-->
ಜಗಲಿಯ ಮಕ್ಕಳ ಮನದಾಳದ ಮಾತುಗಳು (ಸಂಚಿಕೆ -2)

ಜಗಲಿಯ ಮಕ್ಕಳ ಮನದಾಳದ ಮಾತುಗಳು (ಸಂಚಿಕೆ -2)

ಜಗಲಿಯ ಮಕ್ಕಳ 
ಮನದಾಳದ ಮಾತುಗಳು
ಸಂಚಿಕೆ -2



 ನಾಡಿನ ಸಮಸ್ತ ಶಿಕ್ಷಕರಿಗೂ ಶಿಕ್ಷಕರದಿನಾಚರಣೆಯ                   ಶುಭಾಶಯಗಳು - ಸುನೀತಾ ......
    ನಾನು ಇಂದು ನನ್ನ ನೆಚ್ಚಿನ ಹಾಗೂ ನನಗೆ ಸದಾ ಸ್ಫೂರ್ತಿ ತುಂಬುತ್ತಿರುವ ನನ್ನ ಪ್ರಾಥಮಿಕ ಶಾಲೆಯ ಗುರುಗಳು ಹಾಗೂ ತಮ್ಮ ಹಿತನುಡಿಗಳಿಂದ ನನಗೆ ಮಾರ್ಗದರ್ಶಕರಾಗಿರುವ 'ರೂಪ ಟೀಚರ್' ಇವರ ಬಗ್ಗೆ ಹೇಳಲು ಇಚ್ಛಿಸುತ್ತೇನೆ.            ಇವರು ಸಣ್ಣ ವಯಸ್ಸಿನಿಂದಲೂ ನನಗೆ ಬುದ್ಧಿ ಮಾತುಗಳನ್ನು ಹೇಳುತ್ತಾ ಬರುತ್ತಿರುವ ನನ್ನ ನೆಚ್ಚಿನ ಗುರುಗಳು. ಚಿಕ್ಕಂದಿನಿಂದಲೂ ನನ್ನನ್ನು ದೊಡಪ್ಪ -ದೊಡ್ಡಮ್ಮನವರು ಸಾಕುತ್ತಿದ್ದೂ ಅವರ ಈ ಮಹಾತ್ಕಾರ್ಯಕ್ಕೆ ಚೆನ್ನಾಗಿ ಕಲಿತು ಅವರನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂದು ಪದೇ ಪದೇ ಅರಿವು ಮೂಡಿಸುತ್ತಿರುವ ಆತ್ಮೀಯರೂ ಇವರು. ನಾನು ಪ್ರಾಥಮಿಕ ಶಿಕ್ಷಣ ಕಲಿತು ಪ್ರೌಢಶಾಲೆ ಗೆ ಹೋದ ನಂತವರವೂ ಆಗಾಗ ಪ್ರಾಥಮಿಕ ಶಾಲೆಗೆ ತೆರಳುತ್ತಿದ್ದೆ ಆಗ ಚೆನ್ನಾಗಿ ಕಲಿ, ಈ ವಯಸ್ಸು ಚಂಚಲವಿರಬಹುದು, ನಿನ್ನ ಗುರಿ ಸ್ಪಷ್ಟವಾಗಿದ್ದು, ಹೋಗುವ ದಾರಿ ಕಠಿಣವಿದ್ದರೂ ಸುಲಭವಾಗುವುದು, ಯಾವುದೇ ಕಾರಣಕ್ಕೂ ಗುರಿಯ ದಾರಿಯಿಂದ ಮನಸ್ಸನ್ನು ವಾಲಿಸಬೇಡ. ನೀನು ಸರಿಯಾಗಿದ್ದರೆ ಹೊರಗಡೆಯ ಯಾವುದೇ ವಿಷಯಗಳು ನಿನ್ನ ದಾರಿಗೆ ಅಡ್ಡಿಯಾಗಲಾರದು ಎಂದು ತಿಳಿಸಿದ ಗುರುಗಳಿವರು. ಒಳ್ಳೆಯ ಸಲಹೆಗಳನ್ನು ನೀಡುತ್ತಾ ಬರುತ್ತಿದ್ದಾರೆ. ಶ್ರಮ ಪಟ್ಟು ಓದು ಯಶಸ್ಸು ಖಂಡಿತ ನಿನ್ನದಾಗುತ್ತದೆ ಎಂದ ನನ್ನ ಪಾಲಿನ ಮಹಾಗುರುಗಳಿವರು..... ಈ ಶಿಕ್ಷಕರ ದಿನಾಚರಣೆಯ ವಿಶೇಷ ದಿನದಲ್ಲಿ ರೂಪ ಟೀಚರ್ ಜೊತೆಗೆ, ನನಗೆ ಕಲಿಸಿದ ಎಲ್ಲಾ ಗುರುಗಳಿಗೆ ಶುಭಾಶಯವನ್ನು ತಿಳಿಸುತ್ತೇನೆ.....
.......................................................ಸುನೀತಾ
ಪ್ರಥಮ PUC
ಎಕ್ಸೆಲ್ pu ಕಾಲೇಜ್
ಗುರುವಾಯನಕೆರೆ 
ಬೆಳ್ತಂಗಡಿ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
****************************************



         ನಮ್ಮ ಶಿಕ್ಷಕರು - ಬಿಂದು ಶ್ರೀ
       ನಾನು ನನ್ನ ನೆಚ್ಚಿನ ಶಿಕ್ಷಕರ ಬಗ್ಗೆ ಒಂದೆರಡು ಪದಗಳನ್ನು ಬರೆಯಲು ಇಷ್ಟಪಡುತ್ತೇನೆ. ಸೆಪ್ಟೆಂಬರ್ 5ರಂದು ನಾವು ಶಿಕ್ಷಕರ ದಿನವನ್ನು ಆಚರಿಸುತ್ತೇವೆ. ನಾನು ಈಗ 10ನೆ ತರಗತಿಯಲ್ಲಿ ಓದುತ್ತಿದ್ದೇನೆ. ನನ್ನ ಶಾಲೆಯಲ್ಲಿ ತುಂಬಾ ಮಂದಿ ಶಿಕ್ಷಕರು ಇದ್ದಾರೆ. ನಾವು ಅವರನ್ನು ಮಾತಾಜಿ ಮತ್ತು ಶ್ರೀಮಾನ್ ಎಂದು ಕರೆಯುತ್ತೇವೆ. ನನ್ನ ತರಗತಿಗೆ 7ಮಂದಿ ಶಿಕ್ಷಕರು ಪಾಠ ಮಾಡಲು ಬರುತ್ತಾರೆ. ನಮ್ಮ ಶಿಕ್ಷಕರು ನಮಗೆ ಪಾಠದ ಬಗ್ಗೆ ಹಲವು ಚಟುವಟಿಕೆ ಮಾಡಲು ಹೇಳುತ್ತಾರೆ. ನಮಗೆ ಚಟುವಟಿಕೆ ಮಾಡುವುದು ಅಂದರೆ ತುಂಬಾ ಖುಷಿ ಆಗುತ್ತದೆ. ಶಿಕ್ಷಕರರು ನಮಗೆ ತುಂಬಾ ಅರ್ಥಪೂರ್ಣವಾಗಿ ಪಾಠವನ್ನು ಮಾಡುತ್ತಾರೆ. ಅವರು ಮಾಡುವ ಪಾಠ ಕೇಳಲು ತುಂಬಾ ಖುಷಿ. ಶಿಕ್ಷಕರು ನಾವು ಹೇಗೆ ಜನರ ಮುಂದೆ ವರ್ತಿಸಬೇಕು ಹಾಗೂ ನಮ್ಮ ನಡವಳಿಕೆ ಹೇಗೆ ಇರಬೇಕು. ಎಂಬುದನ್ನು ಹೇಳಿಕೊಡುತ್ತಾರೆ. ನಮಗೆ ಪಾಠ ಅರ್ಥವಾಗದಿದ್ದಾಗ ಯಾವ ಸಮಯದಲ್ಲಿಯೂ ಅವರು ನಮಗೆ ಅರ್ಥವಾಗುವಂತೆ ಆ ಪಾಠವನ್ನು ಹೇಳುತ್ತಾರೆ. ಹಾಗೂ ನಮಗೆ ಸಹಾಯಗಳನ್ನು ಮಾಡುತ್ತಾರೆ. ನನಗೆ ನನ್ನ ಶಿಕ್ಷಕರು ಎಂದರೆ ತುಂಬಾ ಇಷ್ಟ ಅವರು ಮಾಡುವ ಪಾಠ ಇಷ್ಟ. ಅವರು ಹೇಳುವ ನೀತಿ ಪಾಠಗಳು ಇಷ್ಟ. ಅವರು ನಮಗೆ ತಪ್ಪು ಮಾಡಿದಾಗ ತಪ್ಪಿನ ಅರಿವು ಮಾಡುತ್ತಾರೆ ಹಾಗೂ ಇನ್ನು ಆ ತಪ್ಪು ಮಾಡಬಾರದು ಹೇಳುತ್ತಾರೆ. ಶಿಕ್ಷಕರಿಗೆಲ್ಲಾ ನನ್ನ ಕಡೆಯಿಂದ ಶಿಕ್ಷಕರ ದಿನದ ಶುಭಾಶಯಗಳು.
.................................................ಬಿಂದು ಶ್ರೀ
ತರಗತಿ :10
ಶಾಲೆ : ಶ್ರೀ ರಾಮ ಪ್ರೌಡ ಶಾಲೆ, ಕಲ್ಲಡ್ಕ
ಬಂಟ್ಟಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*******************************************



       ನಾನು ಸಾನ್ವಿ ಶೆಟ್ಟಿ ನಾನು , ಗುಡ್ಡೆಯಂಗಡಿ ಓಂ ಜನ ಹಿತಾಯ ಶಾಲೆಯಲ್ಲಿ  ಎಂಟನೇ ತರಗತಿಯ  ವಿದ್ಯಾರ್ಥಿನಿ.  ಸಪ್ಟೆಂಬರ್ ೫ ಶಿಕ್ಷಕರ ದಿನಾಚರಣೆ, ಪ್ರತಿ ವರುಷ ಈ ದಿನವನ್ನು ಆಚರಿಸುತ್ತೇವೆ, ಎಲ್ಲಾ ಮಕ್ಕಳಿಗೂ ಮನೆಯೆ ಮೊದಲ ಪಾಠ ಶಾಲೆ, ನನಗೂ ಕೂಡ, ನನ್ನ ಅಮ್ಮನೆ ನನಗೆ ಮೊದಲ ಗುರು, 
ಯಾಕೆಂದರೆ ನಾನು ಶಾಲೆಗೆ ಸೇರುವ ಮೊದಲೇ ನನಗೆ ಓದಲು ,ಬರೆಯಲು, ಚಿತ್ರ ಬಿಡಿಸಲು ತಕ್ಕ ಮಟ್ಟಿಗೆ ಹಾಡು ಹಾಡಲು ಕಲಿಸಿಕೊಟ್ಟವರೇ ನನ್ನ ಅಮ್ಮ. ನನಗೆ ಶಾಲಾ ವೇದಿಕೆಯಲ್ಲಿ ಎಲ್ಲರ ಮುಂದೆ ನಿಲ್ಲುವ ಧ್ಯೆರ್ಯ ತುಂಬಿದವರು ನನ್ನ ಅಮ್ಮ, ಶಾಲೆಯಲ್ಲಿ ಯಾವುದೇ ಸ್ಪರ್ಧೆ ಮಾಡಿದರೂ ನೀನು ಭಾಗವಹಿಸು, ಸೇೂಲು ಗೆಲುವು ಮುಖ್ಯವಲ್ಲ ಭಾಗವಹಿಸುವುದು ಮುಖ್ಯ ಎಂದು ಪ್ರೋತ್ಸಾಹ ನೀಡುತ್ತಾರೆ. ಅವರ ಪ್ರೊತ್ಸಾಹದಿಂದ ಅಂಗನವಾಡಿಯಿಂದ ಆರನೇ ತರಗತಿಯವರೆಗೆ ಕೆಲವೊಂದು ಬಹುಮಾನವನ್ನು ಪಡೆದಿದ್ದೇನೆ. ಅನಂತರದಲ್ಲಿ ಕೊರೋನದಿಂದಾಗಿ ಶಾಲೆಯಲ್ಲಿ ಯಾವುದೇ ಚಟುವಟಿಕೆ ನಡೆದಿಲ್ಲ. ಈಗಲು ಅಷ್ಟೇ, ನಾನು ಸೋಮವಾರ ಪರೀಕ್ಷೆಗೆ ಓದುತ್ತಿದ್ದೆ, ಅಮ್ಮ ನನ್ನಲ್ಲಿ ..... ನಿನಗೆ ಏನು ತೋಚುತ್ತದೆ ಅದನ್ನು ಬರೆ ಎಂದರು, ಮತ್ತೆ ನನಗೆ ಶಾಲೆಯ ಬಗ್ಗೆ ಹೇಳುವುದಾದರೆ, ನನಗೆ ಇಷ್ಟವಾದ ಶಿಕ್ಷಕಿ ಒಬ್ಬರಿದ್ದಾರೆ ಅವರ ಹೆಸರು ಪೂಜ ಅವರು ಮಕ್ಕಳ ಜೊತೆ ಮಕ್ಕಳಾಗಿಯೇ ಇರುತ್ತಾರೆ , ಮತ್ತೆ ನಾನು ಟಿವಿಯಲ್ಲಿ ಶಿಂಚಾನ್ ನೋಡುತ್ತೇನೆ, ಶಿಂಚಾನ್ ನಿಂದ ಹಲವಾರು ವಿಷಯಗಳನ್ನು ಕಲಿತಿದ್ದೇನೆ. ಶಿಂಚಾನ್ ನನಗೆ ಸ್ಪೂರ್ತಿ, ಮಕ್ಕಳ ಜಗಲಿಯ ಮೂಲಕ ನನಗೆ ಸ್ಪೂರ್ತಿ ತುಂಬಿದ ಶಿಕ್ಷಕರ ಬಗ್ಗೆ ಬರೆಯಲು ಅವಕಾಶ ಮಾಡಿಕೊಟ್ಟದಕ್ಕೆ ಧನ್ಯವಾದಗಳು,
........................... ಸಾನ್ವಿ ಶೆಟ್ಟಿ , 8ನೇ ತರಗತಿ
ಓಂ ಜನ ಹಿತಾಯ ಶಾಲೆ ಗುಡ್ಡೆಯಂಗಡಿ ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
********************************************



ನನ್ನ ಮಾತು......ಅಭಿನವ್ ರಾಜ್ ಎನ್ .
      ನನ್ನ ಮೇಲೆ ಪ್ರಭಾವ ಬೀರಿರುವ ಶಿಕ್ಷಕರೆಂದರೆ ಶಿಕ್ಕಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ನನ್ನ ಅಮ್ಮ ಸವಿತಾ ಪಿ. ಏಕೆಂದರೆ ಇವರು ಸದಾ ನನ್ನನ್ನು ಪ್ರೀತಿಯಿಂದ ಮಾತನಾಡಿಸುತ್ತಾರೆ. "ನೀನು ಮುಂದೆ ಬರಬೇಕು. ಎಲ್ಲಿಯೂ ಯಾವ ಕಾರಣಕ್ಕೂ ಹೆದರಬೇಡ ಧೈರ್ಯದಿಂದಿರು ' ಎಂದು ಬೆನ್ನುತಟ್ಟಿ ಪ್ರೋತ್ಸಾಹಿಸುತ್ತಾರೆ.ಭಾಷಣ, ಹಾಡು ಎಲ್ಲವನ್ನು ಕಲಿಸುತ್ತಾರೆ, ಕಲಿಯಲು ಪ್ರೋತ್ಸಾಹಿಸುತ್ತಾರೆ.
     .................................  ಅಭಿನವ್ ರಾಜ್ ಎನ್ 
         4 ನೇ ತರಗತಿ
       ಪ್ರಿಯದರ್ಶಿನಿ ವಿದ್ಯಾಸಂಸ್ಥೆ ಬೆಟ್ಟಂಪಾಡಿ
ಪುತ್ತೂರು ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
**********************************************



       ಮಕ್ಕಳ ಜಗಲಿಯ ಮೂಲಕ ನಮಗೆ ಸ್ಪೂರ್ತಿ ತುಂಬಿದ ಶಿಕ್ಷಕರನ್ನು ನೆನಪಿಸುವ ಹರುಷ...ಅನನ್ಯ
       ಸಪ್ಟೆಂಬರ್ 5 ಶಿಕ್ಷಕರ ವಿಶೇಷ ದಿನ, ಹಾಗಂತೆಯೇ ನಾವು ಆ ದಿನ ನೆನಪಿಸಿಕೊಳ್ಳುವುದು ಸರ್ವೆಪಲ್ಲಿ ರಾಧಾಕೃಷ್ಣನ್.. ಯಾವುದೇ ಕಲಿಕೆಯಾಗಲಿ ಅದಕ್ಕೆ ಯಾರು ನೆರವಾಗುತ್ತಾರೆ ಅವರೆಲ್ಲ ನಮಗೆ ಶಿಕ್ಷಕರೇ.. ಶಿಕ್ಷಕರನ್ನು ದೇವರೆಂದು ಪೂಜಿಸುವ ಸಂಪ್ರದಾಯ ನಮ್ಮದು.. ನಾವು ಎಷ್ಟೇ ದೊಡ್ಡ ವ್ಯಕ್ತಿ ಆಗಲಿ ನಮಗೆ ನಮ್ಮ ಕಲಿಕೆಯಲ್ಲಾಗಲಿ ಅಥವಾ ಇನ್ನಿತರ ಚಟುವಟಿಕೆಗಳನ್ನು ಹೇಳಿಕೊಟ್ಟ ಶಿಕ್ಷಕರನ್ನು ನಾವು ಎಂದಿಗೂ ಮರೆಯಬಾರದು.. ಅದರಂತೆ ಪಾಠ ಹೇಳಿಕೊಟ್ಟ ಪ್ರತಿಯೊಬ್ಬರೂ ಒಳ್ಳೆಯ ಶಿಕ್ಷಕರೇ ಆಗಿರುತ್ತಾರೆ.. ಆ ಶಿಕ್ಷಕರೇ ಒಳ್ಳೆಯವರು, ಇಂತಹವರೇ ಉತ್ತಮ ಎಂದು ಹೇಳುವುದು ನನ್ನ ಪ್ರಕಾರ ತಪ್ಪಾಗುತ್ತದೆ, ಏಕೆಂದರೆ ಅವರು ನಮಗೋಸ್ಕರ ಎಷ್ಟು ಕಷ್ಟ ಪಟ್ಟಿದ್ದಾರೆ ಅಲ್ವಾ, ನಾವು ಚೆನ್ನಾಗಿ ಕಲಿಯಬೇಕು ಅನ್ನೋದು ಶಿಕ್ಷಕರ ಗುರಿ, ಆದ್ದರಿಂದ ನಾವು ಎಲ್ಲಾ ಶಿಕ್ಷಕರನ್ನು ಪ್ರೀತಿಸಬೇಕು.. ನಾವು ನಿಜವಾಗಿಯೂ ಅಂಗನವಾಡಿ ಶಿಕ್ಷಕರು, ಪ್ರಾಥಮಿಕ, ಪ್ರೌಢಶಾಲೆ ಹಾಗೂ ಕಾಲೇಜು ಶಿಕ್ಷಕರು ಇನ್ನೂ ನಮ್ಮ ಮುಂದಿನ ಜೀವನಕ್ಕೆ ನೆರವಾಗುವ ಶಿಕ್ಷಕರು ಎಲ್ಲರೂ ಉತ್ತಮ ಶಿಕ್ಷಕರೇ, ಅವರನ್ನು ಯಾವತ್ತೂ ಮರೆಯಬಾರದು.. ಹೀಗೆ ನನಗೆ ನಾಟ್ಯ ಮತ್ತು ಸಂಗೀತಕ್ಕೆ ನೆರವಾಗಿರುವ ಶಿಕ್ಷಕರು ಕೂಡ ನನಗೆ ನಲ್ಮೆಯ ಶಿಕ್ಷಕರು ಆಗಿದ್ದಾರೆ.. ಈ ಎಲ್ಲಾ ಶಿಕ್ಷಕರು ನನ್ನ ಮನದಾಳದಲ್ಲಿ ಯಾವಾಗಲೂ ಇರುತ್ತಾರೆ..
      ಆದರೆ "ಮನೆಯೇ ಮೊದಲ ಪಾಠಶಾಲೆ" ಹಾಗೂ "ತಾಯಿಯೇ ಮೊದಲ ಗುರು" ಎನ್ನುವ ಮಾತಿದೆ..ನನ್ನ ಪ್ರಕಾರ ಈ ಜಗತ್ತಿನಲ್ಲಿ ಅಪ್ಪನ ಹೆಗಲು ಹಾಗೂ ಅಮ್ಮನ ಮಡಿಲು ಪವಿತ್ರವಾದದ್ದು..
       ಹಾಗಾದರೆ ನನ್ನ ಜೀವನದಲ್ಲಿ ಪ್ರಭಾವ ಬೀರಿರುವ, ನನ್ನ ಕಲಿಕೆಯ ದೃಷ್ಟಿಕೋನವನ್ನು ಬದಲಾಯಿಸಿರುವ, ನನ್ನ ಯೋಚನೆಗೆ ಸರಿಯಾದ ದಿಕ್ಕನ್ನು ತೋರಿಸಿರುವ, ನನ್ನ ಕನಸುಗಳಿಗೆ ಇನ್ನಷ್ಟು ಬಣ್ಣಗಳನ್ನು ಹಚ್ಚಿರುವ, ಸ್ಪೂರ್ತಿ ನೀಡುತ್ತಿರುವ ನನ್ನ ಮನಃ ಪಟಲದಲ್ಲಿ ಉಳಿದವರು ಅದು ನನ್ನ ಅಮ್ಮ.. ನನ್ನ ಪ್ರತಿಯೊಂದು ವಿಚಾರದಲ್ಲೂ , ನನ್ನ ಪ್ರತಿಯೊಂದು ಹೆಜ್ಜೆಯಲ್ಲೂ, ನನ್ನ ಜೊತೆ ಜೊತೆಯಾಗಿ ನಿಂತೂ ನನಗೆ ಸಹ ಕರಿಸಿದವರು ನನ್ನ ಅಮ್ಮ..
ಅಮ್ಮನೆಂಬ ನೆರಳಿನ
ಅಡಿಯಲ್ಲಿ,ನಾನೊಂದು ಚಿಗುರು....
ಈ ಬದುಕು ಕೊಟ್ಟ ದೇವತೆಗೆ,
ನಾವಿಟ್ಟೆವು ಅಮ್ಮ ಎಂಬ ಹೆಸರು....
ಹೀಗೆ "ಅಮ್ಮನೇ ಸರ್ವಸ್ವ" ಎಂದು ಹೇಳುವ ಮಾತು ನಿಜ.. ಏಕೆಂದರೆ ಗುರುವಿಗೆ ಗುರುವಾಗಿ ನಮಗೆ ಜೀವನದ ಮೌಲ್ಯಗಳನ್ನು ಹೇಳಿಕೊಡುತ್ತಾರೆ, ಹಾಗೂ ಉತ್ತಮ ಗೆಳತಿಯಾಗಿ ಸುಖ-ದುಃಖಗಳನ್ನು ಹಂಚಿಕೊಳ್ಳುತ್ತಾರೆ.. ಹಾಗಾಗಿ ನನ್ನ ನೆಚ್ಚಿನ ಶಿಕ್ಷಕಿಯಾಗಿ ಹಾಗೂ ನನ್ನ ಮೊದಲ ಗುರುವಾಗಿ ಆಯ್ಕೆ ಮಾಡಿಕೊಳ್ಳುವುದು ನನ್ನ ಅಮ್ಮ .
......................................................ಅನನ್ಯ
ತರಗತಿ-1st PUC
ಶಾಲಾ ವಿಳಾಸ-SVS ಕಾಲೇಜು ಬಂಟ್ವಾಳ
ತಾಲೂಕು-ಬಂಟ್ವಾಳ
ಜಿಲ್ಲೆ-ದಕ್ಷಿಣ ಕನ್ನಡ
********************************************



Ads on article

Advertise in articles 1

advertising articles 2

Advertise under the article