
ಅಕ್ಕನ ಪತ್ರ - 6ಕ್ಕೆ ಮಕ್ಕಳ ಉತ್ತರ (ಸಂಚಿಕೆ -3)
Saturday, September 18, 2021
Edit
ಜಗಲಿಯ ಮಕ್ಕಳಿಗೆ ಅಕ್ಕನ ಪತ್ರ - ಮಕ್ಕಳ ಜಗಲಿಯಲ್ಲೊಂದು ವಿಭಿನ್ನ ಪ್ರಯೋಗ. ಮಕ್ಕಳ ಮಾನಸಿಕ , ಶೈಕ್ಷಣಿಕ , ಬೌದ್ಧಿಕ , ಮೌಲಿಕ ವಿಚಾರಗಳಿಗೆ ಒತ್ತು ಕೊಟ್ಟು ಸೃಜನಶೀಲ ಶಿಕ್ಷಕಿ ತೇಜಸ್ವಿ ಅಂಬೆಕಲ್ಲು ಇವರು ಬರೆಯುತ್ತಿರುವ ಪತ್ರ ಮಕ್ಕಳಲ್ಲಿ ಹೊಸತನವನ್ನು ಮೂಡಿಸುತ್ತಿದೆ. ಜಗಲಿಯ ಮಕ್ಕಳು ಪತ್ರವನ್ನು ಓದಿ ಪ್ರೀತಿಯಿಂದ ಮುಗ್ಧವಾಗಿ ಉತ್ತರ ಬರೆಯುತ್ತಿದ್ದಾರೆ. ಅಕ್ಕನ ಪತ್ರ - 6 ಕ್ಕೆ ಬಹಳಷ್ಟು ವಿದ್ಯಾರ್ಥಿಗಳು ಬರೆದಿರುವ ಉತ್ತರ ಇಲ್ಲಿದೆ ........
---------------------------------------------------
ಪ್ರೀತಿಯ ಅಕ್ಕನಿಗೆ ಸಾನ್ವಿಯ ವಂದನೆಗಳು.....
ಅಕ್ಕ, ನಿಮ್ಮಿಂದಾಗಿ ನನಗೆ John Goddardನ ವಿಷಯ ತಿಳಿಯಿತು. ನನಗೂ ಇಂತಹ ಸಾಧನೆ ಮಾಡಬೇಕು ಅನಿಸುತ್ತದೆ. ನಾನು ಭಗವದ್ಗೀತೆಯ ಹದಿನೆಂಟು ಅಧ್ಯಾಯಗಳನ್ನು ಕಲಿಯುತ್ತಿದ್ದೇನೆ. ಅದನ್ನು ಯಾವುದಾದರೂ ಸ್ಪರ್ಧೆಯಲ್ಲಿ ಹೇಳಬೇಕೆಂದಿದ್ದೇನೆ. ನನ್ನ ಕನಸನ್ನು ನನಸಾಗಿ ಮಾಡಬೇಕೆಂದಿದ್ದೇನೆ. ಶಾಲೆಯ ಪಾಠಗಳನ್ನು ಆಯಾಯ ದಿನ ಓದಿ ಕಲಿತುಕೊಳ್ಳುತ್ತೇನೆ. ಪರಿಶ್ರಮಪಟ್ಟು ಈ ಕನಸುಗಳನ್ನು ನನಸು ಮಾಡಿಕೊಳ್ಳ ಬೇಕೆಂದಿದ್ದೇನೆ. ನಿಮ್ಮ ಪತ್ರ ತುಂಬಾ ಚೆನ್ನಾಗಿತ್ತು. ಧನ್ಯವಾದಗಳು
................................................ ಸಾನ್ವಿ ಸಿ ಎಸ್
ನಾಲ್ಕನೇ ತರಗತಿ
ಶ್ರೀ ಗುರುದೇವ ವಿದ್ಯಾಪೀಠ ಒಡಿಯೂರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*********************************************
ನಮಸ್ತೆ,
ನನ್ನ ಪ್ರೀತಿಯ ಅಕ್ಕನಿಗೆ ಸಾತ್ವಿಕ್ ಗಣೇಶನು ಮಾಡುವ ನಮಸ್ಕಾರಗಳು.
ಅಕ್ಕನ ಪತ್ರದಿಂದ ನಮಗೆ ಬಹಳ ಒಳ್ಳೆಯ ವಿಷಯ ತಿಳಿಯಲು ಸಹಾಯವಾಗುತ್ತದೆ.
ನಾವು ಒಂದು ಗುರಿಯನ್ನು ಇಟ್ಟರೆ ಏನು ಬೇಕಾದರೂ ಸಾಧಿಸಬಹುದು ಎಂದು ತಿಳಿಯಿತು
ನಾವು ಸುಮ್ಮನೆ ಸಮಯ ಹಾಳು ಮಾಡದೇ ಏನಾದರೂ ಕೆಲಸ ಮಾಡುತ್ತಿರಬೇಕು. ಗೊತ್ತಿಲ್ಲದ ವಿಷಯವನ್ನು ಓದಿ, ಹಿರಿಯರಿಂದ ಕೇಳಿ ತಿಳಿಯಬೇಕು. ಹಾಗೆಯೇ ನಾನೂ ಕೂಡ ಕನಸು ಕಾಣುತ್ತೇನೆ. ಚೆನ್ನಾಗಿ ಕಲಿತು ನಮ್ಮ ದೇಶಕ್ಕಾಗಿ ಒಳ್ಳೆಯ ಸೇವೆಯನ್ನು ಮಾಡಬೇಕು. ಚೆನ್ನಾಗಿ ಚಿತ್ರಗಳನ್ನು ಕಲಿತು ಮುಂದೆ ಒಂದು ದಿನ ಒಳ್ಳೆಯ ಚಿತ್ರಕಲಾಗಾರನಾಗಬೇಕು. ಚೆಂಡೇಗಾರನಾಗಬೇಕು, ಭಾಗವತಿಕೆ ಹಾಡಬೇಕು. ಕಥೆ, ಪದ್ಯಗಳನ್ನು ಬರೆಯಬೇಕು ಎಂದು. ಇದನ್ನು ಸಾಧಿಸಬೇಕಾದರೆ
ನಾವು ಪ್ರಯತ್ನಪಟ್ಟು ಕಲಿಯಬೇಕು.
ಧನ್ಯವಾದಗಳು ಅಕ್ಕಾ....
......................................ಸಾತ್ವಿಕ್ ಗಣೇಶ್
7ನೇ ತರಗತಿ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಜಿರೆ
ಬೆಳ್ತಂಗಡಿ ತಾಲೂಕು. ದಕ್ಷಿಣ ಕನ್ನಡ ಜಿಲ್ಲೆ
*******************************************
ನಮಸ್ತೆ ... ನಾನು ನಿನಾದ್ ಕೈರಂಗಳ್
ಅಕ್ಕ ನಿಮ್ಮ ಪತ್ರ ಅಮ್ಮನ ಸಹಾಯದಿಂದ ಓದಿದೆ... ನಿಮ್ಮ ಪತ್ರ ತುಂಬಾ ಚೆನ್ನಾಗಿತ್ತು.... ಜಾನ್ ಗೊಡಾರ್ಡ್ ಅವರ ಹಾಗೆ ನಾನೂ ತುಂಬಾ ಕನಸನ್ನು ಕಂಡಿದ್ದೇನೆ.... ಕುದುರೆ ಸವಾರಿ ಮಾಡುವುದು , ಸೈಂಟಿಸ್ಟ್ ಆಗಿ ಬೇರೆ ಬೇರೆ ಎಕ್ಸ್ಪರಿಮೆಂಟ್ ಮಾಡುವುದು , ಬೇರೆ ಬೇರೆ ಪ್ರದೇಶಕ್ಕೆ ಪ್ರವಾಸ ಹೋಗಿ ಅಲ್ಲಿ ಅಧ್ಯಯನ ಮಾಡುವುದು...
ರೋಬೋಟ್ ಮಾಡುವುದು... ಸಂಶೋಧನೆ ಮಾಡುವುದು... ಇವೆಲ್ಲವೂ ನನ್ನ ಕನಸುಗಳು... ಇವೆಲ್ಲದರ ಬಗ್ಗೆ ನಾನು ಪ್ರತೀ ದಿನ ಯೋಚಿಸುತ್ತೇನೆ... ಅಪ್ಪ ಅಮ್ಮನೊಂದಿಗೆ ಚರ್ಚಿಸುತ್ತೇನೆ... ಆಗ ನನಗೆ ತುಂಬಾ ಆನಂದವಾಗುತ್ತದೆ... ಒಂದು ದಿನ ಅಪ್ಪನ ಶಾಲೆಯಲ್ಲಿರುವ ಮೂರ್ತಿ ಸರ್ ನಲ್ಲಿ ಕೂಡಾ ವಿಜ್ಞಾನದ ಸಂದೇಹಗಳನ್ನು ಚರ್ಚಿಸಿದ್ದೇನೆ. ಸೈಂಟಿಸ್ಟ್ ಆಗಲು.... ಅದರ ಬಗ್ಗೆ ತಿಳಿಯಲು ನಾನು ಅಪ್ಪನತ್ರ ವಿಜ್ಞಾನದ ಬಗ್ಗೆ ಪುಸ್ತಕ ಇದ್ರೆ ತನ್ನಿ ಅಂತ ಹೇಳುತ್ತಿದ್ದೇನೆ.... ಬೇರೆ ಬೇರೆ ಸೈಂಟಿಸ್ಟ್ ಅವರ ಬಗ್ಗೆ ಓದಲು ತುಂಬಾ ಆಸಕ್ತಿ ನನಗೆ ..... ನಿಮ್ಮ ಪತ್ರ ಓದಿ ನನಗೆ ತುಂಬಾ ಖುಷಿಯಾಯಿತು... ನನ್ನ ಕನಸುಗಳ ಬಗ್ಗೆ ಇಲ್ಲಿ ತಿಳಿಸಿದ್ದೇನೆ ಅಕ್ಕಾ.... ನಿಮ್ಮ ಇನ್ನೊಂದು ಪತ್ರಕ್ಕೆ ಕಾಯುತ್ತಿದ್ದೇನೆ. ವಂದನೆಗಳು
......................................... ನಿನಾದ್ ಕೈರಂಗಳ್
4 ನೇ ತರಗತಿ
ಶ್ರೀ ರಾಮ ವಿದ್ಯಾಕೇಂದ್ರ ಕಲ್ಲಡ್ಕ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
********************************************
ಪ್ರೀತಿಯ ಅಕ್ಕ ನಾನು ಸಾನ್ವಿ ಶೆಟ್ಟಿ , ನಿಮಗೆ ನನ್ನ ನಮಸ್ಕಾರಗಳು....... ನೀವು ಬರೆದ ಪತ್ರ ಓದಿದೆ. ನನಗೆ ತುಂಬಾನೇ ಇಷ್ಟವಾಯಿತು. ಆ ಬಾಲಕನ ತರಹ ನನಗೂ ಕೆಲವು ಕನಸುಗಳಿವೆ. ಕೆಲವೊಂದು ಅಮ್ಮನ ಮುಂದೆ ಹೇಳಿಕೊಂಡಿದ್ದೇನೆ. ನನಗೆ ತುಂಬಾ
ಓದಬೇಕು , ಒಳ್ಳೆಯ ಕಲಾವಿದೆ ಆಗಬೇಕು , ಬಂಜಿ ಜಂಪಿಂಗ್ ಮಾಡಬೇಕು , ವಿಮಾನದಲ್ಲಿ ಹಾರಬೇಕು , ಮಿಲಿಟರಿ ಸೇರಿ ದೇಶಸೇವೆ ಮಾಡಬೇಕು....... ಎಷ್ಟೆಲ್ಲಾ ಕನಸುಗಳಿವೆ... ಇನ್ನು ಮುಂದೆ ನಾನು ಕೂಡ ಪುಸ್ತಕದಲ್ಲಿ ಬರೆದಿಟ್ಟು ದಿನಾ ಕಾಣುವ ಹಾಗೆ ಇಡುತ್ತೇನೆ. ಧನ್ಯವಾದಗಳು ಅಕ್ಕ .....
................................................. ಸಾನ್ವಿ ಶೆಟ್ಟಿ
8 ನೇ ತರಗತಿ
ಓಂ ಜನಹಿತಾಯ ಶಾಲೆ
ಗುಡ್ಡೆಯಂಗಡಿ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
********************************************
ಜೈ ಶ್ರೀ ರಾಮ್
ನಮಸ್ತೆ ಅಕ್ಕ...
ನನಗೂ ಕೂಡ ಕನಸುಗಳಿವೆ. ಉತ್ತಮ ಶಿಕ್ಷಕಿಯಾಗಬೇಕು, ಉತ್ತಮ ಗಾಯಕಿ ಯಾಗಬೇಕು, ಉತ್ತಮ ನೃತ್ಯ ಪಟುವಾಗಬೇಕು, ವಾಹನ ಚಾಲಕಿಯಾಗಬೇಕು, ಉತ್ತಮ ಲೇಖಕಿಯಾಗಬೇಕು, ಒಳ್ಳೆಯ ಸಮಾಜ ಸೇವಕಿಯಾಗಬೇಕು, ನನ್ನಿಂದ ಯಾರಿಗೂ ನೋವಾಗಬಾರದು, ಚೆನ್ನಾಗಿ ಅಡುಗೆ ಮಾಡುವುದನ್ನು ಕಲಿಯಬೇಕು..... ಇನ್ನೂ ತುಂಬಾ ಕನಸುಗಳಿವೆ. ನನ್ನ ಕನಸುಗಳನ್ನು ನನಸು ಮಾಡಿಕೊಳ್ಳುವಲ್ಲಿ ನಾನು ಸದಾ ಪ್ರಯತ್ನಿಸುತ್ತೇನೆ. ನಿಮ್ಮ ಆಶೀರ್ವಾದ ಸದಾ ನನ್ನ ಮೇಲಿರಲಿ.
5ನೇ ಭರತ ತರಗತಿ
ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ,
ಹನುಮಾನ್ ನಗರ ಕಲ್ಲಡ್ಕ.
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
******************************************
ಅಕ್ಕನ ಪತ್ರ ---- 6
ಪ್ರೀತಿಯ ಅಕ್ಕ, ತಾವು ಹೇಳಿದ ಜಾನ್ ಗೊಡಾರ್ಡ್ ಅವರ ಜೀವನಗಾಥೆ ಕೇಳಿ ಮೈರೋಮಾಂಚನವಾಯಿತು.... ಹೀಗೂ ನಮ್ಮ ಜೀವನದ ದಿಕ್ಕನ್ನು ಬದಲಿಸಬಹುದೆಂದು ನಿಮ್ಮ ಕಥೆಯ ಮೂಲಕ ತಿಳಿಯಿತು. ಧನ್ಯವಾದಗಳು ಅಕ್ಕ.... ಜೀವನದಲ್ಲಿ ಏನಾದರೂ ಸಾಧಿಸಬೇಕು ಎನ್ನುವವರಿಗೆಲ್ಲ ನಿಮ್ಮ ಮಾತುಗಳು ನಿಜಕ್ಕೂ ಸ್ಪೂರ್ತಿದಾಯಕ.... ನನ್ನದೂ ಒಂದು ಪುಟ್ಟ ಡೈರಿ ಇದೆ.... ನಿಮ್ಮಂತೆ ನಾನೂ ಪಟ್ಟಿಯೊಂದನ್ನು ಬರೆದಿಡಬಹುದೇನೋ....ಪ್ರಯತ್ನಿಸುವೆ.... ನಿಮ್ಮ ಮಾತುಗಳನ್ನು ಸದಾ ನೆನೆಪಿನಲ್ಲಿಡುವೆ...
....................................................ಲಹರಿ ಜಿ.ಕೆ.
7 ನೇ ತರಗತಿ
ತುಂಬೆ ಸೆಂಟ್ರಲ್ ಸ್ಕೂಲ್ , ತುಂಬೆ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*********************************************
ನಮಸ್ತೆ ನಾನು ಧೀರಜ್. ಕೆ.ಆರ್
ಅಕ್ಕನ ಪತ್ರ ಓದಿ ಸಂತೋಷವಾಯಿತು. ಹೌದು ನಾವು ಜೀವನದಲ್ಲಿ ಏನಾದರೂ ಗುರಿ ಇಟ್ಟುಕೊಂಡೆ ಮುಂದೆ ಸಾಗಬೇಕು. ಡಾಕ್ಟರ್ ಎ ಪಿ ಜೆ ಅಬ್ದುಲ್ ಕಲಾಂ ಹೇಳಿದಾಗೆ ಜೀವನದಲ್ಲಿ ಕನಸು ಕಾಣುವುದನ್ನು ಕಲಿಯಬೇಕು. ಆ ಕನಸು ಈಡೇರುವಂತೆ ಶ್ರಮ ವಹಿಸುವುದು. ಎಲ್ಲಾ ಕ್ಷೇತ್ರ ದಲ್ಲೂ ನಮ್ಮನ್ನು ನಾವು ತೊಡಗಿಸಿಕೊಳ್ಳುವುದು. ನನಗೂ ಏನೇನೊ ಆಸೆ ಇದೆ. ದೇಶ ಸುತ್ತಿನೋಡು ಕೋಶ ಓದಿ ನೋಡು ಅನ್ನೋ ಗಾದೆ ಮಾತಿನಂತೆ ಮನದೊಳಗೆ ಪುಟ್ಟ ಆಸೆ.120 ಗುರಿಗಳನ್ನು ತಲುಪಿದ ಛಲಗಾರ,ಸಾಹಸಿ ಜಾನ್ ಗೋಡಾರ್ಡ್ ನಿಜಕ್ಕೂ ಒಬ್ಬ ಅದ್ಭುತ ಸಾಧಕ. ನಮ್ಮಂತ ಎಳೆಯ ಓದುಗರಿಗೆ ಮಾದರಿ. ಹೀಗೆ ಒಳ್ಳೊಳ್ಳೆ ಸಾಧಕರ ಕಥೆ ಹೇಳಿ ಅಂತ ಅಕ್ಕನಲ್ಲಿ ಕೇಳಿಕೊಳ್ಳುತ್ತಾ, ಮುಂದಿನ ಪತ್ರಕ್ಕೆ ಕಾಯುತ್ತೆನೆ. ಧನ್ಯವಾದಗಳು
......................................... ಧೀರಜ್. ಕೆ.ಆರ್
9ನೇ ತರಗತಿ
ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ
ಪ್ರೌಢ ಶಾಲೆ , ರಾಮಕುಂಜ
ಕಡಬ ತಾಲ್ಲೂಕು , ದಕ್ಷಿಣ ಕನ್ನಡ ಜಿಲ್ಲೆ
**********************************************