-->
ಬೆಲೆ ಕಟ್ಟಲಾಗದ ವೃತ್ತಿ ಬಾಂಧವ್ಯ...

ಬೆಲೆ ಕಟ್ಟಲಾಗದ ವೃತ್ತಿ ಬಾಂಧವ್ಯ...


              ಬೆಲೆ ಕಟ್ಟಲಾಗದ ವೃತ್ತಿ ಬಾಂಧವ್ಯ...
        ************************************
        ಶಿಕ್ಷಕರೆಂದರೆ ಹತ್ತೋ, ಹದಿನೈದೋ ವರ್ಷ ದಿನಾ ಶಾಲೆಯಲ್ಲಿ ಕಂಡು ನಮಗೆ ಪಾಠ ಕಲಿಸಿ ಮತ್ತೆ ಮಾರ್ಕು ನೀಡಿ ಸಮಾಜಕ್ಕೆ ದೂಡಿ ಬಿಟ್ಟು ಇತಿಹಾಸದ ಪುಟ ಸೇರುವ ವ್ಯಕ್ತಿಗಳಲ್ಲ. ಶಿಕ್ಷಕರೆಂದರೆ ಬದುಕಿನುದ್ದಕ್ಕೂ ಮರೆಯಲಾಗದ ಛಾಪು ಮೂಡಿಸುವ ಮಾರ್ಗದರ್ಶಕರು. ಯಾವತ್ತೂ ನೆನಪಿನಲ್ಲುಳಿದು, ನಮಗೆ ತಿಳಿಯದಂತೆ ನಮ್ಮೊಳಗೆ ಜಾಗೃತಿಯನ್ನು, ಅರಿವನ್ನು, ವಿಚಾರಗಳನ್ನು, ಚಿಂತನೆಗಳನ್ನು ಬಿತ್ತಿ ಅದು ಹೆಮ್ಮರವಾಗಿ ನಮ್ಮ ಬದುಕಿಗೂ ಪರೋಕ್ಷವಾಗಿ ಪಾಠ ತಲುಪಿಸುವ ಮಹಾತ್ಮರು.
           ಬೋಧನೆ ವೃತ್ತಿ ಹೌದು. ಅದಕ್ಕೆ ಸಂಬಳವನ್ನೂ ನೀಡಲಾಗುತ್ತದೆ. ವಿದ್ಯಾರ್ಥಿಗಳೂ ಅಷ್ಟೇ ಒಂದಷ್ಟು ಫೀಸು ಕಟ್ಟಿ ಶಾಲೆಗೆ ಹೋಗುತ್ತಾರೆ. ಹಾಗೆಂದ ಮಾತ್ರಕ್ಕೆ ಪಡೆದ ಸಂಬಳಕ್ಕೆ, ನೀಡಿದ ಫೀಸಿಗೆ ತಕ್ಕ ಮೌಲ್ಯವನ್ನು ವಸೂಲಿ ಮಾಡುವ ತಾಣವಲ್ಲ ಶಾಲೆ. ಶಾಲೆಯೊಂದು ಸಾಗರದ ಹಾಗೆ ನಮ್ಮ ನಮ್ಮ ಬೊಗಸೆಯಲ್ಲಿ ನಾವು ನೀರನ್ನು (ವಿದ್ಯೆಯನ್ನು) ಬಾಚಿಕೊಳ್ಳಬಹುದು. ನಮ್ಮ ಅಂಗೈಯ ಗಾತ್ರಕ್ಕೆ ನಮಗೆ ನೀರು ಸಿಕ್ಕುತ್ತದೆ, ಉಳಿದದ್ದು ಬೆರಳ ಎಡೆಯಿಂದ ಸೋರಿ ಹೋಗುತ್ತದೆ. ಶಾಲೆಯಲ್ಲಿ ಕಲಿಸಿದ್ದನ್ನು ಮಾತ್ರ ನಾವು ಕಲಿಯುವುದಲ್ಲ. ಬಹಳಷ್ಟನ್ನು ನೋಡಿ, ಕೇಳಿ, ಅನುಕರಿಸಿ ಕಲಿಯುತ್ತೇವೆ.
          ಸರಿಯಾಗಿ ನೆನಪಿಸಿ .... ನಿಮ್ಮ ಇಷ್ಟದ ಮೇಷ್ಟ್ರು, ಇಷ್ಟದ ಟೀಚರ್ ಯಾರು ಅಂತ ಯೋಚಿಸಿ ನೋಡಿ. ಅವರು ಪಾಠ ಮಾಡುವ ರೀತಿ, ಅವರ ಮಾತಿನ ವೈಖರಿ, ಅವರ ಗಾಂಭೀರ್ಯ, ಅವರ ಉಡುಪಿನ ಶೈಲಿ, ಅವರ ಹಸ್ತಾಕ್ಷರ... ಹೀಗೆ ಬಹಳಷ್ಟು ವಿಚಾರಗಳು ನಮ್ಮ ಮೇಲೆ ನಮಗೆ ತಿಳಿಯದಂತೇ ಪ್ರಭಾವ ಬೀರಿರುತ್ತವೆ. ಒಂದಷ್ಟು ವಿಚಾರಗಳನ್ನು ತರಗತಿಯಲ್ಲಿ ಮಾಡುವ ಪಾಠಗಳಿಂದ, ನೋಟ್ಸುಗಳಿಂದ, ಬರಹಗಳಿಂದ ನಾವು ಕಲಿತಿರುತ್ತೇವೆ. ಇನ್ನಷ್ಟುವಿಚಾರಗಳನ್ನು ಅವರ ಮಾತುಗಳನ್ನು ಕೇಳಿ, ಅವರ ಹಿತವಚನಗಳನ್ನು ಆಲಿಸಿ, ಬದುಕಿನ ಕುರಿತು ಅವರು ನೀಡುವ ತಿಳಿವಳಿಕೆಗಳನ್ನು ಅನುಸರಿಸಿ ನಮಗೆ ಅರಿವಿಲ್ಲದ ಹಾಗೆ ಪಡೆದಿರುತ್ತೇವೆ. ಶಾಲೆ ಬಿಟ್ಟು ಎಷ್ಟೋ ವರ್ಷಗಳಾದ ಬಳಿಕ ತುಂಬ ಮಂದಿ ಹೇಳುವುದನ್ನು ನಾವು ಕೇಳುತ್ತೇವೆ. “ಅಂದು ನನ್ನ ಮಾಷ್ಟ್ರು ಅಷ್ಟು ಬೈದು, ತಿದ್ದಿ ತೀಡಿದ ಕಾರಣಕ್ಕೆ ಇಂದು ನಾನು ಈ ಸ್ಥಿತಿಗೆ ತಲುಪಿದ್ದೇನೆ. ಇಲ್ಲವಾದರೆ ನಾನು ಎಲ್ಲೋ ಹಾಳಾಗಿ ಹೋಗುತ್ತಿದ್ದೆ...” ಅಂತ. ಇಂತಹ ಮಾತುಗಳು ಶಿಕ್ಷಕರ ಮಹತ್ವವನ್ನು ಎತ್ತಿ ಹೇಳುತ್ತವೆ. ಸಹಸ್ರಾರು ಶಿಕ್ಷಕರು ಸದ್ದಿಲ್ಲದೆ ನೀಡುವ ಮಾರ್ಗದರ್ಶನ ಲಕ್ಷಾಂತರ ಉತ್ತಮ ಮನಸುಗಳನ್ನು ಬೆಳೆಸಿ ಸಮಾಜಕ್ಕೆ ನೀಡುತ್ತವೆ. ಅವುಗಳಿಗೆಲ್ಲ ವೈಯಕ್ತಿಕವಾಗಿ ಪ್ರಚಾರ ಸಿಕ್ಕುವುದಿಲ್ಲ. ಆತ್ಮತೃಪ್ತಿಯೇ ಶಿಕ್ಷಕರಿಗೆ ಸಿಕ್ಕುವ ದೊಡ್ಡ ಪುರಸ್ಕಾರ.
           ಪಡೆಯುವ ಸಂಬಳಕ್ಕೂ ಆಚೆಗಿನ ಭಾವನಾತ್ಮಕ ಸಂಬಂಧ, ಪ್ರೀತಿ, ಕಾಳಜಿ ಶಿಕ್ಷಕರು ಮತ್ತು ಮಕ್ಕಳ ನಡುವೆ ಇರುತ್ತದೆ. ಅದೇ ಕಾರಣಕ್ಕೆ ಸಿಲಬಸ್ಸಿನಲ್ಲಿ ಇರುವ ಪಾಠಕ್ಕಿಂತ ಆಚೆಗಿನ ಬದುಕಿನ ಕುರಿತಾದ ಸರಿ ತಪ್ಪುಗಳ ಮಾರ್ಗದರ್ಶನವೂ ನಮಗೆ ಶಿಕ್ಷಕರಿಂದ ಸಿಗುತ್ತದೆ. ನಮ್ಮಲ್ಲಿನ ಪ್ರತಿಭೆಗೆ ವೇದಿಕೆ ಕಲ್ಪಿಸುವವರು ಶಿಕ್ಷಕರು, ಬರಹ, ಹಾಡು, ಅಭಿನಯ, ಕ್ರೀಡೆ, ಚಿಂತನೆ ಇವುಗಳಿಗೆಲ್ಲ ಪ್ರೋತ್ಸಾಹ ನೀಡಿ, ತಪ್ಪುಗಳನ್ನು ತಿದ್ದಿ ಮುಂದೊಂದು ದಿನ ದೊಡ್ಡ ವೇದಿಕೆಗೆ ಏರುವ ಹಾಗೆ ತಯಾರಿ ಮಾಡುವವರು ಶಿಕ್ಷಕರು. ಬದುಕಿನ ಕಷ್ಟಗಳಿಗೆ ಸ್ಪಂದಿಸುವ ಬಡ ವಿದ್ಯಾರ್ಥಿಗಳ ಫೀಸನ್ನು ಸ್ವತಃ ಪಾವತಿಸಿ ಅವರ ಶಿಕ್ಷಣಕ್ಕೆ ಅಡ್ಡಿ ಆಗದ ಹಾಗೆ ನೋಡಿಕೊಂಡ ಎಷ್ಟೋ ಶಿಕ್ಷಕರು ನಮ್ಮ ನಡುವೆ ಇದ್ದಾರೆ. ಇದೇ ಕಾರಣಕ್ಕೆ, ಕಲಿತು ಹೊರ ಬಂದ ವರ್ಷಗಳ ನಂತರವೂ, ಹಲವು ಕಾಲದಬಳಿಕವೂ ಕಲಿಸಿದ ಶಿಕ್ಷಕರನ್ನುಕಂಡಾಗ ಆಗುವ ರೋಮಾಂಚನ, ಆ ನವಿರಾದ ಗೌರವ ಭಾವ, ಭಕ್ತಿ ಅಂತರ್ಗತ ವಾಗಿರುವುದು ಆ ಭೇಟಿಯ ಸಂದರ್ಭ ನಮ್ಮ ಅರಿವಿಗೆ ಬರುತ್ತದೆ.
          ಹಾಗಾಗಿ ಬೋಧನೆ ಎಂಬುದು ಯಾಂತ್ರಿಕ ಕೆಲಸವಲ್ಲ. 20-30 ವರ್ಷ ಕಲಿಸಿದಲ್ಲಿಗೆ ಮಾತ್ರ ಒಬ್ಬರು ಶಿಕ್ಷಕರಾಗಿ ನಿವೃತ್ತರಾಗುವುದಲ್ಲ. ಅವರ ಜೀವನಪೂರ್ತಿ ಅವರು ಟೀಚರು, ಮಾಷ್ಟ್ರೇ ಆಗಿರುತ್ತಾರೆ. ಬೋಧನೆ ಅವರ ಬದುಕಿನಲ್ಲಿ ಹಾಸು ಹೊಕ್ಕಾಗಿರುತ್ತದೆ. ಸೂಕ್ತ ಸಂದರ್ಭ ನಮ್ಮ ಟೀಚರು, ಮಾಷ್ಟ್ರುಗಳು ನಮ್ಮಲ್ಲಿರುವ ಪ್ರತಿಭೆಗಳನ್ನು ಪತ್ತೆ ಹಚ್ಚಿ ಪ್ರೋತ್ಸಾಹ ನೀಡದಿದ್ದರೆ ಸ್ವತಃ ನಮಗೇ ನಾವು ಯಾವ ದಾರಿಯಲ್ಲಿ ಬದುಕು ಸಾಗಿಸಬೇಕು ಎಂಬ ಅರಿವು ಇರುವುದಿಲ್ಲ. ನಮ್ಮ ತಪ್ಪುಗಳು, ನಮ್ಮ ಎಡವಟ್ಟುಗಳು ನಮಗೇ ಅರಿವಿರುವುದಿಲ್ಲ. ಅವುಗಳನ್ನು ಗುರುತಿಸಿ, ತಿದ್ದಿ, ಜವಾಬ್ದಾರಿಯುತವಾಗಿ ಹೇಳಿದ ಕಾರಣಕ್ಕೇ ನಾವು ನಮ್ಮ ನಮ್ಮ ಆಸಕ್ತಿಯ ಕ್ಷೇತ್ರಗಳಲ್ಲಿ ಮುಂದುವರಿಯಲು ಸಾಧ್ಯವಾಗುತ್ತದೆ.
                 ಮುಂದೇನು ಕಲಿಯಬೇಕು, ನಾನು ಹೇಗೆ ಸುಧಾರಿಸಬೇಕು, ನನ್ನ ಇತಿಮಿತಗಳೇನು, ನನ್ನಲ್ಲಿರುವ ಸಾಧ್ಯತೆಗಳೇನು ಇವನ್ನೆಲ್ಲ ನಮ್ಮ ಹೆತ್ತವರಷ್ಟೇ ಪರಿಪೂರ್ಣವಾಗಿ ನಮ್ಮ ಶಿಕ್ಷಕರೂ ಗುರುತಿಸಿ ನಮಗೆ ಮಾರ್ಗದರ್ಶನ ನೀಡಬಲ್ಲರು. ಹಾಗಾಗಿ ಬಹಳಷ್ಟು ಆತ್ಮತೃಪ್ತಿ ನೀಡುವ, ಸಾರ್ಥಕ ಭಾವ ಮೂಡಿಸುವ, ಹೊಸದೊಂದು ಜನಾಂಗವನ್ನು, ಸಮಾಜಮುಖಿ ಮನಸುಗಳನ್ನು ನಿರ್ಮಿಸುವ ಶಿಕ್ಷಕ ವೃತ್ತಿ ತುಂಬ ಪವಿತ್ರ ಹಾಗೂ ಬೆಲೆ ಕಟ್ಟಲಾಗದ ವೃತ್ತಿ. ಕಲಿಸಿದವರನ್ನು ನೆನಪಿಟ್ಟು ಸ್ಮರಿಸುವುದು ಅವರಿಗೊಂದು ಪುಟ್ಟ ನಮಸ್ಕಾರವನ್ನಾದರೂ ನೀಡುವುದು, ನೀಡಬೇಕಾಗಿರುವುದು ನಮ್ಮ ಸಂಸ್ಕೃತಿ ಮಾತ್ರವಲ್ಲ, ಕಲಿತವರಾಗಿ ನಮಗದು ಕರ್ತವ್ಯವೂ ಹೌದು.
...................................ಕೃಷ್ಣಮೋಹನ ತಲೆಂಗಳ
ಹಿರಿಯ ಉಪ ಸಂಪಾದಕ
ಕನ್ನಡಪ್ರಭ
ಮಂಗಳೂರು.
********************************************Ads on article

Advertise in articles 1

advertising articles 2

Advertise under the article