
ಬದಲಾಗೋಣವೇ ಪ್ಲೀಸ್....! ಸಂಚಿಕೆ - 10
ಬದಲಾಗೋಣವೇ ಪ್ಲೀಸ್....! ಸಂಚಿಕೆ - 10
-----------------------------------------------
ಅದೊಂದು ಪ್ರತಿಷ್ಠಿತ ಕಾಲೇಜು. ಹತ್ತಾರು ಮಂದಿಯಲ್ಲಿ ವಿಚಾರಿಸಿ ಹೊಸದಾಗಿ ಸೇರಿದ ಹುಡುಗನೊಬ್ಬ ಪ್ರತಿದಿನ ಕಾಲೇಜಿಗೆ ಹೋಗಿ ಸಪ್ಪೆ ಮೋರೆಯೊಂದಿಗೆ ಮನೆಗೆ ಬರುತ್ತಿದ್ದನು. ಪ್ರತಿದಿನ ಮಗನ ಬರುವಿಕೆಗಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದ ತಂದೆಯು " ಕಾಲೇಜು ಹೇಗುಂಟು ಮಗಾ ? " ಎಂದು ಕುತೂಹಲದಿಂದ ಪ್ರಶ್ನಿಸುತ್ತಿದ್ದರು. ಆದರೆ ಮಗ ನಿರುತ್ತರನಾಗಿ ತನ್ನ ರೂಂ ಸೇರುತ್ತಿದ್ದ.
ನಿರಾಶೆಮುಖಿಯಾಗಿದ್ದ ಆತನು ಒಂದು ದಿನ ತಂದೆಯ ಬಳಿ ಬಂದು "ಅಪ್ಪಾ..., ಇನ್ನು ಮುಂದೆ ನಾನು ಆ ಕಾಲೇಜಿಗೆ ಹೋಗುವುದಿಲ್ಲ . ಅಲ್ಲಿದ್ದರೆ ನಾನು ಏನನ್ನು ಕಲಿಯಲಾರೆ " ಎಂದು ಕೋಪದಿಂದ ಪ್ರತ್ಯುತ್ತರ ಕೊಟ್ಟನು. "ಕಾಲೇಜಿನಲ್ಲಿ ಏನಾದರು ತೊಂದರೆಯಾಯಿತಾ....? ಏನು ನಡೆಯಿತು ಮಗಾ.." ಎಂದು ತಲೆ ನೇವರಿಸಿ ತಂದೆಯು ಕೇಳಿದರು.
"ಅಪ್ಪಾ..., ತುಂಬಾ ದಿನಗಳಿಂದ ಕಾಲೇಜಿನಲ್ಲಿ ಏಕಾಗ್ರತೆ ಕಳೆದುಕೊಳ್ಳುತ್ತಿದ್ದೇನೆ. ತುಂಬಾ ವಿದ್ಯಾರ್ಥಿಗಳಿಗೆ ಶಿಕ್ಷಣದ ಮೇಲೆ ಆಸಕ್ತಿಯೇ ಇಲ್ಲ, ಕಲಿಕೆಯ ಮೇಲೆ ಮನಸ್ಸಂತೂ ಇಲ್ಲವೇ ಇಲ್ಲ . ಎಲ್ಲರೂ ಎಂಜಾಯ್ ಗೆ ಬಂದವರಂತೆ ಕಾಣುತ್ತಾರೆ. ಕ್ಯಾಂಪಸ್ ಹೊರಗಡೆ ಎಲ್ಲರೂ ಅವರವರ ಮೊಬೈಲ್ ಫೋನ್‌ಗಳಲ್ಲಿ ಮಾತನಾಡುವುದು , ಚಾಟಿಂಗ್ , ಡೇಟಿಂಗ್ , ಸೆಲ್ಪಿ ಫೋಟೋಗಳನ್ನು ತೆಗೆಯುವುದರಲ್ಲೇ ನಿರತರಾಗಿರುತ್ತಾರೆ. ತರಗತಿಗೆ ಹಾಜರಾಗುವ ಬದಲು ಕ್ಯಾಂಪಸ್ ನಲ್ಲಿ ತಿರುಗಾಡುವುದರಲ್ಲಿ ಬ್ಯುಸಿ ಇರುತ್ತಾರೆ. ಕಾಲೇಜಿಗೆ ಸಂಬಂಧಿಸಿದ್ದನ್ನು ಬಿಟ್ಟು ಬೇರೆ ಎಲ್ಲಾ ಸಂಗತಿಗಳನ್ನು ಚರ್ಚಿಸುತ್ತಾರೆ. ತರಗತಿಯಲ್ಲಿ ಓದುವ ಬದಲು ಓದುವವರನ್ನು ರೇಗಿಸುತ್ತಾರೆ. ಪಾಠ ಮಾಡಲೂ ಬಿಡುವುದಿಲ್ಲ. ಯಾರಲ್ಲೂ ನನಗೆ ಕಲಿಕಾಸಕ್ತಿ ಕಾಣಿಸಲೇ ಇಲ್ಲ.ಇನ್ನು ಮುಂದೆ ನಾನೆಂದೂ ಆ ಕಾಲೇಜಿಗೆ ಹೋಗಲಾರೆ " ಎಂದನು.
ಮಗನ ಅನಿರೀಕ್ಷಿತ ಉತ್ತರದಿಂದ ತಂದೆಗೆ ಶಾಕ್ ಹೊಡೆದಂತಾಯಿತು. ಸ್ವಲ್ಪಹೊತ್ತು ಮೌನವಾಗಿದ್ದುಕೊಂಡು " ಮಗಾ ನೀನು ಹೇಳಿದ್ದು ಸರಿ. ಆದರೆ ಯಾವುದೇ ಅಂತಿಮ ನಿರ್ಧಾರಕ್ಕೆ ಬರುವ ಮುನ್ನ ನನ್ನದೊಂದು ಸಣ್ಣ ಇಚ್ಛೆಯನ್ನು ನೆರವೇರಿಸುತ್ತೀಯಾ ?" ಎಂದನು.
ಅಪ್ಪನ ವಿನಮ್ರ ಮುಖಭಾವ ನೋಡಿ " ನಿಮ್ಮಿಚ್ಛೆ ಅಪ್ಪಾ .. ಏನು ಮಾಡಬೇಕು ?" ಅಂದನು. " ಮಗಾ , ನೀನು ಕಾಲೇಜಿಗೆ ನಾಳೆ ಹೋಗುವಾಗ ಒಂದು ಮುಚ್ಚಳವಿಲ್ಲದ ನೀರಿನ ಬಾಟಲಿಯಲ್ಲಿ ಪೂರ್ತಿಯಾಗಿ ನೀರು ತೆಗೆದುಕೊಂಡು ಹೋಗಿ ಸಂಜೆ ಜಾಗ್ರತೆಯಲ್ಲಿ ಆ ಬಾಟಲಿಯನ್ನು ತರಬೇಕು ಅಷ್ಟೇ. ಆದರೆ ನೀರಿನ ಬಾಟಲಿಯಿಂದ ಒಂದೇ ಒಂದು ಹನಿ ನೀರು ಕೂಡಾ ಕೆಳಗೆ ಚೆಲ್ಲಬಾರದು. ಈ ಕೆಲಸ ಮಾಡುತ್ತೀಯಾ " ಎಂದನು. ಕೆಲಸವನ್ನು ಒಪ್ಪಿದ ಮಗ " ಹಾಗೆಯೇ ಆಗಲಿ, ನಿಮಗಾಗಿ ಖಂಡಿತಾ ಮಾಡುತ್ತೇನೆ." ಎಂದನು.
ಮಾರನೇ ದಿನ ಮುಚ್ಚಳವಿಲ್ಲದ ಬಾಟಲಿಯಲ್ಲಿ ಪೂರ್ತಿ ನೀರು ತೆಗೆದುಕೊಂಡು ಉತ್ಸಾಹದಿಂದ ಹೊರಟನು. ಕಾಲೇಜು ಮುಗಿದ ಬಳಿಕ ನೀರು ತುಂಬಿದ ಲೋಟದೊಂದಿಗೆ ಮನೆಗೆ ಹಿಂತಿರುಗಿ " ತಗೋ ಅಪ್ಪಾ…ನಾನು ಕಾಲೇಜಿಗೆ ಹೋಗಿ ನೀವು ಹೇಳಿದಂತೆ ಬಂದೆ. ಒಂದೇ ಒಂದು ಹನಿ ನೀರು ಸಹ ಚೆಲ್ಲಲಿಲ್ಲ" ಎಂದು ಗೆಲುವು ಸಾಧಿಸಿದ ಭ್ರಮೆಯೊಂದಿಗೆ ಹೇಳಿದನು.
ಆಗ ತಂದೆ ಮಗನಿಗೆ 4 ಪ್ರಶ್ನೆಗಳನ್ನುಕೇಳಿದರು.
1. ನೀನು ಇವತ್ತು ಕಾಲೇಜಿನಲ್ಲಿ ಎಷ್ಟು ಮಂದಿ ಮೊಬೈಲ್‌ನಲ್ಲಿ ಮಾತನಾಡುವುದು, ಚಾಟಿಂಗ್ ಮಾಡುವುದನ್ನು ನೋಡಿದ್ದೀಯಾ ?
2. ನೀನು ಗಮನಿಸಿದಂತೆ ಎಷ್ಟು ಮಂದಿ ಕ್ಯಾಂಪಸ್ ನಲ್ಲಿ ಅನಗತ್ಯ ವಿಚಾರಗಳನ್ನು ಕಾಲೇಜಿನಲ್ಲಿ ಚರ್ಚಿಸುತ್ತಿದ್ದರು?
3. ಎಷ್ಟು ಮಂದಿ ಸ್ವಲ್ಪವೂ ಕಲಿಕೆ ಮೇಲೆ ಗಮನ ಇಲ್ಲದೇ ನಡೆದುಕೊಂಡರು ?
4) ಕಾಲೇಜು ಕ್ಯಾಂಪಸ್ಸಿನಲ್ಲಿ ನೀನು ಏನೆಲ್ಲ ಗಮನಿಸಿದ್ದೀಯಾ?
ಉತ್ಸಾಹಿಯಾಗಿದ್ದ ಮಗನು " ಅಪ್ಪಾ , ಇವತ್ತು ನಾನು ಹೇಗೆ ಹೇಳಲು ಸಾಧ್ಯ. ನನ್ನ ದೃಷ್ಟಿಯೆಲ್ಲಾ ಬಾಟಲಿ ಕಡೆಗಿತ್ತು, ಒಂದೇ ಒಂದು ಹನಿ ನೀರೂ ಚೆಲ್ಲದಂತೆ ಎಚ್ಚರ ವಹಿಸಿದ್ದೆ . ನನ್ನ ಗಮನ ಅದರ ಮೇಲೆಯೇ ಇದ್ದ ಕಾರಣ ಬೇರೆ ಕಡೆ ಹೆಚ್ಚು ಗಮನ ಕೊಡಲಾಗಲಿಲ್ಲ" ಎಂದನು.
ಆಗ ತಂದೆಯು " ಇದೇ ಮಗಾ ನಾನು ಹೇಳಬೇಕೆಂದುಕೊಂಡಿದ್ದು. ನೀನು ಕಾಲೇಜಿಗೆ ಹೋದಾಗ ನಿನ್ನ ದೃಷ್ಟಿ ಕಲಿಕೆ ಮೇಲೆ ಇದ್ದಾಗ ಬೇರೆ ಯಾವುದೇ ಸಂಗತಿಗಳು ನಿನ್ನ ಏಕಾಗ್ರತೆಗೆ ಕುಂದು ತರದು. ನಿನ್ನ ಧ್ಯಾನ ಹೊಸ ಚಿಂತನೆಯ ಮೇಲಿದ್ದರೆ ಧನಾತ್ಮಕ ಅಂಶಗಳೇ ಕಾಣುತ್ತದೆ. ಅಲ್ಲದೆ ಅಂತರ್ಮುಖಿಯಾಗಿ ಕಲಿಕೆಯನ್ನು ಗಳಿಸಬಲ್ಲೆ. ನಿನಗೆ ನಿನ್ನ ಗುರಿಯ ಸ್ಪಷ್ಟತೆ ಇದ್ದರೆ ನಿನಗೆ ಯಾವುದೇ ಅಡ್ಡಿ ಆತಂಕಗಳು ಕಂಡು ಬರದು. ನಿನ್ನ ಗುರಿಯೆಡೆ ಗಮನವಿಲ್ಲದಾಗ ಎಲ್ಲವೂ ಅಸಾಧ್ಯ. ನಿನ್ನ ಗಮನ ಯಾವಾಗಲೂ ನೀನು ಮಾಡಬೇಕಾದ ಕೆಲಸದ ಮೇಲೆ ಕೆಂದ್ರೀಕೃತವಾಗಿರಬೇಕೇ ಹೊರತು ಬೇರೆಯವರು ಏನು ಮಾಡುತ್ತಿದ್ದಾರೆ ಎಂಬುದರ ಮೇಲೆ ಅಲ್ಲ ." ಎಂದು ಹೇಳಿ ಮಾತು ನಿಲ್ಲಿಸಿದರು. ಅಂದಿನಿಂದ ದೃಷ್ಟಿ ಬದಲಾಯಿಸಿದ ಮಗನಲ್ಲಿ ಮತ್ತೆಂದೂ ಸಪ್ಪೆ ಮೋರೆ ಕಾಣಲಿಲ್ಲ.
ಶಿಕ್ಷಕರ ದಿನಾಚರಣೆಯಲ್ಲಿ ಸಂಭ್ರಮಿಸಿದ ಮಕ್ಕಳೇ, ನೀವು ನಿಮ್ಮ ಕಲಿಕೆ ಹಾಗೂ ಗುರಿಯೆಡೆಗೆ ಮಾತ್ರ ಗಮನವಿಟ್ಟರೆ ಅಸಾಧ್ಯವೆನಿಸಿದ್ದು ಎಲ್ಲವೂ ಸಾಧ್ಯವಾಗುವುದು. ಏಕಾಗ್ರತೆ ಸದಾ ನಿಮ್ಮ ಮನದಲ್ಲಿರುವುದು. ಆಗ ನಿಮಗೆ ಶಾಲೆಯ ಕಟ್ಟಡ, ಬಾಲವನ , ಆಟದ ಮೈದಾನ, ಲೈಬ್ರೇರಿ, ಸ್ಮಾರ್ಟ್ ಕ್ಲಾಸ್ ... ಹೀಗೆ ಯಾವುದರ ಕೊರತೆಯು ಕಾಣಿಸದು. ನಿಮ್ಮ ಪರಿಸರ , ಶಾಲೆಯ ಶಿಕ್ಷಕರು ಹಾಗೂ ಸಹಪಾಠಿಗಳಲ್ಲಿರುವ ಕೊರತೆಯನ್ನೇ ಕೇಂದ್ರೀಕರಿಸದೆ ಧನಾತ್ಮಕ ಅಂಶಗಳನ್ನು ಗಮನಿಸಿ ಮತ್ತು ಸ್ವೀಕರಿಸಿ. ಮುಳ್ಳಿನೊಂದಿಗೆ ಗುಲಾಬಿ ಹಾಗೂ ಗುಲಾಬಿಯೊಂದಿಗೆ ಮುಳ್ಳುಗಳಿರುವುದು ಹೇಗೆ ಸಹಜವೂ ಅದೇ ರೀತಿ ಪ್ರತಿ ವ್ಯವಸ್ಥೆಯಲ್ಲೂ ಧನಾತ್ಮಕ ಹಾಗೂ ಖುಣಾತ್ಮಕ ಅಂಶಗಳಿರುವುದು ಸಹಜ. ಕೊರತೆಯನ್ನೇ ಹುಡುಕಿದರೆ ಕುಗ್ಗಬಹುದು. ಒಳಿತನ್ನೇ ಹುಡುಕಿದರೆ ಹಿಗ್ಗಬಹುದು. ದೂರಿ ದೊಡ್ಡ ಜನರಾಗುವ ಬದಲು ಕೈ ಜೋಡಿಸಿ ಸಹಕರಿಸೋಣ. ಒಳಿತನ್ನು ಸ್ವೀಕರಿಸಿ ಒಳ್ಳೆಯವರಾಗೋಣ. ಗುರುವಿನೆಡೆಗೆ ಸಾಗೋಣ......ಗುರುವಿನಂತಾಗೋಣ...... ಗುರುವೇ ಆಗಿಬಿಡೋಣ.....
ಈ ಬದಲಾವಣೆಗೆ ಯಾರನ್ನೂ ಕಾಯದೆ ನಾವೇ ಬದಲಾಗೋಣ. ಬದಲಾವಣೆ ನಮ್ಮ ದಿನನಿತ್ಯದ ನಿಯಮವಾಗಲಿ. ಬದಲಾಗೋಣವೇ ಪ್ಲೀಸ್...... ಏನಂತೀರಿ.....? .......................... ಗೋಪಾಲಕೃಷ್ಣ ನೇರಳಕಟ್ಟೆ ಶಿಕ್ಷಕರು ಮತ್ತು ತರಬೇತುದಾರರು Mob: +91 99802 23736 *******************************************