-->
ಜೀವನ ಸಂಭ್ರಮ ಸಂಚಿಕೆ - 4

ಜೀವನ ಸಂಭ್ರಮ ಸಂಚಿಕೆ - 4

    
            ಸರಳ ಜೀವನ - ಸಂತೃಪ್ತ ಜೀವನ
          -----------------------------------
       ಮಕ್ಕಳೇ, ಈ ಕೆಳಗಿನ ಘಟನೆಯನ್ನು ಓದಿ. ಒಂದು ಊರು, ಅಲ್ಲಿ ರಾಮು ಎನ್ನುವವನು ಒಬ್ಬ  ಶ್ರೀಮಂತ ಇದ್ದನು. ಆತನ ವ್ಯಾಪಾರ-ವಹಿವಾಟು ಹೆಚ್ಚಿತ್ತು. ಸಾಕಷ್ಟು ಜಮೀನು ಹೊಂದಿದ್ದ. ಸಾಕಷ್ಟು ಆಳು ಕಾಳು ತುಂಬಿ ವೈಭವದ ಜೀವನ ನಡೆಸುತ್ತಿದ್ದನು. ಆತನಿಗೆ ಏಕೈಕ ಪುತ್ರ ಶಿವಣ್ಣ. ಆತನಿಗೆ ಒಳ್ಳೆಯ ಶಿಕ್ಷಣ ಕೊಡಿಸಬೇಕು ಎಂಬ ಆಸೆಯಿಂದ ನಗರದಲ್ಲಿ ಒಂದು ಪ್ರತ್ಯೇಕ ಮನೆ ಮಾಡಿಕೊಡಲಾಗಿತ್ತು. ಜೊತೆಗೆ ಒಂದು ಹೋಟೆಲನ್ನು ಗೊತ್ತು ಮಾಡಿಕೊಟ್ಟಿದ್ದನು. ವಿದ್ಯಾರ್ಥಿ ನಿಲಯ (ಹಾಸ್ಟೆಲ್ ) ಸೌಕರ್ಯ ಇದ್ದರೂ ತನ್ನ ಸಿರಿವಂತಿಕೆ ಹಾಸ್ಟೆಲ್ಗೆ ಸೇರಿಸಲು ಅಡ್ಡಿ ಮಾಡಿತ್ತು. ಅಪ್ಪ ಮತ್ತು ಮಗನಿಗೆ ಸಂತೋಷವುಂಟು ಮಾಡುತ್ತಿದ್ದದ್ದು ದುಬಾರಿ ವಸ್ತುಗಳಲ್ಲೆ. ಅವರು ಸ್ನೇಹ ಮಾಡುತ್ತಿದ್ದದ್ದು ಅವರ ಶ್ರೀಮಂತಿಕೆಗೆ ಸರಿಹೊಂದುವವರೊಂದಿಗೆ ಮಾತ್ರ. ಹೀಗೆ ಜೀವನ ಆಡಂಬರದಿಂದ ನಡೆಯುತ್ತಿತ್ತು. ಒಮ್ಮೆ ಇದ್ದಕ್ಕಿದ್ದಂತೆ ಬರ ಬಂದಿತ್ತು. ಎಲ್ಲಾ ಕಡೆ ಆಹಾರವಿಲ್ಲದೆ ಆಹಾಕಾರವುಂಟಾಯಿತು. ಆದರೆ ರಾಮನಿಗೆ ಮನೆಯಲ್ಲಿ ಸಾಕಷ್ಟು ಧಾನ್ಯಸಂಗ್ರಹ ಇದ್ದುದರಿಂದ ಇವರ ಕುಟುಂಬದ ಜೀವನೋಪಾಯಕ್ಕೆ ತೊಂದರೆಯಾಗಲಿಲ್ಲ.  ಆದರೆ ಬರದಿಂದಾಗಿ ವ್ಯಾಪಾರ-ವಹಿವಾಟು ಕುಂಠಿತವಾಗಿ ಆದಾಯ ಇಲ್ಲದಂತಾಯಿತು. ರಾಮನಿಗೆ ಊರಿನಲ್ಲಿ ಕಷ್ಟ , ನೋವು  ಮತ್ತು ಸಂಕಟ ಹಂಚಿಕೊಳ್ಳಲು ಸ್ನೇಹಿತರಿರಲಿಲ್ಲ. ಸಂತೋಷಕ್ಕೆ ಕಾರಣವಾದ ದುಬಾರಿ ವಸ್ತು ಖರೀದಿಸಲು ಆದಾಯ ಇಲ್ಲ. ಮಗನಿಗೆ ಹಣ ಕಳುಹಿಸಲು ತೊಂದರೆಯಾಗಿತ್ತು. ತನ್ನ ನೋವನ್ನು ಹಂಚಿಕೊಳ್ಳಲು ಯಾರೂ ಇಲ್ಲದಿದ್ದುದರಿಂದ, ಏಕಾಂಗಿಯಾಗಿ ಕೊರಗಿ ಕೊರಗಿ ಮಾನಸಿಕ ಅಘಾತವಾಗಿ ಮನೋರೋಗಿಯಾದನು. ಶಿವಣ್ಣ ವೈಭವದ ಜೀವನಕ್ಕೆ ಹೊಂದಿಕೊಂಡಿದ್ದ ಆದರೆ ತಂದೆಯಿಂದ ಹಣ ಬಾರದೆ ಹೋದಾಗ , ವೈಭೋಗದ ಜೀವನಕ್ಕಾಗಿ ಕಳ್ಳತನದಂತಹ ಕೆಟ್ಟ ಮಾರ್ಗ ಹಿಡಿದನು. ನಂತರ ಪೊಲೀಸರಿಗೆ ಸಿಕ್ಕಿ ಜೈಲು ಸೇರಿದ. ಶಿವಣ್ಣ ತನ್ನ ಹೆಸರನ್ನು ಕೆಡಿಸಿಕೊಂಡಿದ್ದಲ್ಲದೆ, ಸ್ನೇಹಿತರಿಂದಲೂ ದೂರವಾದ. ಜೈಲಿನಲ್ಲಿ ಇತರ ಕೈದಿಗಳಿಗೆ ಹೊಂದಿಕೊಳ್ಳಲಾಗದೆ , ತನ್ನ ಸ್ಥಿತಿ, ಊರಿನ ಸ್ಥಿತಿ ನೆನೆದು ಜೀವನವೇ ಬೇಡ ಎನ್ನುವ ಸ್ಥಿತಿಗೆ ಬಂದ.
               ಈ ಘಟನೆ ಓದಿದ ಮೇಲೆ ವೈಭವದ ಜೀವನದಿಂದಾಗುವ ನಷ್ಟ ಏನು.....? ವೈಭವದ ಜೀವನಕ್ಕಾಗಿ ಪ್ರಕೃತಿಯ ನಾಶ ದಿನಾ ನಡೆಯುತ್ತಿದೆ. ಈ ನಿಸರ್ಗವನ್ನು ನಾಳಿನ ಪೀಳಿಗೆಗೆ ಉಳಿಸುವ ಯಾವುದೇ ಆಲೋಚನೆಗಳಿಲ್ಲ. ಆದರೆ  ಪ್ರಕೃತಿ ತನ್ನ ಸಮತೋಲನ ಕಾಪಾಡಿಕೊಳ್ಳಲು ಅತಿವೃಷ್ಟಿ- ಅನಾವೃಷ್ಟಿ ,  ಪ್ರವಾಹದಂತಹ ಪ್ರಾಕೃತಿಕ ವಿಕೋಪಗಳನ್ನು   ಹಾಗೂ  ಕೋವಿಡ್ ನಂತಹ ಹಲವಾರು  ರೋಗ ರುಜಿನಗಳನ್ನು ಹರಡುತ್ತದೆ.  ದುಬಾರಿ ವಸ್ತುಗಳ ನಿರ್ವಹಣೆಗೆ ಕಾಲ ಮತ್ತು ಹಣ ವ್ಯರ್ಥವಾಗುತ್ತದೆ. ಇದರಿಂದ ಜೀವನದ ಗುರಿತಲುಪಲು ಕಷ್ಟವಾಗುತ್ತದೆ. ಜ್ಞಾನ ಸಂಪಾದನೆಗೆ ಸಮಯ ದೊರಕದಂತೆ ಆಗುತ್ತದೆ. ಹಣ ಉಳಿತಾಯ ವಿಲ್ಲದೆ ಮುಂದೆ ಕಷ್ಟಕಾಲಕ್ಕೆ ತೊಂದರೆಯಾಗುತ್ತದೆ. ಹಾಗಾದರೆ ಯಾವ ರೀತಿಯ ಜೀವನ ಉತ್ತಮ......?
 ಸರಳ ಜೀವನ :
ಸರಳ ಜೀವನ ವೆಂದರೆ ಅಗತ್ಯ ವಸ್ತುಗಳಾದ ಊಟ , ವಸತಿ , ವಸ್ತ್ರ ಹಾಗೂ ಜೀವನ ಪ್ರೀತಿ ಮತ್ತು ಸಂತೋಷಕ್ಕೆ ಆದ್ಯತೆ ನೀಡಬೇಕು. ನಮ್ಮ ಆಸೆಗಳಿಗೆ ಮಿತಿ ಹಾಕಿಕೊಂಡು ಬದುಕೋದು. ಸರಳ ಜೀವನ ನಡೆಸುವವರಿಗೆ ಗೆಳೆಯರು ಹೆಚ್ಚು. ಅವರು ಸಣ್ಣ ಸಣ್ಣ ಸಂಗತಿ, ವಸ್ತುಗಳಿಂದ ಮತ್ತು ಪ್ರಕೃತಿಯಿಂದ ಸಂತೋಷ ಪಡುತ್ತಾರೆ.  ಇರುವುದರಲ್ಲಿಯೇ  ಸುಂದರ ಜೀವನ ನಡೆಸುತ್ತಾರೆ. ಈ ರೀತಿ ಜೀವನದಿಂದಾಗಿ ಪರಿಸರದ ಮೇಲೆ ಯಾವುದೇ ಹಾನಿಯಾಗದು.  ಪ್ರಾಕೃತಿಕ ಸಂಪನ್ಮೂಲಗಳನ್ನು ಮುಂದಿನ ತಲೆಮಾರಿಗೆ ಉಳಿಸಬಹುದು. ಸರಳವಾಗಿ ಜೀವಿಸುವವರು ಎಲ್ಲಿಯಾದರೂ, ಹೇಗಾದರೂ , ಯಾವುದೇ ಸ್ಥಳದಲ್ಲಿಯಾದರೂ , ಎಂತಹ ಸ್ಥಿತಿಯಲ್ಲಿಯೂ ಸಂತೋಷದ ಜೀವನ ನಡೆಸಲು ಸಾಧ್ಯವಾಗುತ್ತದೆ. ಮುಂದೆ ಬರಬಹುದಾದ ಕಷ್ಟಕಾಲಕ್ಕೆ ಹಣ ಉಳಿತಾಯವಾಗುತ್ತದೆ. ಸರಳ ಜೀವನ ನಡೆಸುವವರಿಗೆ ಸಮಯ ಹೆಚ್ಚಾಗಿ ಸಿಗುವುದರಿಂದ ಯಶಸ್ಸಿನ ಗುರಿ ತಲುಪಲು , ಜ್ಞಾನ ಸಂಪಾದಿಸಲು ಸಾಧ್ಯವಾಗುತ್ತದೆ. ಈಗ ಅರ್ಥವಾಯಿತೆ.....?,  ಸಾಧಕರು ಏಕೆ ಸರಳ ಜೀವನ ನಡೆಸುತ್ತಾರೆ ಎಂದು. ಇವರಿಗೆ ನಿರಾಸೆಯಾಗುವ ಸಂದರ್ಭ ತೀರಾ ಕಡಿಮೆ.  ಅಗತ್ಯಕ್ಕಿಂತ ಜಾಸ್ತಿ ಬಾಚಿಕೊಳ್ಳದೇ ಇರುವುದರಿಂದ  ಅಗತ್ಯವಿರುವವರಿಗೂ ದೊರಕುತ್ತದೆ. ಇದರಿಂದ ಸಮಾಜದಲ್ಲಿ ಬೆಲೆ ಏರಿಕೆಯ ಸಮಸ್ಯೆ  ಕಡಿಮೆಯಾಗುತ್ತದೆ. ಸರಳ ಜೀವನ ಸಂತೃಪ್ತವಾಗಿರುತ್ತದೆ.  ಚಿನ್ನ , ಬೆಳ್ಳಿ , ವಜ್ರ ವೈಡೂರ್ಯಕ್ಕಿಂತ ಹೆಚ್ಚಿನ ಬೆಲೆಬಾಳುವ ಸಂತೃಪ್ತ ಮನಸ್ಸನ್ನು ಹೊಂದುವುದರಿಂದ ಸುಖಿಗಳಾಗುತ್ತೇವೆ. ಮಕ್ಕಳೇ ಚಿಂತಿಸಿ ಆಯ್ಕೆ ನಮ್ಮದು. ಸರಿಯಾದ ಆಯ್ಕೆ ನಮ್ಮ ಜೀವನಕ್ಕೆ ಸಂತೋಷ ನೀಡುವಂತಿರಬೇಕು  ಸಂತೃಪ್ತಿ ನೀಡುವಂತಿರಬೇಕು.
.............................................ಎಂ.ಪಿ. ಜ್ಞಾನೇಶ್ 
ಕ್ಷೇತ್ರ ಶಿಕ್ಷಣಾಧಿಕಾರಿ
ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
********************************************


Ads on article

Advertise in articles 1

advertising articles 2

Advertise under the article