-->
ಪದಗಳ ಆಟ ಭಾವ ಚಿತ್ರ ಪಾತ್ರ ಸಂಚಿಕೆ - 11

ಪದಗಳ ಆಟ ಭಾವ ಚಿತ್ರ ಪಾತ್ರ ಸಂಚಿಕೆ - 11

ಪದಗಳ ಆಟ
ಭಾವಚಿತ್ರ
ಪಾತ್ರ
ಸಂಚಿಕೆ - 11

                ಕೇವಲನಲ್ಲದ ಕೇವಲ ಜ್ಞಾನಿ
           ನಮ್ಮ ಬದುಕಿನಲ್ಲಿ ನಾವು ಸಾಕ್ಷಿಯಾಗಿ ನಿಂತು ಸಾಮಾನ್ಯ ದೇಹೇಂದ್ರಿಯ ಸೀಮಿತ ವ್ಯಕ್ತಿತ್ವವನ್ನು ದಾಟಿ ನಮ್ಮ ಮನೋ ವ್ಯಾಪಾರಗಳನ್ನು ನಿರ್ಲಿಪ್ತವಾಗಿ ಅರಿಯುವುದು ಧ್ಯಾನ. ಅಂತರಾತ್ಮದ ಬೆಳಕಿನಿಂದ ಎಷ್ಟೊ ಸಾಧಕರಿಗೆ ಜ್ಞಾನೋದಯವಾಗುತ್ತದೆ. ಭಾರತದಲ್ಲಿ ಈ ಸಿದ್ಧಿ ಪಡೆದ ಸಾಧಕರು ಅದೆಷ್ಟೋ ಮಂದಿ, ಅನೇಕ ಶಿಷ್ಯರಿಗೆ ಅನುಯಾಯಿಗಳಿಗೆ ಅಧ್ಯಾತ್ಮ ಸಾಧನೆಯ ಪಥವನ್ನು ತೋರಿಸಿದ್ದಾರೆ. ಜೀವನದರ್ಶನವನ್ನು ಇತ್ತಿದ್ದಾರೆ. 
         ಕೆಲವು ಸಾಧಕರು ಭಗವಂತನನ್ನು ಜ್ಞಾನ ಭಕ್ತಿ ವೈರಾಗ್ಯಗಳಿಗಾಗಿ ಪ್ರಾರ್ಥಿಸುತ್ತಾರೆ. ಭಗವಂತನನ್ನೇ ಬಯಸುತ್ತಾರೆ. ಪ್ರಪಂಚಕ್ಕಿಂತ ಹೆಚ್ಚು ಭಗವಂತನೇ ಸತ್ಯ ಎಂದು ನಂಬುತ್ತಾರೆ. ಹಾಗಾಗಿ ತಾತ್ಕಾಲಿಕ ಹಾಗೂ ಪ್ರಾಪಂಚಿಕ ಬಯಕೆಗಳಿಂದ ವಿದೂರ ರಾಗಿರುತ್ತಾರೆ. 
         ಆದರೆ ಆ ವೀರ ಸಾಧಕ ಭಗವಂತನನ್ನು ನಂಬಲಿಲ್ಲ. ಹನ್ನೆರಡೂವರೆ ವರ್ಷ ಧ್ಯಾನ ನಿರತನಾಗಿದ್ದ. ಸಮ್ಯಕ್ ಜ್ಞಾನ ಕ್ಕಾಗಿ, ಮೋಕ್ಷ ರಹಸ್ಯವನ್ನು ಅರಿತು ಕೊಳ್ಳುವುದಕ್ಕಾಗಿ. ತನ್ನ 30ನೇ ವಯಸ್ಸಿನಲ್ಲಿ ಲೌಕಿಕ ಭೋಗಭಾಗ್ಯಗಳನ್ನು ತ್ಯಜಿಸಿದ. ರಾಜಕುಮಾರನಾಗಿದ್ದು ಸುಖೀಜೀವನ ನಡೆಸುತ್ತಿದ್ದವ ಸರ್ವಸಂಗ ಪರಿತ್ಯಾಗಿ ಆಗುವುದೆಂದರೆ.......? ಆತನೇ ಧೈರ್ಯದಿಂದ ಸ್ಪಷ್ಟವಾಗಿ ಹೇಳಿದ - ಪ್ರಪಂಚದ ಸೃಷ್ಟಿಕರ್ತ ದೇವನಲ್ಲ. ಈ ಪ್ರಪಂಚಕ್ಕೆ ಅಂತ್ಯವಿಲ್ಲ. ಯಾವುದೇ ವಸ್ತುವಿಗೂ ಕೊನೆಯೆಂಬುದಿಲ್ಲ. ಅದರ ಸ್ವರೂಪ ಬದಲಾವಣೆಯಾಗುತ್ತದೆ ಅಷ್ಟೇ. ಹಾಗೆಯೇ ವಿಶ್ವ ರೂಪವು ಬದಲಾಗಬಹುದು ಅಷ್ಟೇ, ಅಂತ್ಯ ಕಾಣುವುದಿಲ್ಲ. 
      ಐನ್ ಸ್ಟೀನನ - ವಸ್ತು ನಾಶವಾಗುವುದಿಲ್ಲ, ಶಕ್ತಿ ನಾಶವಾಗುವುದಿಲ್ಲ ಸೃಷ್ಟಿಯಾಗುವುದೂ ಇಲ್ಲ. ಒಂದು ರೂಪದಿಂದ ಇನ್ನೊಂದು ರೂಪಕ್ಕೆ ಪರಿವರ್ತನೆಯಾಗುತ್ತದೆ ಅಷ್ಟೇ ಎಂದಿರುವುದನ್ನು ಇಲ್ಲಿ ನೆನಪು ಮಾಡಿಕೊಳ್ಳಬಹುದು. ಸಾಂಖ್ಯ ಯೋಗವು ಇದನ್ನು ಮೊದಲು ಹೇಳಿದೆ. 
        ಹನ್ನೆರಡೂವರೆ ವರ್ಷ ಆಳವಾದ, ಗಾಢವಾದ ಮೌನ, ಧ್ಯಾನ ಯೋಚನೆಗಳ ಪರಿಷ್ಕರಣೆ. ಅಂತರಂಗದ ತುಮುಲಗಳ ನಿಲುಗಡೆ. ಮನಸ್ಸು ಎತ್ತರದ ಸ್ಥಾನಕ್ಕೆ ಹೋಗಿ ತರಂಗಗಳು ಲಯಬದ್ಧವಾಗಿ ಸ್ಥಿತಪ್ರಜ್ಞೆಯ ಉತ್ಕರ್ಷ ಸ್ಥಿತಿಯನ್ನು ತಲುಪಿದ. ಪರಿಪೂರ್ಣ ಜ್ಞಾನ ಅಂದರೆ ಕೇವಲಜ್ಞಾನವನ್ನು ಪಡೆದ.ಅರ್ಹತ್ ಸಿದ್ಧನಾದ. ಅಶೋಕದ ಕೆಳಗೆ ಶೋಕಸಾಗರ ದಿಂದ ಲೋಕವನ್ನೇ ಮುಕ್ತಗೊಳಿಸುವ ಸಿದ್ಧಿ ಪಡೆದ ಅತಿವೀರ, ಸನ್ಮತಿ ಅವನು. 
        ಆತನ ತಾಯಿಗೆ ಆತನನ್ನು ಗರ್ಭದಲ್ಲಿ ಧರಿಸಿರುವ ಸಂದರ್ಭ ಇರುಳು ಕನಸು ಬಿತ್ತಂತೆ. ಕನಸಿನಲ್ಲಿ 14 ಸುವಸ್ತುಗಳು ಕಂಡವಂತೆ. ಆ ಸ್ವಪ್ನದಲ್ಲಿ ಒಂದರ ಹಿಂದೊಂದು ಬಂದು ಹೋದ ಚಿತ್ರಗಳು ಆಕೆಗೆ ಸ್ಪಷ್ಠವಾಗಿತ್ತಂತೆ. 
         ಉನ್ನತ ಚಾರಿತ್ರ್ಯಕ್ಕೆ ಆನೆ, ಧಾರ್ಮಿಕತೆಗೆ ಬಸವ, ಶಕ್ತಿ ಸಾಮರ್ಥ್ಯಕ್ಕೆಸಿಂಹ, ಬೋಧನೆಯನ್ನ ಪಸರಿಸುವ ಹಾರ, ನೋವಿನಿಂದ ತಂಪು ಕೊಡುವ ತಂಗದಿರ, ಚಂದ್ರ, ಜ್ಞಾನ ಪ್ರಖರತೆಗೆ ಸೂರ್ಯ, ಧರ್ಮದ ಧ್ವಜವಾಗಿ ಬಾವುಟ, ಪರಿಶುದ್ಧತೆಗೆ ನೀರಿನ ಹೂಜಿ, ಭವಕಂಟಿಕೊಳ್ಳದಕ್ಕೆ ರೂಪಕವಾಗಿ ತಾವರೆ, ವೈಶಾಲ್ಯಕ್ಕೆ ಸಾಗರ, ಗೌರವ ಪೂಜ್ಯತೆ ಗೆ ಪುಷ್ಪಕವಿಮಾನ, ವಿವೇಕ ಗುಣಗಳಿಗೆ ರತ್ನಗಳು, ಧರ್ಮ ಪುನರ್ ಸ್ಥಾಪನೆಗೆ ಅಗ್ನಿ.................
           ಈ ಎಲ್ಲವೂ ಆ ಸುಗರ್ಭೆಗೆ ಪ್ರತೀಕವಾಗಿ, ಪ್ರತಿಮೆಯಾಗಿ ಸಾಂಕೇತಿಕವಾಗಿ ಕಂಡವಂತೆ. ಆತ ಪೃಥ್ವಿ, ಭೂರಮೆ, ಇಳೆಯ ಬೆಳಕನ್ನು ಕಾಣುವ ಹೊತ್ತು ರಾಜ್ಯ ಸುಭದ್ರ, ಸುಮಂಗಲ, ಸುಭಿಕ್ಷವಾಗಿ ಇತ್ತಂತೆ. ಸಮೃದ್ಧವಾಗಿ ಇತ್ತಂತೆ. ಸುಖ ಶಾಂತಿ ವರ್ಧಮಾನವಾಗಿತ್ತೆಂದೇ ಆತ ವರ್ಧಮಾನ ನಾಮಾಂಕಿತನಾದ. 
          ಆತ ಕಂಡ ಸತ್ಯ, ನಿತ್ಯ ಸತ್ಯ, ನಿತ್ಯ ರತ್ನ ಪಂಚಕ............. ಅಹಿಂಸೆ, ಅಪರಿಗ್ರಹ, ಅಚೌರ್ಯ, ಅನೇಕಾಂತವಾದ, ಬ್ರಹ್ಮಚರ್ಯ.
         ಈ ಭೂಮಿಯಲ್ಲಿರುವ ಹೆಚ್ಚಿನವುಗಳು ಜೀವ ಇರುವವುಗಳು. ಜೀವಕ್ಕೆ ನೋವು ಮಾಡುವ ಹಕ್ಕಿಲ್ಲ ನಮಗೆ. ಅಹಿಂಸೆಯ ಪಾರಮ್ಯವನ್ನು ಮೆಚ್ಚಿದ. ಜನರು ಅದನ್ನು ನೆಚ್ಚಲು ರಾಜ್ಯ, ರಾಜ್ಯಗಳಿಗೆ ಹೋಗಿ ಆ ಕುರಿತು ಬೋಧಿಸಿದ. ಪ್ರಾಣಿ ಹಿಂಸೆಯ ವಿರುದ್ಧ ಶಾಸನವನ್ನು ತರುವಂತೆ ಮಾಡಿದ. ರತ್ನ ಪಂಚಕ ಗಳಲ್ಲಿ ಅನೇಕಾಂತವಾದ ವಿಶಿಷ್ಟವಾದುದು. ಇದು ಬಹು ಅಭಿಮತ ಹಾಗೂ ಸಾಪೇಕ್ಷತಾ ಸಿದ್ಧಾಂತದ ತಳಹದಿಯನ್ನು ಹೊಂದಿದೆ. ಭಿನ್ನಾಭಿಪ್ರಾಯಗಳು ಜ್ಞಾನವನ್ನು ಹೆಚ್ಚಿಸುತ್ತದೆ. ಒಂದು ವಿಷಯದ ಮೇಲಿನ ನಾನಾ ಅಭಿಪ್ರಾಯಗಳನ್ನು ಕೇಳಿದ ಮೇಲೆ ತೀರ್ಮಾನಕ್ಕೆ ಬರುವುದು ಸಮಂಜಸ. ಇಲ್ಲವಾದರೆ ಅದು ಏಕಪಕ್ಷೀಯ ಅಥವಾ ಪೂರ್ವಗ್ರಹ ಪೀಡಿತವೂ ಆಗಬಹುದು. ಅಭಿಪ್ರಾಯ ಭೇದಗಳನ್ನು ಆಲಿಸಿದಾಗ ಪರರ ಅನಿಸಿಕೆಗಳ ಕಡೆಗೆ ಗೌರವ, ಸಹಿಷ್ಣುತೆ ಬೆಳೆಯುತ್ತದೆ. ಇಲ್ಲವಾದರೆ ಕುರುಡರು ಆನೆಯನ್ನು ಗ್ರಹಿಸಿದಂತೆ ನಮ್ಮ ಅರಿವು, ತಿಳುವಳಿಕೆ ಮಿತಿಯ ಪರಿಧಿಯಲ್ಲೇ ಸುತ್ತುತ್ತಿರುತ್ತದೆ. 
           ವಾಸ್ತವವನ್ನು ಹಲವು ಬಾರಿ ಅಭಿವ್ಯಕ್ತಿಸಲಾಗುವುದಿಲ್ಲ. ಭಾಷೆ ಅದಾಗಿಯೇ ಸತ್ಯವಾಗಿರುವುದಿಲ್ಲ, ಅದು ಸಂವಾಹಕ ಅಷ್ಟೇ. ಇದನ್ನು ಅನೇಕಾಂತವಾದಕ್ಕೆ ಪೂರಕವಾಗಿ ಚರ್ಚಿಸಲಾಗಿದೆ. ಅಸ್ತಿ - ನಾಸ್ತಿ, ವಾದಗಳು, ಸ್ಯಾದವಾದಗಳು ಸನಾತನ ಧರ್ಮವನ್ನು ಹೋಲುತ್ತವೆ. 
         ತಾರ್ಕಿಕ ಚಿಂತನೆಯಲ್ಲಿ ಈ ಪಂಥದವರು ಅಗ್ರಪಂಕ್ತಿಯಲ್ಲಿ ನಿಲ್ಲುತ್ತಾರೆ. ಒಂದು ಅನಿಶ್ಚಿತವಾದ ವಿಷಯವನ್ನು 7 ರೀತಿಯ ಊಹಾ ಸಿದ್ಧಾಂತಗಳ ನೆಲೆಯಲ್ಲಿ ತರ್ಕಿಸಬಹುದು ಎನ್ನುತ್ತಾರೆ. ಇದು ಇಂದಿನ ಸಂಭವನೀಯತೆಯ ಪರಿಕಲ್ಪನೆಯನ್ನು ನೆನಪಿಸುತ್ತದೆ. 
       ಮೋಕ್ಷಕ್ಕಾಗಿ ಜನನ-ಮರಣಗಳ ಚಕ್ರವನ್ನು ದಾಟಲು ಸಾಧಕರಿಗೆ ಪಥವನ್ನು ತೋರಿಸುವ ತೀರ್ಥಂಕರ. ಹಳೆಯದೆಲ್ಲವನ್ನು ಅಂಧಾನುಕರಣೆ ಮಾಡದೆ ತನ್ನ ಜ್ಞಾನದ ಬೆಳಕಿನಲ್ಲಿ ವಿಮರ್ಶಿಸಿ ತಿದ್ದಿತೀಡಿ ನಿಜ ಸುವರ್ಣವನ್ನು ನೀಡಿದ. ನಿಜ ವೈರಾಗಿ. ನಿಜಗುಣಯೋಗಿ, ನಿಜ ವೀರ. ಆತನೇ ಕಶ್ಯಪ, ಕೇವಲನಲ್ಲದ ಕೇವಲ ಜ್ಞಾನಿ
      ಇಂಥವರು ನಿಮ್ಮೊಳಗಿಲ್ಲವೇ ...............?
...........................................ಸುಮಾಡ್ಕರ್
ಸ್ವರೂಪ ಅಧ್ಯಯನ ಸಂಸ್ಥೆ 
ಮಂಗಳೂರು
Mob: +91 99016 38372
******************************************


Ads on article

Advertise in articles 1

advertising articles 2

Advertise under the article