-->
ಸ್ಪೂರ್ತಿಯ ಮಾತುಗಳು

ಸ್ಪೂರ್ತಿಯ ಮಾತುಗಳು


               ಕಿರಿ ವಯಸ್ಸಿನ ಮೇರು ಸಾಧಕ
          ಆತ ಮಹಮ್ಮದ್ ಸ್ವರೂಪ್. ಜಗತ್ತನ್ನೇ ನಿಬ್ಬೆರಗಾಗಿಸಿ, ತನ್ನ ಅದ್ವಿತೀಯ ಬುದ್ಧಿಮತ್ತೆಗೆ ವಿದ್ವಾಂಸರೇ ತಲೆದೂಗುವಂತೆ ಮಾಡಿದ ಅಸಾಮಾನ್ಯ ಬಾಲಕ. 
          ಅಬ್ಬಾ…!! ಇದೆಂಥ ವಿಸ್ಮಯವೆಂದು ನಾವೆಲ್ಲ ಮೂಗಿನ ಮೇಲೆ ಬೆರಳಿಟ್ಟು ಕೌತುಕದಿಂದ ಕಣ್ಣರಳಿಸುವಂತೆ ಮಾಡಿದ ಚಾಣಕ್ಯನೀತ. ಹಸುಳೆಯದು ದುರ್ಬಲವಲ್ಲ.ಮಹಾಬಲಗಳ ಸಮ್ಮಿಲನ ಶಕ್ತಿಯೆಂದು ಸಾಬೀತುಪಡಿಸಿದ ಮಹಾಸಾಧಕ.
       ಪುಟ್ಟ ಮಗುವೊಂದು ಜನ್ಮತಳೆದ ನಲವತ್ತು ದಿನಗಳಲ್ಲಿ ಹೆತ್ತವರೊಂದಿಗೆ ಪರಿಚಿತತೆಯ ಭಾವ ತಳೆಯುವುದು ಸರ್ವೇಸಾಮಾನ್ಯ. ಆದರೆ ಸ್ವರೂಪ ತಾನು ಹುಟ್ಟಿದ ನಲ್ವತ್ತು ದಿನಗಳಲ್ಲಿ ಸುತ್ತಲಿನ ವಸ್ತುಗಳೇ ಬೆರಗಾಗುವಂತೆ, ಅಪ್ಪನ ಮಾತುಗಳನ್ನು ಅರಗಿಸಿಕೊಳ್ಳಲು ಆರಂಭಿಸಿ, ಆರನೇ ತಿಂಗಳಲ್ಲಿ ವಸ್ತುಗಳ ಹೆಸರುಗಳನ್ನು ಅರಿತುಕೊಂಡು ಅವುಗಳ ನಡುವಿನ ಭಿನ್ನತೆಯನ್ನು ಗುರುತಿಸ ಬಲ್ಲವನಾಗಿದ್ದ......!! ಚಿತ್ರಭಾಷೆಯನ್ನು ಅರ್ಥೈಸಿಕೊಳ್ಳ ಬಲ್ಲವನಾಗಿದ್ದ…....!!
          ಮುದ್ದು ಕುವರನ ತೊದಲು ಮಾತು, ಅಂಬೆಗಾಲುಗಳ ಸಪ್ಪಳ ಕೇಳಿ ಆನಂದಿಸಬೇಕಿದ್ದ ಪೋಷಕರನ್ನು 1 ವರ್ಷ 2 ತಿಂಗಳಿನ ಸ್ವರೂಪ್ ಇಂಗ್ಲಿಷ್ ವರ್ಣಮಾಲೆಯ ಎಲ್ಲಾ ಅಕ್ಷರಗಳನ್ನು ಒಂದೇ ದಿನದಲ್ಲಿ ಕಲಿತು ಅಚ್ಚರಿಗೊಳಿಸಿದ್ದ…!!
ಒಂದೂವರೆ ವರ್ಷವಾಗುತ್ತಿದ್ದಂತೆ ಸುಲಲಿತವಾಗಿ ಭಾಷೆಯನ್ನು ಕಲಿತು , ನಿರರ್ಗಳವಾಗಿ ಓದಲಾರಂಭಿಸಿದ ಮಗು ತನ್ನ ಎರಡನೇ ವರ್ಷದಲ್ಲಿ ವಿಶ್ವಕೋಶದಂಥ ಪುಸ್ತಕಗಳನ್ನು ಓದಿ ಬೆರಗುಗೊಳಿಸಿದ್ದ.......!!
         ಕಂಪ್ಯೂಟರ್ ಎಂದರೆ ಜನ ವಿಸ್ಮಯ ಗೊಳ್ಳುತ್ತಿದ್ದ ಕಾಲದಲ್ಲಿ ಕೇವಲ ತನ್ನ ಎರಡನೇ ವಯಸ್ಸಿನಲ್ಲಿ WWW.IQ.COM ಎಂಬ ವೆಬ್ ಸೈಟ್ ತೆರೆಯುವ ಮೂಲಕ ವಿನೂತನ ದಾಖಲೆಯ ಮುದ್ರೆಯೊತ್ತಿದ ವಿಶಿಷ್ಟ ಬಾಲಕ ಧರ್ಮಸ್ಥಳದ ಧರ್ಮಾಧಿಕಾರಿ ಪದ್ಮವಿಭೂಷಣ ಡಾ।। ವೀರೇಂದ್ರ ಹೆಗ್ಗಡೆಯವರ ಮೆಚ್ಚುಗೆಯ ಕಂಗಳಿಗೆ ಅಚ್ಚುಮೆಚ್ಚಿನವನಾದ. ಎಳೆಯ ಕಂದನ ಅಮೋಘ ಪ್ರತಿಭೆಗೆ ಕಂಪ್ಯೂಟರನ್ನು ಉಡುಗೊರೆಯನ್ನಾಗಿ ನೀಡಿದ ಹೆಗ್ಗಡೆಯವರು ಬಾಲಕನ ಆತ್ಮವಿಶ್ವಾಸದ ವಿಕಾಸಕ್ಕೆ ಶ್ರೀರಕ್ಷೆಯಾದರು.
            ಸ್ವಕಲಿಕೆ, ಸ್ವರೂಪ ಶಿಕ್ಷಣ ಕಲಿಕೆ ಪ್ರಯೋಗದ ರೂವಾರಿ ಶ್ರೀಯುತ ಗೋಪಾಡ್ಕರ್ ರವರ ಪ್ರೋತ್ಸಾಹದೊಂದಿಗೆ ಶ್ಲಾಘನೀಯ ಸಾಧನೆ ಮಾಡಿದ ಮಹಮ್ಮದ್ ಸ್ವರೂಪ್ ಮಾಜಿ ರಾಷ್ಟ್ರಪತಿ , ಘನತೆವೆತ್ತ ವಿಜ್ಞಾನಿ ಅಬ್ದುಲ್ ಕಲಾಮ್ ರವರ ಸಾಂಗತ್ಯಕ್ಕೆ , ಗಣ್ಯರಾದ ಮೋಹನ್ ಆಳ್ವ , ಅಬ್ದುಲ್ ರವೂಫ್ ಪುತ್ತಿಗೆ ಹಾಗೂ ಸಯ್ಯದ್ ಮೊಹಮ್ಮದ್ ಬ್ಯಾರಿಯವರ ಪ್ರಶಂಸೆಗೆ ಪಾತ್ರನಾದ.
      "ಕಂಪ್ಯೂಟರ್ ಬಾಲಕ"ನೆಂಬ ಖ್ಯಾತಿಯೊಂದಿಗೆ ಕಿರಿಯ ವಯಸ್ಸಿನ ಹಿರಿಯ ಸಾಧನೆಗೆ ಜಗತ್ತಿನ ಅತಿದೊಡ್ಡ TV ಚಾನೆಲ್ CNN ಅಮೇರಿಕಾ ಮಹಮ್ಮದ್ ಸ್ವರೂಪ್ ಗೆ ಅವನ ಸಾಕ್ಷ್ಯಚಿತ್ರ ನಿರ್ಮಾಣದ ಕೊಡುಗೆಯನ್ನು ನೀಡಿರುವುದು ಆತನ ಸಾಧನೆಗೊಂದು ಹೆಮ್ಮೆಯ ಗರಿ .
1 ವರ್ಷ 2 ತಿಂಗಳಲ್ಲಿ ಅಕ್ಷರ ಕಲಿಕೆಯ ಅನನ್ಯ ಸಾಧನೆ, ಎರಡನೇ ವರ್ಷದಲ್ಲಿ ಕಂಪ್ಯೂಟರ್ ನೊಂದಿಗೆ ಮಾತಿಗಿಳಿದ ಜಗತ್ತಿನ ಮೊದಲ ಬಾಲಕನೆಂದರೆ ಅದು ನಮ್ಮ ಮಣ್ಣಿನ ಮಾಣಿಕ್ಯ ಮಹಮ್ಮದ್ ಸ್ವರೂಪ್.
       ಮುಂದೆ ಸ್ವಕಲಿಕೆ ಅಧ್ಯಯನದ ಅಮೋಘ ಫಲಿತಾಂಶವೆಂಬಂತೆ ಬಾಲಕ ತನ್ನ ನಾಲ್ಕನೆಯ ವಯಸ್ಸಿನಲ್ಲಿ ನೂರಕ್ಕಿಂತಲೂ ಅಧಿಕ ಪುಸ್ತಕಗಳನ್ನು ಓದಿ ಪಂಡಿತರ ತರ್ಕಕ್ಕೆ ನಿಲುಕದ ಹುಡುಗನಾದ.
         ಓದುಗ ಮಿತ್ರರೇ........
ಎಲ್ಲರ ಕುತೂಹಲದ ಪ್ರಶ್ನೆಯಾದ 
ಸ್ವರೂಪ್ ನ ಅಮಿತ ಸಾಧನೆಗೆ, ಅಸಾಧಾರಣ ಪ್ರತಿಭೆಗೆ ವರದಾನವಾಗಿದ್ದೇ ಆತನ ಅಸಾಮಾನ್ಯ ಐಕ್ಯೂ (ಬುದ್ಧಿಶಕ್ತಿ ಸೂಚ್ಯಂಕ). ಬೆಂಗಳೂರಿನ ನಿಮ್ಹಾನ್ಸ್ ನಲ್ಲಿ ನೀಡಲಾದ ವೈದ್ಯಕೀಯ ಪರೀಕ್ಷೆ ವರದಿ ಅನ್ವಯ ಈತನ ಬುದ್ಧಿಶಕ್ತಿ ಸೂಚ್ಯಂಕ 180+ ಆಗಿತ್ತು. ಅದರಂತೆ ಅವನಿಗೆ 8ನೇ ವಯಸ್ಸಿಗೆ ಎಸ್ಸೆಸ್ಸೆಲ್ಸಿ ಉತ್ತೀರ್ಣವಾಗುವ ಸಾಮರ್ಥ್ಯವಿತ್ತು. ಆದರೆ ದುರಾದೃಷ್ಟವೆಂದರೆ ಇಲಾಖಾ ನಿಯಮಗಳ ಜಟಿಲತೆಗೆ ತಲೆಬಾಗಲೇಬೇಕಿದ್ದರಿಂದ ಹಾಗೂ ನಿಧಾನಗತಿಯ ಬರವಣಿಗೆ ಸಾಮರ್ಥ್ಯದಿಂದ ಸ್ವರೂಪ್ ತನ್ನ ಅತಿ ಚಿಕ್ಕ ವಯಸ್ಸಿನಲ್ಲಿ ಹತ್ತನೇ ತರಗತಿ ತೇರ್ಗಡೆಯಾಗುವ ಸದವಕಾಶದಿಂದ ವಂಚಿತನಾಗಬೇಕಾಯಿತು. ಮುಂದೆ ಹನ್ನೆರಡನೇ ವಯಸ್ಸಿನಲ್ಲಿ ಎಸ್ಸೆಸ್ಸೆಲ್ಸಿ , ತದನಂತರ ಪಿಯುಸಿ ಹಾಗೂ ಪದವಿ ತರಗತಿಗಳನ್ನು ಪೂರೈಸಿದ ತರುವಾಯ ಇಪ್ಪತ್ತನೆ ವಯಸ್ಸಿನಲ್ಲಿ ಎಂ.ಎಸ್ಸಿ ಇನ್ ಕ್ಲಿನಿಕಲ್ ಸೈಕಾಲಜಿ ಮುಗಿಸಿ 1ವರ್ಷ ಜೂನಿಯರ್ ರಿಸರ್ಚ್ ಫೆಲೋ ಆಗಿ ಅನುಭವ ಪಡೆದುಕೊಂಡನು.
       ತನ್ನ ಇಪ್ಪತ್ತೊಂದನೆಯ ವಯಸ್ಸಿನಲ್ಲಿ ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ನೇಮಕಗೊಂಡ ಈತ ತನಗಿಂತ ಹಿರಿಯ ಪೋಸ್ಟ್ ಗ್ರ್ಯಾಜುಯೇಷನ್ ವಿದ್ಯಾರ್ಥಿಗಳಿಗೆ ಬೋಧಿಸುತ್ತಿರುವ ಸೌಭಾಗ್ಯವಂತ. ಅತ್ಯಂತ ಎಳೆಯ ವಯಸ್ಸಿನಲ್ಲಿ ಇಂತಹ ಮಹತ್ತರ ಸ್ಥಾನ ಗಳಿಸಿದ ಕರ್ನಾಟಕದ ಅಪರೂಪದ ಕಣ್ಮಣಿ ,ಅಪೂರ್ವ ಪ್ರತಿಭಾ ಪ್ರಭೆ ಮಹಮ್ಮದ್ ಸ್ವರೂಪ್ ನಮ್ಮ ನೆಲದ ಪ್ರತಿಭೆ ಎಂಬುದೇ ನಮ್ಮೆಲ್ಲರ ಹೆಮ್ಮೆ .
       ಇಂದು ಯುವಕನಾಗಿ ಬೆಳೆದು ನಿಂತಿರುವ ಸ್ವರೂಪ್ ಪಠ್ಯದೊಂದಿಗೆ ಸಹಪಠ್ಯ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ತನ್ನದೇ ಛಾಪನ್ನು ಮೂಡಿಸಿದವರು.  ಭಾಷಣ , ಸೆಮಿನಾರ್ ಕಾರ್ಯಕ್ರಮ, ನಿರೂಪಣೆ,   ಕ್ರೀಡೆ ,ಪ್ರಬಂಧ, ನಾಟಕ, ಫೋಟೋಗ್ರಫಿ , ಬರವಣಿಗೆಗಳಲ್ಲಿ ಯಶಸ್ಸಿನ ಹೆಜ್ಜೆ ಗುರುತನ್ನು ಮೂಡಿಸಿದ ಸಕಲ ಕಲಾ ವಲ್ಲಭನೆನಿಸಿಕೊಂಡಿದ್ದಾರೆ.
          ಬುದ್ಧಿಶಕ್ತಿ, ಜ್ಞಾಪಕಶಕ್ತಿ, ಜ್ಞಾನಶಕ್ತಿಗಳ ಸಮ್ಮಿಲನದೊಂದಿಗೆ ಅದ್ಭುತ ವರ್ಚಸ್ಸಿನ ಬಾಲಕನಾಗಿ ಅಪ್ರತಿಮ ಸಾಧನೆಯ ತೈಲವೆರೆದು ಬೆಳಗುತ್ತಿರುವ ಮಹಮ್ಮದ್ ಸ್ವರೂಪ್ ಪ್ರಶಸ್ತಿಗಳ ಸರದಾರ.
        ಕರ್ನಾಟಕದ ಮಾಜಿ ಗವರ್ನರ್ ಶ್ರೀಮತಿ ರಮಾದೇವಿ ರಾಜಭವನದಲ್ಲಿ ನೀಡಿದ ಗಣರಾಜ್ಯೋತ್ಸವ ಪ್ರಶಸ್ತಿ , ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪ್ರಶಸ್ತಿಗಳು ಈತನ ಅಗಾಧ ಸಾಧನೆಗೆ ಸಂದ ಗೌರವವಾಗಿದೆ.
      ಕಲಿಕೆಯಲ್ಲಿ ವಿನೂತನ ಅವಿಷ್ಕಾರ , ನಿರಂತರ ಪ್ರಯೋಗಶೀಲತೆಯ ಗೋಪಾಡ್ಕರ್ ಅವರ ಒಡನಾಡಿ ಮಹಮ್ಮದ್ ರಫೀಕ್ ಅವರು ಪ್ರತಿಭಾ ಸಂಪನ್ನ ಶಿಕ್ಷಕರಾಗಿ, ಪ್ರೇರಣದಾಯಿ ಅಪ್ಪನಾಗಿ ಸ್ವರೂಪ್ ಗೆ ಸ್ಫೂರ್ತಿ ತುಂಬಿದ್ದರಿಂದಲೇ ಹಾಗೂ ತಾಯಿ ಆತಿಕಾರವರ ತ್ಯಾಗ ಹಾಗೂ ಪ್ರೋತ್ಸಾಹದ ಫಲಶ್ರುತಿಯಾಗಿ ಮಹಮ್ಮದ್ ಸ್ವರೂಪ್ ಜಗವನ್ನೇ ಜಯಿಸುವಂತಾಯಿತು.
         ಜಗಲಿಯ ಮಕ್ಕಳೇ ,..........
ಸುಪ್ತವಾಗಿರುವ ಪ್ರತಿಭೆಗೆ ವೇದಿಕೆ ಒದಗಿದರೆ ಜೊತೆಯಲ್ಲಿ ಸಕಾಲದಲ್ಲಿ ಮಾರ್ಗದರ್ಶನ ಹಾಗೂ ಬೆಂಬಲ ದೊರೆತರೆ ಸಾಮಾನ್ಯನೂ ಅಸಾಮಾನ್ಯನಾಗಲು ಸಾಧ್ಯವಿದೆ. "ನಾವು ನೀರಿನಲ್ಲಿ ಕೊಚ್ಚಿ ಹೋಗುವ ಮರಳ ಕಣಗಳಂತಾಗದೆ , ನೀರಿನ ದಿಕ್ಕನ್ನು ಬದಲಾಯಿಸುವ ಬಂಡೆಕಲ್ಲಿನಂತೆ ಆಗಬೇಕು" ಎಂಬ ಅಂಬೇಡ್ಕರರ ಉಕ್ತಿಯಂತೆ ಅಂತರ್ಗತವಾಗಿರುವ ಶಕ್ತಿಯನ್ನು ಪ್ರಜ್ವಲಿಸುವಂತೆ ಮಾಡಿ, ಭವಿಷ್ಯದ ಭರವಸೆಯ ಕಿರಣಗಳಾಗೋಣ. ಹೆಮ್ಮೆಯ ನಾಗರೀಕರಾಗೋಣ. ನೀವೇನಂತೀರಿ….?
..................................................ಹರಿಣಾಕ್ಷಿ. ಕೆ
ಸಹಶಿಕ್ಷಕಿ
ಸ.ಮಾ.ಉ.ಹಿ.ಪ್ರಾ.ಶಾಲೆ, ಉಪ್ಪಿನಂಗಡಿ
ಪುತ್ತೂರು ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ 
*********************************************

Ads on article

Advertise in articles 1

advertising articles 2

Advertise under the article