-->
ಪದಗಳ ಆಟ ಭಾವ ಚಿತ್ರ ಪಾತ್ರ (ಸಂಚಿಕೆ - 13)

ಪದಗಳ ಆಟ ಭಾವ ಚಿತ್ರ ಪಾತ್ರ (ಸಂಚಿಕೆ - 13)


               ಬೆಳಕು ಸತ್ತಾಗ ಕತ್ತಲೆ ಹುಟ್ಟಿತು
               ಕತ್ತಲೆಯೇ ಬೆಳಕಾಗಿ ಬೆಳಗಿತು.
         ಹುಟ್ಟಿದ ಪ್ರತಿಯೊಬ್ಬ ಮಾನವ ಬಯಸುವುದು, ಹಪಹಪಿಸುವುದು, ತಹತಹಿಸುವುದು ಇದಕ್ಕಾಗಿ. ಹೀಗೊಂದು ಹಕ್ಕು ನಮಗಿಲ್ಲವೇ ಎಂದಾದರೆ ಬೇರೆ ಯಾವ ಸಂಪತ್ತನ್ನು ಅನುಭವಿಸಲಾಗುವುದಿಲ್ಲ. ಅದುವೇ ಎಲ್ಲ ಜನರ, ದೇಶಿಗರ, ವರ್ಣದವರ, ಜಾತಿಯವರ, ಮತದವರ, ಪಂಥದವರ, ಜನಾಂಗದವರ ಮನೋವಾಂಛೆ. ಆ ವಾಂಛೆಯೇ ಸ್ವಾತಂತ್ರ್ಯ. 
          ಒಬ್ಬ ಬಾಲಕನ ಸ್ವಾತಂತ್ರ್ಯದ ವೈಯಕ್ತಿಕ ಹಸಿವು, ತೃಷೆ ಇಡೀ ಸಮುದಾಯದ ಸ್ವಾತಂತ್ರ್ಯದ ಹಸಿವಾಗುವುದು, ಪಲ್ಲಟಗೊಳ್ಳುವುದು, ರೂಪಾಂತರವಾಗುವುದು ಎಂದರೆ ಅದು ಅಚ್ಚರಿ. ಇಂತಹ ವೈಯಕ್ತಿಕತೆ ಸಮುದಾಯದ ಸಾಕ್ಷಿಪ್ರಜ್ಞೆಯಾದಾಗ ಐತಿಹಾಸಿಕ ಸಂಘರ್ಷಗಳು ಘಟಿಸುವುದು. ಅಂತಹ ದೀರ್ಘಕಾಲಿಕ ಸಂಘರ್ಷಗಳಿಂದಲೇ ನವಮನ್ವಂತರ ನಿರ್ಮಾಣವಾಗುವುದು. ಜನಕೋಟಿಯ ಮನದಲ್ಲಿ ಬೇರೂರಿದ ಕ್ರೂರ, ಅಮಾನವೀಯ ಆಚರಣೆಗಳು ಬುಡ ಮೇಲಾಗುವುದು. ಕರಿಯ ಮೋಡಗಳು ಕಳೆದು ಸಮಾನತೆಯ ಸೂರ್ಯ ಹೊಸ ಬೆಳಗನ್ನು ಬೀರುವುದು. ಒಂದು ಮೂಲೆಯಲ್ಲಿ ಬೆಳಗಿದ ಜ್ಯೋತಿ ಪ್ರಖರವಾಗುತ್ತ ಇಡೀ ದಿಗಂತವನ್ನು ವ್ಯಾಪಿಸುವುದು.
         ಆ ಹುಡುಗ ತನ್ನ ವಂಶದ ಪೂರ್ವಜರ ಶೌರ್ಯದ ಕಥೆಯನ್ನು ಹಿರಿಯರ ಬಾಯಿಂದ ಕೇಳಿ, ಕೇಳಿ ತನ್ನ ನಾಡಿನ ಸ್ವಾತಂತ್ರ್ಯಕ್ಕಾಗಿ ಕನಸು ಕಾಣಲಾರಂಭಿಸಿದ. ಅವನು ಬೆಳೆದಂತೆ ಕನಸು ಬೆಳೆಯಿತು, ದೃಢವಾಯಿತು. ಕಾಲೇಜು ದಿನಗಳಲ್ಲಿ ಅನ್ಯಾಯದ ವಿರುದ್ಧ ಪ್ರತಿಭಟಿಸಿದ್ದಕ್ಕಾಗಿ, ಧ್ವನಿಯೆತ್ತಿದ್ದಕ್ಕಾಗಿ ಕಾಲೇಜಿನಿಂದ ಬಹಿಷ್ಕೃತನಾದ. ಆತನ ಮೊದಲ ಹೆಸರು ರೋಹಿಲಾಲ. Trouble maker ಎಂಬರ್ಥ. ಗುಡಿಸಲಿನಲ್ಲಿ ವಾಸ. ಮರದ ಕೆಳಗೆ ಅಡುಗೆ. ಜೋಳ, ಬೀನ್ಸ್ ತಿಂದು ಬದುಕು. ತಂದೆ ದಿವಂಗತರಾದಾಗ ಅವನನ್ನು ಶ್ರೀಮಂತರಿಗೆ ದತ್ತು ಕೊಡುತ್ತಾರೆ. ಜೋನ್ ಗಿಂತಾ ಬಾ ದೆಲಿಮ್ ದ್ಯೋ ದೊಗೆ. ಆತನ 16ನೇ ವಯಸ್ಸಿಗೆ ಪುರುಷ ಆಗುವ ತಯಾರಿಗೆ ಸಾಂಪ್ರದಾಯಿಕ ಆಚರಣೆ. ಅದನ್ನು ಮಾಡದಿದ್ದರೆ ತಂದೆಯ ಆಸ್ತಿಯಲ್ಲಿ ಹಕ್ಕಿಲ್ಲ. ಆ ಸಂದರ್ಭದಲ್ಲಿ ಒಬ್ಬ ಹಿರಿಯರು ಮಾಡಿದ ಭಾಷಣ ಈತನ ಮೇಲೆ ಬಹಳ ಗಾಢವಾದ ಪರಿಣಾಮ ಬೀರಿತು. ನಮ್ಮ ದೇಶದಲ್ಲಿ ನಾವು ಗುಲಾಮರಾಗಿದ್ದೇವಲ್ಲ. ಈ ಮಕ್ಕಳು ಯುವಕರಾಗಿ ಇದರ ವಿರುದ್ಧ ಹೋರಾಡಬೇಕು ಎನ್ನುವ ಒಂದು ಕಿಡಿಯನ್ನು ಆ ವ್ಯಕ್ತಿ ಹಚ್ಚಿದರು. 
       ಮುಂದೆ ಆತ ಇಂಗ್ಲಿಷ್, ಕೋಜಾ, ಚರಿತ್ರೆ, ಭೂಗೋಳ ಆಫ್ರಿಕನ್ ಚರಿತ್ರೆಯನ್ನು ತೀವ್ರ ಆಸಕ್ತಿಯಿಂದ ಅಭ್ಯಾಸ ಮಾಡಿದರು. ನಮ್ಮನ್ನು ವಿಭಜಿಸುವುದು ವೈವಿಧ್ಯತೆಯಲ್ಲ, ಸಂಸ್ಕೃತಿಯಲ್ಲ. ಪ್ರಜಾಪ್ರಭುತ್ವವನ್ನು ಸಂಭ್ರಮಿಸುವ ಅಥವಾ ಸಂಭ್ರಮಿಸುತ್ತಿರುವ ವ್ಯತ್ಯಾಸ ಮಾತ್ರ ಎಂದವರು ವಿಶ್ವ ಪ್ರಸಿದ್ಧರಾದರು. ಬಿ.ಎ ಬಳಿಕ ಕಾನೂನು ಅಭ್ಯಾಸ ಮಾಡಿದರು. 1942 ರಲ್ಲಿ ರಾಜಕೀಯ ಪ್ರವೇಶಿಸಿ ಚಳವಳಿಯ ನೇತಾರರಾದರು. ಆರು ಅಸಮರ್ಪಕ ಕಾನೂನುಗಳ ವಿರುದ್ಧ ನಾಗರಿಕ ವಿಧೇಯಕ ಚಳವಳಿ ನಡೆಸಿದರು. ಇದಕ್ಕಾಗಿ ಒಂಬತ್ತು ತಿಂಗಳ ಕಠಿಣ ಶಿಕ್ಷೆ. ಆಲ್ ಇನ್ ಆಫ್ರಿಕಾ ಸಮಾವೇಶದಲ್ಲಿ ಜನಾಂಗ ಭೇದವಿಲ್ಲದ ಸಂವಿಧಾನಕ್ಕಾಗಿ ಆಗ್ರಹಿಸಿದರು. ದಕ್ಷಿಣ ಆಫ್ರಿಕಾ ರಿಪಬ್ಲಿಕ್ ಆಗಬೇಕು ಎಂದು ಬಯಸಿದರು. ಅನೇಕ ಸಂಸ್ಥೆಗಳಿಂದ ಇವರನ್ನು ಬಹಿಷ್ಕರಿಸಲಾಯಿತು. ಇವರ ಸಂಚಾರವನ್ನು, ಸದಸ್ಯತ್ವವನ್ನು ನಿಷೇಧಿಸಲಾಯಿತು. ಕೊನೆಗೆ ಇವರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಲಾಯಿತು. ಭೂಗತರಾಗಿ ರಾಷ್ಟ್ರೀಯ ಮುಷ್ಕರದ ಯೋಜನೆ ಮಾಡಿದರು. 1961 ರಲ್ಲಿ ಸೈನ್ಯಯುತ ಸಂಘರ್ಷದ ನೇತೃತ್ವವನ್ನು ಅವರಿಗೆ ವಹಿಸಲಾಯಿತು. ಆ ಸಂದರ್ಭ ಇಂಗ್ಲೆಂಡಿನಲ್ಲಿ ಮಿಲಿಟರಿ ತರಬೇತಿ ಪಡೆದು ಹಿಂದಿರುಗಿದರು. ಅನುಮತಿಯಿಲ್ಲದೆ ರಾಜ್ಯವನ್ನು ಬಿಟ್ಟದ್ದಕ್ಕೆ ಹಾಗೂ ಕಾರ್ಮಿಕರನ್ನು ಮುಷ್ಕರಕ್ಕೆ ಪ್ರೇರೇಪಿಸಿದ ಕಾರಣದ ಮೇಲೆ ಜೈಲು ಶಿಕ್ಷೆ ದೊರೆಯಿತು. ಆಗ ನಿರ್ಬಂಧಯುಕ್ತ ಜೈಲು ವಿಮೋಚನೆಯನ್ನು ಮೂರು ಬಾರಿ ನಿರಾಕರಿಸಿದರು. ಅವರ ತಾಯಿ ಹಾಗೂ ಮಗ ತೀರಿ ಹೋದಾಗಲೂ ಅವರ ಕೊನೆಯ ಕರ್ಮಗಳನ್ನು ನಡೆಸಲು ಅನುಮತಿ ಸಿಗಲಿಲ್ಲ. ಜೈಲಿನಿಂದ ಬಿಡುಗಡೆಯಾದ ಮೇಲೆ ಗೆರಿಲ್ಲಾ ಯುದ್ಧದ ತರಬೇತಿಗಾಗಿ ಆಲ್ಜೀರಿಯಾಕ್ಕೆ 1962ರಲ್ಲಿ ಹೋಗಿ ಬಂದರು. ಟ್ರೀಸಂ ಚಾರ್ಜ್ ಮೇಲೆ ನೂರು ಮಂದಿ ಜೊತೆ ಮತ್ತೆ ಜೈಲು ಸೇರಿದರು. ಜೈಲಿನಲ್ಲಿಯೂ ವರ್ಣಭೇದ ನೀತಿಯ ಹಿಂಸೆಯನ್ನು ಅನುಭವಿಸಿದರು. ಅಲ್ಲಿಂದಲೇ ಅನೇಕ ಪತ್ರಗಳನ್ನು ಬರೆದರು. I am prepared to die ಎನ್ನುವ ಭಾಷಣಗಳ ಸಂಗ್ರಹವನ್ನು ತಂದರು. ಅವರು ಜೈಲಿನಲ್ಲಿದ್ದಾಗಲೇ ಅವರ ಜನಾಂಗದ ಕೋಟಿ ಕೋಟಿ ಜನರು ಪ್ರೋತ್ಸಾಹ ನೀಡುತ್ತಾ ಬಂದರು. ಜೈಲಿನಿಂದ ಮರಳಿದ ಮೇಲೆ ಸಂಘಟನೆಯನ್ನು ಬಲಪಡಿಸಿ ಸಂವಿಧಾನಾತ್ಮಕವಾಗಿ ಅಹಿಂಸಾ ವಿಧಾನದಿಂದ ಬಹಳ ವರ್ಷ ಹೋರಾಡಿದರು. ಚುನಾವಣೆಯಲ್ಲಿ ಗೆದ್ದು ಅಧ್ಯಕ್ಷರಾದರು. ವಿದ್ಯಾಭ್ಯಾಸ , ಆರೋಗ್ಯ , ಉದ್ಯೋಗಕ್ಕಾಗಿ ಶಾಸನಗಳನ್ನು ರೂಪಿಸಿದರು. ಹೇಳಿದ ಮಾತಿನಂತೆ ಒಂದೇ ವರ್ಷದಲ್ಲಿ ಪದತ್ಯಾಗ ಮಾಡಿದರು. ಅಧಿಕಾರದ ವ್ಯಾಮೋಹವಿಲ್ಲದೆ ಸಾಮಾಜಿಕ ನ್ಯಾಯ, ಶಾಂತಿಗಾಗಿ ನಂತರವೂ ಶ್ರಮಿಸಿದರು. ಜಗತ್ತಿನಾದ್ಯಂತ ಸಮಸ್ಯೆ ನಿವಾರಣೆ ಮತ್ತು ಸಂಘರ್ಷ ತೀರ್ಮಾನಗಳಿಗಾಗಿ ಪ್ರಶಸ್ತಿ ಅಂತರಾಷ್ಟ್ರೀಯ ಸಂಸ್ಥೆಯನ್ನು ಸ್ಥಾಪಿಸಿದರು. 1999ರಲ್ಲಿ ಶಾಂತಿಗಾಗಿ ಅವರು ನಡೆಸಿದ ದೀರ್ಘ ಹೋರಾಟಕ್ಕಾಗಿ ಉನ್ನತವಾದ ನೊಬೆಲ್ ಪ್ರಶಸ್ತಿ ಪಡೆದರು. 
        ಕುರುಬನೊಬ್ಬ ಪ್ರೆಸಿಡೆಂಟ್ ಹುದ್ದೆಗೆ ಏರಿದ ಪಯಣದ ಯಶೋಗಾಥೆಯನ್ನು ವಿಶ್ವದ ಅನೇಕ ರಾಷ್ಟ್ರಗಳು ಶ್ಲಾಘಿಸಿದವು. ಅವರ ಆತ್ಮಕಥೆ 'ಲಾಂಗ್ ವಾಕ್ ಟು ಫ್ರೀಡಮ್ ' ಅವರ ಬಾಲ್ಯ ಹಾಗೂ ಜೈಲಿನ ಜೀವನದ ಜ್ವಲಂತ ಚಿತ್ರಣವನ್ನು ನೀಡುತ್ತದೆ. ಗಾಂಧಿಯಿಂದ ಪ್ರೇರಿತರಾಗಿ ದಕ್ಷಿಣ ಆಫ್ರಿಕಾ ಮಾತ್ರವಲ್ಲ ಇಡೀ ಜಗತ್ತಿಗೆ ತನ್ನ ಜೀವನದ ಸಂದೇಶವನ್ನು ಸಾರಿದ, ಶಾಂತಿಗಾಗಿ ಹೋರಾಡಿದ ಈ ವಿಶ್ವನಾಯಕರಿಗೆ ಭಾರತವು ಅತ್ಯಂತ ಶ್ರೇಷ್ಠ ಭಾರತ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸುವುದರೊಂದಿಗೆ ತಾನು ಗೌರವವನ್ನು ಪಡೆದುಕೊಂಡಿದೆ. 
           ಕಗ್ಗತ್ತಲ ಖಂಡದಲ್ಲಿ ಅರಳಿದ ಕರಿಯ ಸುಮದ ಸೌರಭ, ಸುಗಂಧ, ಕಾಂತಿ ವಿಶ್ವವನ್ನೇ ವ್ಯಾಪಿಸಲಿಲ್ಲವೇ? ಹೂ ಕಾಡಿದ್ದಾದರೇನು? ಪರಿಮಳಕ್ಕೆ ಕುಂದುಂಟೆ? ಬಣ್ಣ ಯಾವುದಾದರೇನು ಸೌರಭಕ್ಕೆ ಎಣೆಯುಂಟೇ? 
ಇಂಥವರು ನಿಮ್ಮೊಳಗಿಲ್ಲವೇ ...............?
...................................................ಸುಮಾಡ್ಕರ್
ಸ್ವರೂಪ ಅಧ್ಯಯನ ಸಂಸ್ಥೆ 
ಮಂಗಳೂರು
Mob: +91 99016 38372
**********************************************Ads on article

Advertise in articles 1

advertising articles 2

Advertise under the article