
ಹಕ್ಕಿ ಕಥೆ - 7
ಹಕ್ಕಿ ಕಥೆ - 7
ಗಂಡುಹಕ್ಕಿಹೆಣ್ಣುಹಕ್ಕಿ
ಕೋಗಿಲೆ ಅನ್ನುವ ಹಕ್ಕಿ ನಮಗೆಲ್ಲಾ ಅತ್ಯಂತ ಚಿರಪರಿಚಿತ. ಬೇಸಗೆಯ ದಿನಗಳಲ್ಲಿ ಕುಹೂ.. ಕುಹೂ... ಎಂಬ ಕೂಗನ್ನು ನೀವೆಲ್ಲಾ ಕೇಳಿದ್ದೀರಲ್ಲಾ. ಹಗಲಲ್ಲೂ ಹಾಡುವ ಅದರ ಜೊತೆ ನೀವೂ ಹಾಡಿ ಸ್ಪರ್ಧೆಗೆ ಇಳಿದಿದ್ದೀರಲ್ವೇ....? ಚೆನ್ನಾಗಿ ಹಾಡುವವರಿಗೆ ಆಹಾ ಕೋಗಿಲೆ ಕಂಠ ಎಂದು ಹೊಗಳುತ್ತಾರೆ ಅಲ್ವೇ... ಪಕ್ಷಿ ಪ್ರಪಂಚದಲ್ಲಿ ಇದಕ್ಕಿಂತಲೂ ಚೆನ್ನಾಗಿ ಹಾಡುವ ಹಕ್ಕಿಗಳಿವೆ. ನಿಮ್ಮ ಮನೆಯ ಹತ್ತಿರ ಪಪ್ಪಾಯಿ ಮರ ಇದ್ರೆ ಅದನ್ನು ಆಗಾಗ ಗಮನಿಸ್ತಾ ಇರಿ. ಈ ಕೋಗಿಲೆ ಪಪ್ಪಾಯಿ ಹಣ್ಣು ತಿನ್ಲಿಕ್ಕೆ ಖಂಡಿತಾ ಬಂದೇ ಬರ್ತದೆ. ಉಪ್ಪಳಿಗೆ ಎನ್ನುವ ಜಾತಿಯ ಮರವನ್ನು ನೀವು ನಿಮ್ಮ ಸುತ್ತಮುತ್ತಲೂ ನೋಡಿರಬಹುದು. ಅದು ಬೇಸಗೆಯಲ್ಲಿ ಹೂಬಿಡುವಾಗ ಮತ್ತು ಹಣ್ಣಾಗುವಾಗ ಈ ಹಕ್ಕಿ ಖಂಡಿತಾ ಅಲ್ಲಿ ನೋಡ್ಲಿಕ್ಕೆ ಸಿಗ್ತದೆ. ಬೆಳಗ್ಗೆ ಐದು ಐದೂವರೆ ಹೊತ್ತಿಗೇ ಎದ್ದು ಕುಹು ಕುಹು ಕುಹು ಕುಹು ಕುಹು... ಎಂದು ಕೂಗಿಬಿಡುತ್ತದೆ... ಸಂಜೆಯಾದಾಗಲೂ ಹಾಗೇ ಕೂಗುತ್ತದೆ.. ಪೂರ್ತಿ ಕಪ್ಪು ಬಣ್ಣದ ದೇಹ ಇದ್ದರೂ ಕೆಂಪು ಬಣ್ಣದ ಕಣ್ಣು ಮತ್ತು ಇದರ ಹಾರುವ ವಿಧಾನದಿಂದ ಇದನ್ನು ಕಾಗೆ ಅಲ್ಲ ಕೋಗಿಲೆ ಎಂದು ಗುರುತಿಸಬಹುದು. ಹೆಣ್ಣು ಹಕ್ಕಿ ಗಂಡಿಗಿಂತ ನೋಡಲು ತುಸು ಭಿನ್ನವಾಗಿರುತ್ತದೆ. ಮಾರ್ಚ್ ನಿಂದ ಜೂನ್ ನಡುವೆ ಇವುಗಳ ಸಂತಾನಾಭಿವೃದ್ಧಿ ಕಾಲ. ಆದರೆ ವಿಶೇಷ ಏನಪ್ಪಾ ಅಂದ್ರೆ ಇವು ಎಲ್ಲೂ ಗೂಡು ಕಟ್ಟುವುದಿಲ್ಲ. ಬಜಕ್ರೆ ಪಕ್ಕಿ, ಕಾಗೆ ಮುಂತಾದ ಹಕ್ಕಿಗಳ ಗೂಡಿನಲ್ಲಿ ಅವುಗಳು ಇಲ್ಲದ ಸಮಯದಲ್ಲಿ ಹೋಗಿ ಗುಟ್ಟಾಗಿ ಮೊಟ್ಟೆ ಇಟ್ಟು ಬಂದುಬಿಡುತ್ತವೆ. ಪಾಪ ಉಳಿದ ಹಕ್ಕಿಗಳಿಗೆ ಇದು ಗೊತ್ತೇ ಆಗೋದಿಲ್ಲ. ಮೊಟ್ಟೆ ಒಡೆದು ಬರುವ ಎಲ್ಲ ಮರಿಗಳನ್ನೂ ತನ್ನ ಮರಿಗಳಂತೆ ಸಾಕುತ್ತವೆ. ಮರಿಗಳು ದೊಡ್ಡದಾಗಿ ರೆಕ್ಕೆ ಬಲಿತ ಮೇಲೆ ಸ್ವತಂತ್ರವಾಗಿ ಬದುಕಲು ಕಲಿಯುತ್ತವೆ.
ಹಕ್ಕಿಯ ಹೆಸರು : ಕೋಗಿಲೆ English Name: Asian Koel Scientific name: Eudynamys scolopaceus
ಮಕ್ಕಳೇ..... ಕನ್ನಡ ಮತ್ತು ಹಿಂದೀ ಚಲನಚಿತ್ರಗಳಲ್ಲಿ ಕೋಗಿಲೆಗೆ ಸಂಬಂಧಿಸಿ ಹಲವಾರು ಹಾಡುಗಳು ಸಿಗುತ್ತವೆ. ಆ ಹಾಡುಗಳನ್ನು ಸಂಗ್ರಹಿಸಿ ನೀವೂ ಹಾಡಿ ಸಂತೋಷ ಪಡಬಹುದು... ಮತ್ತೆ ಸಿಗೋಣ...
.............................................. ಅರವಿಂದ ಕುಡ್ಲ ಅಧ್ಯಾಪಕ ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
**********************************************