-->
ಜಗಲಿಯ ಮಕ್ಕಳ ಮನದಾಳದ ಮಾತುಗಳು (ಸಂಚಿಕೆ-3)

ಜಗಲಿಯ ಮಕ್ಕಳ ಮನದಾಳದ ಮಾತುಗಳು (ಸಂಚಿಕೆ-3)

ಜಗಲಿಯ ಮಕ್ಕಳ 
ಮನದಾಳದ ಮಾತುಗಳು
ಸಂಚಿಕೆ -3

 

     ನನ್ನ ಪಾಲಿಗೆ ಬೆಳಕು ನೀಡಿರುವಂತಹ ಗುರುಗಳಿಗೆ ಹಾಗೂ ಗುರುಗಳಿಗೆ ಸಮಾನವಾಗಿರುವಂತಹ ತಂದೆ-ತಾಯಿಯರಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು......ಪ್ರೀಕ್ಷಿತ
       ಆದರ್ಶ ಶಿಕ್ಷಕರು ಶಾಲಾ ಮಕ್ಕಳನ್ನು ತಮ್ಮ ಮನೆ ಮಕ್ಕಳಂತೆ ನೋಡಿಕೊಳ್ಳುತ್ತಾರೆ. ನಮ್ಮ ಶಾಲೆಯ ಶಿಕ್ಷಕರು ನಮ್ಮನ್ನೆಲ್ಲಾ ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಾರೆ.. ನಮಗೆ ಹುಷಾರು ಇಲ್ಲದಾಗ ನಮ್ಮನ್ನು ಆರೈಕೆ ಮಾಡುತ್ತಾರೆ. ಔಷಧಿ ಕೊಟ್ಟು ಧೈರ್ಯದ ಮಾತು ಹೇಳುತ್ತಾರೆ. ನನಗೆ ನಮ್ಮ ಶಾಲೆಯ ಎಲ್ಲಾ ಶಿಕ್ಷಕರು ದೇವರು ಇದ್ದ ಹಾಗೆ.. ಅವರನ್ನು ಮರೆಯಲು ಸಾಧ್ಯವಿಲ್ಲ... ನಮಗೆ ಪಾಠಗಳು ಅರ್ಥವಾಗದಿದ್ದಾಗ ಪುನ: ಪಾಠಮಾಡಿ ಅರ್ಥ ಮಾಡಿಸುತ್ತಾರೆ... ಅವರ ಹುಟ್ಟುಹಬ್ಬ ಇದ್ದಾಗ ಅಥವಾ ಮನೆಯಲ್ಲಿ ಇನ್ನಿತರ ಕಾರ್ಯಕ್ರಮಗಳು ನಡೆದಾಗ ಶಾಲೆಯ ಮಕ್ಕಳಿಗೆ ಸಿಹಿ ಹಂಚುತ್ತಾರೆ.. ನಮಗೆ ಶಾಲೆಯಲ್ಲಿ ಬರೀ ಪಾಠವೇ ಮಾಡುವುದಿಲ್ಲ. ಪಾಠದ ಜೊತೆಗೆ ಆಟವು ಕಲಿಸುತ್ತಾರೆ.. ನನಗೆ ಒಂದರಿಂದ ಹತ್ತನೇ ತರಗತಿವರೆಗೆ ವಿದ್ಯೆ ಬುದ್ಧಿ ಕಲಿಸಿದ ಶಿಕ್ಷಕರು ನನ್ನ ಮನದಾಳದಲ್ಲಿ ಇದ್ದಾರೆ. ನೀವು ಇಲ್ಲದಿದ್ದರೆ ನಾವು ಹೇಗೆ ಇರುತ್ತಿದ್ದೆವು ತಿಳಿದಿಲ್ಲ. ನನಗೆ ಮಾರ್ಗದರ್ಶನ ನೀಡಿದ್ದಕ್ಕಾಗಿ ನನಗೆ ಸ್ಪೂರ್ತಿ ತುಂಬಿದಕ್ಕಾಗಿ ಮತ್ತು ಇಂದು ನಾನು ಹೇಗಿದ್ದೇನೆ ಎಂದು ತೋರಿಸಿದ್ದಕ್ಕಾಗಿ ನಿಮಗೆ ಧನ್ಯವಾದಗಳು ಶಿಕ್ಷಕರೇ.. ಕೊನೆಯದಾಗಿ ಗುರುವೆಂಬ ರೂಪ ನನ್ನ ಬಾಳಿನ ಅಂಧಕಾರವನ್ನು ಹೋಗಲಾಡಿಸಿ ಜ್ಞಾನ ಜ್ಯೋತಿಯನ್ನು ಬೆಳಗಿಸಿದ ನನ್ನೆಲ್ಲಾ ಗುರುವೃಂದಕ್ಕೆ ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು.
.........................................................ಪ್ರೀಕ್ಷಿತ
ತರಗತಿ : 10ನೇ
ಶಾಲೆ : ಸರಕಾರಿ ಪ್ರೌಢಶಾಲೆ ಪಂಜಿಕಲ್ಲು
ತಾಲೂಕು : ಬಂಟ್ವಾಳ
ಜಿಲ್ಲೆ : ದಕ್ಷಿಣ ಕನ್ನಡ
*********************************************

ನನ್ನ ಮರೆಯಲಾಗದ ಮತ್ತು ಮೆಚ್ಚಿನ ಶಿಕ್ಷಕಿ - ಗಂಗಮ್ಮ ಮಾತಾಜಿ - ಸಾತ್ವಿಕ್ ವಿ ನಾಯಕ್ ಅಜೇರು
         ನನ್ನ ಮೊದಲ ಶಾಲೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆಜೇರು . ಮೊದಲ ಬಾರಿ ಶಾಲೆಗೆ ಸೇರಿದಾಗ ನನ್ನನ್ನು ತಿದ್ದಿ ತೀಡಿದವರು ಭಾಸ್ಕರ ಅಡ್ವಾಳ ಶ್ರೀಮಾನ್ , ಸೀತಾಲಕ್ಷ್ಮಿ ಮಾತಾಜಿ , ಸುರೇಶ್ ಶ್ರೀಮಾನ್ . ಮೂರನೆಯ ತರಗತಿಯವರೆಗೆ ನನ್ನ ತಪ್ಪುಗಳನ್ನು ತಿದ್ದಿ ಬುದ್ಧಿ ಹೇಳಿದ ಇವರು ಸದಾ ನನ್ನ ನೆನಪಿನಲ್ಲಿರುತ್ತಾರೆ.
        ನಾನು ೪ನೇ ತರಗತಿಗೆ ಶ್ರೀದೇವಿ ಪ್ರಾಥಮಿಕ ಶಾಲೆ ದೇವಿನಗರಕ್ಕೆ ಸೇರಿದಾಗ ನನಗೇನೋ ಒಂದು ಅಳುಕಿನ ಭಾವ. ಹೊಸ ಶಾಲೆ , ಹೊಸ ಸಹಪಾಠಿಗಳು ಹೊಸ ಶಿಕ್ಷಕರು. ಆಗ ನನ್ನ ಬೆನ್ನು ತಟ್ಟಿದವರು ತರಗತಿ ಶಿಕ್ಷಕಿಯಾಗಿದ್ದ ಅಮೃತ ಮಾತಾಜಿ , ಪ್ರಸನ್ನ ಶ್ರೀಮಾನ್ , ಲೋಕೇಶ್ ಶ್ರೀಮಾನ್ , ಸವಿತ ಮಾತಾಜಿ , ಶ್ವೇತಾ ಮಾತಾಜಿ , ಮಲ್ಲಿಕಾ ಮಾತಾಜಿ . ಹೀಗೆ ನಾಲ್ಕನೆಯ ತರಗತಿಯಿಂದ ಏಳನೇ ತರಗತಿಯವರೆಗೆ ಮಾರ್ಗದರ್ಶನ ನೀಡಿದ ಇವರನ್ನು ಮರೆಯಲಸಾಧ್ಯ. 
        ಇನ್ನು ಪ್ರೌಢಶಾಲೆ ವಿದ್ಯಾರ್ಥಿಯ ಜೀವನದ ಪ್ರಮುಖ ಹಂತಗಳಲ್ಲೊಂದು. ಇಲ್ಲಿ ನನಗೆ ಸಿಕ್ಕಿದವರೇ ಗಂಗಮ್ಮ ಮಾತಾಜಿ.  
ಕನ್ನಡ ನಮ್ಮ ಮಾತೃ ಭಾಷೆ . ಗಂಗಮ್ಮ ಮಾತಾಜಿ ಮಾಡುತ್ತಿದ್ದ ಪಾಠವೂ ಕನ್ನಡ . ಅವರು ತರಗತಿಯಲ್ಲಿ ಪಾಠ ಮಾಡಲು ಪ್ರಾರಂಭ ಮಾಡುವ ಮುಂಚೆ ಅದರ ಬಗ್ಗೆ ಹಲವಾರು ಕಥೆಗಳನ್ನು ಹೇಳುತ್ತಿದ್ದರು. ನನ್ನಲ್ಲಿ ಪುಸ್ತಕ ಓದುವ ಹುಚ್ಚನ್ನು ಹೆಚ್ಚಿಸಿದ್ದೇ ಇವರು. ವಿದ್ಯಾರ್ಥಿಗಳಿಗೋಸ್ಕರ ಪಾಠಗಳ ಆಕರ ಗ್ರಂಥಗಳನ್ನು ಸಂಪಾದಿಸಿ ತಂದು ಶಾಲಾ ಗ್ರಂಥಾಲಯದಲ್ಲಿ ಜೋಡಿಸಿದ್ದಾರೆ. ಪ್ರತಿಯೊಂದು ಪಾಠಗಳ ಆಕರ ಗ್ರಂಥಗಳನ್ನು ಓದುವಲ್ಲಿ ನಮ್ಮನ್ನು ಉತ್ತೇಜಿಸುತ್ತಿದ್ದರು. ಅವರು ಕಲಿಸಿದ ವ್ಯಾಕರಣ , ಛಂದಸ್ಸು , ಅಲಂಕಾರ , ಸಮಾಸ ಇವುಗಳು ಎಂದಿಗೂ ಮರೆಯಲಾರದಷ್ಟು ಸರಿಯಾಗಿ ನಮ್ಮ ಮೆದುಳಿನಲ್ಲಿ ಅಚ್ಚೊತ್ತಿದ್ದಾರೆ. 
          ಶಾಲೆಯಲ್ಲಿ , ತರಗತಿಯಲ್ಲಿ ಹೊಸ ಹೊಸ ಆಟಗಳು , ಕಾರ್ಯಕ್ರಮಗಳ ಪ್ರಯೋಗ ಮಾಡಿ ಯಶಸ್ವಿಯಾಗಿದ್ದಾರೆ. ಕಾರ್ಯಕ್ರಮಗಳ ಮಾತಿನಲ್ಲಿ ಬರುವ ಸರ್ವಜ್ಞನ ವಚನಗಳು, ಗಣ್ಯರ ವ್ಯಾಖ್ಯಾನಗಳು ಅವರ ಜ್ಞಾನ ಭಂಡಾರಕ್ಕೆ ಸಾಕ್ಷಿ. ಶಾಲಾ ವಾರ್ಷಿಕೋತ್ಸವಗಳಲ್ಲಿ ನಮ್ಮ ತಂಡಕ್ಕೆ ಹುರುಪು ನೀಡಿ ನಮ್ಮಿಂದ ನಾಟಕ ಮಾಡಿಸಿದ್ದಾರೆ . ಶಾಲೆಯಲ್ಲಿ ಹಲವಾರು ವರ್ಷಗಳ ನಂತರ ಕ್ರೀಡೋತ್ಸವ ಮಾಡಿದ ಕೀರ್ತಿಯೂ ಇವರಿಗೆ ಸಲ್ಲುತ್ತದೆ. ನನ್ನ ಪ್ರತಿಭೆಯನ್ನು ಗುರುತಿಸಿ ನನಗೆ ಹಾಡಲು , ಭಾಷಣ ಮಾಡಲು , ಮಕ್ಕಳ ಸಾಂಸ್ಕೃತಿಕ ಸಮ್ಮೇಳನದಲ್ಲಿ ನಿರೂಪಣೆ ಮಾಡಲು ಅವಕಾಶ ಕೊಟ್ಟಿದ್ದಾರೆ. ಅವರ ಪ್ರೋತ್ಸಾಹ ನಾನು ಈ ಮಟ್ಟಕ್ಕೆ ಬೆಳೆಯಲು ಕಾರಣ. 
            ಶಾಲೆ ಬಿಟ್ಟು ಕಾಲೇಜಿಗೆ ಸೇರಿದರೂ ನನ್ನ ಜೊತೆ ಸಂಪರ್ಕದಲ್ಲಿ ಇದ್ದು ಇಂದಿಗೂ ಮಾರ್ಗದರ್ಶನ ನೀಡುತ್ತಿದ್ದಾರೆ. ಇವರ ಅತ್ಯುತ್ತಮ ಸೇವೆ ಗುರುತಿಸಿ ತಾಲೂಕು ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿಯೂ ನೀಡಿದ್ದಾರೆ. ಇದು ಅವರ ಸಾಧನೆಗೆ ಸಾಕ್ಷಿ. 
        ಒಟ್ಟಿನಲ್ಲಿ ನಾನು ತಪ್ಪುಗಳನ್ನು ಮಾಡಿದಾಗ ಬುದ್ಧಿ ಹೇಳಿ, ಸಾಧಿಸಿದಾಗ ಹಿಂದೆಯಿಂದ ಬೆನ್ನು ತಟ್ಟಿ ಸುಮಾರು ೩೩ ವರ್ಷಗಳ ಕಾಲ ದೇವಿನಗರದಲ್ಲಿ ಕನ್ನಡವನ್ನು ಮುನ್ನಡೆಸಿ ನನ್ನಂತಹ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಿದ ಇವರಿಗೆ ನನ್ನ ವಂದನೆಗಳು. 
...................ಸಾತ್ವಿಕ್ ವಿ ನಾಯಕ್ ಅಜೇರು 
ದ್ವಿತೀಯ ಪಿಯುಸಿ ವಿವೇಕಾನಂದ ಪದವಿ ಪೂರ್ವ ಕಾಲೇಜು ನೆಹರೂನಗರ 
ಪುತ್ತೂರು , ದಕ್ಷಿಣ ಕನ್ನಡ ಜಿಲ್ಲೆ
******************************************                 ಶಿಕ್ಷಕರ ದಿನಾಚರಣೆಯ                                            ಶುಭಾಶಯಗಳು-ದಿವ್ಯಶ್ರೀ .ಬಿ
        ನಾನು ನನ್ನ ಪ್ರಾಥಮಿಕ ಶಿಕ್ಷಣದಲ್ಲಿ ಎಲ್ಲಾ ಶಿಕ್ಷಕರ ಮೆಚ್ಚುಗೆಯನ್ನು ಪಡೆದಿದ್ದೇನೆ. ಎಲ್ಲಾ ಶಿಕ್ಷಕರು ನನ್ನ ವಿದ್ಯಾಭ್ಯಾಸದ ಬಗ್ಗೆ ಮತ್ತು ನನಗೆ ತುಂಬಾ ಪ್ರೋತ್ಸಾಹ ನೀಡಿದ್ದಾರೆ. ಅದರಲ್ಲೂ ನನ್ನ 7 ನೇ ತರಗತಿಯ ಶಿಕ್ಷಕರಾದ ಸುನಂದ ಟೀಚರ್ ತರಗತಿಯ ಶಿಕ್ಷಣದಲ್ಲಿ ನನ್ನ ಬಗ್ಗೆ ಅಂದರೆ ನನ್ನ ಶಿಕ್ಷಣದ ಬಗ್ಗೆ ಮತ್ತು ನನ್ನ ಹವ್ಯಾಸದ ಬಗ್ಗೆ ಮತ್ತು ಪ್ರತಿಭಾಕಾರಂಜಿಯಲ್ಲಿ ನನಗೆ ಕಥೆ, ದೇಶಭಕ್ತಿಗೀತೆ, ಪ್ರಬಂಧ ,ಭಾಷಣ ಇವೆಲ್ಲವನ್ನೂ ಅಚ್ಚುಕಟ್ಟಾಗಿ ತಿಳಿಸಿ ನನಗೆ ಪ್ರೋತ್ಸಾಹ ಮತ್ತು ಆಸಕ್ತಿಯನ್ನು ಮೂಡಿಸಿದ್ದಾರೆ. ಇವರು ನಮ್ಮ ತರಗತಿಯಲ್ಲಿ ಎಲ್ಲಾ ಮಕ್ಕಳಿಗೂ ಪ್ರೋತ್ಸಾಹಕೊಟ್ಟು ಅವರಿಗೂ ಆಸಕ್ತಿಯನ್ನು ಉಂಟುಮಾಡಿ ಎಲ್ಲರಿಗೂ ಎಲ್ಲಾ ವಿಷಯಗಳಲ್ಲೂ ಭಾಗವಹಿಸಲು ಅವಕಾಶ ಮಾಡಿಕೊಟ್ಟು ಎಲ್ಲರ ಮೆಚ್ಚುಗೆಯ ಶಿಕ್ಷಕಿಯಾಗಿದ್ದಾರೆ. ಇವರನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಇವರನ್ನು ನಾನು ಮನದಾಳದಲ್ಲಿ ಇಟ್ಟು ನೆನಪಿಸಿಕೊಳ್ಳುತ್ತೇನೆ. ಮತ್ತು ಫ್ರೌಡ ಶಾಲೆಯ ಮುಖ್ಯೋಪಾಧ್ಯಾಯ ರಾದ ಜಯಂತಿ ಮಾತಾಜಿ ಇವರು ಕೂಡ ನನಗೆ ಪ್ರೋತ್ಸಾಹವನ್ನು ನೀಡುತ್ತಾರೆ. ಇವರು ಕೂಡ ನನ್ನ ಮೆಚ್ಚುಗೆಯ ಶಿಕ್ಷಕಿಯಾಗಿದ್ದಾರೆ. ನನ್ನ ಪ್ರಾಥಮಿಕ ಶಾಲೆಯ ಮತ್ತು ಪ್ರೌಢಶಾಲೆಯ ಎಲ್ಲಾ ಶಿಕ್ಷಕರಿಗೂ ನಾನು ಆಭಾರಿ. ನನ್ನ ಎಲ್ಲಾ ಶಿಕ್ಷಕರಿಗೂ ಮತ್ತು ನನಗೆ ಬುದ್ಧಿ ಕಲಿಸಿದ , ನನಗೆ ಒಳ್ಳೆಯ ವಿಚಾರಗಳನ್ನು ಕಲಿಸಿಕೊಟ್ಟ ನನ್ನ ತಂದೆ-ತಾಯಿ ,ನನ್ನ ಹಿರಿಯರು ಎಲ್ಲರು ನನ್ನ ಗುರುಗಳೇ . ಮತ್ತು ಮಕ್ಕಳ ಜಗಲಿಯ ಎಲ್ಲ ಶಿಕ್ಷಕರಿಗೂ ನನ್ನ ಪರವಾಗಿ ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು.... 
ಇಂತಿ ನಿಮ್ಮ
................................................. .ದಿವ್ಯಶ್ರೀ .ಬಿ
9ನೇ ತರಗತಿ
ಮುಂಡಾಜೆ ಪ್ರೌಢಶಾಲೆ , ಮುಂಡಾಜೆ
ಬೆಳ್ತಂಗಡಿ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*********************************************    ನನ್ನ ಮಾತು : ಡಿ.ಎಲ್.ಮಧುರ.........
 "ಮನೆಯೇ ಮೊದಲ ಪಾಠಶಾಲೆ, ಜನನಿ ಮೊದಲ ಗುರುವು" ಎಂದು ಹೇಳಿದ ಹಾಗೆ ಹುಟ್ಟಿದ ಮಗುವಿಗೆ ತಾಯಿಯೇ ಮೊದಲ ಗುರು. ಆದರೆ, ನಂತರ ಮಗುವಿನ ಮನೋಬಲವನ್ನು ಅರಿತು ಆತನನ್ನು ದೇಶದ ಸತ್ಪ್ರಜೆಯನ್ನಾಗಿ ಮಾಡುವ ಮಹಾತ್ಕಾರ್ಯ ಗುರುವಿನದ್ದು.    ಆ ಸಾಮರ್ಥ್ಯ ಮತ್ತು ಶಕ್ತಿ ಇರುವುದು ಗುರುವಿನಲ್ಲಿ ಮಾತ್ರ. ಗುರುವು ವಿದ್ಯಾರ್ಥಿಯನ್ನು ಸರ್ವ ರೀತಿಯಿಂದಲೂ ಪರಿಪಕ್ವವನ್ನಾಗಿ ಮಾಡುತ್ತಾರೆ. ಅವರು ಪಾಠ ಮಾಡುವಾಗ ಸಂದರ್ಭಕ್ಕನುಸಾರವಾಗಿ ವಿದ್ಯಾರ್ಥಿಗಳಿಗೆ ವೀರರ ಕಥೆಯನ್ನು ಹೇಳಿ ಮಕ್ಕಳಲ್ಲಿ ಧೈರ್ಯ, ಸ್ವಾತಂತ್ರ್ಯದ ಕೆಚ್ಚು ಮತ್ತು ಸಾಹಸವನ್ನು ತುಂಬುತ್ತಾರೆ. ಇದರಿಂದ ಮಕ್ಕಳು ಸುಸಂಸ್ಕೃತವಾಗಿ ಬೆಳೆಯಲು ಸಾಧ್ಯ. ಮೇಲಿನ ಎಲ್ಲಾ ಗುಣವನ್ನು ಹೊಂದಿರುವ ಶ್ರೀಯುತ ನಾರಾಯಣ .ಭಟ್ ಸರ್ ಅವರು ನನ್ನ ಮನದಾಳದ ಗುರುಗಳಾಗಿರುತ್ತಾರೆ. ನಾನು ಎಂದೆಂದಿಗೂ ಅವರಿಗೆ ಚಿರಋಣಿಯಾಗಿರುತ್ತೇನೆ. 
ಇಂತಿ ಅವರ ಪ್ರೀತಿಯ ಶಿಷ್ಯೆ 
..........................................ಡಿ.ಎಲ್.ಮಧುರ
ತರಗತಿ:8
ಶಾಲಾ ವಿಳಾಸ: ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢ ಶಾಲೆ ರಾಮಕುಂಜ
ತಾಲೂಕು:ಕಡಬ
ಜಿಲ್ಲೆ:ದಕ್ಷಿಣ ಕನ್ನಡ
********************************************
        ಎಲ್ಲರಿಗೂ ನನ್ನ ನಮಸ್ಕಾರ. ನನ್ನ ಎಲ್ಲಾ ಗುರುಗಳಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು.....ಸಿಂಚನ 
     ನನ್ನ ಅಚ್ಚು ಮೆಚ್ಚಿನ ಗುರುಗಳಾದ, ನನ್ನ ಜೀವನದಲ್ಲಿ ಪ್ರಭಾವ ಬೀರಿದ ಶ್ರಿಯುತ ಸುಬ್ಬರಾವ್ ( ಶಿವರಂಜನಿ ಮ್ಯೂಸಿಕಲ್ಸ್ ಪೊಳಲಿ ) ಇವರ ಬಗ್ಗೆ ಶಿಕ್ಷಕರ ದಿನಾಚರಣೆಯ ಶುಭ ದಿನದಂದು ಈ ಮಾತುಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.
    ನಾನು ಈಗ 9ನೇ ತರಗತಿಯಲ್ಲಿ ಓದುತ್ತಿದ್ದೇನೆ. ನಾನು 4ನೇ ವರ್ಷದವಳಿರುವಾಗ ಸುಗಮ ಸಂಗೀತ ತರಗತಿಗೆ ಸೇರಿಸಲು ಅಮ್ಮ ಕರೆದುಕೊಂಡು ಹೋಗಿದ್ದರು. ಆಗ ನನಗೆ ಓದಲಿಕ್ಕೆ ,ಬರೆಯಲಿಕ್ಕೆ ಬರುತ್ತಿರಲಿಲ್ಲ. ಅವರು ಹೇಳಿಕೊಡುತ್ತಿದ್ದ ಹಾಡುಗಳನ್ನು ಕೇಳುತ್ತಿದ್ದೆ. ಅವರೆದುರು ಹಾಡುತ್ತಿರಲಿಲ್ಲ. ಮನೆಗೆ ಬಂದು ಹಾಡುತ್ತಿದ್ದೆ. ಅವರು ನಗುನಗುತ ಮಾತನಾಡಿಸಿದರೂ ಮಾತಾನಾಡುತ್ತಿರಲ್ಲಿಲ್ಲ. ಯಾಕೆಂದರೆ ಅವರನ್ನು ಕಂಡರೆ ನನಗೆ ಗೌರವ , ಈಗಲೂ ಕೂಡ.
     ಅವರ ಜೊತೆ ಕಲಿಯುತ್ತಿದ್ದ ಎಲ್ಲ ಮಕ್ಕಳನ್ನು ಪ್ರತೀ ಶುಕ್ರವಾರ ಶ್ರೀ ರಾಜರಾಜೇಶ್ವರಿ ದೇವಸ್ಥಾನಕ್ಕೆ ಭಜನೆಗೆ ಕರೆದುಕೊಂಡು ಹೋಗುತ್ತಿದ್ದರು. ನಾನು ಹೋಗುತ್ತಿದ್ದೆ. ಆದರೆ ನನ್ನ ಗಮನವೆಲ್ಲ ದೇವಸ್ಥಾನಕ್ಕೆ ಬರುವ ಜನರ ಕಡೆ ಇತ್ತು. ಇದನ್ನು ಗಮನಿಸಿದ ಗುರುಗಳು ಭಜನೆಗೆ ಮುಗಿಯುತ್ತಿದ್ದಂತೆ ಅಮ್ಮನನ್ನ ಕರೆದು ಇಷ್ಟು ವರ್ಷ ಕಲಿತು ಏನು ಉಪಯೋಗ ? ಅವಳ ಗಮನ ಎಲ್ಲ ಬೇರೆ ಕಡೆ ಇದೆ ಎಂದು ಗದರಿಸಿದರು. ಅದೇ ಕೊನೆ ಮತ್ತೊಂದು ವಾರದಿಂದಲೇ ಹಾಡಲು ಶುರುಮಾಡಿದೆ.
     ಶಾಲಾ ಮಟ್ಟ, ಜಿಲ್ಲಾ ಮಟ್ಟ, ತಾಲೂಕು ಮಟ್ಟ ಮತ್ತು ವಿವಿಧ ಸಂಘ-ಸಂಸ್ಥೆಗಳಲ್ಲಿ ಪ್ರಶಸ್ತಿ ಗೆದ್ದಿದ್ದೇನೆ. ಹಾಗೆಯೇ ಶಾಲೆಯ ಕಲಿಕೆಯ ವಿಷಯದಲ್ಲಿ ಸಲಹೆ ಕೊಡುತ್ತಾರೆ. ಅವರ ಉಚಿತ ಸಂಗೀತ ವಿದ್ಯೆಯನ್ನು ಹೇಳಿಕೊಟ್ಟಿದ್ದಾರೆ. ಇಂಥ ಗುರುಗಳನ್ನು ಪಡೆದ ನಾನು ತುಂಬಾ ಧನ್ಯ. ಈ ಶಿಕ್ಷಕರ ದಿನದಂದು ನನ್ನ ಬಾಲ್ಯಕಾಲದಿಂದ ಈವರೆಗಿನ ನನ್ನನ್ನು ಹೆಜ್ಜೆ-ಹೆಜ್ಜೆಗೂ ಮುನ್ನಡೆಸಿದ ಗುರುವನ್ನು ನೆನೆಯುತ್ತಾ ಇನ್ನು ಮುಂದೆಯೂ ಅವರ ಆಶೀರ್ವಾದವೂ ಇರಲಿ ಎಂದು ಕೇಳಿಕೊಳ್ಳುತ್ತೇನೆ.
....................................................... ಸಿಂಚನ 
ತರಗತಿ : 9 ನೇ
ಶಾಲಾ ವಿಳಾಸ : ಸರಕಾರಿ ಫ್ರೌಢಶಾಲೆ ಪೊಳಲಿ , ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
********************************************     ನನ್ನ ಹೆಸರು ಶರಣ್ಯ...
 ನಾನು ಗೋಪಾಲ್ ಸರ್ ಇವರ ಬಗ್ಗೆ ಹೇಳಲು ಇಚ್ಚಿಸುತ್ತೇನೆ.            ನೀವು ಕಲಿಸುವ ಪಾಠವು ನಮಗೆ ತುಂಬಾ ಚೆನ್ನಾಗಿ ಅರ್ಥವಾಗುತ್ತದೆ. ನಮ್ಮನ್ನು ಸ್ನೇಹಿತರಂತೆ ಮಾತನಾಡಿಸುತ್ತೀರಿ. ನಾವು ಎಷ್ಟು ತಪ್ಪು ಮಾಡಿದರೂ ಅದನ್ನೆಲ್ಲ ಕ್ಷಮಿಸುತ್ತೀರಿ. ನಮಗೆ ಉತ್ತಮ ಮಾರ್ಗದರ್ಶನ ನೀಡಿ ಗೆಳೆಯನಂತೆ ನಮ್ಮೊಂದಿಗೆ ಬೇರೆತು ಜೀವನದಲ್ಲಿ ಶಿಸ್ತನ್ನು ಮೂಡಿಸಿದ ನಿಮಗೆ ನನ್ನ ವಂದನೆಗಳು. ಪಠ್ಯವನ್ನು ಅದ್ಭುತವಾಗಿ ಬೋಧಿಸಿ ಕಲಿಕೆಯಲ್ಲಿ ಆಸಕ್ತಿ ಮೂಡಿಸಿದ ನಿಮಗೂ ಮತ್ತು ನನ್ನ ಎಲ್ಲಾ ಶಿಕ್ಷಕರ ವೃಂದದವರಿಗೂ,,
 ಶಿಕ್ಷಕರ ದಿನಾಚರಣೆಯ ಶುಭಾಶಯಗಳು
 ...................................................ಶರಣ್ಯ
 ತಾಲೂಕು: ಬೆಳ್ತಂಗಡಿ
 ಜಿಲ್ಲೆ : ದಕ್ಷಿಣ ಕನ್ನಡ
*******************************************Ads on article

Advertise in articles 1

advertising articles 2

Advertise under the article