ಜಗಲಿಯ ಮಕ್ಕಳ ಮನದಾಳದ ಮಾತುಗಳು ಸಂಚಿಕೆ -1
Saturday, September 4, 2021
Edit
ಜಗಲಿಯ ಮಕ್ಕಳ
ಮನದಾಳದ ಮಾತುಗಳು
ಸಂಚಿಕೆ -1
ನಮಸ್ಕಾರ..... ನಾನು ನಿಮ್ಮೆಲ್ಲರ ಪ್ರೀತಿಯ
ನನ್ನ ಈ ವಿದ್ಯಾರ್ಥಿ ಜೀವನದ ಪಯಣದಲ್ಲಿ ನನ್ನ ಶಾಲೆ ಆರಂಭದ ದಿನದಿಂದ, ಇಂದಿನವರೆಗೂ ನಾನು ಸಾಕಷ್ಟು ಶಿಕ್ಷಕರನ್ನು ನೋಡಿದ್ದೇನೆ.
ನನಗೆ ದೊರೆತಿರುವ ಶಿಕ್ಷಕರೆಲ್ಲರೂ ತುಂಬಾ ಅತ್ಯುತ್ತಮರು. ನಾನು ನನ್ನ ಶಿಕ್ಷಕರಿಗೆ ಎಲ್ಲರಿಗೂ ನನ್ನ ಜೀವಮಾನವಿಡಿ ಚಿರಋಣಿಯಾಗಿರುತ್ತೇನೆ.
ನಾನು ಈ ಶಿಕ್ಷಕರುಗಳಿಂದ ಬಹಳಷ್ಟು ಜ್ಞಾನವನ್ನು ಅಥವಾ ಜೀವನದ ಮೌಲ್ಯಗಳನ್ನು ಕಲಿತಿದ್ದೇನೆ.
ನನ್ನ ಜೀವನದ ಪ್ರಥಮ ಮತ್ತು ಪ್ರಮುಖ ಗುರುಗಳೆಂದರೆ ನನ್ನ ತಂದೆ ಎಂದು ಹೇಳಿಕೊಳ್ಳಲು ಇಚ್ಚಿಸುತ್ತೇನೆ. ಬಾಲ್ಯದಿಂದಲೂ ನನಗೆ ನನ್ನ ತಂದೆ ಜೀವನದ ಅತ್ಯುತ್ತಮ ಮೌಲ್ಯಗಳನ್ನು ಹೇಳಿಕೊಟ್ಟಿದ್ದಾರೆ. ನನ್ನ ತಂದೆ ಕೆಲಸದಲ್ಲಿ ತೋರುವ ಆಸಕ್ತಿ, ಅವರು ಪಡುವ ಪರಿಶ್ರಮ ನನಗೆ ತುಂಬಾ ಸ್ಪೂರ್ತಿಯನ್ನು ನೀಡುತ್ತದೆ. ಹಾಗೆ ಅವರು ಎಲ್ಲರನ್ನೂ ಸಮಾನವಾಗಿ ನೋಡುವ ರೀತಿ ನನಗೆ ಬಹಳ ಇಷ್ಟ. ಅವರು ಆಡುವ ಮಾತು ನನಗೆ ಬಹಳ ಅಚ್ಚುಮೆಚ್ಚು. ಜನರು ನನ್ನ ತಂದೆಯ ಬಗ್ಗೆ ಆಡುವ ಮೆಚ್ಚುಗೆ ಮಾತುಗಳನ್ನು ಕೇಳಿ ನಾನು ನನ್ನ ತಂದೆಯಂತೆ ಆಗಬೇಕೆಂದು ನನ್ನ ಮನಸ್ಸಿನಲ್ಲಿ ಆಶಿಸುತ್ತೇನೆ. ನನ್ನ ತಂದೆಯ ಬಗ್ಗೆ ನನಗೆ ಸದಾ ಹೆಮ್ಮೆ ಇದೆ. ನನ್ನ ಜೀವನದಲ್ಲಿ ನನ್ನ ತಂದೆ ಮೊದಲ ಸ್ನೇಹಿತ, ಗುರು, ಹಿತೈಷಿ. My dad is my friend, guide, philosopher and everything for me. ನಾನು ನನ್ನ ಜೀವನದಲ್ಲಿ ಪಡೆದ ಎಲ್ಲಾ ಶಿಕ್ಷಕರಿಗೂ ಇಂದಿನ ದಿನದಂದು ಶಿಕ್ಷಕರ ದಿನಾಚರಣೆಯ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸಲು ಇಚ್ಚಿಸುತ್ತೇನೆ. ಇದನ್ನು ನಾನು ಹೇಳಿಕೊಳ್ಳಲು ಅವಕಾಶ ಮಾಡಿಕೊಟ್ಟ ನಮ್ಮ ಮಕ್ಕಳು ಜಗಲಿಯ ತಾರಾನಾಥ್ ಕೈರಂಗಳ ಸರ್ ಅವರಿಗೆ ಅನಂತಾನಂತ ಧನ್ಯವಾದಗಳು.
.................................ಅನನ್ಯ ಮಲ್ಲೇಸ್ವಾಮಿ
10ನೇ ತರಗತಿ
ಕ್ರೈಸ್ತ ಕಿಂಗ್ ಕಾನ್ವೆಂಟ್ ಸ್ಕೂಲ್
ಮೈಸೂರು ತಾಲೂಕು
ಮೈಸೂರು ಜಿಲ್ಲೆ
*********************************************
ನನ್ನ ಮಾತು ..... ಚಿರ ತನ್ಮಯಿ
-------------------------------------
ನನ್ನ ಶಾಲಾಜೀವನದಲ್ಲಿ ಹಲವು ಶಿಕ್ಷಕ ಶಿಕ್ಷಕಿಯರು ಬಂದಿದ್ದಾರೆ. ಎಲ್ಲರೂ ಅತ್ಯುತ್ತಮವಾಗಿದ್ದರು. ಈ ಹೊತ್ತಿನಲ್ಲಿ ನಾನು ನೆನಪಿಸಿಕೊಳ್ಳಬಯಸುವ ನನ್ನ
ಪ್ರೀತಿಯ ಹಾಗೂ ಮಾದರಿ ಶಿಕ್ಷಕ ಶ್ರೀ ಅಶೋಕ್ ಸರ್.
ಅವರು ನಮಗೆ ಇಂಗ್ಲೀಷ್ ಹಾಗೂ ಕನ್ನಡ ಕಲಿಸುತ್ತಿದ್ದರು. ಅವರು ಸಕಲಕಲಾವಲ್ಲಭ. ಅವರಿಗೆ ಎಲ್ಲವೂ ಗೊತ್ತಿತ್ತು. ಚಿತ್ರ ಬಿಡಿಸುವುದು, ಹಾಡುವುದು, ಕಾರ್ಯಕ್ರಮ ನಿರೂಪಿಸುವುದು ಎಲ್ಲಕ್ಕಿಂತ ಹೆಚ್ಚಾಗಿ ನಮಗೆ ಅರ್ಥವಾಗುವಂತೆ ತುಂಬಾ ಚೆನ್ನಾಗಿ ಪಾಠ ಮಾಡುವುದು. ಅವರು ಹೊಸ ಹೊಸ ವಿಷಯಗಳನ್ನು ಸೃಜನಾತ್ಮಕವಾಗಿ ಕಲಿಸಿದರು. ಅವರಿಂದಾಗಿ ನನಗೆ ಜಿಲ್ಲಾ ಮಟ್ಟದಲ್ಲಿ ಇಂಗ್ಲೀಷ್ ಕಂಠಪಾಟದಲ್ಲಿ ನಿರಂತರವಾಗಿ ಸ್ಥಾನ ಗಳಿಸಲು ಸಾಧ್ಯವಾಗಿತ್ತು. ಅವರು ಎಂದೆಂದೂ ನನ್ನ ಪ್ರೀತಿಯ ಹಾಗೂ ಮಾದರಿ ಟೀಚರ್. ನಾನೂ ಅವರಂತಾಗಬೇಕು, ಒಂದು ದಿನ.
...............................................ಚಿರ ತನ್ಮಯಿ
7ನೇ ತರಗತಿ
ಎಕ್ಸಲೆಂಟ್ ಇಂಡಿಯನ್ ಸ್ಕೂಲ್ ಸುಣ್ಣಾರಿ ,
ಕುಂದಾಪುರ ತಾಲೂಕು
ಉಡುಪಿ ಜಿಲ್ಲೆ
**********************************************
ನನ್ನ ಜೀವನದಲ್ಲಿ ನನಗೆ ಸ್ಪೂರ್ತಿ ತುಂಬಿರುವುದು ಅಂದರೆ ಅದು ನನ್ನ ಅಪ್ಪ. ಅವರು ನಡೆದು ಬಂದಂತಹ ದಾರಿ ಕಷ್ಟಗಳನ್ನು ಎದುರಿಸಿದ ರೀತಿಯೆಲ್ಲ ನೋಡಿದಾಗ ಅಪ್ಪನ ಹಾಗೆ ಆಗಬೇಕು ಎನ್ನುವ ಭಾವನೆ ನನ್ನಲ್ಲಿ ಉಂಟಾಯಿತು. ಎಲ್ಲರೂ ಅವರನ್ನು ತಿರಸ್ಕರಿಸಿದಾಗ ಒಬ್ಬಂಟಿಯಾಗಿ ನಿಂತು ಕಷ್ಟಗಳನ್ನು ಎದುರಿಸಿದ್ದಾರೆ. ಅವರು ಕಷ್ಟ ಪಟ್ಟಿದ್ದಕ್ಕೆ ಇವತ್ತು ಎಲ್ಲರ ಬಾಯಿಯಲ್ಲೂ ಹೊಗಳಿಕೆಯ ಮಾತು ಕೇಳಿದಾಗ ನನಗೆ ತುಂಬಾ ಖುಷಿಯಾಗುತ್ತದೆ. ಅವರು ಯಾವಾಗಲೂ ನನ್ನ ಬಳಿ ಒಂದು ಮಾತು ಹೇಳುತ್ತಾರೆ ಅದೇನೆಂದರೆ ಯಾವತ್ತೂ ನೀನು ಸುಳ್ಳು ಹೇಳಬೇಡ ಸುಳ್ಳು ಹೇಳಿ ಎಷ್ಟೇ ಸಾಧನೆ ಮಾಡಬಹುದು ಆದರೆ ಆ ಸುಳ್ಳು ಕೊನೆಯ ತನಕ ಇರುವುದಿಲ್ಲ ಆದರೆ ಸತ್ಯ ಹೇಳಿದರೆ ಕಷ್ಟ ಇರಬಹುದು ಆದರೆ ಆ ಸತ್ಯಕ್ಕೆ ಕೊನೆಯವರೆಗೂ ಬೆಲೆ ಇರುತ್ತದೆ. ಇನ್ನೂ ಹಲವಾರು ವಿಷಯಗಳನ್ನು ನನಗೆ ಹೇಳಿಕೊಟ್ಟಿದ್ದಾರೆ. ಆದ್ದರಿಂದ ಇವರು ನನ್ನ ಜೀವನದ ಸ್ಪೂರ್ತಿ ಮತ್ತು ಶಿಕ್ಷಕರಾಗಿಯೂ ಇದ್ದಾರೆ. ಅವರು ಹೇಳಿರುವ ಒಂದೊಂದು ಮಾತಿನಿಂದ ನನಗೆ ಏನಾದರೂ ಸಾಧನೆ ಮಾಡಬೇಕೆಂಬ ಛಲ ಉಂಟಾಯಿತು.
...........................................ಪಲ್ಲವಿ ಶೆಟ್ಟಿಗಾರ್
9 ನೇ ತರಗತಿ
ಕರ್ನಾಟಕ ಪಬ್ಲಿಕ್ ಸ್ಕೂಲ್ ಪುಂಜಾಲಕಟ್ಟೆ.
ಬೆಳ್ತಂಗಡಿ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
********************************************
ನನ್ನ ವ್ಯಕ್ತಿತ್ವಕ್ಕೆ ಸ್ಪೂರ್ತಿ ನೀಡಿದ
"ಶ್ರೀ ವೇಣುಗೋಪಾಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಪಕಳಕುಂಜ" ಇಲ್ಲಿನ ಮುಖ್ಯೋಪಾಧ್ಯಾಯರಾದ ಶ್ರೀಯುತ ಮದನ್ ಮೋಹನ್ ಸರ್ ಇವರ ಕುರಿತು ನನ್ನ ಮನದಾಳದ ಮಾತುಗಳು. ನಮ್ಮ ಮನೆಯು ಪ್ರಾಥಮಿಕ ಶಾಲಾ ವಾತಾವರಣದಲ್ಲಿ ಇದ್ದುದರಿಂದ ನಾನು ಒಂದು ವರ್ಷದ ಮಗುವಿದ್ದಾಗಿನಿಂದಲೇ ಶಾಲೆಗೆ ಹೋಗಿ ಆಟವಾಡುತ್ತಿದ್ದೆನು, ಶಾಲಾ ಶಿಕ್ಷಕಿಯರಿಗೆ ಕೀಟಲೆ ಮಾಡುತ್ತಿದ್ದೆನು, ಶಾಲೆಯಲ್ಲಿಯೇ ಬಿಸಿಯೂಟ ಮಾಡುತ್ತಿದ್ದೆನು, ಆದರೂ ಸರ್ ನನ್ನನ್ನು ಗದರಿಸುತ್ತಿರಲಿಲ್ಲ. ಬದಲಾಗಿ ನನ್ನೊಡನೆ ಪ್ರೀತಿಯಿಂದಲೇ ಮಾತನಾಡುತ್ತಿದ್ದರು. ಅವರು ಪ್ರಾಥಮಿಕ ಶಾಲಾ ಮುಖೋಪಾಧ್ಯಾಯರಾಗಿ ಇದ್ದರೂ ತುಂಬಾ ಸಾಧು ಸ್ವಭಾವದವರಾಗಿದ್ದರು. ಶಾಲೆಯ ಎಲ್ಲಾ ಮಕ್ಕಳೊಡನೆ ಮಕ್ಕಳಂತೆಯೇ ಇರುತ್ತಿದ್ದರು. ನಮಗೆ ಹಿರಿಯರನ್ನು ಗೌರವಿಸುವುದು , ಹಾಡು, ನೃತ್ಯ, ಮೊದಲಾದ ಪಠ್ಯೇತರ ಚಟುವಟಿಕೆಗಳನ್ನು ಹೇಳಿಕೊಡುತ್ತಿದ್ದರು. ಚಿಕ್ಕಂದಿನಿಂದಲೇ ನನಗೆ ಅಸ್ತಮ ಕಾಯಿಲೆ ಇದ್ದುದರಿಂದ, ಸ್ಪರ್ಧೆಗಳಲ್ಲಿ ಭಾಗವಹಿಸಲು ಆಸಕ್ತಿಯಿರಲ್ಲಿಲ್ಲ. ಆದರೆ ನನ್ನ ಗುರುಗಳು ಸ್ಪರ್ಧೆಯಲ್ಲಿ ಪ್ರಥಮ ಬಂದವರಿಗೆ ಪೆನ್ನು, ಪುಸ್ತಕ ಕೊಡುವುದಾಗಿ ಪದೇ ಪದೇ ಹೇಳುತ್ತಿದ್ದರು. ಅವರ ಈ ಮಾತುಗಳೇ ನನಗೆ ಪ್ರೋತ್ಸಾಹ ನೀಡುತ್ತಿದ್ದವು. ಹೀಗೆ 1ರಿಂದ7ನೇ ತರಗತಿಯ ವರೆಗೂ ಕಲಿಕೆಯಲ್ಲಿ, ಆಟೋಟದಲ್ಲಿ, ಸಾಂಸ್ಕೃತಿಕ ಸ್ಪರ್ಧೆಗಳಲ್ಲಿಯೂ ನಾನೇ ಪ್ರಥಮ ಸ್ಥಾನವನ್ನು ಪಡೆಯುತ್ತಿದ್ದೆ. ಇದಕ್ಕೆಲ್ಲಾ ಕಾರಣ ನನ್ನ ಗುರುಗಳು. ಅವರು ನಮ್ಮನ್ನು ಎಷ್ಟು ಚೆನ್ನಾಗಿ ನೋಡಿಕೊಳ್ಳುತ್ತಿದ್ದರೆಂದರೆ ಶಾಲಾ ದಿನಗಳಲ್ಲಿ ನಾನು ಒಂದೂ ರಜೆ ಮಾಡದೇ ಶಾಲೆಗೆ ಹೋಗುತ್ತಿದ್ದೆನು. ಗುರುಗಳು ನಮ್ಮನ್ನು "ಪ್ರತಿಭಾಕಾರಂಜಿ" ಕಾರ್ಯಕ್ರಮಕ್ಕೂ ಕರೆದುಕೊಂಡು ಹೋಗುತ್ತಿದ್ದರು. ಶಾಲಾ ಶಿಕ್ಷಕರೆಲ್ಲರ ಪ್ರೇರಣೆಯಿಂದಲೇ ಪ್ರತೀ ವರ್ಷ ನಾನು ತಾಲೂಕು ಮಟ್ಟದಲ್ಲಿಯೂ ಭಾಗವಹಿಸುತ್ತಿದ್ದೆ. " ಸರ್ ಐಸ್ ಕ್ರೀಮ್ ಕೊಡಿಸುತ್ತಾರೆ " ಎಂಬ ಆಸೆಯಿಂದಲೇ ನಮ್ಮ ಶಾಲೆಯ ಹೆಚ್ಚಿನ ವಿದ್ಯಾರ್ಥಿಗಳೂ ಪ್ರಶಸ್ತಿಗಳಿಸುತ್ತಿದ್ದರು. ನಾನು ಪ್ರಾಥಮಿಕ ಶಾಲೆಯಲ್ಲಿ 20ಕ್ಕೂ ಮಿಗಿಲಾದ ಪ್ರಶಸ್ತಿ ಪತ್ರಗಳನ್ನು ಪಡೆದಿರುತ್ತೇನೆ. ಇಂದು ನಾನು ಸರಕಾರಿ ಪ್ರೌಢಶಾಲೆ ಮಾಣಿಲ ಇಲ್ಲಿ 10ನೇ ತರಗತಿಯಲ್ಲಿ ಕಲಿಯುತ್ತಿದ್ದೇನೆ. ಇಲ್ಲಿನ ಎಲ್ಲಾ ಶಿಕ್ಷಕರು ನನಗೆ ಮಾರ್ಗದರ್ಶನ ನೀಡುತ್ತಾರೆ. ನಾನು ಪ್ರಾಥಮಿಕ ಶಾಲೆ ಬಿಟ್ಟರೂ ನನ್ನ ಪ್ರಾಥಮಿಕ ಶಾಲಾ ಗುರುಗಳು ಇಂದಿಗೂ ನನಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಇಂತಹ ಗುರುಗಳನ್ನು ಪಡೆದ ನಾನು ಧನ್ಯಳು.
.......................................................ಮೋಕ್ಷಾ
10ನೇ ತರಗತಿ
ಸರಕಾರಿ ಪ್ರೌಢಶಾಲೆ ಮಾಣಿಲ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
********************************************
ನನ್ನೆಲ್ಲಾ ಕಲಿಕೆಗೆ ಸಹಕರಿಸುವ ನನ್ನ ಅಚ್ಚುಮೆಚ್ಚಿನ ಪ್ರೀತಿಯ ಭಾರತಿ ಮೇಡಂ. ಇವರು ನನ್ನ ಕಲಿಕೆಗೆ ಸಾಂಸ್ಕೃತಿಕ ಸ್ಪರ್ಧೆಗೆ ಎಲ್ಲ ವಿಷಯಗಳಲ್ಲೂ ನನಗೆ ಸಪೋರ್ಟ್ ಮಾಡಿದ ಇವರಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು. ನನಗೆ ಬುದ್ಧಿ ಮಾತು ಹೇಳಿರುವ ಇವರನ್ನು ಎಲ್ಲಿಯೂ ಯಾವಾಗಲೂ ಮರೆಯಲು ಸಾಧ್ಯವಿಲ್ಲ ಹಾಗೆಯೇ ಇವರ ಪ್ರೀತಿ, ಮಮಕಾರದಿಂದ ನನಗೆ ಕಲಿಯಲು ಆಸಕ್ತಿ ಬಂತು. ಭಾರತಿ ಮೇಡಂ ನನ್ನ ಪ್ರಾಥಮಿಕ ಶಾಲೆಯ ಶಿಕ್ಷಕಿ. ಅವರು ಎಲ್ಲಾ ಕ್ಲಾಸಿನ ಪಾಠ ನನಗೆ ಅತ್ಯದ್ಭುತವಾಗಿ ಅರ್ಥೈಸಿದ್ದಾರೆ. ಇವರೊಂದಿಗೆ ನನ್ನ ಎಲ್ಲಾ ನೋವು ನಲಿವು ಹಂಚಿಕೊಂಡಿದ್ದೇನೆ. ನಾನು ಇವರಿಂದ ಒಂದಿಷ್ಟು ಕಲಿತ ಕಲಿಕೆಗೆ ಹೈಸ್ಕೂಲ್ನಲ್ಲಿ ನನ್ನ ಹಿಂದಿ ಟೀಚರ್ ಪಾಠ ಮಾಡುವಾಗ ನನಗೆ ಭಾರತಿ ಮೇಡಂನ ನೆನಪಾಗುತ್ತದೆ. ಅವರು ಪಾಠದಲ್ಲಿ ಬೇಸರದ ವಿಷಯ ಹೇಳುವಾಗ ಅವರ ಮುಖದಲ್ಲಿನ ಭಾವನೆಯನ್ನು ಕಂಡು ನನಗೂ ಅಳು ಬರುತ್ತದೆ . ಮತ್ತು ಇವರಿಂದ ನನ್ನ ಬರವಣಿಗೆಯೂ ಮಕ್ಕಳ ಜಗಲಿಯಲ್ಲಿ ಪ್ರಕಟಿಸಲಾಗಿದೆ. ನನ್ನ ಪ್ರೀತಿಯ ಭಾರತಿ ಮೇಡಂ ನೀವು ನನಗೆ ಸಪೋರ್ಟ್ ಮಾಡಿದ್ದಕ್ಕೆ thank you ಮೇಡಂ.
...........................................................ದಿವ್ಯ
ಹತ್ತನೇ ತರಗತಿ
ವಿಠ್ಠಲ ಬಾಲಿಕಾ ಪದವಿ ಪೂರ್ವ ಪ್ರೌಡ ಶಾಲೆ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
********************************************