ಪದಗಳ ಆಟ ಭಾವ ಚಿತ್ರ ಪಾತ್ರ ಸಂಚಿಕೆ - 10
Friday, September 17, 2021
Edit
ಪದಗಳ ಆಟ
ಭಾವಚಿತ್ರ
ಪಾತ್ರ
ಸಂಚಿಕೆ - 10
   ಆ  ತಾಯಿಗೆ 6 ಗಂಡು ಮಕ್ಕಳು. ಚಂದ್ರಮ ನಂತಹ ಮಕ್ಕಳು. 
         ಅವರಲ್ಲೊಬ್ಬ ಚಂದ್ರರಿಗೆ ಚಂದ್ರ,  ಶಶಾಂಕ ಹಿಮಾಂಶು. ಆದರೆ ಬೆಳೆಯುತ್ತಾ ಸೂರ್ಯ, ಇನ, ದಿವಸ್ಪತಿ. ಅದೇ ಬೆಳಕು,  ಪ್ರಖರತೆ. ಅನ್ಯಾಯಕ್ಕೆ ಉರಿವ,  ದಬ್ಬಾಳಿಕೆಗೆ ಸಿಡಿವ ಯೋಧನ ತೀವ್ರತೆ, ತೀಕ್ಷ್ಣತೆ. ಆ ಸೂರ್ಯನಿಗೆ ಬಾನಲ್ಲಿ ಇದ್ದರೂ ನೆಲದ್ದೇ ಚಿಂತೆ.  ನಾಗರಿಕ ಸೇವಾ ಪರೀಕ್ಷೆಯನ್ನು ಮೀರಿದ ಕರೆ ತಾಯಿಯದಾಗಿತ್ತು. ಐಸಿಎಸ್ ಪಾಸಾದ ಮೊಟ್ಟ ಮೊದಲ ಭಾರತೀಯ ಅದನ್ನೇ ತ್ಯಾಗ ಮಾಡಿದ ಮಾತೆಗಾಗಿ. ತಾಯಿಗಾಗಿ ಓದಿದ. ಮಾತೆಯ ಕನಸಿಗಾಗಿ ಹೋರಾಡಿದ. ಅಂಬೆಗಾಗಿ ಜೈಲುಸೇರಿದ. ವಿರೋಧ ಕಟ್ಟಿಕೊಂಡ. ಹಡೆದವ್ವನಿಗಾಗಿ ಹಕ್ಕಿಯಂತೆ ಹಾರಿದ. ಸಾಗರ ದಾಟಿದ. ಕೂಟ ಕಟ್ಟಿದ. ಜನನಿಗಾಗಿ ಜನ ಸೇರಿಸಿದ. ಸಮಾಜವಾದಿಯಾದ. ಆದರೂ ತನ್ನ ನೆಲದ ರಾಮಕೃಷ್ಣ ಸ್ವಾಮಿ ವಿವೇಕಾನಂದರಿಂದ ಪ್ರಭಾವಿತನಾದ. ಭಗವದ್ಗೀತೆಯ ಸತ್ವ ಹೀರಿ ಹೆಮ್ಮರವಾಗಿ ಬೆಳೆದ. 
        ಗಾಂಧಿಗಿಂತ ನಮನೀಯ
        ಯುವಕರಿಗೆ ಆದರ್ಶ
        ಗ್ರಂಥಗಳ ಓದುಗ
        ಪುಸ್ತಕಗಳ ಬರಹಗಾರ
        ಹರಿತ ಮಾತುಗಾರ
        ಭಗವದ್ಗೀತೆ ದೀಕ್ಷಿತ
        ರಾಷ್ಟ್ರೀಯತಾವಾದಿ
        ಸಮಾಜವಾದ ಹಾಗೂ ಕಮ್ಯೂನಿಸಂ         
        ನಡುವೆ
        ನಮ್ಮ ತತ್ವಜ್ಞಾನ
 ಜೈ ಹಿಂದ್, ಐಕ್ಯತೆ ಒಪ್ಪಂದ ತ್ಯಾಗ
 ನಾಣ್ಯ ಸ್ಟ್ಯಾಂಪ್ ಗಳಲ್ಲಿ ಜಂಗಮ
 ಪರಾಕ್ರಮ ದಿನ ಕೊಟ್ಟ ನೇಹಿಗ 
 ಮಹಾ ನಾಯಕ ಕಾದಂಬರಿಗೆ ನಾಯಕ
        ತಾಯಿಗಾಗಿ ಕಾದಾಡಿದ ಅಭಿಜಾತ
        ಧೈರ್ಯವನ್ನು ಕಟ್ಟಿದ 
        ದೇಶ ದೇಶ ಅಲೆದ
 ಸ್ವಾತಂತ್ರ್ಯವನ್ನು ಕೊಡಲಾಗುವುದಿಲ್ಲ
 ತೆಗೆದುಕೊಳ್ಳಬೇಕು ಸಾರಿದ
          ನಿಂತಾಗ ಗ್ರಾನೈಟ್ ಗೋಡೆಯಂತೆ
          ಇರಬೇಕು
          ಪಥಸಂಚಲನ ಮಾಡಿದರೆ ಸ್ಟೀಮ್    
          ರೋಲರ್ ನಂತೆ   ಗುಡುಗಿದ
ಮಾತೆ ಬದುಕಲು ನಾವು ಸಾಯಬೇಕು
ದಟ್ಟ, ದಿಟ್ಟ ದೇಶಭಕ್ತಿ ಹಾಗೂ ಪರಿಪೂರ್ಣ ನ್ಯಾಯ ಮತ್ತು ಮಾನವತೆಯಿಂದ ಸ್ವಾತಂತ್ರ್ಯಯೋಧರ ಸೈನ್ಯ ಕಟ್ಟಬೇಕು. ಒಂದು ಸಿದ್ಧಾಂತ ಕ್ಕೋಸ್ಕರ ಒಬ್ಬ ಸಾಯಬಹುದು , ಆದರೆ ಆ ಸಿದ್ಧಾಂತ ಅವನ ಮರಣಾನಂತರವೂ ಸಾವಿರ ಸಾವಿರ ಜನರ ಬದುಕಿನಲ್ಲಿ ಮತ್ತೆ ಅವತರಿಸುತ್ತದೆ ಅನುರಣಿಸುತ್ತದೆ ಅನೂನವಾಗಿ ಅನುಶಾಸನದಂತೆ.
          ಚರಿತ್ರೆಯ ಯಾವ ಕ್ರಾಂತಿಯು   
          ಮಾತುಕತೆಯಿಂದ ಸಾಧ್ಯವಾಗಿಲ್ಲ
ನೀವು ಇರುವುದಕ್ಕಿಂತಲೂ ಹೆಚ್ಚು ಬಲವಂತರೆಂದು ತೋರಿಸಿಕೊಳ್ಳಿ . ಅನ್ಯಾಯದೊಂದಿಗೆ ಹೊಂದಾಣಿಕೆ ಮಾಡುವುದು ರಾಜಿ ಮಾಡಿಕೊಳ್ಳುವುದು ಮಹಾಪರಾಧ. ಅಪ್ರತಿಮ ಎದೆಗಾರಿಕೆ,  ಬ್ರಿಟಿಷ್ ಸೈನ್ಯದ ಮುಂದೆ ಭಾರತೀಯ ಸೈನ್ಯದಲ್ಲಿ ಅಪಾರ ನಂಬಿಕೆ.  ಮುಂದೆ ಸ್ವಾತಂತ್ರ್ಯ ಸಂಗ್ರಾಮಕ್ಕೆ ಪ್ರೇರಕಶಕ್ತಿ.
ವಾಸ್ತವ ಎದುರಿಸಿ ವಿಘ್ನಗಳನ್ನು ಮೆಟ್ಟಿ ನಿಲ್ಲುವ ಧೈರ್ಯ ಸಾಹಸ ಎಲ್ಲರಿಗೂ ಅಗತ್ಯ. ಇಷ್ಟೆಲ್ಲಾ ಹೋರಾಟಗಳ ನಡುವೆಯೂ ಆ ನಾಯಕ ಬರೆದ ಪುಸ್ತಕಗಳು ಹಲವಾರು. ಶೀರ್ಷಿಕೆ ಕೇಳಿದರೆ ಮೈನವಿರೇಳುತ್ತದೆ.
             ಸ್ವಾತಂತ್ರ್ಯ ಸಮರ,  ಒಬ್ಬ ಭಾರತೀಯ ತೀರ್ಥಯಾತ್ರಿ,  ಪರ್ಯಾಯ ನಾಯಕತ್ವ ಮಿಲಿಗೆ ಪತ್ರಗಳು,  ತಾಯಿ ನಾಡಿಗೆ ಕರೆ,  ಪ್ರಸಿದ್ಧ ಭಾಷಣಗಳು, ದೇಶದ ಪರಿಕಲ್ಪನೆಗಳು,  ತರುಣರ ಸ್ವಪ್ನದಲ್ಲಿ, ಬರ್ಮಾದ ಜೈಲಲ್ಲಿ, ನೈಜ ಭಾರತೀಯ ಚರಿತ್ರೆ..
          ಈ ಹೊತ್ತಗೆಗಳೆಲ್ಲಾ  ಭಾರತದ ಚರಿತ್ರೆಯ ದೃಷ್ಟಿಯಿಂದ ಅಮೋಘ,  ಅಮೇಯ,  ಅಮೂಲ್ಯ ನಿಧಿ.
           ಅಬ್ಬಬ್ಬಾ!!  ಎಂಥಾ ಬುದ್ಧಿವಂತ,  ಧೈರ್ಯವಂತ, ಅಭಿಜ್ಞ ಮಗನನ್ನು ಹಡೆದಳು ಆ  ಮಹಾತಾಯಿ ಭೂತಾಯಿ.
        ಕರ್ಪೂರದಂತೆ ಬೆಳಗಿ ತಾನೇ     
        ಕರಗಿ ಹೋದನಲ್ಲ ಯಾತ್ರಿ ಆ  ಯಾತ್ರಿ 
        ದಾರಿ ನಡುವೆ ತನ್ನ ತೀರ್ಥ ಯಾತ್ರೆ ನಿಲ್ಲಿಸಿ
        ಆಕೆಯ ಚಂದ್ರಮನಂತ ಚಂದ್ರ ಇನ್ನೂ     
        ಸಾವಿರ ಸಾವಿರ ತಾರೆಗಳಲ್ಲಿ ಬೆಳಗುತ್ತಿದ್ದಾನೆ
ಸಿದ್ಧಾಂತವಾಗಿ,  ಧೈರ್ಯವಾಗಿ  ದೇಶದ ಸುಂದರ ಪರಿಕಲ್ಪನೆಗಳ ದೃಷ್ಟಾರ ಆ ಮಹಾಪ್ರವಾಹ,  ಬೆಳಕಿನ ಪ್ರವಾಹ ಅಭಿನಿವೇಶವಾಗಿ ಹರಿಯುತ್ತಿರುವುದು ಮಾನವನ ಎದೆಯಿಂದಲೆದೆಗೆ ಸತತ....
...................................................ಸುಮಾಡ್ಕರ್
ಸ್ವರೂಪ ಅಧ್ಯಯನ ಸಂಸ್ಥೆ 
ಮಂಗಳೂರು
Mob: +91 99016 38372
*****************************************