-->
ಬದಲಾಗೋಣವೇ ಪ್ಲೀಸ್....! ಸಂಚಿಕೆ-6

ಬದಲಾಗೋಣವೇ ಪ್ಲೀಸ್....! ಸಂಚಿಕೆ-6

ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಹಾಗೂ ತರಬೇತುದಾರರು

      ಬದಲಾಗೋಣವೇ ಪ್ಲೀಸ್....! ಸಂಚಿಕೆ - 6
---------------------------------------------------
              ಮುಂಗಾರು ಆರಂಭದ ದಿನವದು. ಎರಡು ಬೀಜಗಳು ತಮ್ಮೊಳಗೆ ಮಾತಾಡುತ್ತಿದ್ದವು. ಮೊದಲ ಬೀಜವು " ನಾನು ಮೊಳಕೆಯೊಡೆದು ಬೆಳೆಯಬೇಕು. ನನ್ನ ಈ ಮೃದು ಬೇರುಗಳನ್ನು ಮಣ್ಣಿನಾಳಕ್ಕೆ ಇಳಿಸಿ  ಸಾರ ಹೀರಬೇಕು. ಮೃದು ಕಾಂಡವನ್ನು ಮಣ್ಣಿನ ಮೇಲೆ ಎಬ್ಬಿಸಿ ಸುತ್ತಲ ಪರಿಸರವನ್ನು ನೋಡಬೇಕು  ; ಆಕಾಶದೆತ್ತರ ಬೆಳೆಯಬೇಕು , ತಂಗಾಳಿಯೊಂದಿಗೆ ಸಂಭ್ರಮಿಸಬೇಕು ; ವಸಂತನಾಗಮನಕ್ಕೆ ಕಾಯಬೇಕು ; ಚಿಗೊರೊಡೆದು ಹೂವು ಹಣ್ಣುಗಳನ್ನು ಬಿಡಬೇಕು ; ಸೂರ್ಯನ ಬೆಳಕ ಸವಿ ಕಾಣಬೇಕು ; ತಂಗಾಳಿಯ ಸ್ಪರ್ಶ ಅನುಭವಿಸಬೇಕು ; ಮುಂಜಾನೆಯ ಇಬ್ಬನಿಯ ಸ್ಪರ್ಶ  ಸುಖಿಸಬೇಕು ". ಎಂದು ಹೇಳಿತು. ಇದನ್ನಾಲಿಸಿದ ಎರಡನೇಯ ಬೀಜವು " ಅಯ್ಯೋ ..! ನನಗೆ ಭಯ ಆಗುತ್ತಿದೆ. ಒಂದು ವೇಳೆ ನಾನು ಬೇರನ್ನು ಮಣ್ಣಿನಾಳಕ್ಕೆ ಇಳಿಸಿದರೆ ಅಲ್ಲಿನ ಗಾಢ ಅಂಧಕಾರದಲ್ಲಿ ಇರುವು ದಾದರೂ ಹೇಗೆ ಎಂಬ ಭಯ , ಆ ಕತ್ತಲನ್ನು ಎದುರಿಸುವ ಭಯ , ಮೊಳಕೆಯೊಡೆದು ಮಣ್ಣಿನಿಂದ ಹೊರಗೆ ಬಂದಾಗ ನನ್ನ ಚಿಗುರುಗಳಿಗೆ ಕ್ರೀಮಿ - ಕೀಟಗಳು ಏನು ಮಾಡಬಹುದೆಂಬ ಭಯ , ನನ್ನ ಎಲೆಗಳನ್ನು ಪ್ರಾಣಿಗಳು ತಿನ್ನಬಹುದೆಂಬ ಭಯ , ಸೂರ್ಯನ ತೀಕ್ಷ್ಮ ಕಿರಣಗಳು ನನ್ನನ್ನು ಸುಟ್ಟುಬಿಡಬಹುದೆಂಬ ಭಯ , ತಂಗಾಳಿಯನ್ನು ಹೇಗೆ ಸಹಿಸುವುದೆಂಬ ಭಯ.... !! ಹಾಗಾಗಿ ಈ ಭಯದ ಸಮಸ್ಯೆ ಬಗೆಹರಿದ ನಂತರವೇ ಮೊಳಕೆಯೊಡೆಯುತ್ತೇನೆ ". ಎಂದು ಹೇಳಿತು. ಆದರೆ ಮೊದಲಿನ ಬೀಜವು ಉತ್ಸಾಹದಿಂದ ಮೊಳಕೆಯೊಡೆದು ಗಿಡವಾಗಿ ಮರವಾಗಿ ದೊಡ್ಡದಾಯಿತು . ಆದರೆ ಎರಡನೇ ಬೀಜವು ಸಮಸ್ಯೆ ಪರಿಹಾರದ ಸೂಕ್ತ ಸಮಯಕ್ಕಾಗಿ ಕಾದು ... ಕಾದು .. ಕೊನೆಗೆ ಆಹಾರಕ್ಕಾಗಿ ಮಣ್ಣು  ಕೆದಕಿದ ಕೋಳಿಗೆ ಆಹಾರವಾಗಿ ಹೋಯಿತು.
            ಹೌದಲ್ವ ... ಧನಾತ್ಮಕ ಹಾಗೂ ಋಣಾತ್ಮಕ ಚಿಂತನೆಗಳ ಎರಡು ಮುಖಗಳು ಹಾಗೂ ಅದರ ಪರಿಣಾಮಗಳನ್ನು ಈ ಕಥೆ ಅರ್ಥಪೂರ್ಣವಾಗಿ ವಿವರಿಸುತ್ತದೆ .
           ನಾವು ಕಾಮನಬಿಲ್ಲು ಆಗಬೇಕಾದರೆ ಮೊದಲು ಮಳೆಗೆ ಮೈ ಒಡ್ಡುವುದನ್ನು ಕಲಿಯಬೇಕು. ಬುದ್ಧನ ಸಾವಿಲ್ಲದ ಮನೆಯ ಸಾಸಿವೆ ಹುಡುಕಿದ ಕಥೆಯಂತೆ ಸಮಸ್ಯೆ ಇಲ್ಲದ ವ್ಯಕ್ತಿಯನ್ನು ಹುಡುಕುವುದು ಅಸಾಧ್ಯ. ಎಲ್ಲರಿಗೂ ಸಮಸ್ಯೆಗಳು ಇದ್ದೇ ಇರುತ್ತದೆ . ಅದು ಆರ್ಥಿಕ, ಸಾಮಾಜಿಕ , ಭಾವನಾತ್ಮಕ , ಶೈಕ್ಷಣಿಕ , ಗುಣಾತ್ಮಕ ..... ಹೀಗೆ ಹಲವು ರೂಪದಲ್ಲಿ ಕಂಡುಬರುತ್ತದೆ . 
         ನೀರಿನ ಮೇಲೆ ದೋಣಿ ಇರಬೇಕೆ ಹೊರತು ದೋಣಿಯ ಮೇಲೆ ನೀರು ಇರಬಾರದು. ಹಾಗಾಗಿ ಸಮಸ್ಯೆಗಳೆಂಬ ನೀರಿನ ಮೇಲೆ  ಬದುಕೆಂಬ ದೋಣಿಯನ್ನು ದಕ್ಷ ನಾವಿಕನ ರೀತಿಯಲ್ಲಿ  ಹರಿವಿನ ದಿಕ್ಕು, ಬಿರುಗಾಳಿ ಹಾಗೂ ತಡೆಗಳನ್ನು ಮೀರಿ ನಡೆಸಿದರೆ ಜಯ ಖಂಡಿತ. ಅದರ ಬದಲು ಸಮಸ್ಯೆಗಳೇ ನಮ್ಮನ್ನು ಆವರಿಸಿದರೆ ಸೋತು ಮುಳುಗುವುದು ಖಂಡಿತಾ....!!
         ನಾವು ಬೆಟ್ಟವನ್ನು ಹತ್ತುವಾಗ ಬೆಟ್ಟ ಇಳಿಯುವ ಬಗ್ಗೆಯೇ ಆಲೋಚಿಸಿದರೆ ಗುರಿತಲುಪಲು ವಿಳಂಬವಾಗಬಹುದು ಅಥವಾ ಬೆಟ್ಟ ಹತ್ತುವ ಪ್ರಯತ್ನವನ್ನೇ ಬಿಡಬಹುದು. ಸಮಸ್ಯೆಗಳನ್ನು ಸಾಗರದ ಅಲೆಗಳಂತೆ ಕಾಣಬೇಕು. ಅದನ್ನು ನಿಯಂತ್ರಿಸಲು ಯಾರಿಂದಲೂ ಸಾಧ್ಯವಿಲ್ಲ ಆದರೆ ಅದರಿಂದಾಗುವ ಹಾನಿಗಳನ್ನು ತಪ್ಪಿಸಲು ಸಾಧ್ಯವಿದೆ. ಸಮಸ್ಯೆಗಳನ್ನು   ಸಹಜವಾಗಿ ಸ್ವೀಕರಿಸುವ ಗುಣ ಬೆಳೆಸಬೇಕು. ಜಗತ್ತಿನ ಎಲ್ಲಾ ಜೀವಿಗಳಿಗೂ ಅದರದೇ ಆದ ಸಮಸ್ಯೆಗಳಿವೆ. ಬೀಜವೊಂದು ಮೊಳಕೆಯೊಡೆದು  ಬೃಹತ್ ಮರವಾಗಬೇಕಾದರೆ ಅದು ಎದುರಿಸುವ ಸಮಸ್ಯೆಗಳು ಸಾವಿರಾರು. ಅದು ಕಡಿದಲ್ಲೇ ಮತ್ತೆ ಮತ್ತೆ ಚಿಗುರುತ್ತದೆ. ಅದೇ ರೀತಿ ನಾವು ಕೂಡ ಸಮಸ್ಯೆಗಳನ್ನು ನಕಾರಾತ್ಮಕವಾಗಿ ಕಾಣದೆ ಚಾಲೆಂಜ್ ಎಂದು ಭಾವಿಸಬೇಕು. ಒಲಿಂಪಿಕ್ಸ್ ನಲ್ಲಿ ಚಿನ್ನ ಗೆದ್ದಂತೆ ಸಮಸ್ಯೆಯ ಚಾಲೆಂಜ್ ನಲ್ಲೂ ಗೆದ್ದು ಖುಷಿಪಡಬೇಕು, ಇತರರಿಗೂ ಖುಷಿ ನೀಡಬೇಕು, ಮಾದರಿಯಾಗಿ ಬದುಕಬೇಕು  .  ಭೂತಕಾಲದ ಕಹಿ ನೆನಪುಗಳು ನಮ್ಮನ್ನು ಪೀಡಿಸಬಹುದು ಆದರೆ ಧನಾತ್ಮಕ ಅನುಭವಗಳನ್ನು ಮಾತ್ರ ನೆನಪಿಟ್ಟು ಉಳಿದವನ್ನು ಮರೆತುಬಿಡಬೇಕು.  ಭವಿಷ್ಯವು ಹೇಗುಂಟು ಎಂದು ತಿಳಿದವರಿಲ್ಲ. ಭವಿಷ್ಯದ ಬಗೆಗಿನ ಅತಿಯಾದ ಚಿಂತೆಯ ಈಗಿನ ನಮ್ಮ ಶಕ್ತಿಯನ್ನು ನಷ್ಟಗೊಳಿಸಬಹುದು. ಹಾಗಾಗಿ ನನಸಾಗಿಸುವ ಕನಸುಗಳಿರಲಿ. ಅದರ ಈಡೇರಿಕೆಗೆ ಧನಾತ್ಮಕ ಪ್ರಯತ್ನವಿರಲಿ.  ವರ್ತಮಾನ ಕಾಲದ ವಾಸ್ತವದಲ್ಲಿ ಬದುಕಬೇಕು. ಅದರ ಪ್ರತಿಕ್ಷಣವನ್ನು ಅನುಭವಿಸಿ ನೆಮ್ಮದಿ ಪಡಬೇಕು. ಭೂತಕಾಲವು ಬಾಲ್ಯವಿದ್ದಂತೆ, ವರ್ತಮಾನವು ಯೌವ್ವನವಿದ್ದಂತೆ , ಭವಿಷ್ಯವು ವೃದ್ಧಾಪ್ಯವಿದ್ದಂತೆ. ನಾವು ಸದಾ ಯೌವ್ವನದಲ್ಲಿ ಶಕ್ತಿವಂತರಾಗಿ ಇರಲು ಪ್ರಯತ್ನಿಸೋಣ. ಅತಿಯಾಗಿ ಚಿಂತಿಸಿದರೆ ಚಿತೆಯಲ್ಲಿರಬೇಕಾಗುತ್ತದೆ. ಸಂಪಾದನೆಯೇ ಹೆಚ್ಚಿನವರ ಸಮಸ್ಯೆಗೆ ಕಾರಣವಾಗಿದೆ. ಸಂಪಾದನೆ ಎಂದರೆ ಕೇವಲ ಹಣ ಎಂದು ಭಾವಿಸಬೇಡಿ. ಅನುಭವ , ಪ್ರೀತಿ , ಗೌರವ , ನಂಬಿಕೆ ಕೂಡಾ ಸಂಪಾದನೆಯೇ ಆಗಿದೆ. ಹಣದ ಹಿಂದೆ ಹೋದರೆ ಹೆಣದಂತೆ  ಆಗುತ್ತೇವೆ. ನಮಗೆ ಬದುಕಲು ಬಹಳಷ್ಟು ಹಣ ಬೇಕಾಗಿಲ್ಲ ಆದರೆ ಇನ್ನೊಬ್ಬರನ್ನು ನೋಡಿ ಬದುಕಬೇಕಾದರೆ ಎಷ್ಟಿದ್ದರೂ ಸಾಕಾಗಲ್ಲ.  ಬದುಕನ್ನು ಪ್ರೀತಿಸಿದರೆ ಬದುಕು ನಮ್ಮನ್ನು ಪ್ರೀತಿಸುತ್ತದೆ. ಸೋಲನ್ನು ನಗುತ್ತಾ ಸ್ವಾಗತಿಸಿದರೆ ಗೆಲುವು ಕೂಡಾ ನಮ್ಮನ್ನು ನಗುತ್ತಾ ಸ್ವಾಗತಿಸುತ್ತದೆ. ನಮ್ಮಲ್ಲಿ ನಮಗೆ ನಂಬಿಕೆ ಇರಲಿ. ನೋವು - ನಲಿವು ಮತ್ತು ಹೊಗಳಿಕೆ - ತೆಗಳಿಕೆಗಳನ್ನು ಸಮಾನವಾಗಿ ಸ್ವೀಕರಿಸಿ. ಸರ್ವ ಸಮಸ್ಯೆಗಳಿಗೆ ತಾಳ್ಮೆಯೇ ರಾಮಬಾಣ . ಸಮಸ್ಯೆಗಳಿಗೆ ಸಮರ್ಥನೆ ಕೊಡಬೇಡಿ ಆದರೆ  ಪರಿಹಾರ ಹುಡುಕಿ. ಇನ್ನೊಬ್ಬರ ಜೊತೆ ಹೋಲಿಕೆ ಮಾಡಿದರೆ ಸಮಸ್ಯೆ ಹೆಚ್ಚಾಗುತ್ತದೆ ಹೊರತು ಕಡಿಮೆಯಾಗಲ್ಲ. ನಮಗೆ ನಾವೇ ಹೋಲಿಕೆಯಾಗಬೇಕು.  
           ನಾವು  ಇತಿಹಾಸದಲ್ಲಿ  ನೋಡಿರುವ ಸಾವಿರಾರು ನಾಯಕರು ಸಮಸ್ಯೆಗಳನ್ನು ಮೀರಿ ಬದುಕಿದವರು. ಬನ್ನಿ ಸಮಸ್ಯೆಗಳನ್ನು ಮೀರಿ ಬದುಕುವುದನ್ನು ಕಲಿಯುವ. ಈ ಬದಲಾವಣೆಗೆ ಯಾರನ್ನು ಕಾಯದೇ ನಾವೇ ಬದಲಾಗೋಣ. ಧನಾತ್ಮಕ ಬದುಕಿಗಾಗಿ 
ಬದಲಾಗೋಣವೇ  ಪ್ಲೀಸ್.....! ಏನಂತೀರಿ.
...........................  ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಮತ್ತು ತರಬೇತುದಾರರು 
Mob: +91 99802 23736

**********************************************


Ads on article

Advertise in articles 1

advertising articles 2

Advertise under the article