-->
ಜಗಲಿಯ ಮಕ್ಕಳ ಮನದಾಳದ ಮಾತು ಸಂಚಿಕೆ -7

ಜಗಲಿಯ ಮಕ್ಕಳ ಮನದಾಳದ ಮಾತು ಸಂಚಿಕೆ -7

ಜಗಲಿಯ ಮಕ್ಕಳ 
ಮನದಾಳದ ಮಾತು 
ಸಂಚಿಕೆ -7


ಎಲ್ಲರಿಗೂ ನಮಸ್ತೆ ನಾನು ಹಂಸಿ....
          ನನ್ನ ಜೀವನದಲ್ಲಿ ಪ್ರಭಾವ ಬೀರಿರುವ ನನ್ನ ಚಿತ್ರದ ಕಲಿಕೆಯ ದೃಷ್ಟಿಕೋನವನ್ನು ಬದಲಾಯಿಸಿರುವ ನನ್ನ ಯೋಚನೆಗೆ ಸರಿಯಾದ ದಿಕ್ಕನ್ನು ತೋರಿಸಿರುವ ನನ್ನ ಕನಸುಗಳಿಗೆ ಇನ್ನಷ್ಟು ಬಣ್ಣಗಳನ್ನು ಹೆಚ್ಚಿಸಿರುವ ಮೆಚ್ಚಿನ ಪ್ರೀತಿಯ ಶಿಕ್ಷಕರೆಂದರೆ ನಾನು ಕಲಿತಿರುವ ಬಂಟ್ವಾಳದ ದ.ಕ. ಜಿ ಪಂ. ಮಾ ಹಿ ಪ್ರಾ ಶಾಲೆ ಒಕ್ಕೆತ್ತೂರು. ಇಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಭಾರತಿ ಟೀಚರ್..! 
           ಹೌದು ನನಗೆ ಬಾಲ್ಯದಿಂದಲೂ ಚಿತ್ರಕಲೆಯಲ್ಲಿ ಹೆಚ್ಚು ಆಸಕ್ತಿ. ನಾಲ್ಕನೇ ತರಗತಿಯಲ್ಲಿ ನನ್ನ ಆಸಕ್ತಿ ಮತ್ತು ಪ್ರತಿಭೆಯನ್ನು ಗಮನಿಸಿದಂತಹ ಭಾರತಿ ಟೀಚರ್ ನನಗೆ ಪ್ರೋತ್ಸಾಹವನ್ನು ಕೊಡಲಾರಂಭಿಸಿದರು. ಅವರು ನನಗೆ ಚಿತ್ರ ಮಾಡುವ ಎಲ್ಲಾ ವಿಷಯಗಳನ್ನು ಹೇಳಿಕೊಟ್ಟರು. ನನ್ನ ಆಸಕ್ತಿಗೆ ಹೆಚ್ಚಿನ ಬೆಂಬಲವನ್ನು ನೀಡಿದರು. 2015 -16 ರಲ್ಲಿ ಬಂಟ್ವಾಳದಲ್ಲಿ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಗೆ ನನ್ನನ್ನು ಎಲ್ಲಾ ಸಿದ್ಧತೆಗಳನ್ನು ನಡೆಸಿ ಚಿತ್ರಕಲಾ ಸ್ಪರ್ಧೆಗೆ ಕರೆದುಕೊಂಡು ಹೋದರು. ನಾನು ಅದೇ ಜೀವನದಲ್ಲಿ ಮೊದಲ ಬಾರಿಗೆ ಸ್ಪರ್ಧೆಗೆ ಹೋಗಿದ್ದು. ಅಲ್ಲಿ ನನಗೆ ತುಂಬಾ ಭಯವಾಗುತ್ತಿತ್ತು. ಆದರೆ ಭಾರತಿ ಟೀಚರ್ ನನಗೆ ಹೆಚ್ಚಿನ ಧೈರ್ಯವನ್ನು ತುಂಬುತ್ತಿದ್ದರು. ನಾನು ಅಲ್ಲಿ ಕ್ಲಸ್ಟರ್ ಮಟ್ಟದಲ್ಲಿ ಪ್ರಥಮ ಬಹುಮಾನವನ್ನು ಪಡೆದಿದ್ದೆ. ಎಲ್ಲಿಲ್ಲದ ಸಂತೋಷ ನನ್ನಲ್ಲಿ ತುಂಬಿ ತುಳುಕುತ್ತಿತ್ತು. ತುಂಬೆ ಪದವಿಪೂರ್ವ ಕಾಲೇಜು ತುಂಬೆ ಇಲ್ಲಿ  ನಡೆದಂತಹ ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಕೂಡ ಪ್ರಥಮ ಬಹುಮಾನವನ್ನು ಪಡೆದೆ. ನನಗೆ ಇನ್ನೂ ತುಂಬಾ ಸಂತೋಷವಾಯಿತು. ಕೆಲ ದಿನಗಳಲ್ಲಿ ಬಂದಂತಹ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಗೆ ನನ್ನನ್ನು ಹೆಚ್ಚಿನ ಪ್ರೋತ್ಸಾಹದೊಂದಿಗೆ ಭಾರತಿ ಟೀಚರ್ ಅವರು ಕರೆದುಕೊಂಡು ಹೋದರು. ಇದು ಶ್ರೀ ಸುಬ್ರಹ್ಮಣ್ಯೇಶ್ವರ ಪದವಿಪೂರ್ವ ಕಾಲೇಜು ಸುಬ್ರಹ್ಮಣ್ಯದಲ್ಲಿ ನಡೆಯಿತು. ಆಗಂತೂ ನಾನು ತುಂಬಾ ಭಯಪಡುತ್ತಿದ್ದೆ. ಬೇರೆ ಬೇರೆ ಶಾಲೆಯಿಂದ ಅಲ್ಲಿಗೆ ಹಲವಾರು ಮಕ್ಕಳು ಮತ್ತು ಶಿಕ್ಷಕರು ಆಗಮಿಸಿದ್ದರು. ಆದರೆ ಭಾರತಿ ಟೀಚರ್ ನ ಪ್ರೋತ್ಸಾಹ ನನ್ನಲ್ಲಿ ಧೈರ್ಯ ತುಂಬಿತ್ತು. ಅಲ್ಲಿ ಕೂಡ ನಾನು ಪ್ರಥಮ ಬಹುಮಾನವನ್ನು ಪಡೆದೆ. ಎಲ್ಲಿಲ್ಲದ ಸಂತೋಷ ನನ್ನಲ್ಲಿ ಬಂದು ತುಂಬಿ ತುಳುಕುತ್ತಿತ್ತು. ನಾನು ಆಕಾಶದಲ್ಲಿ ಹಾರುವ ಪಕ್ಷಿಯಂತಾಗಿದ್ದೆ. ಇದರಿಂದಾಗಿ ಮನೆಯವರು ಊರಿನವರು ತುಂಬಾ ಸಂತೋಷ ಗೊಂಡಿದ್ದರು. ಆಗಲೇ ನಮ್ಮ ಶಾಲೆಯಲ್ಲಿ ಮಕ್ಕಳ ದಿನಾಚರಣೆಯನ್ನು ಏರ್ಪಾಡು ಮಾಡಲಾಗಿತ್ತು. ಗಣ್ಯರೆಲ್ಲರೂ ಮತ್ತು ಶಿಕ್ಷಕರು ಸೇರಿ ನನಗೆ ಸನ್ಮಾನವನ್ನು ಕೂಡ ಮಾಡಿದ್ದರು. ಇದರಿಂದಾಗಿ ನನ್ನ ಆಸಕ್ತಿ ಬಾನೆತ್ತರಕ್ಕೆ ಹಾರಿತ್ತು.
      ಹೀಗೆ ಮುಂದುವರೆದ ನನ್ನ ಚಿತ್ರಕಲಾ ಪಯಣದಲ್ಲಿ ಹಲವಾರು ಬಹುಮಾನಗಳನ್ನು ಗಳಿಸಿದ್ದೇನೆ. ಬೇರೆ ಬೇರೆ ಕಡೆಗಳಲ್ಲಿ ನಡೆದ ಸ್ಪರ್ಧೆಯಲ್ಲಿ ಭಾಗವಹಿಸಿದ್ದೇನೆ. ಇದಕ್ಕೆ ಮುಖ್ಯ ಕಾರಣ ನನ್ನ ಗುರುಗಳಾದ ಭಾರತಿ ಟೀಚರ್. ನನಗೆ ಮಾತ್ರವಲ್ಲದೆ ಅದೆಷ್ಟೋ ಮಕ್ಕಳಿಗೆ ಅವರು ಹೆಚ್ಚಿನ ಪ್ರೋತ್ಸಾಹವನ್ನು ನೀಡಿದ್ದಾರೆ. ನೂರಾರು ಮಕ್ಕಳ ಪ್ರತಿಭೆಯನ್ನು ಪ್ರೋತ್ಸಾಹಿಸಿದ್ದಾರೆ. ಹಾಡು, ನೃತ್ಯ ,ಚಿತ್ರಕಲೆ ,ಕ್ರೀಡೆ, ಶಿಕ್ಷಣ, ಪ್ರತಿಯೊಂದು ಕ್ಷೇತ್ರದಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡು ಮಕ್ಕಳ ಸರ್ವತೋಮುಖ ಅಭಿವೃದ್ಧಿ ಸಾಗುವ ಮಕ್ಕಳ ನೆಚ್ಚಿನ ಶಿಕ್ಷಕರಲ್ಲಿ ಇವರೂ ಸಹ ನಿಲ್ಲುತ್ತಾರೆ. ಪಾಠ ಪ್ರವಚನದಲ್ಲೂ ಇವರನ್ನು ಮೀರಿಸುವವರಿಲ್ಲ . ನನ್ನ ನೆಚ್ಚಿನ ಗುರುಗಳಾದ ಭಾರತಿ ಟೀಚರ್ಗೆ ದೇವರು ಇನ್ನಷ್ಟು ಹಾರೈಸಲಿ. ಮುಂದಿನ ದಿನಗಳಲ್ಲಿ ಸಾವಿರಾರು ಮಕ್ಕಳಿಗೆ ದಾರಿ ದೀಪವಾಗುವ ಬದುಕು ನಿಮ್ಮದಾಗಲಿ. ನಿಮ್ಮ ಪ್ರಯತ್ನ ನಿಷ್ಕಲ್ಮಶ ಮನಸ್ಸು ಸರ್ವರಿಗೂ ಮಾದರಿಯಾಗಲಿ.
...........................................................ಹಂಸಿ 
10ನೇ ತರಗತಿ 
ವಿಠಲ ಪ್ರೌಢ ಶಾಲೆ ವಿಟ್ಲ
ಚೆಕ್ಕಿದಕಾಡು ಮನೆ, ಬಂಟ್ವಾಳ ತಾಲೂಕು, 
ದಕ್ಷಿಣ ಕನ್ನಡ ಜಿಲ್ಲೆ
*********************************************



ನಾನು ಲಕ್ಷ್ಯ......
         ನನ್ನ ಪ್ರೀತಿಯ ಎಲ್ಲಾ ಶಿಕ್ಷಕರಿಗೂ ಶಿಕ್ಷಕರ ದಿನದ ಶುಭಾಶಯಗಳು. ನನಗೆ ಮಾತು ಕಲಿಸಿ , ಬಿದ್ದಾಗ ಎಬ್ಬಿಸಿ , ಸಮಾಧಾನಪಡಿಸಿ ಕೈ ಹಿಡಿದು ನಡೆಸಿ ಮೊದಲು ಅಕ್ಷರ ಕಲಿಸಿದ ಮೊದಲ ಗುರುಗಳು ನನ್ನ ಪ್ರೀತಿಯ ಅಪ್ಪ ಅಮ್ಮ. ನಂತರ ನನಗೆ ತುಂಬಾ ಪ್ರೀತಿಯಿಂದ ಅಕ್ಷರ, ಹಾಡು, ನತ್ಯ, ಆಟ ಕಲಿಸಿದವರು ಅಂಗನವಾಡಿ ಶಿಕ್ಷಕರು. ಅಂಗನವಾಡಿ ಶಿಕ್ಷಣ ಮುಗಿಸಿ ಪ್ರಾಥಮಿಕ ಶಿಕ್ಷಣ ಪ್ರಾರಂಭಿಸಿದ ಶ್ರೀ ರಾಮ ವಿದ್ಯಾ ಕೇಂದ್ರದ ಎಲ್ಲಾ ಮಾತಾಜಿಯವರು ನಮಗೆ ಆಟ, ಪಾಠ ಎಲ್ಲಾ ರೀತಿಯಲ್ಲೂ ತುಂಬಾ ಪ್ರೋತ್ಸಾಹ ನೀಡಿದರು. ಎಲ್ಲಾ ಮಾತಾಜಿಯವವರು ನಮ್ಮನ್ನು ಅವರ ಮಗುವಿನಂತೆ ಪ್ರೀತಿಸುತ್ತಾರೆ. ಅಚ್ಚುಮೆಚ್ಚಿನ ಮಾತಾಜಿಯವರ ಬಗ್ಗೆ ಹೇಳಲು ಪದಗಳೇ ಸಾಲದು. ಕೊರೋನ ಬೇಗ ಹೋಗಲಿ ಶಾಲೆ ಬೇಗ ಪ್ರಾರಂಭವಾಗಲಿ ಸಹಪಾಠಿಗಳ ಜೊತೆಗೆ ಶಾಲೆಯಲ್ಲೇ ಶಿಕ್ಷಣ ಪ್ರಾರಂಭವಾಗಲಿ ಎಂಬುದು ನನ್ನ ಆಸೆ ಲಕ್ಷ್ಯ.
 ..............................ಜೆ. ಆರ್. ಲಕ್ಷ್ಯ ನೇರಳಕಟ್ಟೆ
4ನೇ ತರಗತಿ. 
ಶ್ರೀ ರಾಮ ವಿದ್ಯಾ ಕೇಂದ್ರ 
ಹನುಮಾನ್ ನಗರ ಕಲ್ಲಡ್ಕ. 
ಬಂಟ್ವಾಳ ತಾಲೂಕು. ದಕ್ಷಿಣ ಕನ್ನಡ.
********************************************



             ಶಿಕ್ಷಕರ ದಿನಾಚರಣೆ..... ರಕ್ಷಾ
ಪ್ರತಿ ವರ್ಷ ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನಾಚರಣೆ ರೂಪದಲ್ಲಿ ಆಚರಿಸಲಾಗುತ್ತದೆ. 1962 ರಿಂದಲೂ ಆಚರಿಸಿಕೊಂಡು ಬರುತ್ತಿರುವ ಈ ದಿನ ಭಾರತೀಯ ಶಿಕ್ಷಣ ವ್ಯವಸ್ಥೆಗೆ ಅಪ್ರತಿಮ ಕೊಡುಗೆ ನೀಡಿದ ಶಿಕ್ಷಣ ದಾರ್ಶನಿಕ ಡಾ ಸರ್ವೆಪಲ್ಲಿ ರಾಧಾಕೃಷ್ಣನ್ ರವರ ಜನ್ಮದಿನವೂ ಹೌದು. ವಿದ್ಯಾರ್ಥಿಗಳನ್ನು ಭವಿಷ್ಯದ ಅಮೂಲ್ಯ ಪ್ರಜೆಗಳಾಗಿ ನಿರ್ಮಿಸುವ ಶಿಕ್ಷಕರಿಗೆ ಯಾವ ಪುರಸ್ಕಾರವು ಸರಿಸಾಟಿಯಾಗಲಾರದು. ಪ್ರತಿ ಶಿಕ್ಷಕರನ್ನು ಗೌರವಿಸುವುದು ಪ್ರತೀ ವಿದ್ಯಾರ್ಥಿಯ ಆದ್ಯ ಕರ್ತವ್ಯ. ಗುರುಗಳಿಲ್ಲದೆ ನಮ್ಮ ಜೀವನವನ್ನು ಊಹಿಸಿಕೊಳ್ಳುವುದೂ ಅಸಾಧ್ಯವಾಗಿದೆ. ಇಂದು ಶಿಕ್ಷಕರ ದಿನ ನಾವೆಲ್ಲರೂ ನಮ್ಮ ಜೀವನದ ಮೇಲೆ ಒಳ್ಳೆಯ ಪ್ರಭಾವ ಬೀರಿವ ಶಿಕ್ಷಕರನ್ನು ಜ್ಞಾಪಿಸಿಕೊಳ್ಳುತ್ತಾ, ಇಂದು ಮಾತ್ರವಲ್ಲ ಪ್ರತಿದಿನ ವಂದನೆಗಳನ್ನು ಸಲ್ಲಿಸೋಣ. ಅವರಿಗೆ ಚಿರಋಣಿಗಳಾಗಿರೋಣ
....................................... ರಕ್ಷಾ 9ನೇ ತರಗತಿ 
ಶ್ರೀ ರಾಮಕುಂಜ್ವೇಶ್ವರ ಕನ್ನಡ ಮಾಧ್ಯಮ 
ಪ್ರೌಢ ಶಾಲೆ ರಾಮಕುಂಜ . 
ಕಡಬ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
**********************************************



                   ನಮಸ್ತೆ ನಾನು ಗಾಯತ್ರಿ.... 
               ತೊದಲುನುಡಿ ಕಲಿಸಿದ ಮೊದಲ ಗುರು ಅಮ್ಮ-ಅಪ್ಪ ನಿಂದ ಹಿಡಿದು ನನ್ನ ಮುಗ್ಧ ಮನದಲ್ಲಿ ಅಕ್ಷರವ ಬಿತ್ತಿ ವಿದ್ಯಾ ಬುದ್ಧಿ ಕಲಿಸಿದ ಹಾಗೂ ಕಲಿಸುತ್ತಿರುವ ನನ್ನ ಎಲ್ಲಾ ಗುರು ದೇವರುಗಳಿಗೂ ಕೋಟಿ ಕೋಟಿ ನಮನಗಳು ಎಲ್ಲಾ ಶಿಕ್ಷಕರಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು
 ......................................................  ಗಾಯತ್ರಿ 3ನೇ ತರಗತಿ 
ದ. ಕ. ಜಿ. ಪ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನೆಟ್ಲ ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*********************************************


         ಎಲ್ಲರಿಗೂ ಶಿಕ್ಷಕರ ದಿನಾಚರಣೆಯ ಶುಭಾಶಯಗಳು ನಾನು ಅನ್ನಪೂರ್ಣ ...
       ನಾನು ನನ್ನ ಪ್ರಾಥಮಿಕ ಶಾಲಾ ಶಿಕ್ಷಕಿ ಆದ ಕಾವೇರಿ ಟೀಚರ್ ಇವರ ಬಗ್ಗೆ ಬರೆಯುತ್ತಿದ್ದೇನೆ.
ಕಾವೇರಿ ಟೀಚರ್ ಇವರು ನಮಗೆ ಒಂದನೇ ತರಗತಿಯಿಂದ ಏಳನೇ ತರಗತಿಯವರೆಗೆ ನಮಗೆ ಪಾಠವನ್ನು ಮಾಡುವುದಲ್ಲದೆ; ನಮಗೆ ಜೀವನದ ಕೆಲವು ಮೌಲ್ಯಗಳು, ಇತ್ಯಾದಿಗಳನ್ನು ಸಹ ನಮ್ಮ ಪಾಠದೊಂದಿಗೆ ಹೇಳುತ್ತಿದ್ದರು. ಇವರು ನಮಗೆ ನಲಿಕಲಿ ತರಗತಿಯಲ್ಲಿ ಕನ್ನಡ ಹಾಗೂ ಇಂಗ್ಲಿಷ್ ಪಾಠವನ್ನು ಮಾಡುತ್ತಿದ್ದರು. ಸಣ್ಣ ಸಣ್ಣ ಮಕ್ಕಳಿಗೂ ಅವರೆಂದರೆ ತುಂಬಾ ಇಷ್ಟ. ಅವರು ನಮಗೆ ನಲಿಕಲಿಯ ನಂತರ ಪಾಠ ಮಾಡಿದ್ದು ಆರು ಮತ್ತು ಏಳನೇ ತರಗತಿಯಲ್ಲಿ. ಅದೂ ಹಿಂದಿ ಪಾಠ. ಅವರು ಹಿಂದಿ ಪಾಠವನ್ನು ನಮಗೆ ತುಂಬಾ ಚೆನ್ನಾಗಿ ಮಾಡುತ್ತಿದ್ದರು. ಅವರಿಗೆ ಮಕ್ಕಳ ಮೇಲೆ ಎಷ್ಟು ಪ್ರೀತಿ ಎಂದರೆ ನಲಿ-ಕಲಿ ಮಕ್ಕಳನ್ನು ಅವರು ತಾಯಿಯಂತೆಯೇ ನೋಡಿ ಕೊಳ್ಳುತ್ತಿದ್ದರು. ಹಾಗೆಯೇ ನನಗೊಂದು ಸನ್ನಿವೇಶ ನೆನಪಿಗೆ ಬಂತು! ಅದೇನೆಂದರೆ ಅದೊಂದು ದಿನ ಶಾಲೆಯಲ್ಲಿ ಪೋಷಕರ ಸಭೆ ಇತ್ತು. ಅಂದು ಎರಡನೇ ತರಗತಿಯ ಮಗುವಿನ ತಾಯಿ ಬಂದು ತಮ್ಮ ಮಗುವಿನ ಬಳಿ ಕೇಳಿದರು ಮನೆಗೆ ಹೋಗೋಣ್ವಾ ಪುಟ್ಟಾ? ಎಂದು. ಆಗ ಕಾವೇರಿ ಟೀಚರ್ ಆ ಮಗುವಿನ ಬಳಿ ನಿಂತುಕೊಂಡಿದ್ದರು ಅವರು ಕೂಡ ಮಗುವಿನ ಬಳಿ ಕೇಳಿದರು ಅಮ್ಮನ ಜೊತೆ ಹೋಗ್ತೀಯಾ? ಅಂತ ಆಗ ಆ ಮಗು ಅಮ್ಮನಿಗೆ ಹಾಗೂ ಟೀಚರ್ಗೆ 'ಇಲ್ಲ' ಎಂಬ ಒಂದೇ ಉತ್ತರಕೊಟ್ಟು ತರಗತಿಯೊಳಗೆ ಓಡಿತು. ಈ ಸನ್ನಿವೇಶ ಕಟ್ಟುಕಥೆಯಲ್ಲ! ನಿಜ ಘಟನೆ. ಇದನ್ನು ಕೇಳಿದಾಗಲೇ ಗೊತ್ತಾಗುತ್ತದೆ...! ಮಕ್ಕಳಿಗೂ ಟೀಚರ್ ಮೇಲಿರುವ ಮುಗ್ಧ ಪ್ರೀತಿ ಎಂಥದ್ದು ಎಂದು. ಎಲ್ಲಾ ಶಾಲೆಯಲ್ಲೂ ಇಂತಹ ಶಿಕ್ಷಕರು ಅಥವಾ ಶಿಕ್ಷಕಿಯರು ಇದ್ದೇ ಇರುತ್ತಾರೆ. ಅವರ ಮೇಲಿರುವ ಮಕ್ಕಳ ಪ್ರೀತಿ, ಹಾಗೂ ಕಾಳಜಿ ; ಅದನ್ನು ನಾವು ಊಹಿಸಲೂ ಸಾಧ್ಯವಿಲ್ಲ !
 ನನ್ನ ಎಲ್ಲಾ ಶಿಕ್ಷಕ-ಶಿಕ್ಷಕಿಯರಿಗೆ 
ಶಿಕ್ಷಕರ ದಿನಾಚರಣೆಯ ಶುಭಾಶಯಗಳು
 .............................................ಅನ್ನಪೂರ್ಣ 
9 ನೇ ತರಗತಿ 
ಶ್ರೀಮದ್ ಭುವನೇಂದ್ರ ಪ್ರೌಢಶಾಲೆ ಕಾರ್ಕಳ 
ಕಾರ್ಕಳ ತಾಲೂಕು , ಉಡುಪಿ ಜಿಲ್ಲೆ
*******************************************





 ನನ್ನ ಪ್ರೀತಿಯ ಎಲ್ಲ ಶಿಕ್ಷಕರಿಗೂ ಶಿಕ್ಷಕರ ದಿನಾಚರಣೆಯ ಶುಭಾಶಯಗಳು... ನಾನು ಸೃಜನ್ ನಾಯಕ್ ........
            ನನ್ನ ಶಿಕ್ಷಕರು ನನಗೆ ತಾಯಿಯಂತೆ.
ಅವರು ಯಾವಾಗಲೂ ಸಹಾಯ ಮಾಡುತ್ತಾರೆ. ತಪ್ಪು ಮಾಡಿದರೆ ಅದನ್ನು ಸೂಕ್ಷ್ಮವಾಗಿ 
ತಿದ್ದುತ್ತಾರೆ. ಪ್ರೀತಿಯಿಂದ ಮಾತನಾಡಿಸುತ್ತಾರೆ ಬುದ್ದಿವಾದ ಹೇಳುತ್ತಾರೆ. ನಾನು ನನ್ನ ಶಿಕ್ಷಕರನ್ನು ತುಂಬಾ ಪ್ರೀತಿಸುತ್ತೇನೆ.  
          ಪ್ರತಿವರ್ಷ ಸೆಪ್ಟೆಂಬರ್ 5ರಂದು ಭಾರತದಾದ್ಯಂತ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಗುತ್ತದೆ ಎನ್ನುತ್ತಾ ನನ್ನ ಈ ಬರಹವನ್ನು ನನ್ನ ಪ್ರೀತಿಯ ಶಿಕ್ಷಕರಿಗೆ ಅರ್ಪಿಸುತ್ತೇನೆ.
........................................... ಸೃಜನ್ ನಾಯಕ್ 
9ನೇ ತರಗತಿ
ಪ್ರಗತಿ ಆಂಗ್ಲ ಮಾಧ್ಯಮ ಶಾಲೆ ಕುಕ್ಕಾಜೆ 
ಬಂಟ್ವಾಳ ತಾಲೂಕು
ಸಾಲೆತ್ತೂರು ಮನೆ ಸಾಲೆತ್ತೂರು ಪೋಸ್ಟು 
ಕೊಳ್ನಾಡು ಗ್ರಾಮ ,  ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
****************************************



Ads on article

Advertise in articles 1

advertising articles 2

Advertise under the article