-->
ಅಕ್ಕನ ಪತ್ರ - 6 ಕ್ಕೆ ಮಕ್ಕಳ ಉತ್ತರ (ಸಂಚಿಕೆ -1)

ಅಕ್ಕನ ಪತ್ರ - 6 ಕ್ಕೆ ಮಕ್ಕಳ ಉತ್ತರ (ಸಂಚಿಕೆ -1)


     ಜಗಲಿಯ ಮಕ್ಕಳಿಗೆ ಅಕ್ಕನ ಪತ್ರ - ಮಕ್ಕಳ  ಜಗಲಿಯಲ್ಲೊಂದು ವಿಭಿನ್ನ ಪ್ರಯೋಗ. ಮಕ್ಕಳ ಮಾನಸಿಕ , ಶೈಕ್ಷಣಿಕ , ಬೌದ್ಧಿಕ , ಮೌಲಿಕ ವಿಚಾರಗಳಿಗೆ ಒತ್ತು ಕೊಟ್ಟು ಸೃಜನಶೀಲ ಶಿಕ್ಷಕಿ ತೇಜಸ್ವಿ ಅಂಬೆಕಲ್ಲು ಇವರು ಬರೆಯುತ್ತಿರುವ ಪತ್ರ ಮಕ್ಕಳಲ್ಲಿ ಹೊಸತನವನ್ನು ಮೂಡಿಸುತ್ತಿದೆ. ಜಗಲಿಯ ಮಕ್ಕಳು  ಪತ್ರವನ್ನು ಓದಿ ಪ್ರೀತಿಯಿಂದ ಮುಗ್ಧವಾಗಿ ಉತ್ತರ ಬರೆಯುತ್ತಿದ್ದಾರೆ. ಅಕ್ಕನ ಪತ್ರ - 6 ಕ್ಕೆ ಬಹಳಷ್ಟು ವಿದ್ಯಾರ್ಥಿಗಳು ಬರೆದಿರುವ ಉತ್ತರ ಇಲ್ಲಿದೆ ........

------------------------------------------------------------------------

      ನನ್ನ ಪ್ರೀತಿಯ ಅಕ್ಕನಿಗೆ ಸುನೀತಾ ಮಾಡುವ ನಮಸ್ಕಾರಗಳು..... ನಿಮ್ಮ ಪತ್ರವನ್ನು ಓದಿದೆ. ಈ ಪತ್ರ ನನಗೆ ತುಂಬಾ ಹಿಡಿಸಿತು. ಹಾಗೆ ನೀವು ಹೇಳಿದ ಸಾಹಸಿಗನ ಕಥೆ ಕೇಳಿ ಆಶ್ಚರ್ಯ ದ ಜೊತೆಗೆ ನಾವು ಯಾಕೆ ಈ ರೀತಿಯ ಕನಸುಗಳನ್ನು ಪಟ್ಟಿ ಮಾಡಬಾರದು? ಎಂದು ನನಗನಿಸಿತು. ಅನಿಸಿದ ಮಾತ್ರಕ್ಕೆ ಅಲ್ಲಿಗೆ ಬಿಟ್ಟು ಬಿಡಲಿಲ್ಲ , ಹತ್ತು ಕನಸುಗಳನ್ನು ಪಟ್ಟಿ ಮಾಡಿದ್ದೇನೆ. ಅದು ನನಸಾಗಲು ಪ್ರಯತ್ನ ಪಡುತ್ತೇನೆ. ನನ್ನ ಕನಸುಗಳೆಲ್ಲವೂ ನನಸಾಗಲಿ ಎಂದು ಆಶೀರ್ವದಿಸಿ ಅಕ್ಕ.... ನಿಮ್ಮ ಈ ರೀತಿಯ ಮನದಂಗಳಕ್ಕೆ ಖುಷಿ ನೀಡುವ ಪತ್ರಗಳಿಗಾಗಿ ಕಾಯುತ್ತಿರುವೆ.....
 ....................................................... ಸುನೀತಾ
ಪ್ರಥಮ ಪಿಯುಸಿ
ಎಕ್ಸೆಲ್ ಪಿಯು ಕಾಲೇಜು
ಗುರುವಾಯನಕೆರೆ
ಬೆಳ್ತಂಗಡಿ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*******************************************ಅಕ್ಕನ ಪತ್ರ - 6.
              ಪ್ರೀತಿಯ ತೇಜಸ್ವಿ ಅಕ್ಕನಿಗೆ ನಿಮ್ಮ ತಂಗಿ ಮಾಡುವ ನಮಸ್ಕಾರಗಳು. 
           ನನ್ನ ಹೆಸರು ಪ್ರಿಯ, ನಾನು 10 ತರಗತಿಯಲ್ಲಿ ಓದುತ್ತಿದ್ದೇನೆ. ನಾನು ನಿಮ್ಮ ಪತ್ರವನ್ನು ಓದಿದೆ. 
    ನನಗೆ ಈ ಪತ್ರ ತುಂಬಾ ಇಷ್ಟವಾಯಿತು. ನೀವು ಇಂದಿನ ಪತ್ರದಲ್ಲಿ ತನ್ನ ಜೀವನದಲ್ಲಿ 127 ಕನಸುಗಳನ್ನು ಪಟ್ಟಿ ಮಾಡಿದ, ಹಾಗೂ 120 ಕನಸುಗಳನ್ನು ನನಸಾಗಿಸಿ ತನ್ನ ಗುರಿಯನ್ನು ತಲಪಿದ ಅಮೆರಿಕಾದ ಸಾಹಸಿಗ, ಛಲಗಾರ, ಅನ್ವೇಷಕ, ಹಾಗೂ ಬರಹಗಾರರಾದ ಜಾನ್ ಗೊಡಾರ್ಡ್ ರವರ ಜೀವನದ ಕಥೆಯನ್ನು ಪತ್ರದಲ್ಲಿ ಬರೆದಿದ್ದೀರಿ, ನನಗಂತೂ ಈ ಕಥೆ ತುಂಬಾ ಇಷ್ಟವಾಯ್ತು. ಇವರು ಹತ್ತು - ಹಲವಾರು ಕನಸುಗಳನ್ನು ಪಟ್ಟಿ ಮಾಡಿದಂತೆ ನನಗೂ ಅನೇಕ ಕನಸುಗಳಿವೆ. ನಾನು ನಮ್ಮ ಶಾಲೆಯಲ್ಲಿ ಚೆನ್ನಾಗಿ ಕಲಿತು ಒಳ್ಳೆಯ ಅಂಕಗಳನ್ನು ಗಳಿಸಿ, ನನ್ನ , ಅಮ್ಮನಿಗೆ, ಮತ್ತು ನನ್ನ ಗುರುಗಳಿಗೆ ಎಲ್ಲರಿಗೂ ಗೌರವ ತಂದು ಕೊಡಬೇಕು, ಶಿಕ್ಷಕಿಯಾಗಬೇಕು, ಚಿತ್ರ ಕಲಾವಿದೆಯಾಗಿ, ಸ್ವತಃ ನಾನೇ ಡ್ರಾಯಿಂಗ್ ಕ್ಲಾಸ್ ತೆಗೆದು ಎಲ್ಲರಿಗೂ ಚಿತ್ರಗಳನ್ನು ಕಲಿಸಿಕೊಡಬೇಕು, ಚಿತ್ರಕಲೆ , ಸಂಗೀತ, ನಾಟಕ, ಭಾಷಣ, ನೃತ್ಯ ಹೀಗೆ ಅನೇಕ ಕ್ಷೇತ್ರಗಳಲ್ಲಿ ಭಾಗವಹಿಸಿ ಸಾಧನೆ ಮಾಡಬೇಕು ಎಂಬ ಅನೇಕ ಕನಸುಗಳಿವೆ. ನಿಮ್ಮ ಈ ಪತ್ರದಲ್ಲಿ ನಾವು ಕನಸುಗಳನ್ನು ಕಾಣುವುದು ದೊಡ್ಡ ವಿಷಯವಲ್ಲ ಆದರೆ ಅದನ್ನು ನನಸು ಮಾಡುವ ದಾರಿಯನ್ನು ಹುಡುಕಬೇಕು ಎಂದು ತಿಳಿಯಿತು. ಅಷ್ಟೇ ಅಲ್ಲದೇ ನಿಮ್ಮ ಈ ಪತ್ರ ನಮ್ಮ ಎಲ್ಲಾ ಕನಸುಗಳನ್ನು ನನಸಾಗಿಸುವ ದೈರ್ಯ ಕೊಟ್ಟಿತು ಸ್ಪೂರ್ತಿ ನೀಡಿತು. ಇಷ್ಟೆಲ್ಲಾ ಒಳ್ಳೆಯ ಸಂದೇಶ ನೀಡುವ ಪತ್ರಗಳನ್ನು ಬರೆದು ಕಳಿಸುವ ನಿಮಗೆ ತುಂಬಾ ಧನ್ಯವಾದಗಳು. ನನ್ನ ಕನಸುಗಳನ್ನು ನನಸಾಗಿಸಲು ನಾನು ಒಳ್ಳೆಯ ಪ್ರಯತ್ನ ಮಾಡುತ್ತೇನೆ. ನಿಮ್ಮ ಮುಂದಿನ ಪತ್ರಕ್ಕಾಗಿ ಕಾಯುತ್ತಿರುತ್ತೇನೆ ಅಲ್ಲಿಯವರೆಗೆ ಪ್ರೀತಿಯ ತೇಜಸ್ವಿ ಅಕ್ಕನಿಗೆ ನನ್ನ ನಮನಗಳು. 
..... ವಂದನೆಗಳು ಅಕ್ಕ.....
 ................................................ ಪ್ರಿಯ 
10 ನೇ ತರಗತಿ.
ಸರಕಾರಿ ಪ್ರೌಢ ಶಾಲೆ ನಾರಾವಿ.
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
********************************************       ಪ್ರೀತಿಯ ಅಕ್ಕನಿಗೆ ಜೈಬುನೀಸಾ ಮಾಡುವ ಪ್ರೀತಿ ಪೂರ್ವಕ ನಮಸ್ಕಾರಗಳು..... ಅಕ್ಕ ನೀವು ಬರೆಯುವ ಪ್ರತಿಯೊಂದು ಪತ್ರದಲ್ಲೂ ಅರ್ಥಪೂರ್ಣವಾಗಿರುವ ಸಂದೇಶ ನನಗೆ ತುಂಬಾನೇ ಇಷ್ಟವಾಗುತ್ತದೆ. ಈ ಪತ್ರವು ಮನಸ್ಸಿಗೆ ಸಂತೋಷ ನೀಡಿತ್ತು. ನಿಮ್ಮ ಪತ್ರದಲ್ಲಿರುವ ವಿಚಾರಗಳನ್ನು ಮನೆಯವರಿಗೂ ಹೇಳುತ್ತೇನೆ. ಎಲ್ಲರಿಗೂ ಖುಷಿಯಾಗುತ್ತದೆ. ಜಾನ್ ಗೊಡಾರ್ಡ ಅವರ ಕನಸು ನನಸಾಗಿದೆ. ಹಾಗೆವೇ ನನಗೂ ಕೂಡ ತುಂಬಾ ಕನಸುಗಳಿವೆ. ಅದನ್ನು ನನಸು ಮಾಡಲು ಇಂತಹ ಅಕ್ಕನ ಪತ್ರಗಳೇ ಕಾರಣವಾಗುತ್ತದೆ. ಧನ್ಯವಾದಗಳು ಅಕ್ಕ..... ಮುಂದಿನ ಪತ್ರಕ್ಕಾಗಿ ಕಾಯುತ್ತಿರುತ್ತೇನೆ.....
 ...............................................ಜೈಬುನೀಸಾ
8 ನೆಯ ತರಗತಿ
ದ.ಕ.ಜಿ.ಪಂ.ಉ.ಹಿ .ಪ್ರಾ ಶಾಲೆ, ಗೋಳಿತ್ತಟ್ಟು ಪುತ್ತೂರು ತಾಲ್ಲೂಕು , ದಕ್ಷಿಣ ಕನ್ನಡ ಜಿಲ್ಲೆ
*********************************************ಅಕ್ಕನ ಪತ್ರ-6 
ನಮಸ್ತೆ ಅಕ್ಕ, 
  ನಾನು ನಿಮ್ಮ ಪತ್ರವನ್ನು ಓದಿದೆ ಅಕ್ಕ. ತುಂಬಾ ಖುಷಿಯಾಯಿತು. ಅಮೇರಿಕದ ಸಾಧಕ ಜಾನ್ ಗೊಡಾರ್ಡ್ ನ ಬಗ್ಗೆ ಕೇಳಿ ತುಂಬಾ ರೋಚಕ ಕಥೆ ಎಂದು ನನಗೆ ಅನಿಸಿತು. ಇವರ ತರಹನೇ ನಾನು ಕೂಡ ಹಲವಾರು ಕನಸುಗಳನ್ನು ಕಾಣುತ್ತಿದ್ದೇನೆ. ಡಾಕ್ಟರ್ ಆಗಿ ತುಂಬಾ ಜನರ ಕಾಯಿಲೆಗಳನ್ನು ವಾಸಿ ಮಾಡಬೇಕು, ಹಾಗೆಯೇ ಇನ್ನೂ ತುಂಬಾ ಜನ ಮೆಚ್ಚುವಂತಹ ಕವನಗಳನ್ನು ಬರೆಯಬೇಕು ಅಂತ. ಹೀಗೆ ನಾನು ಕನಸುಗಳನ್ನು ಕಾಣುತ್ತಾ, ಪುಸ್ತಕದಲ್ಲಿ ಬರೆದಿಡುವ ಮೂಲಕ ಒಂದೊಳ್ಳೆ ಹವ್ಯಾಸವನ್ನು ನನ್ನ ಜೀವನದಲ್ಲಿ ಅಳವಡಿಸಿಕೊಳ್ಳುತ್ತಿದ್ದೇನೆ. ಅದೇ ರೀತಿ ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದುತ್ತಾ, ನನ್ನ ಜ್ಞಾನವನ್ನು ಹೆಚ್ಚಿಸಿಕೊಳ್ಳುತ್ತಾ, ನಾನು ಕೂಡ ಮುಂದೊಂದು ದಿನ ಜಾನ್ ಗೊಡಾರ್ಡ್ ನಂತಹ ಸಾಧಕಿ ಆಗಬೇಕು ಅನ್ನುವುದೇ ನನ್ನ ಆಶಯ.
   ಧನ್ಯವಾದಗಳು ಅಕ್ಕ 
................................................. ಅನುಲಕ್ಷ್ಮಿ
10ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
******************************************ಆತ್ಮೀಯ ಅಕ್ಕರೆ ತೋರುವ ಅಕ್ಕನಿಗೆ ವೈಷ್ಣವಿ ಮಾಡುವ ನಮನಗಳು.
          ಮಕ್ಕಳ ಜಗಲಿ ಎಂಬುದು ಒಂದು ಚಿಣ್ಣರ ಲೋಕವಿದ್ದಂತೆ ಈ ಚಿಣ್ಣರ ಲೋಕಕ್ಕೆ ನೀವು ಕಳಿಸುವ ಅಕ್ಕನಪತ್ರ ಗಳು ನಮ್ಮೆಲ್ಲರ ಪಾಲಿಗೆ ಮೇಘ ಸಂದೇಶವಿದ್ದಂತೆ .
         ಅಕ್ಕಾ.. , ನೀವು ಪ್ರತೀ ಬಾರಿಯೂ ನಮಗೊಂದು ಉತ್ತಮ ಜೀವನ ಸಂದೇಶವಿರುವ ಪತ್ರಗಳನ್ನು ನಿವೇದಿಸುತ್ತೀರಿ. ಈ ಬಾರಿ 15 ವರ್ಷದ ಬಾಲಕನಿಂದಲೇ ಕನಸುಗಳನ್ನು ಕಾಣುತ್ತಾ ಅವುಗಳೆಲ್ಲವನ್ನು ನನಸಾಗಿಸಲು ಪಟ್ಟಿ ತಯಾರಿಸಿ , ಬಹುಪಾಲು ಯಶಸ್ವಿಯಾಗಿಸಿಕೊಂಡ ಶ್ರೇಷ್ಠ ಬರಹಗಾರ ಜಾನ್ ಗೋಡಾರ್ಡ್ ರವರ ಬಗ್ಗೆ ತಿಳಿಸಿದಿರಿ. ಹಾಗೆ ನಾವೂ ಸಹ ಅವರಂತೆ ಕನಸುಗಳ ಪಟ್ಟಿ ತಯಾರಿಸಿ ಪ್ರತಿದಿನ ನಮ್ಮ ಕಣ್ಣ ಮುಂದೆ ಕಾಣುವಂತೆ ಮಾಡಿ , ಛಲಬಿಡದೆ ಕನಸುಗಳನ್ನು ನನಸಾಗಿಸಿಕೊಳ್ಳೋಣ , ಎಂಬ ಸಂದೇಶ ವನ್ನು ನಿಮ್ಮ ಪತ್ರದ ಮೂಲಕ ನಮಗೆ ತಿಳಿಸಿರುವಿರಿ.
        ಇಂತಹ ಆತ್ಮವಿಶ್ವಾಸ ತುಂಬುವ ಪತ್ರ ಸಂದೇಶಗಳು ನಮ್ಮೆಲ್ಲರ ಕಲಿಕೆಯ ಬದುಕಿಗೆ ಸ್ಪೂರ್ತಿದಾಯಕ ಅಕ್ಕ .
ನಿಮ್ಮ ಮೌಲ್ಯಯುತ ಪತ್ರಕ್ಕೆ ಇದು ನನ್ನ ಪುಟ್ಟ ಉತ್ತರ .
                ಧನ್ಯವಾದಗಳು.
 .......................................... ಎನ್ ಜೆ ವೈಷ್ಣವಿ 
5 ನೇ ತರಗತಿ
ನಿಡಘಟ್ಟ ಗ್ರಾಮ ಮತ್ತು ಅಂಚೆ
ನೇತಾಜಿ ಆಂಗ್ಲ ಮಾಧ್ಯಮ ಶಾಲೆ ಕಡೂರು ಚಿಕ್ಕಮಗಳೂರು ಜಿಲ್ಲೆ.
********************************************    ನಮಸ್ತೆ ಅಕ್ಕ 
          ನಿಮ್ಮ ಪತ್ರ ಓದಿದೆ. ಓದಿ ತುಂಬಾ ಖುಷಿಯಾಯ್ತು. ನನಗೂ ಕೂಡ ಕೆಲವು ಕನಸು ಇದೆ ಸಂಗೀತ ಕಲಿಬೇಕು , ಡ್ಯಾನ್ಸ್ ಕಲಿಬೇಕು , ಡ್ರಾಯಿಂಗ್ ಕಲಿಬೇಕು , ಚೆನ್ನಾಗಿ ಓದಬೇಕು. ನೀವು ಬರೆದ ಕಥೆಯನ್ನು ಓದಿದ ನಂತರ ನನ್ನ ಕನಸು ಕೂಡ ನನಸಾಗುವುದು ಎಂಬ ಆಸೆ ಹುಟ್ಟಿತು . ಧನ್ಯವಾದಗಳು ಅಕ್ಕ
........................................................ ತ್ರಿಶಾ 
ಮೂರನೇ ತರಗತಿ 
ಗುಣಶ್ರೀ ವಿದ್ಯಾಲಯ ಸಿದ್ದಕಟ್ಟೆ 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
********************************************ನಮಸ್ತೆ ಅಕ್ಕ .........
       ಮಕ್ಕಳ ಜಗಲಿಯ ಮೂಲಕ ಅಕ್ಕನ ಪತ್ರ - 6 ಓದಿ ತುಂಬಾ ಖುಷಿ ಆಯಿತು. ಜಾನ್ ಗೊಡಾರ್ಡ್ ರನ್ನು ಪರಿಚಯಿಸಿದ್ದೀರಿ. ಮುಂದೆ ಕಾಣುವ ಕನಸುಗಳನ್ನು ಸಾಧಿಸಬೇಕೆಂದು ಹೇಳಿದ್ದೀರಿ. ಮಹಾತ್ಮರ ಸಾಧಕರ ಪುಸ್ತಕಗಳನ್ನು ಓದಿ ಎಂದು ತಿಳಿಸಿದ್ದೀರಿ. ಜ್ಞಾನದಿಂದ ಬದುಕಿಗೆ ಪ್ರೇರಣೆ ನೀಡಿದಂತಹ ಹಾಗೂ ಟಿವಿ ಮೊಬೈಲ್ ಎದುರು ತುಂಬಾ ಹೊತ್ತು ಕಳೆಯುವ ಸಮಯಕ್ಕೆ ಬೆಲೆಯೇ ಇಲ್ಲವೆಂಬ ಸತ್ಯವಾದ ಮಾತನ್ನು ಪತ್ರದ ಮೂಲಕ ತಿಳಿಸಿದ ಅಕ್ಕನಿಗೆ ತುಂಬು ಹೃದಯದ ನಮನಗಳು ..... ಇಂತಿ , ಪ್ರೀತಿಯ 
.................................................ಕಾರುಣ್ಯ ಎನ್ 
3 ನೇ ತರಗತಿ 
ದ.ಕ.ಜಿ.ಪ ಹಿರಿಯ ಪ್ರಾಥಮಿಕ ಶಾಲೆ ನೆಟ್ಲ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
****************************************Ads on article

Advertise in articles 1

advertising articles 2

Advertise under the article