-->
ಅಕ್ಕನ ಪತ್ರಕ್ಕೆ ಮಕ್ಕಳ ಉತ್ತರ - 3

ಅಕ್ಕನ ಪತ್ರಕ್ಕೆ ಮಕ್ಕಳ ಉತ್ತರ - 3

ಅಕ್ಕನ ಪತ್ರಕ್ಕೆ 
ಮಕ್ಕಳ ಉತ್ತರ - 3
ಭಾಗ-1

ಮಕ್ಕಳ ಜಗಲಿಯಲ್ಲಿ 
ಜಗಲಿಯ ಮಕ್ಕಳಿಗೆ
ಅಕ್ಕನ ಪತ್ರ -3
ಸಂಚಿಕೆಯಲ್ಲಿ ಪ್ರಕಟವಾದ ಪತ್ರಕ್ಕೆ ಜಗಲಿಯ ಮಕ್ಕಳೆಲ್ಲಾ ಬಹಳ ಪ್ರೀತಿಯಿಂದ ಸ್ಪಂದಿಸಿದ್ದಾರೆ. ತಮ್ಮ ಗದ್ದೆಯ ಜೊತೆಗಿನ ಬದುಕ ಸಿಹಿಯನ್ನು ಇಲ್ಲಿ ಹಂಚಿಕೊಂಡಿದ್ದಾರೆ. ಇಲ್ಲಿ ಪೋಷಕರು ತಮ್ಮ ಮಕ್ಕಳನ್ನು ಗದ್ದೆಯ ಬಳಿಗೆ ಕರೆದುಕೊಂಡು ಹೋಗಿರುವುದು .... ನೆಲದ ಪ್ರೀತಿಯನ್ನು ಕಲಿಸಿರುವುದು .... ಹಸಿರಿನ ... ಉಸಿರಿನ .... ಪಾಠವಾಗಿರುವುದು .... ಮುಂದಿನ ತಲೆಮಾರಿಗೆ ನೆಲದ ಸಂಸ್ಕೃತಿಯನ್ನು ಕೊಂಡೊಯ್ಯಲು ಸಹಕಾರಿಯಾದೀತು.....!!

              ಪತ್ರ - 1- ರಕ್ಷಾ 10 ನೇ ತರಗತಿ. 
ಪ್ರೀತಿಯ ಅಕ್ಕ...
        10 ನೇ ತರಗತಿ ರಕ್ಷಾ ಮಾಡುವ ವಂದನೆಗಳು. ನಿಮ್ಮ ಪತ್ರ -3 ಓದಿದೆ. ನಾವು ನಿತ್ಯ ಉಣ್ಣುವ ಅನ್ನ ಬೆಳೆಯುವ ಗದ್ದೆಗಳ ಬಗ್ಗೆ ಓದಿ ತುಂಬಾ ಖುಷಿಯಾಯಿತು. ನೀವು ಬರೆದ ಪತ್ರ ಓದಿ ನಾನು ಚಿಕ್ಕ ತರಗತಿಗಳಲ್ಲಿ ಇದ್ದಾಗ ಗದ್ದೆಯಲ್ಲಿ ಆಡಿದ ನೆನಪು ಮರುಕಳಿಸಿತು. ಗದ್ದೆಯಲ್ಲಿ ಬಿತ್ತನೆಯ ಸಮಯದಲ್ಲಿ ಆಟವಾಡಿ ಮೈಯೆಲ್ಲ ಕೆಸರು ಮಾಡಿಕೊಂಡದ್ದು ಮರೆಯಲು ಆಗದ ಕ್ಷಣ. ಅದನ್ನು ನೆನಪಿಸಿದ್ದು ನಿಮ್ಮ ಪತ್ರ ಅಕ್ಕ. ನಮ್ಮ ಮನೆಯ ಹತ್ತಿರ ಕೂಡ ಸೊಗಸಾದ ವಿಶಾಲವಾದ ಗದ್ದೆ ಇದೆ. ಅದರಲ್ಲಿ ಹಸಿರು ತುಂಬಿ ತೊನೆದಾಡುವ ಪೈರು ನೋಡುವುದೇ ಮನಸ್ಸಿಗೆ ಆನಂದ. ಆ ಗದ್ದೆಯಲ್ಲಿ ಭತ್ತ ನಾಟಿ ಮಾಡುವ ಸಮಯದಲ್ಲಿ ನಾನು ನೆಡಲು ಪ್ರಯತ್ನ ಮಾಡಿದ್ದು ಹೇಳಲಾಗದ ಖುಶಿ. ಮಳೆ ಬಂದರೆ ಮಳೆಯಲ್ಲಿ ಆಟವಾಡುತ್ತ ಗದ್ದೆಯಲ್ಲಿ ಇದ್ದಾಗ ಮನೆಗೆ ಹೋಗು ಎಂದು ಅಮ್ಮ ಹೇಳಿದರೂ ಕೇಳದೆ ಅಲ್ಲಿಯೇ ಇದ್ದು ಮತ್ತೆ ಅಮ್ಮನಿಂದ ಬೈಸಿಕೊಂಡು ಒಳ ನಡೆದದ್ದು ಈಗ ನೆನಪಾಗಿ ನಗು ಬರುತ್ತಾ ಇದೆ. ಅಮ್ಮ, ಅಕ್ಕ ಎಲ್ಲರೂ ನಾಟಿ ಮಾಡುತ್ತಾ ಹಿರಿಯರು ಪದ ಹೇಳುವುದು ಈಗ ಹೆಚ್ಚಾಗಿ ಕಾಣಸಿಗುವುದು ಕಷ್ಟವಾಗಿದೆ. ಭತ್ತ ಕಟಾವು ಮಾಡಿ ಅದನ್ನು ಕಟ್ಟುಗಳನ್ನಾಗಿ ಮಾಡಿ ಮನೆಗೆ ತಂದು ರಾಶಿ ಹಾಕುವಾಗ ನಾನೂ ಪ್ರಯತ್ನಿಸಲು ಹೋಗಿ ಎತ್ತಲಾರದೆ ಬಿದ್ದ ನೆನಪು ಈಗಲೂ ಮರೆಯಲು ಆಗದ ಅಧ್ಬುತ ನೆನಪು. ಹೀಗೆ ಎಲ್ಲಾ ನೆನಪುಗಳನ್ನು ಮರುಕಳಿಸಿದ್ದು ನಿಮ್ಮ ಪತ್ರ. ಧನ್ಯವಾದ ಅಕ್ಕ.
......................... ರಕ್ಷಾ 10 ನೇ ತರಗತಿ. 
ಸ. ಪ. ಪೂ.ಕಾಲೇಜು.ವಾಮದಪದವು.
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
********************************************
 

ಪತ್ರ - 2 ವಿದ್ಯಾ 8 ನೇ ತರಗತಿ 
ನಮ್ಮ ಗದ್ದೆಯ ಸಮಯದಲ್ಲಿ lockdown ಇದ್ದುದರಿಂದ ನಾನು ತುಂಬಾ ದಿನ ನಾಟಿಗೆ ಹೋಗಿದ್ದೇನೆ. ನಾಟಿಯ ಸಮಯದಲ್ಲಿ ತುಂಬಾ ಖುಷಿಯಿಂದ ಇದ್ದೆ. ತುಂಬಾ ಹೊಸ ವಿಷಯಗಳನ್ನು ತಿಳಿದೆ. ಹಿಂದೆ ನಡೆದ ಘಟನೆಗಳನ್ನು ತಿಳಿದೆ ಮತ್ತು ನಾಟಿ ಹೇಗೆ ಹೇಗೆ ಮಾಡಬೇಕೆಂದು ತಿಳಿದೆ.
ನೇಜಿ ನಡಿಯರ ಪೋಯಿ 
ಮಾತೆರ್ಲ ನೇಜಿ ನಡ್ದ
ಸುಗ್ಗಿಡ್ ಕೆಯ್ ಕೊಯ್ಯರ ಪೋಯಿ..
ಎಂಬ ಒಂದು ತುಳು ಹಾಡನ್ನು ಹಾಡಿದರು. ಅವರ ಜೊತೆ ನಾನು ಹಾಡಿದೆ ಮತ್ತು ನನ್ನ ಅಪ್ಪ ಉಳುಮೆ ಮಾಡುತ್ತಾರೆ. ಟಿಲ್ಲರ್ ನಲ್ಲಿ ಅವರ ಜೊತೆ ನಾನು ಕೂಡ ಇದ್ದೆ. ಅವರ ಜೊತೆ ಹಿಂದೆ ನೀವು ಹೇಗೆ ಉಳುಮೆ ಮಾಡುತ್ತಿದ್ದಿರಿ ....? ಎಂದು ಕೇಳಿದೆ. ಆಗ ಅವರು ಹೇಳಿದರು " ನಾವು ಎರಡು ಕೋಣ ಅಥವಾ ಎತ್ತುಗಳಿಗೆ ನೇಗಿಲನ್ನು ಕಟ್ಟಿ ಉಳುಮೆ ಮಾಡುತ್ತಿದ್ದೆವು. ಆದರೆ ಈಗ ಟಿಲ್ಲರ್, ಟ್ರ್ಯಾಕ್ಟರ್ ಎಂಬ ಮಿಷನ್ ಬಂದಿದೆ. ಮೊದಲು ಗದ್ದೆಯಲ್ಲಿ ಸಿಗುತ್ತಿದ್ದ ನರ್ತೆ, ಮೀನು ಮತ್ತು ಮುಂತಾದ ಜಲಚರಗಳು ಟಿಲ್ಲರ್ ನ ಕತ್ತಿಗೆ ಸತ್ತು ಹೋಗುತ್ತದೆ ಅದರಿಂದ ಇಂದು ನರ್ತೆ ಕಣ್ಣಿಗೆ ಕಾಣಿಸದಾಗಿದೆ''. ಎಂದರು.
ನಾನು ಮೊದಲನೇ ಸಾರಿ ಗದ್ದೆಗೆ ಹೋಗಿದ್ದಾಗ ತುಂಬಾ ಬಾರಿ ಬಿದ್ದಿದ್ದೇನೆ. ಆದರೆ ಅದು ತುಂಬಾ ಸಂತೋಷವನ್ನು ತಂದುಕೊಟ್ಟಿತು. ಸುಗ್ಗಿಯಲ್ಲಿ ಹೇಳಬೇಕಿಲ್ಲ ಬಾಯಿತುಂಬಾ ನಗು .ಕತ್ತಿ ಹಿಡಿದುಕೊಂಡು ಹೊರಟರೆ ಕೊಯ್ಲು ಮುಗಿಸಿಕೊಂಡು ಬರಬೇಕು ಎಂದು ಹೊರಟೆ . ಆದರೆ ಮಧ್ಯಾಹ್ನ ಆಗುತ್ತಲೇ ಸುಸ್ತು ಆಗುತ್ತಿತ್ತು . ಆದರೂ ಕನಿಷ್ಠ ಕೊಯ್ಲು ಮಾಡುವಾಗ ಸಂಜೆವರೆಗೆ ಕೊಯ್ಲು ಮಾಡಿ ನಂತರ ಮನೆಗೆ ಹೋಗುತ್ತಿದ್ದೆ. ನಾನು ತುಂಬಾ ಖುಷಿ ಪಟ್ಟೆ.
   ಹಳ್ಳಿ ಜೀವನ ಬಂಗಾರದ ಜೀವನ
 .....................................ವಿದ್ಯಾ 8 ನೇ ತರಗತಿ 
ಬಸ್ತಿ ಮನೆ  
ಬೆಳ್ತಂಗಡಿ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ 
ಪತ್ರ - 3 ಪ್ರೀಶಲ್ 6 ನೇ ತರಗತಿ. 
ಪ್ರೀತಿಯ ಅಕ್ಕ..
          ಪ್ರೀಶಲ್ ಮಾಡುವ ವಂದನೆಗಳು. ನಾನು 6ನೇ ತರಗತಿಯಲ್ಲಿ ಕಲಿಯುತ್ತಿದ್ದೇನೆ. ನಾನು ನಿಮ್ಮ ಮೊದಲಿನ ಎರಡು ಪತ್ರವನ್ನು ಕೂಡ ಓದಿದ್ದೇನೆ. ಆದರೆ ಉತ್ತರ ಬರೆದಿರಲಿಲ್ಲ. ಈ ಬಾರಿ ಪತ್ರ - 3 ಓದಿದಾಗ ನಮಗೆ ಶಿಕ್ಷಕರು ಹೇಳಿದ ಕೈ ಕೆಸರಾದರೆ ಬಾಯಿ ಮೊಸರು ಎನ್ನುವ ಮಾತು ನೆನಪಾಯಿತು.
   ಅಜ್ಜನ ಮನೆಯಲ್ಲಿ ಗದ್ದೆಗಳು ಇದ್ದವು. ಆದರೆ ಆಗ ನಾನು ಚಿಕ್ಕ ಮಗುವಾಗಿದ್ದೆ. ಅಲ್ಲಿ ಗದ್ದೆಯನ್ನು ಯಂತ್ರದಿಂದ ಹದ ಮಾಡುವುದನ್ನು ನೋಡಿದ್ದೆ. ನಾನು ಒಂದನೆಗೆ ಹೋಗುವಾಗ ನಮ್ಮ ಚರ್ಚಿನಲ್ಲಿ ಗದ್ದೆಯಾಟವನ್ನು ಆಯೋಜಿಸಿದ್ದರು. ನಾನು ನನ್ನ ಅಪ್ಪ ಅಮ್ಮನೊಡನೆ ಹೋಗಿದ್ದೆ. ಅಲ್ಲಿ ನಾನು ತುಂಬಾ ಮೋಜು ಮಸ್ತಿಯನ್ನು ಮಾಡಿದೆ. ಗದ್ದೆಯಲ್ಲಿ ಓಟ, ಪಿಲಿಚಂಡಿ ಹಾಗೂ ವಿವಿಧ ರೀತಿಯ ಆಟಗಳು ಇದ್ದವು. ಗದ್ದೆಯಲ್ಲಿ ಮೊದಲ ಹೆಜ್ಜೆ ಇಡುವಾಗ ನನ್ನ ಕಾಲು ಹೂತು ಹೋಯಿತು. ತುಂಬಾ ಹೆದರಿಕೆಯಾಯಿತು. ಆದರೂ ಧೈರ್ಯಗೆಡದೆ ಸ್ಪರ್ಧೆಯಲ್ಲಿ ಭಾಗವಹಿಸಿ ಓಟದಲ್ಲಿ ಪ್ರಥಮ ಸ್ಥಾನ ಪಡೆದೆ. ನನ್ನ ಇಷ್ಟದ ಬಟ್ಟೆ ಮಾತ್ರ ಕೆಸರಿನಲ್ಲಿ ಮುಳುಗಿ ಹೋಗಿತ್ತು. ಜಗಲಿಯಲ್ಲಿ ನಿಮ್ಮ ಪತ್ರ - 3, ಫೋಟೋ ಎಲ್ಲ ನೋಡಿ ನನಗೆ ಇದೆಲ್ಲ ನೆನಪಾಯಿತು. 
        ವಂದನೆಗಳು ಅಕ್ಕ..
......................... ಪ್ರೀಶಲ್ - 6 ನೇ ತರಗತಿ. 
ಉ.ಸ.ಮಾ.ಹಿ.ಪ್ರಾ.ಶಾಲೆ. ಚೆನ್ನೈತೋಡಿ.
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
**********************************************


ಪತ್ರ - 4  ನಾಗರಾಜ್ ಬಿ.ಎಸ್ 9 ನೇ ತರಗತಿ
ನಮಸ್ತೆ ಅಕ್ಕ. 
ನಾನು ನಿಮ್ಮ ಪತ್ರ ಓದಿದೆ. ನಿಮ್ಮ ಪತ್ರ ಓದಿ ತುಂಬಾ ಖುಷಿಯಾಯಿತು. ನನ್ನ ಅಜ್ಜ ಕೂಡ ಕೃಷಿ ವಿಚಾರಗಳನ್ನು ಹೇಳುತ್ತಿದ್ದರು. ನಾನು ಚಿಕ್ಕವನಿದ್ದಾಗ ನನ್ನ ಅಜ್ಜಿ ಮನೆ ಸುತ್ತಲೂ ಹೊಲ ಗದ್ದೆಗಳು ತುಂಬಿದ್ದವು. ನೀವು ಹೇಳಿದ ತರನೇ 'ನನ್ನ ಅಜ್ಜಿ ಮನೆಯಲ್ಲಿ ನಮ್ಮ ಹೊಲದ ಅಕ್ಕಿಯ ಅನ್ನ ಬೇಯಿಸುತ್ತಿದ್ದರು. ನನ್ನನ್ನು ಕೂಡ ನನ್ನ ಅಜ್ಜಿ ನೇಜಿ ಮಾಡುವಾಗ ಮುಡಿ ಕಟ್ಟುವಾಗ ಅವರ ಒಟ್ಟಿಗೆ ಕರೆದುಕೊಂಡು ಹೋಗುತ್ತಿದ್ದರು. ನೋಡಿ ಖುಷಿ ಪಡುತ್ತಿದ್ದೆ. ಆಗ ಎಲ್ಲರೂ ಕೃಷಿ ಕೆಲಸಗಳನ್ನು ಕೈಯಲ್ಲೇ ಮಾಡುತ್ತಿದ್ದರು. ಆದರೆ ಈಗ ಕೃಷಿ ಕೆಲಸಗಳಿಗೆ ತಾಂತ್ರಿಕ ಮಿಷಿನ್ ಗಳನ್ನು ಬಳಸುತ್ತಿದ್ದಾರೆ. ನೀವು ನನಗೆ ಹಲವು ಬಗೆಯ ವಿಚಾರಗಳನ್ನು ಹಂಚಿಕೊಂಡಿದ್ದೀರಿ. ನೀವು ಹೇಳಿದ ವಿಚಾರಗಳು ತುಂಬಾ ಕುತೂಹಲಕಾರಿಯಾಗಿತ್ತು. ನೀವು ತಮ್ಮ ಅಮೂಲ್ಯ ಸಮಯವನ್ನು ನಮ್ಮ ಜೊತೆ ಹಂಚಿಕೊಂಡಿದ್ದಕ್ಕಾಗಿ ತುಂಬು ಹೃದಯದ ಧನ್ಯವಾದಗಳು.
ಇತೀ ತಮ್ಮ ಪ್ರೀತಿಯ ವಿದ್ಯಾರ್ಥಿ
....................................ನಾಗರಾಜ್ ಬಿ.ಎಸ್ 
9 ನೇ ತರಗತಿ
ಸರಕಾರಿ ಪ್ರೌಡ ಶಾಲೆ ನಾರ್ಶ ಮೈದಾನ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
***************************************


ಪತ್ರ - 5  ಸಮೀಕ್ಷಾ 6ನೇ ತರಗತಿ.
ಪ್ರೀತಿಯ ಅಕ್ಕ....
          ನಾನು ಚೆನ್ನೈತೋಡಿ ಶಾಲೆಯ 6ನೇ ತರಗತಿಯ ಸಮೀಕ್ಷಾ. ನೀವು ಹೇಗಿದ್ದೀರಿ......? ನಮಗೆ ಶಾಲೆ ಇನ್ನೂ ಆರಂಭ ಆಗಿಲ್ಲ ಅಂತ ಬೇಸರ ಆಗಿದೆ. ಮೊನ್ನೆ ನಮ್ಮ ತರಗತಿಯ ವ್ಯಾಟ್ಸಪ್ ಗುಂಪಿನಲ್ಲಿ ನಿಮ್ಮ ಪತ್ರ - 3 ಓದಿದೆ. ನಿಮ್ಮ ಈ ಪತ್ರದಲ್ಲಿ ಇರುವ ಹಸುರುಪ್ರೀತಿ ನಮ್ಮ ಜೀವನಕ್ಕೆ ಹುಮ್ಮಸ್ಸು ನೀಡುತ್ತದೆ. ಹಚ್ಚಹಸುರಾದ ಈ ಪ್ರಕೃತಿಯ ಮಡಿಲು ಮಾನವಕುಲಕ್ಕೆ ಆಧಾರವಾಗಿದೆ. ನೀವು ಹೇಳಿದಂತೆ ಪೈರು ತುಂಬಿದ ಗದ್ದೆಗಳ ನೋಟ ನೋಡಲು ಚಂದ. ನಾವು ತಿನ್ನುವ ಅನ್ನ ನೀಡುವ ಗದ್ದೆಗಳ ಬಗ್ಗೆ ಬರೆದ ನಿಮ್ಮ ಪತ್ರ -3 ಕ್ಕೆ ಧನ್ಯವಾದಗಳು.
.................................. ಸಮೀಕ್ಷಾ 6ನೇ ತರಗತಿ.
ಉ.ಸ.ಮಾ.ಹಿ.ಪ್ರಾ.ಶಾಲೆ. ಚೆನ್ನೈತೋಡಿ.
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*******************************************


ಪತ್ರ - 6 ಹರ್ಷರಾಜ್ 4ನೇ ತರಗತಿ
ನನ್ನ ಪ್ರೀತಿಯ ಅಕ್ಕನಿಗೆ ನನ್ನ ವಂದನೆಗಳು....
       ನಿಮ್ಮಪ್ರೀತಿಯ ತಮ್ಮನಾದ ಹರ್ಷರಾಜ್ ಸುವರ್ಣ ನಾಲ್ಕನೇ ತರಗತಿಯ ವಿದ್ಯಾರ್ಥಿ,
 ನಿಮ್ಮ ಈ ಪತ್ರಕ್ಕೆ ಉತ್ತರವನ್ನು ನೀಡಲು ಸಂತೋಷವಾಗುತ್ತದೆ. ನಿಮ್ಮ ಈ ಪತ್ರದಲ್ಲಿ ಪ್ರಕೃತಿಯ ಬಗ್ಗೆ ಇರುವ ಕಾಳಜಿ ನಮ್ಮ
 ಜೀವನಕ್ಕೆ ಹುಮ್ಮಸ್ಸು ನೀಡುತ್ತದೆ. ಸಾಲು ಸಾಲು ಪೈರುಗಳು, ಪ್ರಕೃತಿಗೆ ಸಂಬಂಧಿಸಿದ ಅಜ್ಜಿಯ ಕಥೆ ಇವೆಲ್ಲವೂ ಬಹಳಷ್ಟು ಖುಷಿ ತಂದುಕೊಟ್ಟಿದೆ. ಪ್ರಸ್ತುತ ಬದುಕಿನಲ್ಲಿ ಪೈರು ಗದ್ದೆಗಳು ಕಾಣದಾಗಿದೆ. ನಾವು ಇದರ ಬಗ್ಗೆ ಹೆಚ್ಚು ಕಾಳಜಿ ವಹಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಇದರ ಬಗ್ಗೆ ಮಹತ್ವವನ್ನು ತಿಳಿಸಿ ಕೊಟ್ಟ ಅಕ್ಕನಿಗೆ ತುಂಬು ಹೃದಯದ ಧನ್ಯವಾದಗಳು.
........................... ಹರ್ಷರಾಜ್ 4ನೇ ತರಗತಿ
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ದಡ್ಡಲಕಾಡು ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
**********************************************


ಪತ್ರ - 8       ಸಿಫಾನ 9ನೇ ತರಗತಿ
ಪ್ರೀತಿಯ ಅಕ್ಕ 
ನಿಮಗೆ ನಾನು ಮಾಡುವ ನಮಸ್ಕಾರ. ನಿಮ್ಮ ಪತ್ರ - 3 ಓದಿದೆ. ನಾವು ನಿತ್ಯ ಜೀವನದಲ್ಲಿ ತಿನ್ನುವ ಅನ್ನ ಬೆಳೆಯುವ ಭತ್ತದ ಗದ್ದೆಯ ಬಗ್ಗೆ ಬರೆದಿದ್ದೀರಿ. ನನಗೆ ಅದನ್ನು ಓದಿ ಕೆಲವು ಅಜ್ಜಿ ಹೇಳಿದ ಕಥೆಯ ಬಗ್ಗೆ ನೆನಪಾಯಿತು. ಅಜ್ಜಿ ಮುಂಜಾನೆ ಎದ್ದು ನಾಟಿ ಮಾಡಲು ಹೋಗುವಾಗ ನಾನು ಕೂಡ ಹೋದೆ. ನಾಟಿ ಮಾಡುವಾಗ ಅವರು ಹಾಡುತ್ತಿದ್ದನು ಕೇಳಿ ನನ್ನ ಕಿವಿ ತಂಪಾಯಿತು. ಅವರು ಓ ಬೇಲೆ .... ಓ ಬೇಲೆ .... ಬಂಗೇರೆ ಬೈಲೀಗ್ ಪೋನಗ ಬಂಗೇರೆದ ಬದಲ ಕುಲ ಮುವೇರಿನಕ್ಲ ಮುದಿಲಾಕ .... ಹೀಗೆ ಹಾಡನ್ನು ಹಾಡುತ್ತಿದ್ದರು. ಹಾಡಿನ ರೀತಿ ಶೈಲಿ ತುಂಬಾ ಇಷ್ಟವಾಯಿತು. ಗದ್ದೆಗೆ ಇಳಿದರೆ ಮೊಣಕಾಲು ವರೆಗೂ ಕೆಸರು ಒಂದೊಂದು ಹೆಜ್ಜೆಯೂ ಕಷ್ಟವಾಯಿತು. ಇಂದಿನ ಕಾಲದ ಈ ನಾಟಿ ವ್ಯವಸಾಯದ ಬಗ್ಗೆ ಗೊತ್ತಿರಲಿಲ್ಲ. ನೀವು ಬರೆದ ಪತ್ರ ಓದಿದ ನಂತರ ನನಗೂ ಕೂಡ ಗದ್ದೆಗೆ ಹೋಗಬೇಕು ನೋಡಬೇಕು ಎಂಬ..... ಆತುರದಿಂದ ಅಲ್ಲಿಗೆ ಹೋದೆ ಅಲ್ಲಿ ಆದಂತಹ ಅನುಭವಗಳನ್ನು ನಿಮ್ಮ ಮುಂದೆ ಇಟ್ಟಿದ್ದೇನೆ. ಇನ್ನೂ ಗದ್ದೆ ಕಡೆಗೆ ಹೋಗಬೇಕು ಕೆಲಸಗಳನ್ನು ಮಾಡಬೇಕು ಎಂಬ ಆಸೆಯಲ್ಲಿದ್ದೇನೆ. ಎಲ್ಲಾ .... ರೈತ ಬಾಂಧವರಿಗೆ ನನ್ನ ಕಡೆಯಿಂದ ಧನ್ಯವಾದ 
 ................................................... ಶಿಫಾನ
9ನೇ ತರಗತಿ
ಸರಕಾರಿ ಪ್ರೌಢಶಾಲೆ ನಾಶ ಮೈದಾನ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
********************************************

Ads on article

Advertise in articles 1

advertising articles 2

Advertise under the article