-->
ಅಕ್ಕನ ಪತ್ರ - 4ಕ್ಕೆ ಜಗಲಿಯ ಮಕ್ಕಳ ಉತ್ತರ. ಸಂಚಿಕೆ -2

ಅಕ್ಕನ ಪತ್ರ - 4ಕ್ಕೆ ಜಗಲಿಯ ಮಕ್ಕಳ ಉತ್ತರ. ಸಂಚಿಕೆ -2

ಅಕ್ಕನ ಪತ್ರ - 4ಕ್ಕೆ
ಜಗಲಿಯ ಮಕ್ಕಳ ಉತ್ತರ
ಸಂಚಿಕೆ - 2

ನಮಸ್ತೆ ಅಕ್ಕ..... 
ನಿಮಗೂ ಕೂಡ ಸ್ವಾತಂತ್ರ್ಯ ದಿನದ ಶುಭಾಶಯಗಳು... ನಾನು ನಿಮ್ಮ ಪತ್ರ ಓದಿದೆ. ನನಗೆ  ತುಂಬಾ ಸಂತೋಷವಾಯಿತು... ಅದರಲ್ಲಿ ನನಗೆ ಬೇಕಾದ , ನನಗೆ ಗೊತಿಲ್ಲದ ವಿಷಯ ತಿಳಿಯಿತು.... ಒಲಿಂಪಿಕ್  ಎಂದರೆ ಪ್ರೀತಿ. ಅದರ ಬಗ್ಗೆ ನೀವು ಹೇಳಿ ಕೊಟ್ಟಿದ್ದೀರಿ ನಿಮಗೆ ನನ್ನ ಕೋಟಿ ಕೋಟಿ ನಮನಗಳು.... ನಿಮ್ಮ ಪತ್ರದ ಬಗ್ಗೆ ನನ್ನ ಎಲ್ಲ ಸ್ನೇಹಿತರಿಗೆ ಹೇಳಿದ್ದೇನೆ.. ಅವರಿಗೂ  ತುಂಬಾನೆ ಸಂತೋಷವಾಯಿತು. ನನಗೂ ಕ್ರೀಡಾಪಟು ಆಗ್ಬೇಕು ಅಂತ ತುಂಬಾ ಆಸೆ ಇದೆ.. ನಿಮ್ಮ ಆಶೀರ್ವಾದ ಸದಾ ಇರಲಿ .... ನನ್ನ ತಮ್ಮಂದಿರು  ಯಾವಾಗಲೂ ಸಂಜೆ ಮೈದಾನದಲ್ಲಿ  ಆಡುವಾಗ ನನಗೂ ಆಡಲು ಆಸೆಯಾಗಿ ನಾನು ಕೂಡ ಆಡುತ್ತೇನೆ.... ಧನ್ಯವಾದಗಳು... ಹೇಳುತ್ತಾ
ಇತೀ ನಿಮ್ಮ ಪ್ರೀತಿಯ 
.................................................ಕೌಶೀಲಾ
9ನೇ ತರಗತಿ
ಸರಕಾರಿ ಪ್ರೌಢಶಾಲೆ ನಾರ್ಶ ಮೈದಾನ
ಬಂಟ್ವಾಳ ತಾಲೂಕು ,  ದಕ್ಷಿಣ ಕನ್ನಡ ಜಿಲ್ಲೆ
****************************************ಅಕ್ಕನ ಪತ್ರ - 4 ಕ್ಕೆ ಉತ್ತರ.......
    ಮಾನವೀಯತೆ  ಮರೆಯಾಗುತ್ತಿರುವ ಇಂದಿನ ದಿನಗಳಲ್ಲಿ ನಮ್ಮಂತಹ ಮಕ್ಕಳಿಗೆ ಉತ್ತಮ ಪಾಠ. ಕಲಿಕೆಗೆ ಒತ್ತು ನೀಡಿ ಅದರೊಂದಿಗೆ ಜೀವನ ಪಾಠವನ್ನು ಈ ಪತ್ರದ ಮೂಲಕ ಪ್ರಸ್ತುತ ಪಡಿಸಿದ ಅಕ್ಕನಿಗೆ  ನನ್ನ  ನಮನಗಳು. ತಪ್ಪು ಮಾಡುವುದು  ಮನುಷ್ಯನ ಸಹಜ ಗುಣ. ಅದನ್ನು ತಿದ್ದಿ ಸರಿ ದಾರಿಯಲ್ಲಿ ನಡೆಯಬೇಕು.  ಹಿರಿಯರೊಂದಿಗೆ ಗೌರವದಿಂದ ವರ್ತಿಸಿ ಸಹಬಾಳ್ವೆಯಿಂದ ಬದುಕೋಣ. ನಮ್ಮ ಸಂಸ್ಕೃತಿಯನ್ನು ಅರಿತುಕೊಳ್ಳೋಣ. ಅಕ್ಕನ ಪತ್ರದಲ್ಲಿ ಕಥೆಯ ಮೂಲಕ ಮೂಡಿ ಬಂದ ಆಟಗಾರನ ಹೃದಯ ವೈಶಾಲ್ಯತೆ ನನಗೆ ತುಂಬಾ ಇಷ್ಟವಾಯಿತು. ಅದನ್ನು ನಮ್ಮ ಜೀವನದಲ್ಲೂ ಅಳವಡಿಸಿಕೊಳ್ಳೋಣ.
...................................ಯಶಿಕಾ ಪಿ ಶೆಟ್ಟಿ 
3ನೇ ತರಗತಿ 
ಶ್ರೀ ಗುರುದೇವ ವಿದ್ಯಾ ಪೀಠ ಒಡಿಯೂರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
***************************************ಅಕ್ಕನ ಪತ್ರ ಓದಿ ಖುಷಿಯಾಯಿತು. ನಾನು ಮಕ್ಕಳ ಜಗಲಿಯಲ್ಲಿ ಬರುವ ಎಲ್ಲಾ ಬರಹಗಳನ್ನು ತಪ್ಪದೆ ಓದುತ್ತೇನೆ.  ಅಕ್ಕನ  ಪತ್ರವಂತು ತುಂಬಾ ಚೆನ್ನಾಗಿದೆ. ಪತ್ರದಲ್ಲಿ  ಹೇಳಿದ ಹಾಗೆ ನಾನು ದಿನಪತ್ರಿಕೆ ,  ವಾರ್ತೆಗಳನ್ನು ನೋಡುವುದನ್ನು ಮಾಡುತ್ತೇನೆ. ಅಕ್ಕನ  ಪತ್ರವನ್ನು ಓದಿ  ನಾವು ಮಕ್ಕಳು ,  ನಮ್ಮ ಸುಂದರ ಸಂಸ್ಕೃತಿ, ಆಚಾರ,  ಹಿರಿಯರಿಗೆ, ಶಿಕ್ಷಕರಿಗೆ ಗೌರವ ಕೊಡುವ ರೀತಿಯನ್ನು  ಪಾಲಿಸಬೇಕು. ನಮ್ಮಲ್ಲಿ ಒಳ್ಳೆಯ ರೀತಿಯ ಬದಲಾವಣೆಯನ್ನು  ತರುವ ಅಕ್ಕನ  ಪತ್ರ ಮುಂದುವರಿಯುತ್ತಲೇ ಇರಲಿ.
ವಂದನೆಗಳು.
....…..................….........ಸಾನ್ವಿ ಎಸ್. ಆಳ್ವ
4 ನೇ ತರಗತಿ 
ಶಾರದಾ ಗಣಪತಿ ವಿದ್ಯಾ ಕೇಂದ್ರ ಕೈರಂಗಳ 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
**************************************


ಅಕ್ಕ ......... ನಿಮ್ಮ ಪತ್ರ ಓದಿದೆ...
ನಿಜವಾಗಿಯೂ ಹೌದು.  ನಾವೆಲ್ಲರೂ ಸಹಬಾಳ್ವೆಯಿಂದ ಪ್ರೀತಿಯಿಂದ ಬದುಕಬೇಕು. ನಮ್ಮಿಂದ ಸಹಾಯ ಮಾಡಲು ಸಾಧ್ಯವಾಗದಿದ್ದರೂ ಸಾಂತ್ವನದ ಮಾತುಗಳನ್ನು ಆದರೂ ಮಾಡಬಹುದಲ್ಲವೇ... ಯಾವುದೂ ಈ ಭೂಮಿಯ ಮೇಲೆ ಶಾಶ್ವತವಲ್ಲ.. ಜೋರಾಗಿ ಮಳೆ ಸುರಿದಾಗ ಮಳೆ ನೀರು ಇಂಗಿ ಭೂಮಿಯನ್ನು ಎಷ್ಟು ಸೇರಿದೆಯೋ ಅದಷ್ಟೇ  ಉಪಯೋಗಕ್ಕೆ ಬರುವಂತೆ... ಉಳಿದದ್ದೆಲ್ಲ ವ್ಯರ್ಥವಾಗುತ್ತದೆ. ಹಾಗೆಯೇ ನಮ್ಮ ಜೀವನದಲ್ಲಿ ಅಧಿಕಾರ ಹಣ ಇದು ಶಾಶ್ವತವಲ್ಲ... ನಮ್ಮಲ್ಲಿ ಇರುವ ಗುಣಗಳು ಮಾತ್ರ ನಮ್ಮನ್ನು ಕೊನೆಯವರೆಗೂ ಉತ್ತಮರನ್ನಾಗಿಸುತ್ತದೆ. ಒಳ್ಳೆಯ ಉದಾಹರಣೆಯೆಂದರೆ ನಮಗೆ ಕೋರೋನಾ ಕಲಿಸಿದ ಪಾಠ... ಎಲ್ಲ ಇದ್ದರೂ ಯಾವುದು ಇಲ್ಲದಂತೆ ಇರಬೇಕಾಗಿದೆ... ಈ ಸಂದರ್ಭದಲ್ಲಿ ಸಹಾಯಕ್ಕೆ ಬಂದದ್ದು ಮಾನವೀಯ ಗುಣಗಳು ಮಾತ್ರ.... ದುಡ್ಡು ಅಧಿಕಾರ ಯಾವುದು ಇಲ್ಲ.... ಇದನ್ನಾದರೂ ನಾವೆಲ್ಲರೂ ಆಲೋಚಿಸಿ ಒಳ್ಳೆಯ ಆಲೋಚನೆಗಳಿಂದ ಸಹಬಾಳ್ವೆ ಮತ್ತು ಪ್ರೀತಿಯಿಂದ ಬದುಕೋಣ ಅಲ್ಲವೇ ಅಕ್ಕಾ...
....................................ನಂದನ್ ಕೆ ಹೆಚ್
ಏಳನೇ ತರಗತಿ
ದ‌.ಕ.ಜಿ.ಪಂ.ಉ.ಹಿ.ಪ್ರಾ.ಶಾಲೆ.
ಕುದ್ಮಾರು , ಪುತ್ತೂರು
ಪುತ್ತೂರು ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
***************************************ಅಕ್ಕನ ಪತ್ರ-4
ನನ್ನ ಪ್ರೀತಿಯ ಅಕ್ಕನಿಗೆ........
ಸಾತ್ವಿಕ್ ಗಣೇಶನು ಮಾಡುವ ನಮಸ್ಕಾರಗಳು, 
ಭಾರತವು ಬ್ರಿಟೀಷರ ದಾಸ್ಯದ ಸಂಕೋಲೆಯಿಂದ ಬಿಡುಗಡೆಗೊಂಡು 1947 ರ ಆಗಸ್ಟ್ 15 ರಂದು ಸ್ವಾತಂತ್ರ್ಯ ದೊರಕಿತು. ನಾವೆಲ್ಲರೂ ಶಾಲೆಯಲ್ಲಿ ಮತ್ತು ವಿವಿಧ ಕಡೆಗಳಲ್ಲಿ ಸಂಭ್ರಮದಿಂದ ಈ ಹಬ್ಬವನ್ನು ತುಂಬಾ ಸಂತೋಷದಿಂದ ಆಚರಿಸುತ್ತೇವೆ. ಸ್ವಾತಂತ್ರ್ಯಕ್ಕಾಗಿ ಹೋರಾಡಿದ  
ವೀರ ಮಹನೀಯರನ್ನು ನಾವು ಯಾವಾಗಲೂ ಸ್ಮರಿಸುತ್ತೇವೆ. ಕೊರೋನದಿಂದಾಗಿ ನಮಗೆ
 ನಮ್ಮ ಶಾಲೆಗಳಲ್ಲಿ ಹೋಗಿ 75ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲು ಸಾಧ್ಯವಾಗಲಿಲ್ಲ. ಹಾಗಾಗಿ, ನಮಗೆಲ್ಲ ನಿಮ್ಮ ನಿಮ್ಮ ಮನೆಗಳಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲು ಶಾಲೆಯಿಂದ ಹೇಳಿದರು. ಆದ ಕಾರಣ ಮನೆಯಲ್ಲಿಯೇ ಚಿಕ್ಕದಾಗಿ ಆಚರಣೆ ಮಾಡಿದೆವು. ನಮ್ಮ ತಾಯಿನಾಡಿಗಾಗಿ ಒಲಿಂಪಿಕ್ಸ್ ನಲ್ಲಿ ಕ್ರೀಡಾಪಟುಗಳು ಚೆನ್ನಾಗಿ ಆಟವಾಡಿ ಸಾಧನೆಯನ್ನು ಮಾಡಿದ್ದಾರೆ. ಅದನ್ನು ನೋಡಿ ತುಂಬಾ ತುಂಬಾ ಸಂತೋಷವಾಯಿತು.
ಹಾಗೆಯೇ ನಾವೆಲ್ಲಾರೂ ಕೂಡ ಸಾಧನೆ ಮಾಡಿ ಒಳ್ಳೆಯ ಹೆಸರನ್ನು ನಮ್ಮ ದೇಶಕ್ಕೆ ತಂದುಕೊಡಬೇಕು.
ವಂದನೆಗಳು.
......................................ಸಾತ್ವಿಕಗಣೇಶ್
7 ನೇ ತರಗತಿ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಜಿರೆ 
ಬೆಳ್ತಂಗಡಿ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*************************************ನಮಸ್ತೆ,                      
ಅಕ್ಕನ ಪತ್ರವನ್ನು ಓದಿ ನನಗೆ ತುಂಬಾ ಸಂತೋಷವಾಯಿತು. ನಾನು ಈ ಸಲದ ಸ್ವಾತಂತ್ರ್ಯೋತ್ಸವವನ್ನು ಕೋವಿಡ್ 19 ಕಾರಣದಿಂದಾಗಿ ಶಾಲೆಯಲ್ಲಿ ಸಂಭ್ರಮಿಸಲಾಗಲಿಲ್ಲ. ಆದರೂ ಮೊಬೈಲಿನಲ್ಲಿ ಆನ್ಲೈನ್ ಮೂಲಕ ನೇರವಾಗಿ ವೀಕ್ಷಿಸಿ ಸಂಭ್ರಮಪಟ್ಟೆನು. ನಾನು ಸಹ ಮೊನ್ನೆಯಷ್ಟೇ ನಮ್ಮ ದೇಶದ ಹೆಮ್ಮೆಯ ಕ್ರೀಡಾಪಟುಗಳ ಸಾಧನೆಯನ್ನು ಕಂಡು ಆಶ್ಚರ್ಯಪಟ್ಟೆ. ಹಾಗೂ ತುಂಬಾ ಸಂತೋಷವಾಯಿತು. ನೀರಜ್ ಛೋಪ್ರಾ ಅವರ ಸಾಧನೆಯನ್ನು ನೋಡಿ ನಾನು ಬೆರಗಾದೆನು. ನಮ್ಮ ಭಾರತ ದೇಶದ ಎಲ್ಲಾ ಕ್ರೀಡಾಪಟುಗಳು ಅತ್ಯುತ್ತಮವಾಗಿ ಭಾಗವಹಿಸಿ ಸಾಧನೆ ಮಾಡಿದ್ದಾರೆ.  ನಾನು ಸಹ ಇವರ ಸಾಧನೆಯನ್ನು ನೋಡಿ ಸ್ಪೂರ್ತಿಗೊಂಡು ಇಂತಹ ಸಾಧಕರನ್ನು  ನನ್ನ ಜೀವನದಲ್ಲಿ ಆದರ್ಶವಾಗಿಟ್ಟುಕೊಂಡು  ಮುಂದೆ ನಾನು ನನ್ನ ಹವ್ಯಾಸಗಳಲ್ಲಿ ಒಂದಾದ ಚಿತ್ರಕಲೆಯಲ್ಲಿ ಸಾಧನೆ ಮಾಡಬೇಕೆಂಬ ಗುರಿಯನ್ನು ಇಟ್ಟುಕೊಂಡಿದ್ದೇನೆ. ದೇಶ-ವಿದೇಶದ ವಿದ್ಯಾಮಾನಗಳನ್ನು ತಿಳಿಯಲು ದಿನಪತ್ರಿಕೆ ವಾರ್ತೆಗಳನ್ನು ನೋಡುವುದು ಬಹಳ ಮುಖ್ಯ ಹಾಗೂ ಹಿರಿಯರ ಮಾತುಗಳನ್ನು ಆಲಿಸಿ ಕೊಳ್ಳುವ ತಾಳ್ಮೆ ಗುಣ ಬೆಳೆಸಿಕೊಳ್ಳಬೇಕು. ಇಬ್ಬರು ಸ್ಪರ್ಧಾಳುಗಳು ಸಮನಾಗಿ ಗೆದ್ದದ್ದು ಶ್ಲಾಘನೀಯ  ವಿಷಯವಾಗಿದೆ. ಹಾಗೂ ಗುರುಗಳು ಹಿರಿಯರಿಗೆ ಕೈಜೋಡಿಸಿ ನಮಸ್ಕರಿಸಬೇಕು ಎನ್ನುವ ಸಂಸ್ಕೃತಿ, ಹಾಗೂ ನಾವು ಯಾವತ್ತಿಗೂ ಎಲ್ಲರಿಗೂ ಗೌರವ ಕೊಡಬೇಕು ಎಂದು ಅಕ್ಕ ತಮ್ಮ ಪತ್ರದಲ್ಲಿ ವಿವರಿಸಿದ್ದು ನನಗೆ ತುಂಬಾ ಸಂತೋಷವಾಯಿತು.            ಧನ್ಯವಾದಗಳು.
......................................... ಧೀರಜ್.ಕೆ.ಆರ್.
ತರಗತಿ : 9ನೇ
ಶಾಲೆ    : ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢ ಶಾಲೆ, ರಾಮಕುಂಜ.
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ.
****************************************ಅಕ್ಕನ ಪತ್ರ - 4 ಕ್ಕೆ ನನ್ನ ಉತ್ತರ
ಮೊದಲನೆಯದಾಗಿ  ಪ್ರೀತಿಯ ಅಕ್ಕನಿಗೆ  ನಮ್ಮ ನಮಸ್ಕಾರಗಳು. 
ನನ್ನ ಹೆಸರು ಪ್ರಿಯ. ನಾನು 10ನೆ ತರಗತಿಯಲ್ಲಿ ಓದುತ್ತಿದ್ದೇನೆ. ಅಕ್ಕ ನಿಮ್ಮ ಪತ್ರವನ್ನು ಓದಿದೆ. ನೀವು "ಹೃದಯ ವಿಶಾಲ್ಯ"ತೆಯ ಬಗ್ಗೆ ಪ್ರತಿಯೊಬ್ಬರ ಮನಸ್ಸಿಗೆ ಮನಮುಟ್ಟುವಂತಹ  ರೀತಿಯಲ್ಲಿ ಬರೆದಿದ್ದೀರಿ. ನನಗಂತೂ ಪತ್ರವನ್ನು ಓದಿ ತುಂಬಾ ಇಷ್ಟ ಆಯಿತು. ಪತ್ರದಲ್ಲಿ  ನಮ್ಮ ನಡವಳಿಕೆ ಹೇಗೆ ಇರಬೇಕು. ಅಂದರೆ ಶಿಕ್ಷಕರು ಅಥವಾ ಪೂಜ್ಯರು ನಮ್ಮೆದುರಿಗೆ ಇದ್ದರೆ ನಾವು ಅವರಿಗೆ ಎರಡು ಕೈ ಜೋಡಿಸಿ ನಮಸ್ಕರಿಸಬೇಕು, ನಾವು ಯಾರೊಂದಿಗೂ ಕೋಪ-ತಾಪಗಳನ್ನು ಇಟ್ಟುಕೊಳ್ಳದೆ, ಎಲ್ಲರೊಂದಿಗೂ ಒಟ್ಟಾಗಿ ಒಗ್ಗಟ್ಟಿನಲ್ಲಿ  ಇರಬೇಕು  ಎನ್ನುವ ಮಾತು ,  ಯಾರಾದರೂ ತಪ್ಪು ಮಾಡಿದಾಗ ಅದನ್ನು ತಿದ್ದುವ ಮನೋಭಾವ ನಮ್ಮಲ್ಲಿರಬೇಕು  ಎಂಬುದನ್ನು ,  ನಾವು  ಪ್ರತಿದಿನ ದಿನಪತ್ರಿಕೆ , ಪುಸ್ತಕಗಳನ್ನು ಓದುವ ಹವ್ಯಾಸ ಮಾಡಿಕೊಳ್ಳಬೇಕು ಎನ್ನುವ ಸಂದೇಶ ನೀಡಿದ್ದೀರಿ. ಇದನ್ನು ನಾನು ಚಾಚೂ ತಪ್ಪದೇ ಪಾಲಿಸುತ್ತೇನೆ.  ಇಂತಹ ಒಳ್ಳೆಯ ಅನೇಕ ಪತ್ರವನ್ನು ಕಳಿಸುವ ನಿಮಗೆ ತುಂಬಾ - ತುಂಬಾ ಧನ್ಯವಾದಗಳು. ಹಾಗೂ ನಿಮ್ಮ ಪತ್ರ ನನಗೆ ತುಂಬಾ ಮೆಚ್ಚುಗೆಯಾಯಿತು ಎಂದು ಹೇಳುತ್ತಾ ಅಕ್ಕನ ಪತ್ರ - 4 ಕ್ಕೆ ನನ್ನ ಉತ್ತರವನ್ನೂ ಕೊನೆ ಗೊಳಿಸುತ್ತಿದ್ದೇನೆ.
ಧನ್ಯವಾದಗಳು..........
.........................................…..........ಪ್ರಿಯ 10 ನೇ ತರಗತಿ .
ಸರಕಾರಿ ಪ್ರೌಢ ಶಾಲೆ ನಾರಾವಿ.
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
********************************************
ನಮಸ್ತೆ ಅಕ್ಕ ....            
ಪ್ರೀತಿಯ ಅಕ್ಕನಿಗೆ ಆಯಿಷತುಲ್ ಹರ್ಝ ಬರೆಯುವ ಪತ್ರ.... 
ಅಕ್ಕ ಈ ಸಲ ನೀವು ಬರೆದ ಪತ್ರದಲ್ಲಿ ಒಳ್ಳೆಯ ವಿಚಾರಗಳನ್ನು ತಿಳಿಸಿದ್ದೀರಿ ... ನಾನು ನಿಮ್ಮ ಪತ್ರವನ್ನು ಓದಿದೆ.., ಅದರಲ್ಲಿ ನನಗೆ ಬೇಕಾದ, ನನಗೆ ಗೊತ್ತಿಲ್ಲದ ವಿಷಯ ತಿಳಿಯಿತು... ಒಲಿಂಪಿಕ್ಸ್ ಅಂದರೆ ಏನು? ಅನ್ನೋದನ್ನ ತಿಳಿದುಕೊಂಡೆ.... ನನಗೆ ಬಹಳ ಸಂತೋಷ ಆಯ್ತು.... ನನ್ನ ಸ್ನೇಹಿತರೊಂದಿಗೆ ಅಕ್ಕನ ನಾಲ್ಕನೇ ಪತ್ರವನ್ನು ಹಂಚಿಕೊಂಡೆ.... ನನ್ನ ಸ್ನೇಹಿತರು ತುಂಬಾನೇ ಖುಷಿಪಟ್ಟರು.... ನಮಗೆ ನಾಲ್ಕನೇ ಪತ್ರದಲ್ಲಿ ತುಂಬಾ ವಿಷಯಗಳು ತಿಳಿಯಿತು ....ನಿಮಗೆಲ್ಲರಿಗೂ ಕೋಟಿ ಕೋಟಿ ನಮನಗಳು... ಧನ್ಯವಾದಗಳು .. 
ಇಂತೀ ನಿಮ್ಮ ಪ್ರೀತಿಯ 
 .............................. ಆಯಿಷತುಲ್ ಹರ್ಝ. 
8 ನೇ ತರಗತಿ .
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಗೋಳಿತೊಟ್ಟು.
ಪುತ್ತೂರು ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
******************************************Ads on article

Advertise in articles 1

advertising articles 2

Advertise under the article