನ್ನ ಸುರಕ್ಷಿತವಾಗಿ ತಲುಪಿಸುವ ಪೈಲೆಟ್ ಮಾಮನಿಗೆ, ಟ್ರಾಫಿಕ್ ಪೊಲೀಸ್ ನವರಿಗೆ ಥ್ಯಾಂಕ್ಸ್. ಹಾಗೇ ನಮ್ಮದೇಶವನ್ನು ಕಾಯುವ ಸೈನಿಕರಿಗೆ ನಾವು ಎಷ್ಟು ಥ್ಯಾಂಕ್ಸ್ ಹೇಳಿದರು ಸಾಲದು. ನಮ್ಮ ವಿದ್ಯುತ್ ಸರಿ ಇಲ್ಲ ಹಾಳಾಯ್ತು ಎಂದಾಗ ಓಡಿಬರುವ ಲೈನ್ ಮ್ಯಾನ್ ನವರಿಗೆ ಥ್ಯಾಂಕ್ಸ್ , ಕಾರ್ಮಿಕರಿಗೆ, ತೋಟದ ಕೆಲಸಕ್ಕೆ ಸಹಾಯ ಮಾಡುವವರಿಗೆ ಎಲ್ಲರಿಗೂ ಥ್ಯಾಂಕ್ಸ್.
ವಂದನೆಗಳು,
............................................ ಸಾತ್ವಿಕ್ ಗಣೇಶ್
7ನೇ ತರಗತಿ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಜಿರೆ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
**********************************************



ಪ್ರೀತಿಯ ಅಕ್ಕ,  ಮೋಕ್ಷಾಳು ಮಾಡುವ ವಂದನೆಗಳು...
ನೀವು ಪತ್ರದಲ್ಲಿ ಉಲ್ಲೇಖಿಸಿದಂತೆ ನಾನೂ ಧನ್ಯವಾದಗಳನ್ನು ಹೇಳುವ ಅಭ್ಯಾಸ ರೂಢಿಸಿಕೊಂಡಿದ್ದೇನೆ.
          ಅಕ್ಕ, ನಾನೊಂದು ವಿಚಾರ ಸೇರಿಸಲಾ?
ನಾವು ಮೆಟ್ಟುವ ನೆಲ, ಉಸಿರಾಡುವ ಗಾಳಿ, ಬೆಳಕು ಕೊಡುವ ಸೂರ್ಯ, ಸುತ್ತ ಮುತ್ತಲ ಪರಿಸರದ ಪ್ರಾಣಿ ಪಕ್ಷಿಗಳು ನಮ್ಮ ಜೀವನಕ್ಕೆ ಆಧಾರವಾಗಿವೆ. ಅವುಗಳನ್ನೂ ದಿನಕ್ಕೊಮ್ಮೆಯಾದರೂ ನೆನೆಯುವುದೂ ಒಂದು ಧನ್ಯವಾದವಾಗಬಹುದಲ್ವಾ?. ಸಂಜೆ ದೇವರ ಮುಂದೆ ಕೈ ಮುಗಿದು ನಿಲ್ಲುವಾಗ ಮೌನವಾಗಿ ಇವುಗಳೆಲ್ಲವನ್ನೂ ನೆನೆದು ವಂದಿಸಿದ್ರೆ ಅವುಗಳೊಡನೆ ನಮ್ಮ ಬಾಂಧವ್ಯ ಹೆಚ್ಚಬಹುದು. ಪರಿಸರ ನಮಗೆ ಕೊಡುವ ಅದೆಷ್ಟೋ ಕೊಡುಗೆಗಳಿಗೆ ಒಂದು ಚಿಕ್ಕ ಮರುಕಾಣಿಕೆಯಾಗಿ ಅದನ್ನು ಸ್ವಚ್ಛವಾಗಿಡುವ ಪ್ರಯತ್ನ ಪಡಬಹುದು. ಇಂತೀ ಪ್ರೀತಿಯಿಂದ.
......................................................ಮೋಕ್ಷ .ಡಿ. 
ಹತ್ತನೆ ತರಗತಿ
ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್ ಬೆಳ್ಳಾರೆ 
ಸುಳ್ಯ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
**********************************************




         ನಮಸ್ತೆ ,    ಪ್ರೀತಿಯ ಅಕ್ಕನಿಗೆ ನಮನಗಳು 
ಅಕ್ಕನ ಪತ್ರವನ್ನು ಓದಿ ನನಗೆ ಸಂತೋಷವಾಯಿತು. ಅಕ್ಕ ತಮ್ಮ ಪತ್ರದಲ್ಲಿ ಬಾಲ್ಯದಲ್ಲಿ ನಾವು ಏನನ್ನು ಕಳೆದುಕೊಂಡಿದ್ದೇವೋ ಅದನ್ನು ನಾವು ಪಡೆಯಬೇಕೆಂದು ಸವಿವರವಾಗಿ ತಿಳಿಸಿಕೊಟ್ಟಿದ್ದಾರೆ ಹಾಗೂ ನಾವು ಜೀವನದಲ್ಲಿ ಯಾರಿಗೆಲ್ಲಾ ಹಾಗೂ ಯಾತಕ್ಕಾಗಿ 'Thanks' ಹೇಳಬೇಕೆಂದು ಹೇಳಿದ್ದಾರೆ. ನಾನು ಬಾಲ್ಯವನ್ನು ತುಂಬಾ ಸಂತೋಷದಿಂದ ಕಳೆಯುತ್ತಿದ್ದೇನೆ. ಮೊದಲನೆಯದಾಗಿ ಚಿಕ್ಕಂದಿನಿಂದಲೂ ನನ್ನ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಿ ಸಹಕರಿಸುತ್ತಿರುವ ನನ್ನ ಪೋಷಕರಿಗೆ ಹಾಗೂ ಮಾವನವರಿಗೆ ಧನ್ಯವಾದಗಳನ್ನು ಹೇಳಿ ವಂದಿಸುತ್ತೇನೆ ಹಾಗೂ ನನ್ನನ್ನು ಮಕ್ಕಳ ಜಗಲಿಗೆ ಪರಿಚಯಿಸಿದ ನನ್ನ ನೆಚ್ಚಿನ ಶಿಕ್ಷಕಿ ಪ್ರಾಥಮಿಕ ಶಾಲಾ ಮುಖ್ಯ ಉಪಾಧ್ಯಾಯಿನಿ ಗೀತಾ ಟೀಚರ್ ಇವರಿಗೆ Thanks ಹೇಳಲು ಬಯಸುತ್ತೇನೆ ಹಾಗೂ ಇದೀಗ ನಾನು ಓದುತ್ತಿರುವ ಶ್ರೀ ರಾಮಕುಂಜೇಶ್ವರ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಸತೀಶ್ ಭಟ್ ಸರ್ ಮತ್ತು ಎಲ್ಲಾ ಶಿಕ್ಷಕ ವೃಂದದವರಿಗೂ ಈ ಸಂದರ್ಭದಲ್ಲಿ ಧನ್ಯವಾದಗಳನ್ನು ಹೇಳಲು ಇಚ್ಛಿಸುತ್ತಿದ್ದೇನೆ ಮತ್ತು ತಾರಾನಾಥ್ ಕೈರಂಗಳ್ ಸರ್ ಇವರಿಗೂ ಧನ್ಯವಾದಗಳು. ತೇಜಸ್ವಿ ಅಂಬೆಕಲ್ಲು ರವರ ಮುಂದಿನ ಪತ್ರಕ್ಕಾಗಿ ನಾನು ಕಾಯುತ್ತಿರುತ್ತೇನೆ.   
ಧನ್ಯವಾದಗಳು
........................................ಧೀರಜ್. ಕೆ.ಆರ್  
9ನೇ ತರಗತಿ           
ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢ ಶಾಲೆ ರಾಮಕುಂಜ , ಕಡಬ ತಾಲ್ಲೂಕು 
ದಕ್ಷಿಣ ಕನ್ನಡ ಜಿಲ್ಲೆ
**********************************************



ಪ್ರೀತಿಯ ಅಕ್ಕನಿಗೆ........... ಸ್ರಾನ್ವಿ ಮಾಡುವ ನಮಸ್ಕಾರಗಳು , ಪತ್ರದ ಮೂಲಕ ನಮಗೆ ಒಳ್ಳೆಯ ವಿಷಯಗಳನ್ನು ತಿಳಿಸಿಕೊಟ್ಟದಕ್ಕೆ ಮೊದಲನೆಯದಾಗಿ ಅಕ್ಕ ನಿಮಗೆ ಧನ್ಯವಾದಗಳು, 
        ಅಕ್ಕ ನಿಮ್ಮ ಪತ್ರ ಓದಿದೆ, ನಿಜ ಅಕ್ಕ ದಿನಾ ನಮ್ಮ ಬದುಕಿನಲ್ಲಿ ಒಬ್ಬೊಬ್ಬರು ಬೇರೆ ಬೇರೆ ತರ ಸಹಾಯ ಮಾಡುತ್ತಾರೆ, ಅದರಲ್ಲೂ ಮುಖ್ಯವಾಗಿ ಅಪ್ಪ ಅಮ್ಮ, ನಮಗೋಸ್ಕರ ದಿನಾ ನಮ್ಮ ಕೆಲಸವನ್ನು ಅವರೇ ಮಾಡುತ್ತಾರೆ, ಅವರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ. ಮುಖ್ಯವಾಗಿ ಮಕ್ಕಳ ಜಗಲಿಯ ಮೂಲಕ ನಮ್ಮನ್ನು ಪರಿಚಯಿಸಿ ನಮಗೆ ಪ್ರೋತ್ಸಾಹ ನೀಡುತ್ತಿರುವ ತಾರನಾಥ ಸರ್ ಅವರಿಗೂ ತುಂಬು ಹೃದಯದ ಧನ್ಯವಾದಗಳು.
.................................................... ಸ್ರಾನ್ವಿ ಶೆಟ್ಟಿ 
8 ನೇ ತರಗತಿ 
ಓಂ ಜನಹಿತಾಯ ಇಂಗ್ಲಿಷ್ ಮೀಡಿಯಂ 
ಸ್ಕೂಲ್ ಗುಡ್ಡೆಯಂಗಡಿ 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
**********************************************

Ads on article

Advertise in articles 1

advertising articles 2

Advertise under the article