-->
ಜೀವನ ಸಂಭ್ರಮ - 7

ಜೀವನ ಸಂಭ್ರಮ - 7

              
 
                 ತಂದೆ ತಾಯಿಗಳಿಂದ 
              ಮಕ್ಕಳಿಗೆ ಬರುವ ಮೌಲ್ಯ 
         **************************
    ರಾಮ ಅವಿದ್ಯಾವಂತ , ಸುಮಾರು ವರ್ಷಗಳ ಕಾಲ ಗುತ್ತಿಗೆ ನೌಕರರಾಗಿ ದುಡಿದು ಖಾಯಂ ನೌಕರರಾದರು. ಅವರ ಪತ್ನಿ ಮಲ್ಲಮ್ಮ, ಏಳನೇ ತರಗತಿ ಓದಿದ ವಿದ್ಯಾವಂತೆ. ಇವರಿಗೆ ಮೂರು ಮಕ್ಕಳು. ಮೊದಲನೆಯವಳು ಹೆಣ್ಣುಮಗಳು ಲಲಿತ, ಎರಡನೇ ಮಗ ಹರೀಶ ಮತ್ತು ಕಿರಿಯ ಮಗ ರಮೇಶ. ಮೊದಲ ಎರಡು ಮಕ್ಕಳು ಪಿಯುಸಿ ವರೆಗೆ ವಿದ್ಯಾಭ್ಯಾಸ ಮಾಡಿದ್ದರು. ಕೊನೆಯವನು ಪದವಿಯವರೆಗೆ ವಿದ್ಯಾಭ್ಯಾಸ ಮಾಡಿದ್ದನು. ಮಗಳಿಗೆ ಮದುವೆ ಮಾಡಿಕೊಡಲಾಗಿತ್ತು. 
        ರಾಮು ಜನಾನುರಾಗಿ , ಬಂಧು ಬಾಂಧವರು ಎಂದರೆ ಬಲು ಇಷ್ಟ. ರಾಮು ಎಂದರೆ ಕಛೇರಿಯಲ್ಲೂ ಎಲ್ಲರಿಗೂ ಇಷ್ಟ. ಆದರೆ ಮಲ್ಲಮ್ಮನಿಗೆ ತವರು ಮನೆಯೆಂದರೆ ವಿಶೇಷ ಪ್ರೀತಿ ಮತ್ತು ಅಕ್ಕರೆ. ಗಂಡನ ಮನೆಯವರು ಎಂದರೆ ಅಷ್ಟಕಷ್ಟೇ. ಮಲ್ಲಮ್ಮನಿಗೆ ಗಂಡ ಎಲ್ಲಿ ಹೋಗುತ್ತಾನೆ...? ಏನು ಮಾಡುತ್ತಾನೋ...? ಎಲ್ಲಿ ಹಣ ಕಳೆದುಕೊಳ್ಳುತ್ತಾನೆ ಎಂಬ ಅನುಮಾನ. ಮಕ್ಕಳು ಚಿಕ್ಕವರಿದ್ದಾಗ ಈ ಅನುಮಾನ ಪರಿಹಾರಕ್ಕಾಗಿ ಎಲ್ಲಿಗೆ ಹೋಗುತ್ತಾರೊ, ಅಲ್ಲಿಗೆ ಮಕ್ಕಳನ್ನು ಕಳುಹಿಸುವುದು. ಏನು ಮಾಡುತ್ತಾರೆ... ಎಂದು ನೋಡಿಕೊಂಡು ಬಂದು ಹೇಳುವಂತೆ ಹೇಳುತ್ತಿದ್ದರು. ಮಕ್ಕಳು ತಾಯಿ ಹೇಳಿದಂತೆ ಕೇಳುತ್ತಾ , ಹೇಳಿದಂತೆ ಮಾಡುತ್ತಾ , ಅನುಮಾನದ ಗುಣಗಳನ್ನು , ತಪ್ಪು ಗುರುತಿಸುವುದನ್ನು ತಮಗೆ ಅರಿವಿಲ್ಲದಂತೆ ಬೆಳೆಸಿಕೊಂಡರು. ಹೀಗೆ ಜೀವನ ನಡೆಯುತ್ತಿರಬೇಕಾದರೆ ರಾಮು ಅನಾರೋಗ್ಯಕ್ಕೆ ತುತ್ತಾಗಿ ಮರಣಹೊಂದಿದನು. ತಂದೆಯ ಮರಣದ ನಂತರ ಹಿರಿಯ ಮಗನಿಗೆ ತಂದೆಯ ಇಲಾಖೆಯಲ್ಲಿ ಅನುಕಂಪದ ಮೇಲೆ ಹುದ್ದೆ ದೊರಕಿತು. ಆತನಿಗೆ ಮದುವೆಯಾಗಿ ಒಂದು ಹೆಣ್ಣು ಮಗು ಕೂಡಾ ಹುಟ್ಟಿತು. ರಾಮುವಿನ ಎರಡನೇ ಮಗ ಪರವೂರಿನಲ್ಲಿ ಸ್ವಂತ ಉದ್ಯೋಗ ಕೈಗೊಂಡನು. ಹಿರಿಯ ಮಗನೇ ಮುಂದೆ ನಿಂತು ತಮ್ಮನ ವಿವಾಹ ಮಾಡಿಸಿದ್ದನು. ತಮ್ಮನಿಗೂ ಒಂದು ಗಂಡು ಮಗುವಿನ ಜನನವಾಯಿತು. 
       ರಾಮು ತೀರಿಕೊಂಡಾಗ ಬಂದ ಹಣದಲ್ಲಿ ಒಂದು ಖಾಲಿ ಜಾಗ ಖರೀದಿಸಿದ್ದರು. ಉಳಿದ ಹಣವನ್ನು ತಾಮುಂದು ನಾಮುಂದು ಎನ್ನುವಂತೆ ಖರ್ಚು ಮಾಡಿದರು. ಈಗ ತಾಯಿ ಬಳಿ ಪಿಂಚಣಿ ಬಿಟ್ಟರೆ ಹಣವಿಲ್ಲ. ಆದರೆ ಮಲ್ಲಮ್ಮನಿಗೆ ಮಕ್ಕಳೆಂದರೆ ಅವರೇ ವಿಶ್ವ. ಆದರೆ ಪ್ರತಿಯೊಂದರಲ್ಲೂ ತಪ್ಪು ಹುಡುಕುವ ಗುಣ. ಇದರಿಂದಾಗಿ ಕುಟುಂಬದಲ್ಲಿ ಸಂತೋಷವಾಗಿರಲು ಸಾಧ್ಯವಾಗುತ್ತಿರಲಿಲ್ಲ. ಅಣ್ಣತಮ್ಮಂದಿರು ಗೆಳೆಯರಂತೆ ಬೆಳೆದರೂ ಸಹ ತಪ್ಪುಗಳನ್ನು ಹುಡುಕಿ ಜಗಳವಾಡುವುದು ಸಾಮಾನ್ಯವಾಗಿತ್ತು. ಏಕೆಂದರೆ ತಪ್ಪು ಹುಡುಕುವುದು , ಅನುಮಾನಿಸುವುದು ಇವು ತಾಯಿಯಿಂದ ಬಂದ ಗುಣವಾಗಿತ್ತು. ಅವರಿಗೆ ಅರಿವಿಲ್ಲದಂತೆ ಜೀವನದಲ್ಲಿ ಬೆಳೆಸಿಕೊಂಡಿದ್ದರು.
         ಪರವೂರಿನಲ್ಲಿ ಸ್ವಂತ ಉದ್ಯೋಗ ಮಾಡುತ್ತಿದ್ದ ರಮೇಶ ಅನಾರೋಗ್ಯಕ್ಕೆ ಒಳಗಾದ. ಹಿರಿಯ ಮಗ ಹರೀಶ , ರಮೇಶನನ್ನು ಮನೆಗೆ ಕರೆತಂದು ಆರೈಕೆ ಮಾಡಿ ಕಳುಹಿಸಿದ. ಆ ಸಮಯದಲ್ಲಿ ರಮೇಶನ ಹೆಂಡತಿ ಬಾಣಂತನಕ್ಕೆಂದು ತವರು ಮನೆಗೆ ಹೋಗಿದ್ದಳು. ಸುಮಾರು ಒಂದು ವರ್ಷದ ನಂತರ ಆರ್ಥಿಕ ದುಸ್ಥಿತಿ ಉಂಟಾಗಿ ಕಿರಿಯ ಮಗ ರಮೇಶ , ಕುಟುಂಬ ಸಮೇತರಾಗಿ ಅಣ್ಣ ಹರೀಶನ ಮನೆಗೆ ಬಂದು ಉಳಿದರು. ಆ ಸಮಯದಲ್ಲಿ ಹಿರಿಯಮಗ ಹರೀಶ ಅನಾರೋಗ್ಯಕ್ಕೆ ತುತ್ತಾದ. ಆ ಮನೆಯಲ್ಲಿ ಪ್ರತಿದಿನ ಇಬ್ಬರು ತಪ್ಪುಹುಡುಕುವುದು , ಜಗಳವಾಡುವುದು ಸಾಮಾನ್ಯವಾಯಿತು. ಇದು ವಿಕೋಪಕ್ಕೆ ಹೋಗಿ ಕಿರಿಯ ಮಗ ರಮೇಶ ಮನೆಯನ್ನೇ ಬಿಟ್ಟು ಹೋದ. ಅನಾರೋಗ್ಯಪೀಡಿತ ಅಣ್ಣನನ್ನು ನೋಡಲೇ ಇಲ್ಲ. ತಾಯಿಯನ್ನು ಜೊತೆಯಲ್ಲಿ ಇಟ್ಟುಕೊಳ್ಳಲು ಇಬ್ಬರೂ ಇಷ್ಟ ಪಡಲಿಲ್ಲ. ಇಂತಹ ನಕಾರಾತ್ಮಕ ಗುಣದಿಂದ ಕುಟುಂಬ ಸಂತೋಷ ಕೊಡುವ ಬದಲು ವೈರತ್ವ ಬೆಳೆಯಿತು. 
        ಮಕ್ಕಳೇ..... ನಾಳೆ ನೀವು ದೊಡ್ಡವರಾಗಿ ಬೆಳೆದ ಮೇಲೆ ನಿಮಗೂ ಮದುವೆಯಾಗಿ ಮಕ್ಕಳಾಗುತ್ತವೆ. ಮಕ್ಕಳಲ್ಲಿ ಯಾವ ಧನಾತ್ಮಕ ಮೌಲ್ಯ ಬೇಕೆಂದು ಬಯಸುತ್ತೀರೋ ಅದನ್ನು ನೀವು ಈಗಿನಿಂದಲೇ ಬೆಳೆಸಿಕೊಂಡು ಅಳವಡಿಸಿಕೊಳ್ಳಬೇಕು. ಮಕ್ಕಳು ಮೌಲ್ಯಗಳನ್ನು ನೋಡಿ ಕಲಿಯುತ್ತಾರೆ ಹೊರತು ನಾವು ನೀಡುವ ಮಾರ್ಗದರ್ಶನದಿಂದ ಅಲ್ಲ. ನಾವು ಹೇಗೆ ನಡೆಯುತ್ತೇವೋ ಅದನ್ನು ಕಲಿಯುತ್ತಾರೆ ಮತ್ತು ಅನುಸರಿಸುತ್ತಾರೆ.
..........................................ಎಂ.ಪಿ. ಜ್ಞಾನೇಶ್ 
ಕ್ಷೇತ್ರ ಶಿಕ್ಷಣಾಧಿಕಾರಿ
ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
********************************************Ads on article

Advertise in articles 1

advertising articles 2

Advertise under the article