-->
ಜಗಲಿಯ ಮಕ್ಕಳ ಕವನ ಲೇಖನ ಚಿತ್ರಗಳು - ಶಿಕ್ಷಕರ ದಿನಾಚರಣೆ ವಿಶೇಷ

ಜಗಲಿಯ ಮಕ್ಕಳ ಕವನ ಲೇಖನ ಚಿತ್ರಗಳು - ಶಿಕ್ಷಕರ ದಿನಾಚರಣೆ ವಿಶೇಷ


                 ಶಿಕ್ಷಣ ಶಕ್ತಿ
           -------------------
ಪಡೆಯಬೇಕು ನಾವೆಲ್ಲರೂ ಶಿಕ್ಷಣ 
ಅದುವೇ ಬಾಳ ಬೆಳಗುವ ಆಶಾಕಿರಣ 
     ಶಿಕ್ಷಣವೆಂಬ ಈ ಯುದ್ಧರಂಗದಲಿ 
     ಪಳಗಿದವಗೆ ಉಳಿಗಾಲವಿದೆ ಈ ಜಗದಲಿ!
ಶಿಕ್ಷಣದಿಂದ ಕಲಿಯಬಹುದು ಜೀವನ ಮೌಲ್ಯವ
ಅರಗಿಸಿಕೊಳ್ಳಬಹುದು ನೀತಿ ಶಿಕ್ಷಣವ 
      ನಮ್ಮ ಆಯುಧವಾಗಿಹುದು ಪುಸ್ತಕ!
      ಇದರಿಂದ ಹರಿತಗೊಳಿಸಬೇಕಿದೆ ಮಸ್ತಕ
ಈ ಶಿಕ್ಷಣವೆಂಬ ನಿರಂತರ ತುಡಿತ 
ಹೊಸತನನ್ವೇಷಿಸಲು ಸಹಕರಿಸುವ ಪಥ! 
      ಇದೊಂದು ಅಂತ್ಯವಿಲ್ಲದ ಆಗಸ
      ಮುಂದಡಿಯಿಡುವುದೇ ಬಲು ಸಾಹಸ!
ಶಿಕ್ಷಣದಿಂದಲೇ  ಬಾಳಿಗೊಂದು ವೃತ್ತಿ 
ಇದುವೇ ನಮ್ಮ ಜೀವನಾಧಾರದ ಶಕ್ತಿ!! 
.................................................ಬಿಂದುಶ್ರೀ 
ಪ್ರಥಮ ಪಿಯುಸಿ ವಿಜ್ಞಾನ ವಿಭಾಗ 
ವಿಠಲ ಪದವಿ ಪೂರ್ವ ಕಾಲೇಜು, ವಿಟ್ಲ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
******************************************       

 

    ಬದುಕಿನ ಮಾರ್ಗದರ್ಶಕ - ಗುರು (ಲೇಖನ)
----------------------------------------------
        ಮಾತೃದೇವೋಭವ 
        ಪಿತೃದೇವೋಭವ 
        ಆಚಾರ್ಯ ದೇವೋಭವ 
ಎಂಬ ಮಾತಿದೆ. ಅದೇ ರೀತಿ ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ. ಹೀಗೆ ಅನೇಕ ಮಾತುಗಳು ಗುರುವಿನ ಮಹತ್ವವನ್ನು ಅವರ ಅವಶ್ಯಕತೆ ಜೊತೆಗೆ ಅವರಿಗೆ ಸಲ್ಲಬೇಕಾದ ಗೌರವವನ್ನು ಪ್ರತಿಬಿಂಬಿಸುತ್ತದೆ. ಹುಟ್ಟಿದ ಮಗುವಿಗೆ ಪಾಲನೆ-ಪೋಷಣೆ ಮಾಡುವ ತಾಯಿ ಗುರುವಾಗಿ ಕಂಡರೆ, ಬೆಳೆಯುತ್ತ ಕೈಹಿಡಿದು ನಡೆಸುವ ತಂದೆ ಕೂಡಾ ಗುರು. ಹೀಗೆ ವ್ಯಕ್ತಿಯ ವ್ಯಕ್ತಿತ್ವ ವಿಕಸನದ ಪ್ರತಿ ಹೆಜ್ಜೆಹೆಜ್ಜೆಗೂ ಮಾರ್ಗದರ್ಶನ ನೀಡುವ ಪ್ರತಿ ವ್ಯಕ್ತಿಗಳು ಗುರುಗಳೇ.... ಪ್ರತಿಯೊಬ್ಬ ಸಾಧಕನ ಮುಂದೆ ಗುರಿ , ಹಿಂದೆ ಗುರು ಇರುತ್ತಾನೆ ಎಂಬ ಮಾತಿದೆ. ಒಬ್ಬ ವ್ಯಕ್ತಿ ಸಾಧನೆ ಎಂಬ ಗುಡಿ ತಲುಪಲು ಏರುವ ಪ್ರತಿಹಂತದ ಮೆಟ್ಟಿಲಲ್ಲೂ ಒಬ್ಬ ಗುರುವನ್ನು ಕಂಡೇ ಕಾಣುತ್ತಾನೆ. ಪ್ರತಿಯೊಂದು ಹೆಜ್ಜೆಗೆ ಸಲಹೆ , ಮಾರ್ಗದರ್ಶನ ನೀಡುವವರೂ ಗುರುವೇ. ಓದಿದ ಪುಸ್ತಕ , ನೋಡಿದ ಘಟನೆ , ಕೇಳಿಸಿಕೊಂಡ ಮಾತು ಹೀಗೆ ಮನುಷ್ಯನ ಜೀವನ ಯಾತ್ರೆಯಲ್ಲಿ ಹೊಸದಾಗಿ ಕಲಿತ ಹಾಗೂ ಕಲಿಸಿದ ವ್ಯಕ್ತಿ ಗುರುವಿನ ಸಮಾನ ಎನ್ನುವುದು ನನ್ನ ಅಭಿಪ್ರಾಯ. 
            ಶಿಕ್ಷಕ ಅಥವಾ ಗುರು ಎಂದಾಗ ತಕ್ಷಣಕ್ಕೆ ನೆನಪಿಗೆ ಬರುವುದು ಡಾಕ್ಟರ್ ಸರ್ವಪಲ್ಲಿ ರಾಧಾಕೃಷ್ಣನ್. ಸೆಪ್ಟೆಂಬರ್ ೫ ಅವರ ಜನ್ಮದಿನ. ಶಿಕ್ಷಣ ಕ್ಷೇತ್ರದಲ್ಲಿ ಅದ್ಭುತ ರೀತಿಯ ಸೇವೆ ಸಲ್ಲಿಸಿ ಇತರ ಶಿಕ್ಷಕ ವರ್ಗಕ್ಕೂ ಮಾದರಿಯಾಗಿರುವ ಸರ್ವಪಳ್ಳಿ ರಾಧಾಕೃಷ್ಣನ್ ಅವರ ಜನ್ಮದಿನವನ್ನು ಪ್ರತಿ ವರ್ಷ ಸೆಪ್ಟೆಂಬರ್ ೫ನೇ ದಿನವನ್ನು ಶಿಕ್ಷಕರ ದಿನವೆಂದು ಆಚರಿಸಲಾಗುತ್ತಿದೆ. 
        ಗುರು-ಶಿಷ್ಯರ ವಿಚಾರ ಬಂದಾಗ ತಕ್ಷಣಕ್ಕೆ ನೆನಪಾಗುವುದು ದ್ರೋಣಾಚಾರ್ಯರು ಹಾಗೂ ಏಕಲವ್ಯ. ಪ್ರತ್ಯಕ್ಷವಾಗಿ ಗುರುವಿನಿಂದ ಶಿಕ್ಷಣ ಪಡೆದಿದ್ದರೂ ಗುರುವಿನ ಆದರ್ಶವನ್ನು ಪಾಲನೆ ಮಾಡಿ ಇತಿಹಾಸದಲ್ಲೇ ಶ್ರೇಷ್ಠ ಶಿಷ್ಯ ಎಂದೆನಿಸಿಕೊಂಡ ಏಕಲವ್ಯ. ಗುರು ದೇವರಿಗೆ ಸಮಾನ ಎಂದು ಶ್ಲೋಕಗಳು ಹೇಳುತ್ತದೆ. ತಂದೆ-ತಾಯಿಗೆ ಗೌರವ ನೀಡುವಂತೆ ಗುರುವನ್ನು ಗೌರವಿಸೋಣ. ಗುರುವಿನ ಮಾರ್ಗದರ್ಶನದಲ್ಲಿ ಸಾಗೋಣ .ಗುರುವಿಗೆ ತಕ್ಕ ಶಿಷ್ಯರಾಗೋಣ
.......................................................... ಶ್ರಾವ್ಯ
ಪ್ರಥಮ ಪಿಯುಸಿ
ಶ್ರೀರಾಮ ವಿದ್ಯಾಕೇಂದ್ರ
ಕಲ್ಲಡ್ಕ , ಬಂಟ್ವಾಳ ತಾಲೂಕು 
ದಕ್ಷಿಣ ಕನ್ನಡ ಜಿಲ್ಲೆ
****************************************
                                          


            ಶಿಕ್ಷಣವೇ ಶಕ್ತಿ - ಕವನ
         ----------------------------------
ಶಿಕ್ಷಣ ಎಂದರೆ ನಮಗೆ ಶಕ್ತಿಯಂತೆ;
ಶಿಕ್ಷಣ ನಮ್ಮ ರಕ್ಷಣೆಯಂತೆ;
ನಮ್ಮ ಬಾಳಿನ ಮುಖ್ಯ ಘಟಕವೇ ಶಿಕ್ಷಣವಂತೆ;
ಶಿಕ್ಷಣದಲ್ಲಿ ಸಿಗುವ ಅನುಭವ ಸ್ವರ್ಗದಂತೆ;
ಶಿಕ್ಷಣವಿದ್ದರೆ ನಮ್ಮ ಜೀವನದಲ್ಲಿ
ಎಲ್ಲವನ್ನೂ ಸಾಧಿಸಿದಂತೆ.
        ಶಿಕ್ಷಣವೇ ಜ್ಞಾನದ ಲಕ್ಷಣ;
        ಶಿಕ್ಷಣವೇ ಮಾನವಕುಲಕ್ಕೆ ಮಾರ್ಗದರ್ಶನ;
        ಶಿಕ್ಷಣವನ್ನು ನಾವೂ ಕಲಿಯೋಣ;
        ಮುಂದಿನ ಮಕ್ಕಳಿಗೂ ಕಲಿಸೋಣ;
        ಅಜ್ಞಾನ ಎಂಬುದನ್ನು ದೂರವಿಡೋಣ.
ಅನ್ನ ಇದ್ದರೆ ಉಪವಾಸವಿಲ್ಲ;
ಶಿಕ್ಷಣ ಇದ್ದರೆ ಭಯವಿಲ್ಲ;
ಶಿಕ್ಷಣ ಶಕ್ತಿಯ ಮುಂದೆ ಯಾವುದೂ ಇಲ್ಲ;
ಇದೇ ಶಿಕ್ಷಣಕ್ಕಿರುವ ಶಕ್ತಿ;
ಇದೇ ನಮ್ಮ ಬಾಳಿಗೆ ಮುಕ್ತಿ.
 ....................................................... ಪ್ರಿಯಾ
ಪ್ರಥಮ ಪಿಯುಸಿ
ಸರಕಾರಿ ಪದವಿ ಪೂರ್ವ ಕಾಲೇಜು , ಕನ್ಯಾನ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
****************************************


         ಶಿಕ್ಷಕರ ದಿನಾಚರಣೆ (ಕವನ)
     ------------------------------------
ಗುರು ಶಿಷ್ಯರ ನಡುವಿನ ಸಂಬಂಧ 
ಬಿಡಿಸಲಾರದ ಅನುಬಂಧ
      ಅಜ್ಞಾನವ ಅಳಿಸಿ 
      ಜ್ಞಾನವ ಬೆಳೆಸಿ
ಜ್ಞಾನವೆಂಬ ಖಣಜಕ್ಕೆ ಶಿಕ್ಷಣವ ಬಿತ್ತು 
ಪುಸ್ತಕವೇ ನನ್ನ ನೆಚ್ಚಿನ ಸ್ವತ್ತು
      ತಾಯಿಯೇ ಮೊದಲ ದೇವರು
      ಕಲಿಸಿದವರೆಲ್ಲರೂ ಗುರು
ಸದಾ ಒಳಿತನ್ನು ಬಯಸುತ್ತಾ
ಮಾಡಿದ ತಪ್ಪು ಕೆಲಸಗಳನ್ನು ತಿದ್ದುತ್ತಾ
      ಬದುಕಿನ ದಾರಿಗೆ ಬೆಳಕ ನೀಡಿದ ಗುರುವು
      ಬುದ್ಧಿ ಹೇಳಿ ಮೂಡಿಸಿದರು ಅರಿವು
ಸದಾ ಪ್ರೀತಿ, ಮಮತೆಯನ್ನು ತೋರುತ್ತಾ
ತನ್ನ ಮಕ್ಕಳಂತೆ ಪ್ರೋತ್ಸಾಹಿಸುತ್ತಾ
      ಒಂದೊಳ್ಳೆ ದಾರಿದೀಪದಂತೆ 
      ಇಡೀ ನಮ್ಮ ಜೀವನವೇ ಪ್ರಜ್ವಲಿಸುವಂತೆ
ನಮ್ಮೊಳಗಿನ ಪ್ರತಿಭೆಗಳನ್ನು ಪ್ರದರ್ಶಿಸುವಂತೆ 
ಒಳ್ಳೆಯ ಮಾರ್ಗದರ್ಶನ ನೀಡುತ್ತಾ
       ಶುಭ ಹಾರೈಕೆಗಳನು ಹಾರೈಸುತ್ತಾ
       ಎಲ್ಲೆಲ್ಲೂ ಮುನ್ನಡೆ ಸಾಧಿಸು ಎನ್ನುತ್ತಾ
ಎಲ್ಲದರಲ್ಲೂ ಹುರಿದುಂಬಿಸುವ 
ತಮಗೆಲ್ಲರಿಗೂ 
ನಾನೆಂದು ಚಿರಋಣಿ...
 .....................................................ಅನುಲಕ್ಷ್ಮಿ 
10ನೇ ತರಗತಿ 
ಮಂಚಿ ಕೊಳ್ನಾಡು ಪ್ರೌಢಶಾಲೆ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*********************************************
ಆರ್ಯಾ.ಎಂ
9 ನೇ ತರಗತಿ ವಿದ್ಯಾರ್ಥಿನಿ
ಅಂಬಿಕಾ ವಿದ್ಯಾಲಯ ಬಪ್ಪಳಿಗೆ ‌
ಪುತ್ತೂರು , ದ.ಕ ಜಿಲ್ಲೆ
**********************************************                  ಗುರುಗಳು - ಲೇಖನ
               -------------------------------
       ಶಾಲೆ ಎಂಬುವುದೇ ದೇಗುಲ , ಮಕ್ಕಳೇ ದೇವರು , ಗುರುಗಳೇ ಅರ್ಚಕರು ಎಂಬ ಮಾತಿನಂತೆ..... ಗುರುಗಳೆಂದರೆ ಪ್ರತಿಯೊಬ್ಬರ ಬಾಳಿಗೆ ದಾರಿ ದೀಪ ತೋರುವ ದೇವರು. ಮೆದುಳಿಗೆ ಬಿದ್ದ ಅಕ್ಷರ ಭೂಮಿಗೆ ಬಿದ್ದ ಬೀಜ ಎಂದೂ ವ್ಯರ್ಥವಾಗದು. ಹಾಗೆಯೇ ಜ್ಞಾನ ಮತ್ತು ಗುರುಗಳ ನಂಟು ಎಂದೂ ಅಳಿದು ಹೋಗದು. ಗುರುಗಳು ಒಬ್ಬ ಶಿಲ್ಪಿ ಇದ್ದ ಹಾಗೆ. ಗುರುಗಳು ಎಂದರೆ ವ್ಯಕ್ತಿಯಲ್ಲ ಒಂದು ಶಕ್ತಿ. ಅಜ್ಞಾನದ ಕತ್ತಲೆಯನ್ನು ಕಳೆದು ಸುಜ್ಞಾನದ ಕಡೆಗೆ ಕರೆದುಕೊಂಡು ಹೋಗುವವರೇ ಗುರು. ಅಂದಿಗೂ ಇಂದಿಗೂ ಎಂದೆಂದಿಗೂ ಗುರು ಎಂಬ ಸ್ಥಾನ ಅಸಾಧಾರಣವಾದುದು. ಗುರು ಕಟ್ಟಿಕೊಡುವ ಜ್ಞಾನದ ಬುತ್ತಿ ಜೀವಮಾನವಿಡೀ ಬೆಂಗಾವಲಾಗಿ ಬರುತ್ತದೆ. ಒಂದು ಮಗುವಿಗೆ ತಂದೆ-ತಾಯಿ ಜನ್ಮ ಕೊಡಬಹುದು. ಆದರೆ ಉತ್ತಮ ನಡತೆಯನ್ನು ನೀಡಿ ಅವನನ್ನು ಮನುಷ್ಯರಾಗಿ ರೂಪಿಸುವ ಸಾಮರ್ಥ್ಯವಿರುವುದು ಒಬ್ಬ ಗುರುವಿಗೆ ಮಾತ್ರ. ಗುರುವಿಲ್ಲದೆ ಗುರಿಯನ್ನು ತಲುಪುವುದು ಬಹಳ ಕಷ್ಟ. ಮಕ್ಕಳ ಭವಿಷ್ಯವನ್ನು ರೂಪಿಸಿ ಮಕ್ಕಳಲ್ಲಿ ಸಂಸ್ಕಾರ, ಸಂಸ್ಕೃತಿ , ವಿವೇಕ , ತಾಳ್ಮೆ, ಪ್ರಾಮಾಣಿಕತೆ , ಮಾನವೀಯ ಮೌಲ್ಯಗಳನ್ನು ಕಲಿಸುತ್ತಾ ಬಂದಿರುವ ಎಲ್ಲಾ ಗುರುಗಳಿಗೆ ನನ್ನ ಅನಂತ ನಮನಗಳು .
...................................................... ಧೃತಿ 
9 ನೇ ತರಗತಿ 
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ  
*******************************************

Ads on article

Advertise in articles 1

advertising articles 2

Advertise under the article