-->
ಜೀವನ ಸಂಭ್ರಮ (ಸಂಚಿಕೆ 2)

ಜೀವನ ಸಂಭ್ರಮ (ಸಂಚಿಕೆ 2)



                   ಜೀವನ ಸಂಭ್ರಮ
      ಮಕ್ಕಳೇ ಜೀವನ ಸಂಭ್ರಮ ಎಂದರೇನು ?
ಜೀವನ ಸಂಭ್ರಮ  ಅಂದರೆ ಜೀವನದಲ್ಲಿ ಸಂಭ್ರಮ ಪಡುವುದು ಅಥವಾ ಸಂಭ್ರಮದಲ್ಲಿ ಜೀವನ ಸಾಗಿಸುವುದು ಅಲ್ವೇ....
ಇದಕ್ಕೆ ಡಿವಿಜಿ ಬರೆದ ಮಂಕುತಿಮ್ಮನ ಕಗ್ಗದಲ್ಲಿ ಬರುವ ಸಾಲುಗಳು ಈ ರೀತಿ ಇದೆ.          
       ಬರದಿಹುದರೆಣಿಕೆಯಲಿ ಬಂದಿಹುದ    
       ಮರೆಯದಿರು !
       ಗುರುತಿಸೊಳತಿರುವುದನು ಕೇಡುಗಳ    
       ನಡುವೆ!! 
       ಇರುವ ಭಾಗ್ಯವ ನೆನೆದು 
       ಬಾರನೆಂಬುದನು ಬಿಡು! 
       ಹರುಷಕದೆ ದಾರಿಯಲೋ ಮಂಕುತಿಮ್ಮ .
ಪ್ರತಿ ವಾಕ್ಯವು ಸಹ  ಸಂಭ್ರಮದಲ್ಲಿ ಜೀವನ ಹೇಗೆ ಸಾಗಿಸಬಹುದು ಎನ್ನುವುದನ್ನು ತಿಳಿಸುತ್ತದೆ. ಮೊದಲನೇ ವಾಕ್ಯದಲ್ಲಿ ಹೀಗಿದೆ. ಬರದೇ ಇರುವುದನ್ನು ಲೆಕ್ಕಾಚಾರ ಮಾಡುತ್ತಾ ‌ಕೂರದೆ, ಇರುವುದನ್ನು ಸಂಭ್ರಮದಿಂದ ಅನುಭವಿಸಬೇಕು. ಮುಂದೆ ಒಳ್ಳೆಯದು ಬರುತ್ತೋ ಇಲ್ಲವೋ ತಿಳಿಯದು. ಕಾಯುತ್ತ ಕುಳಿತರೆ ಇರುವ ಆಯಸ್ಸು ಮುಗಿದು ಬಳಸಲು ಸಾಧ್ಯವಿಲ್ಲದಂತಾಗಬಹುದು. ಹಾಗಾಗಿ ಇರುವುದನ್ನು ಹೇಗೆ ಸಂಭ್ರಮದಿಂದ ಬಳಸಬೇಕೆಂದು ಯೋಚಿಸಬೇಕು. ಅದನ್ನು ಪೂರ್ಣ ಪ್ರಮಾಣದಲ್ಲಿ ಆನಂದದಿಂದ ಅನುಭವಿಸಬೇಕು. ಅನುಭವಿಸಲಿಲ್ಲ ಎಂದು ಕೊರಗುವುದು ಬೇಡ. ಅಂದರೆ ಇರುವುದರಲ್ಲೇ ಸಂಭ್ರಮ ಪಡುವುದು ಹೇಗೆ ಎಂದು ಯೋಚಿಸಬೇಕು .
        ಎರಡನೇ ಸಾಲು ಅದ್ಭುತ. ಅಂದರೆ ಅನೇಕ ಕೆಡುಕುಗಳ ನಡುವಿರುವ ಒಂದು ಒಳಿತನ್ನಾದರೂ ಗುರುತಿಸುವ ಗುಣ ಬೆಳೆಸಿಕೊಳ್ಳಬೇಕು. ಕೇಡುಗಳು ನಮ್ಮನ್ನು ಹೇಳಿ ಕೇಳಿ ಬರುವುದಿಲ್ಲ. ನಮ್ಮ ಸುತ್ತಮುತ್ತ ನೂರು ಘಟನೆಗಳು ಇವೆ ಎಂದು ಭಾವಿಸಿ ಅದರಲ್ಲಿ ಶೇಕಡ 90ರಷ್ಟು ಕೆಟ್ಟದ್ದು ಇರಬಹುದಾದರೂ , ಉಳಿದ ಹತ್ತಾದರೂ ಒಳ್ಳೆಯದು ಇರುತ್ತವಲ್ಲ ‌, ಅದನ್ನು ನೆನೆದು ಸಂಭ್ರಮ ಪಡಬೇಕು. ಇದರ ಅರ್ಥದಲ್ಲಿ ಜೀವನವೇ ಅಡಗಿದೆ. 
        ಉದಾಹರಣೆಗೆ : ಯಾರಾದರೂ ಊಟಕ್ಕೆ ಕರೆದರೆ ಅವರು ಮಾಡಿರುವ ಅಡುಗೆಯಲ್ಲಿ ಯಾವುದೋ ಒಂದು ಉಪ್ಪು ಖಾರ ಹೆಚ್ಚಿರುತ್ತದೆ. ಆದರೆ ನಾವು ಸೊಗಸಿರುವುದನೆಲ್ಲ  ಮರೆತು ಲೋಪದೋಷಗಳನ್ನು ಕುರಿತು ಹೇಳುತ್ತಾ ಅಡುಗೆಯ ರುಚಿಯನ್ನು ಮರೆಯುತ್ತೇವೆ. ಇದರಿಂದ ತಿಂದ ಸಂಭ್ರಮ ಮರೆಯುತ್ತೇವೆ. ಇದನ್ನೇ ಜೀವನಕ್ಕೆ ಅಳವಡಿಸಿದರೆ ಇಂದು ಕುಟುಂಬದಲ್ಲಿ , ಸಮಾಜದಲ್ಲಿ, ಅತ್ತೆ-ಸೊಸೆ,  ಅಪ್ಪ-ಮಗ ,  ಗಂಡ-ಹೆಂಡ್ತಿ, ಸ್ನೇಹಿತರ ನಡುವೆ, ಅಧಿಕಾರಿಗಳ ನಡುವೆ, ಸಹೋದ್ಯೋಗಿಗಳ  ನಡುವೆ  ವೈಮನಸ್ಸು ಕಂಡುಬರುತ್ತದೆ. ಇದಕ್ಕೆ ಎರಡನೇ ಸಾಲು ಚಂದದ ಕಾರಣ ಲೋಪದೋಷಗಳನ್ನು ಗುರುತಿಸಿದ್ದು .
         ಹಾಗಾದರೆ ಸಂಭ್ರಮದಿಂದ ಇರಲು ಏನು ಮಾಡಬೇಕು? 
        ಯಾರೊಬ್ಬರೂ ಶೇಕಡ ನೂರರಷ್ಟು ಪರಿಪೂರ್ಣರಲ್ಲ. ಹಾಗಾಗಿ ಪ್ರತಿಯೊಬ್ಬರಲ್ಲೂ ಒಳ್ಳೆಯದು , ಕೆಟ್ಟದ್ದು ಇದ್ದೇ ಇರುತ್ತವೆ. ಹಾಗಾಗಿ ನಾವು ಕೆಡುಕುಗಳನ್ನು ಗುರುತಿಸುವುದು ಬೇಡ. ನಾವು ಸಂಭ್ರಮಪಡಲು ಮಾಡಬೇಕಾದದ್ದು ಅಂದರೆ  ಒಳ್ಳೆಯದನ್ನು ಗುರುತಿಸಿ ಎತ್ತಿ ಹಾಡಿ ಸಂಬಂಧಗಳನ್ನು ಗಟ್ಟಿಮಾಡಿ ಸಂಭ್ರಮ ಪಡುವುದು.
      ಇನ್ನು ಮೂರನೇ ಸಾಲು ಇರುವ ಭಾಗ್ಯ ಎಂದರೆ ಸೌಭಾಗ್ಯ ಇರಬಹುದು ಅಥವಾ ದೌರ್ಭಾಗ್ಯ ಇರಬಹುದು. ಸೌಭಾಗ್ಯವಿದ್ದಲ್ಲಿ ಇನ್ನೂ ಹೆಚ್ಚಿಗೆ ಬರುವಂತೆ ,  ದೌರ್ಭಾಗ್ಯವಿದ್ದಲ್ಲಿ ಅದರಿಂದ ವಿಮುಕ್ತಿ ಪಡೆಯುವಂತೆ ಪ್ರಯತ್ನಿಸಬೇಕು.  ಸೌಭಾಗ್ಯ ಅಥವಾ ದೌರ್ಭಾಗ್ಯ ಎಂತಹ ಸಂದರ್ಭವೇ ಇರಲಿ ಅವಕಾಶ ಸಿಕ್ಕಾಗ ಬಳಸಿಕೊಳ್ಳುವವನೇ ಜಾಣ ಎಂಬ ನಾಣ್ಣುಡಿಯಂತೆ ಅದರಲ್ಲಿರುವ ಒಳ್ಳೆಯ ಅವಕಾಶವನ್ನು  ಗುರುತಿಸಿ ಬಳಸಿಕೊಳ್ಳುವುದು ಜಾಣತನ. ಇದೇ ನಮ್ಮ ಹಣೆಬರಹ ಎಂದು ಕೂರಬಾರದು. ಇರುವ ಅವಕಾಶಗಳನ್ನು‌ ಚೆನ್ನಾಗಿ ಬಳಸಬೇಕು. ಇಲ್ಲವೇ  ಅವಕಾಶವನ್ನು ನಾವೇ ಸೃಷ್ಟಿಸಿ ಮೇಲೇರಬೇಕು. ಇದೆ ಅಲ್ಲವೇ ಹರ್ಷ ಕ್ಕಿರುವ ಹಾದಿ ಮತ್ತು ಸಂಭ್ರಮದ ವಿಧಾನ.    
            ಡಾಕ್ಟರ್ ಗುರುರಾಜ ಕರ್ಜಗಿ ಅವರು ಹೇಳಿದಂತೆ ಜೀವನದಲ್ಲಿ ಸಂಭ್ರಮ ಪಡುವುದು ನಮ್ಮ ಆಯ್ಕೆ. ನಮ್ಮ ಜೀವನ ಜೇನು ನೊಣದಂತೆ ಇರಬೇಕು, ನೊಣದಂತೆ ಅಲ್ಲ. ಅಂದರೆ ಜೇನುನೊಣ ಹೂವನ್ನು ಮಾತ್ರ ಆಯ್ಕೆ ಮಾಡಿಕೊಂಡು, ಹೂವನ್ನೇ ಹುಡುಕಿ ಹುಡುಕಿ ಹೋಗುತ್ತದೆ.  ಹೂವಿಗೆ ಹಾನಿಯಾಗದಂತೆ ತನಗೆ ಮತ್ತು ಇತರರಿಗೆ ಬೇಕಾದ ಮಕರಂದ ಹೀರುತ್ತದೆ . ಆದರೆ ಹೂವಿಗೆ ಯಾವುದೇ ನೋವುಂಟು ಮಾಡುವುದಿಲ್ಲ. ನೊಣ ಮಾತ್ರ ಸತ್ತ ಜೀವಿಯ ಹತ್ತಿರವೇ ಇರುತ್ತದೆ. ಜೇನುನೊಣ ಮಾತ್ರ ಅಂತಹ ಜಾಗಕ್ಕೆ ಹೋಗುವುದಿಲ್ಲ. ಅಂದರೆ ನಾವು ಜೇನಿನ ನೊಣದಂತೆ ಒಳ್ಳೆಯ ನೋಟವನ್ನು ನೋಡುವ, ಒಳ್ಳೆಯ ಮಾತು ಕೇಳುವ ಮತ್ತು ಮಾತನಾಡುವ , ಒಳ್ಳೆಯದನ್ನು ಸ್ಪರ್ಶಿಸುವ  ಮತ್ತು ಒಳ್ಳೆಯ ವಾಸನೆ ಪಡೆಯುವ , ನಮಗೆ ಸ್ಫೂರ್ತಿ ನೀಡುವ ಸಕಾರಾತ್ಮಕ ಚಿಂತನೆಗಳಿಗೆ ಅವಕಾಶ ನೀಡುವ ಪುಸ್ತಕ ಓದುವುದು , ಭಾಷಣ ಕೇಳುವುದು , ಹೀಗೇ ಒಳ್ಳೆಯದನ್ನೇ ಮಾಡಿದರೆ ಜೀವನ ಸಂಭ್ರಮವಾಗುತ್ತದೆ. 
         ಡಾಕ್ಟರ್ ಬಿ.ಎಂ. ಹೆಗ್ಡೆಯವರು ಹೇಳಿದಂತೆ ನಮ್ಮ ಜೀವನ ಕನ್ನಡಿ. ಕನ್ನಡಿಯ ಮುಂದೆ ನಿಂತಾಗ ನಾವು ಹೇಗಿದ್ದೇವೋ ಹಾಗೆ ತೋರಿಸುತ್ತದೆ. ಅಂದರೆ ಸಮಾಜಕ್ಕೆ ಸಂತೋಷ ನೀಡಿದರೆ ಸಂತೋಷ ವಾಪಸ್ಸು ಬರುತ್ತದೆ. ದುಃಖ ನೀಡಿದರೆ ದುಃಖ ವಾಪಸ್ ಬರುತ್ತದೆ. ನಮ್ಮ ಸುತ್ತಲಿನವರಿಗೆ ಸಂತೋಷ ನೀಡಬೇಕು  ಮತ್ತು ಸಂತೋಷವನ್ನು ಪಡೆಯಬೇಕು.  ನಾವಿರುವ ಸ್ಥಳವನ್ನು ಸ್ವರ್ಗವನ್ನಾಗಿ ಮಾಡಬೇಕು. ಸ್ವರ್ಗಕ್ಕಾಗಿ ಹುಡುಕಾಡ ಬಾರದು.  ಇರುವ ಸ್ಥಳದಲ್ಲಿ , ಇರುವುದರಲ್ಲೇ ಸಂಭ್ರಮ ಪಡಬೇಕು. ಮಾಡುವ ಕೆಲಸದಲ್ಲಿ ಸೌಂದರ್ಯಕ್ಕೆ ಒತ್ತು ನೀಡಿ, ಅಚ್ಚುಕಟ್ಟಾಗಿ  ಪ್ರೀತಿಯಿಂದ ಮಾಡಿದರೆ ಅಲ್ಲಿ ಆನಂದ ಕಾಣಬಹುದು. 
        ಸಮಸ್ಯೆ ಬಂದಾಗ ಹೇಗೆ ಸಂಭ್ರಮ ಪಡುವುದು?
      ಮಕ್ಕಳೇ , ಸಮಸ್ಯೆ ಕುರಿತು ಚಿಂತಿಸಿದರೆ ನಾವು ಸಮಸ್ಯೆಯ ಭಾಗವಾಗುತ್ತೇವೆ. ಅದರ ಬದಲು ಪರಿಹಾರದ ಕುರಿತು  ಯೋಚಿಸಿದರೆ ನಾವು ಪರಿಹಾರದ ಭಾಗವಾಗಿ ಸಂಭ್ರಮ ಕಾಣುತ್ತೇವೆ. ಪ್ರತಿಯೊಂದರಲ್ಲೂ ಧನಾತ್ಮಕತೆಯನ್ನು ಬೆಳೆಸಿಕೊಂಡು ಸಂಭ್ರಮದಿಂದ ಜೀವನ ಬೆಳೆಸೋಣ. ನಾವು ಅರಮನೆಯಲ್ಲಿದ್ದು ಸಂಕಟ ಪಡಬಹುದು. ಅದೇ ರೀತಿ ಗುಡಿಸಿಲಿನಲ್ಲಿ ಇದ್ದೂ ಸಂಭ್ರಮ ಪಡಬಹುದು. ಇದರ ಅರ್ಥ ಸಂಭ್ರಮಕ್ಕೆ ಹಣ , ಅಂತಸ್ತು ಮುಖ್ಯವಲ್ಲ.  ನಾವು ಸಂಭ್ರಮಪಡಲು ನಮಗಿಂತ ಮೇಲಿನವರನ್ನು ನೋಡುವ ಬದಲು ಕೆಳಗಿನವರನ್ನು ನೋಡಿ ಸಂಭ್ರಮ ಪಡಬೇಕು. ವಯಸ್ಸಾದರೂ ಸರಿಯೇ ದೇಹಕ್ಕೆ ಮಾತ್ರ ವಯಸ್ಸಾಗುವುದು. ಮನಸ್ಸನ್ನು ಯುವಕರಂತೆ ಕಾಪಾಡಿದರೆ ಮುದಿವಯಸ್ಸಿನಲ್ಲೂ ಸಂತೋಷ  ಕಾಣಬಹುದು. ಹಾಗೆಯೇ ಈಗಿರುವ ಕರೋನ ಸಂದರ್ಭದಲ್ಲಿ ಇದನ್ನು ಕಠಿಣ ಪರಿಸ್ಥಿತಿ ಎಂದುಕೊಳ್ಳದೆ, ಸಿಕ್ಕಿರುವ ಒಂದು ಸದಾವಕಾಶ ಎಂದುಕೊಂಡು , ಈ ಅವಕಾಶವನ್ನು ಬಳಸಿಕೊಂಡು ಒಂದು ಹೊಸ ಕಲಿಕೆಯನ್ನು ಪ್ರಾರಂಭ ಮಾಡಬಹುದು. ಹಾಗೆ ಒಂದು ಹೊಸ ಕೆಲಸ ಮಾಡಲು ದೊರಕಿದ ಸುಸಂದರ್ಭ ಎಂದು ಭಾವಿಸಿದರೆ ಇದು ಕೂಡ ಸಂಭ್ರಮ ವಾಗುತ್ತದೆ..
..........................................ಎಂ.ಪಿ. ಜ್ಞಾನೇಶ್ 
ಕ್ಷೇತ್ರ ಶಿಕ್ಷಣಾಧಿಕಾರಿ
ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
**********************************************


Ads on article

Advertise in articles 1

advertising articles 2

Advertise under the article