-->
ಜಗಲಿಯ ಮಕ್ಕಳಿಗೆ ಅಕ್ಕನ ಪತ್ರ - 7

ಜಗಲಿಯ ಮಕ್ಕಳಿಗೆ ಅಕ್ಕನ ಪತ್ರ - 7

ಸಂಚಿಕೆ - 7

ನಮಸ್ತೆ ಮಕ್ಕಳೇ,
           ಎಲ್ಲರೂ ಚೆನ್ನಾಗಿದ್ದೀರಿ ಅಲ್ವಾ?
ನಿಮ್ಮ ಓದುವ ಕುತೂಹಲ, ಬರೆಯುವ ಆಸಕ್ತಿ ಹೊಸದೊಂದು ಭರವಸೆಯನ್ನು ಮೂಡಿಸಿತು. ಪತ್ರ ಓದಿದೆ.. ನಿಮ್ಮ ಖುಷಿಯ ಜೊತೆ ನಾನೂ ಸಂಭ್ರಮಿಸಿದೆ ಜಗಲಿಯೊಳಗೆ. ನಿಮಗೊಂದು ಘಟನೆಯನ್ನು ಹೇಳ್ಬೇಕು ನಾನು. ಸಾಮಾನ್ಯವಾಗಿ ನಡೆಯುತ್ತಿರುವ ವಿಚಾರವಾದರೂ ನನ್ನನ್ನು ಬಹಳವಾಗಿ ಕಾಡುವ ಅಂಶಗಳಿವು.
        ಬಸ್ಸು ಜನಸಂದಣಿಯಿಂದ ತುಂಬಿತ್ತು. ಎಂದಿನಂತೆ ಸಾಮಾನ್ಯವಾಗಿ ಖಾಲಿ ಇರುವ ಚಾಲಕನ ಎಡಬದಿಯ ಅಡ್ಡ ಸೀಟಿನತ್ತ ಸಹಜವಾಗಿಯೇ ನೋಡಿದೆ. 6 ರಿಂದ 10 ವರ್ಷದೊಳಗಿನ ನಾಲ್ಕು ಪುಟಾಣಿಗಳು ಮತ್ತು ಇಬ್ಬರು ಹಿರಿಯ ಮಹಿಳೆಯರು. ಮಕ್ಕಳು ಖುಷಿಯಲ್ಲಿಯೇ ಇದ್ದರು; ಯಾವುದರ ಅರಿವಿಲ್ಲದಂತೆ. ಬಸ್ಸಿನಲ್ಲಿ ತುಂಬಾ ಜನ ನಿಂತಿದ್ದರು. ಸಾಲನ್ನು ನೋಡಿದ ಚಾಲಕ ರಿಝ್ವಾನ್ ಮಕ್ಕಳನ್ನುದ್ದೇಶಿಸಿ, "ಮಕ್ಕಳು ಹೀಗೆ ಕೂತರೆ ಹೇಗೆ......? ದೊಡ್ಡವರಿಗೆ ಸೀಟು ಬಿಟ್ಟುಕೊಡಬೇಕು.. ಶಾಲೆಯಲ್ಲಿ ಟೀಚರ್ ಹೇಳಿಲ್ವಾ.....?" ಎಂದಾಗ ಒಲ್ಲದ ಮನಸ್ಸಿನಿಂದಲೇ ಇಬ್ಬರು ಮಕ್ಕಳನ್ನು ಪೋಷಕರು ಎಬ್ಬಿಸಬೇಕಾಯಿತು... ನನಗೆ ಕುಳಿತುಕೊಳ್ಳಲು ಕೊಟ್ಟ ಅವಕಾಶವನ್ನು ನನಗಿಂತ ಹಿರಿಯರಿಗೆ ಬಿಟ್ಟು ಕೊಟ್ಟೆ.
           ಏನೋ ಆಲೋಚನೆ ಬಂದಿರ್ಬೇಕು ನಿಮಗೀಗ......! ಹೆಚ್ಚಿನವರು ಒಂದಲ್ಲಾ ಒಂದು ಸಂದರ್ಭದಲ್ಲಿ ಬಸ್ಸಿನಲ್ಲಿ ಪ್ರಯಾಣಿಸಿರುತ್ತೇವೆ. ಆದರೆ ಇಂತಹ ವಿಷಯಗಳ ಬಗ್ಗೆ ಕೆಲವರು ಗಮನ ಹರಿಸುವುದೇ ಇಲ್ಲ. ಕೈಯಲ್ಲಿ ಮಗುವನ್ನು ಎತ್ತಿಕೊಂಡು ನಿಂತಿರುವ ತಾಯಿ, ಕೈತುಂಬಾ ಚೀಲಗಳನ್ನು ನೇತಾಡಿಸಿಕೊಂಡು ನಿಂತುಕೊಳ್ಳಲೂ ಕಷ್ಟ ಪಡುವ ಹಿರಿಯರು, ಹೇಳಲಾಗದ ನೋವನ್ನು ಹೊತ್ತುಕೊಂಡು ಸೀಟಿಗಾಗಿ ಹುಡುಕಾಡುವ ಕಣ್ಣುಗಳು ನಮಗೆ ಗೋಚರವಾಗುವುದು ಯಾವಾಗ...!? ಬೆರಳೆಣಿಕೆಯಷ್ಟು ಮಕ್ಕಳನ್ನು ಹೊರತುಪಡಿಸಿದರೆ ಕೊನೆಗೂ ಇಂತಹವರಿಗೆ ಸೀಟನ್ನು ಬಿಟ್ಟುಕೊಡುವುದು ದೊಡ್ಡವರೇ.... ಯಾಕೆ ಹೀಗೆ....? ಹೇಳಲು ಮರೆತೆವಾ ದೊಡ್ಡವರು ..? ಅಥವಾ ನೀವು ಕೇಳಿಸಿಕೊಳ್ಳಲಿಲ್ಲವೇ?
        ಬಹಳ ಗೊಂದಲ ನನಗೆ. ಜಗಲಿಯ ನನ್ನ ಪ್ರೀತಿಯ ಗೆಳೆಯ ಗೆಳತಿಯರಲ್ಲಿ ಆತ್ಮೀಯ ನಿವೇದನೆ...... ನಮ್ಮ ಸುತ್ತಲೂ ನಾವು ಕಣ್ಣಾಗಬೇಕು. ಕಿವಿಯಾಗಬೇಕು. ಇನ್ನೊಬ್ಬರ ಕಷ್ಟವನ್ನು, ನೋವನ್ನು ಅರಿಯಲು ಪ್ರಯತ್ನಿಸಿ , ಸಹಕರಿಸುವ ಹೃದಯವಂತರಾಗಬೇಕು.
        ವರ್ಷಗಳ ಹಿಂದೆ ನಡೆದ ಘಟನೆ ಇದು…. ಎಂದಿನಂತೆ ಬಸ್ಸಿನಲ್ಲಿ ಪ್ರಯಾಣಿಸುತ್ತಿರುವಾಗ ನಾವಿದ್ದ ಬಸ್ಸನ್ನು ದಾಟಿ ವೇಗವಾಗಿ ಹೋದ ಇನ್ನೊಂದು ಬಸ್ಸು ಕಣ್ಣೆದುರೇ ಉರುಳಿಬಿತ್ತು. ನಮ್ಮ ಬಸ್ಸಿನ ಚಾಲಕ ತಕ್ಷಣ ಬಸ್ ನಿಲ್ಲಿಸಿ ಕೈಯಿಂದ ಗಾಜನ್ನು‌ ಒಡೆದು ಬಸ್ಸಿನ ಒಳಗಿರುವವರ ರಕ್ಷಣೆಗಾಗಿ ಸಹಕರಿಸಿದರು. ಖುಷಿಯನ್ನೇ ಹಂಚುತ್ತಾ, ಸದಾ ಮಾನವೀಯವಾಗಿ ಮಿಡಿಯುವ ಬಸ್ ಚಾಲಕ ರಿಝ್ವಾನ್ ನಿಜ ಬದುಕಿನ‌ ಹೀರೋ. ಇಂತಹ ಅನಾಹುತಗಳಾಗುವಾಗ ಫೋಟೋ ತೆಗೆಯುವುದು, ವಿಡಿಯೋ ಮಾಡುವುದನ್ನು ಬಿಟ್ಟು , ಅಪಾಯದಲ್ಲಿರುವವರಿಗೆ ಸಹಾಯ ಮಾಡುವುದು ಮಾನವೀಯತೆ ಅಲ್ವಾ.......?
       ನಮ್ಮೂರಲ್ಲೊಬ್ಬ ಲೈನ್ ಮ್ಯಾನ್ ಇದ್ದಾರೆ. ಹೆಸರು ದುರ್ಗಾಸಿಂಗ್ ರಜಪೂತ್. ಆದರೆ ನೂರಾರು ಜನರ ನಡುವೆ ಈ ವ್ಯಕ್ತಿ ವಿಭಿನ್ನವಾಗಿ ಗೋಚರಿಸ್ತಾರೆ. ವಿದ್ಯುತ್ ಕಂಬಕ್ಕೆ ಬಿದ್ದ ಮರಗಳನ್ನು ಕಡಿಯುತ್ತಾ ಇರುವಾಗ ಇವರೊಳಗಿನ ಪರಿಸರ ಪ್ರೇಮಿ ಜಾಗೃತಗೊಂಡದ್ದು...... ಹೀಗೆಯೇ ಮರಗಳನ್ನು ಕಡಿಯುತ್ತಾ ಹೋದರೆ ಸಮಸ್ತ ಜೀವ ಸಂಕುಲಗಳು ನಾಶದಂಚಿಗೆ ಸರಿಯುತ್ತವೆ ಎನ್ನುವ ಸತ್ಯ ಅವರನ್ನು ಇನ್ನಿಲ್ಲದಂತೆ ಕಾಡತೊಡಗಿತು. ತಡಮಾಡಲಿಲ್ಲ....... ಕಡಿಮೆ ಸ್ಥಳದಲ್ಲಿ ಹೆಚ್ಚು ಗಿಡಗಳನ್ನು ಬೆಳೆಸುವ ಜಪಾನಿನ ಮಿಯಾವಾಕಿ ಎನ್ನುವ ವಿಜ್ಞಾನಿಯ ತಂತ್ರಜ್ಞಾನವನ್ನು,ಮೊದಲು ತಮ್ಮ ಮನೆಯಲ್ಲಿ, ನಂತರ ಶಾಲೆಗಳ ಅಂಗಳದಲ್ಲಿ ಅಳವಡಿಸಲಾರಂಭಿಸಿದರು. ನಮ್ಮ ಶಾಲೆಯಲ್ಲೂ ಇದೆ ಮಿಯಾವಾಕಿ ಅರಣ್ಯ. ಮಾತು ಮಾತಿಗೂ ಪರಿಸರ ಕಾಳಜಿಯನ್ನು ವ್ಯಕ್ತಪಡಿಸುತ್ತಾ, ಕಣ್ಣೆದುರು ಕಾಣುವ ಪರಿಸರ ನಾಶದ ದುರಂತದ ಬಗ್ಗೆ, ಜನಸಾಮಾನ್ಯರ ನಿರ್ಲಕ್ಷ್ಯದ ಬಗ್ಗೆ ಮರುಗುತ್ತಾ ಸೇವೆಯಲ್ಲಿ ಸಾರ್ಥಕತೆಯನ್ನು ಕಾಣುವ ಇವರು ನಮ್ಮ ನಡುವಿನ‌ ಹೀರೋ. ಇವರ ಕಾಳಜಿ ಮಾಧ್ಯಮದವರ ಕಣ್ಣಿಗೆ ಬಿದ್ದಿದೆ. ಸುತ್ತಲಿನ ಜನಸಾಮಾನ್ಯರಿಗೆ ಇದೆಲ್ಲಾ ದೊಡ್ಡ ವಿಚಾರವಾಗಲೇ ಇಲ್ಲ......!
       ನಾವು ಅರಿಯಬೇಕು... ಬೆಳೆಯಬೇಕು.....
 ಏನನ್ನಾದರೂ ಸಾಧಿಸಬೇಕು. ಎಲ್ಲರಿಗಿಂತ ವಿಭಿನ್ನವಾಗಿ,  ಸಾರ್ಥಕ ಬದುಕನ್ನು ಬಾಳಬೇಕು ಅಲ್ವಾ.......? ನಿಮ್ಮ ಕನಸಿನ ಪಟ್ಟಿಯಲ್ಲಿ ಇಂತಹ ಕಾಳಜಿಯೂ ಇರಲಿ.
            ಮುಂದಿನ ಪತ್ರದೊಂದಿಗೆ ಮತ್ತೆ ಭೇಟಿಯಾಗೋಣ. ಆರೋಗ್ಯ ಜೋಪಾನ.
ಅಲ್ಲಿಯವರೆಗೆ ಅಕ್ಕನ ನಮನಗಳು.
 ................................... ತೇಜಸ್ವಿ ಅಂಬೆಕಲ್ಲು
ಶಿಕ್ಷಕಿ
ದ.ಕ.ಜಿ.ಪಂ.ಹಿ.ಪ್ರಾ .ಶಾಲೆ,
ಗೋಳಿತ್ತಟ್ಟು, ಪುತ್ತೂರು ತಾಲ್ಲೂಕು
ದಕ್ಷಿಣ ಕನ್ನಡ ಜಿಲ್ಲೆ
********************************************

Ads on article

Advertise in articles 1

advertising articles 2

Advertise under the article